ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, December 28, 2012

ಅಂಟು ರೋಗ !

***********************************************************************************************
ಪ್ರಳಯ ಪ್ರಳಯವೆಂದು 
ಮನದೊಳಗೆ ಎದ್ದಿತು 
ಭೀಕರವಾದ ಭಯದ ಅಲೆ !
ಆ ಅಲೆಯ ಒಡೆತಕೆ ಸಿಕ್ಕಿ 
ನಾವು ನಿತ್ಯವೂ ನರಳುವಂತೆ ಮಾಡಿದೆ 
ಈ ಸಾವೆಂಬ ಕಾಮಾಲೆ !
ಈ ರೋಗ ಹೆಚ್ಚಾದರೆ 
ದಿನವೂ ಮನೆಯ ಫೋಟೋಗಳಿಗೆ 
ಬೀಳುವುದು ಹೂವಿನ ಸರಮಾಲೆ !

-@(ಜಿ.ಪಿ.ಗಣಿ)@-

***********************************************************************************************

Friday, November 30, 2012

ವಾಸ್ತವ ಸತ್ಯ !

***********************************************************************************************
ಕಾರ್ಯ ತುರ್ತುಗತಿಯಲ್ಲಿ 
ಸಾಗಲು ತೆತ್ತಬೇಕು ಹಣವನ್ನು !
ಇಲ್ಲವಾದರೆ ತಿರುಗಾಡಿಸಿ 
ಇಳಿಸುವರು ನಮ್ಮ ಬೆವರನ್ನು !

ಕೆಲಸಕ್ಕೂ - ಸಮಯಕ್ಕೂ 
ಇರುವುದೊಂದು ಬಗೆಯ ನಂಟು !
ಆ ನಂಟು ಉಳಿಯಲು ಕಿಸೆಯಲ್ಲಿ 
ತುಂಬಿರಬೇಕು ಕಾಸಿನ ಗಂಟು !

ಕೆಲಸವಾಗುವ ತನಕ 
ಬೇಕು, ನಯ-ವಿನಯ !
ಇಲ್ಲವಾದರೆ ಎಲ್ಲವೂ 
ಆಗುವುದು, ಅಯೋಮಯ !

~ಜಿ.ಪಿ.ಗಣಿ~
***********************************************************************************************

Saturday, November 10, 2012

ಹೇಳುವುದು ಸುಲಭ ಮಾಡುವುದು ಕಷ್ಟ !!

***********************************************************************************************
ನಮ್ಮ ಜೀವನವೇ ಒಂದು ರೀತಿಯ ಒಗಟಂತೆ , ಎಲ್ಲವನ್ನು ತಿಳಿಯಹೊರಟಿರುವ ನಾವು ಬುದ್ದಿ ಬಲಿತಂತೆ ಕಾಣದ ಕೈಗಳು ಮೋಸ ಮಾಡುತ್ತವೆ ಹಾಗೂ ಮಾಡಿಸುತ್ತವೆ, ಸೂತ್ರದ ಗೊಂಬೆಗಳಾಗಿ ಆಡುವ ನಾವು ಕೆಲವೊಮ್ಮೆ ಅನುಭವಕ್ಕೆ ಭಾಸವಾಗಿ, ಅಯ್ಯೋ !! ಹೀಗಾಯಿತಲ್ಲ ಎಂದು ಪರಿತಪಿಸುವುದು ಸರ್ವೇ ಸಾಮಾನ್ಯ . ಸುಮ್ಮನೆ ಹಾಗೆ ನಮ್ಮ-ನಿಮ್ಮಯ ಜೀವನದ ಪುಟಗಳ ಹಿಂದೆ ತಿರುವಿ ನೋಡಿದರೆ ಅರಿವಾಗುತ್ತದೆ . ಅನೇಕ ಬಾರಿ ತಪ್ಪು - ಒಪ್ಪುಗಳ ನಡುವೆ ಬೆಂದು ಸರಿದಾರಿಯ ಕಂಡುಕೊಂಡಿರುತ್ತೇವೆ.ನಮ್ಮ ಕಿರಿಯರು ಅಥವಾ ಸ್ನೇಹಿತರು ಆ ತಪ್ಪು ಮಾಡುವರೆಂಬ ಅರಿವಾಗುತ್ತಲೇ ; ಎಚ್ಚರಿಕೆಯ ಗಂಟೆ , ತಿಳುವಳಿಕೆಯ ಮಾತುಗಳು , ಆಹಾ ! ಏನು ಸರ್ವಜ್ಞರಂತೆ ತಿಳುವಳಿಕೆ ಕೊಟ್ಟಿದ್ದೂ ಕೊಟ್ಟಿದ್ದೆ.ಅದೇ ರೀತಿ ಕೆಲವಷ್ಟು ಅನುಭವಗಳು ನಮ್ಮ ಅರಿವಿಗೆ ಬಾರದೆ ಹೋಗುತ್ತವೆ, ಅನುಭವ ಸ್ವತಃ ಪಡೆಯದೇ ಬರಿ ಸಾಂತ್ವಾನ ಹೇಳುವ ಕಾರ್ಯ ನಮ್ಮದಾಗಿರುತ್ತದೆ.ಒಮ್ಮೆ ನಾವು ಅನುಭವವವಿಲ್ಲದಿದ್ದರೂ  ಆಂತರ್ಯದಿಂದ ಹೊರಬರುವ  ಕಾಣದ ಅಗೋಚರವಾದ ವಾತ್ಸಲ್ಯದ ಸಾಂತ್ವಾನ ಮತ್ತು ಧೈರ್ಯ  ತುಂಬುವ ಮಾತುಗಳು ಅತ್ಯುನ್ನತ ಶಕ್ತಿ ಹೊಂದಿರುತ್ತದೆ. ಅದೇ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬಾರದೇ ಮಾಡಿದ ತಪ್ಪುಗಳನ್ನೇ ಮಾಡುತ್ತಾ ದೇವರನ್ನು ಶಪಿಸುತ್ತ ಹಣೆಬರಹಕ್ಕೆ ಬೊಟ್ಟು ಮಾಡುತ್ತಾ ನಮ್ಮೊಳಗಿನ ಆತ್ಮಸ್ಥೈರ್ಯವನ್ನು ಕೊಲ್ಲುತ್ತಾ ಹೋಗುತ್ತೇವೆ .
                                 ಪರರ ಕರೆಗೆ ಓ ಗೊಡುವ ಮನವು  ತನ್ನೊಳಗಿನ ಆತ್ಮಕೆ ಕವಚ ನೀಡುವುದಿಲ್ಲವೇಕೆ ? ಅದಕ್ಕೆ ಏನೋ ಹೇಳುವುದು;  ಮನುಷ್ಯ ಸಂಗ ಜೀವಿ , ಪರಾವಲಂಬಿ ಎಂದು. ಸ್ವಯಂ ಆತ್ಮಸುಖವ ಬಿಟ್ಟು ಬಾಹ್ಯಲೋಕದ ಸುಖಕ್ಕೆ ಮಾರುಹೋಗುತ್ತಾನೆ .ಆ ಸುಖ ಕೇವಲ ನಶ್ವರ, ಅಲ್ಪ ಸುಖ ಸುಲಭವಾಗಿ ಕೈಗೆಟುಕುವಂತವು. ಆತ್ಮಸುಖ ಅನಂತ ಸುಖ ಅದು ಕೈಗೆಟುಕದೇ  ಇರುವುದು. ಸಿದ್ಧಿಸುವ ಮನವಿರಬೇಕು ಅದಕ್ಕೆ ಅಲ್ಲವೇ ಹೇಳುವುದು , ಮನಸ್ಸಿನಂತೆ ಮಹಾದೇವ  ಎಂದು ಯಾವುದೇ ಕೆಲಸ ಮಾಡುವ ಮುನ್ನ ಶುದ್ದ ಪಡಿಸಬೇಕಾದದ್ದು ನಮ್ಮ ಮನಸನ್ನು; ಪರಿಶುದ್ದ ಮನಸ್ಸಿಲ್ಲದ ಶರೀರ ಧೂಳು  ಹಿಡಿಯುವ ನಿರ್ಜೀವ ವಸ್ತುವಿನಂತೆ ; ಮನದಲ್ಲಿ ಶುದ್ದತೆ ,ಬುದ್ದಿಯಲ್ಲಿ ಸ್ಥಿರತೆ ಮತ್ತು ಜ್ಞಾನದಲ್ಲಿ ಪರಿಣತೆ ಎಲ್ಲವೂ ಇದ್ದರೆ  ನಮ್ಮ ಪ್ರತಿಯೊಂದು ಕಾರ್ಯವು ಫಲಕಾರಿಯಾಗುವುದು. ನಮ್ಮೊಳಗಿನ ಶಕ್ತಿಯನ್ನು ಸದಾ ಪರರಿಂದ ಅರಿಯುವ ಬದಲು ನಮ್ಮನ್ನು ನಾವೇ ಹುಡುಕಿ ಅರ್ಥೈಸಿಕೊಂಡರೆ ಅದಕ್ಕಿನ್ನ ಮಿಗಿಲಾದ ಭಾಗ್ಯ ಮತ್ತೇನು ? ನಾನು ಯಾರು ? ನನ್ನ ಸಾಮರ್ಥ್ಯ ಎಂತದ್ದು ?ನನ್ನ  ಆಶಯಗಳೇನು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಕೊಂಡರೆ ಬದುಕಿಗೆ ಬೇಕಾದ ಮಾರ್ಗ ಸಿಗದೇ ಇರುವುದೇ ? ಈಗಲು ಅಷ್ಟೇ ಇವೆಲ್ಲ ಹೇಳುವುದು ಎಷ್ಟು ಸುಲಭವೋ ಕಾರ್ಯಗತವಾಗಿಸಲು ಅಷ್ಟೇ  ಕಷ್ಟ ,ಆದರೆ ಅಸಾಧ್ಯವೇನಲ್ಲ !! ಅಲ್ಲವೇ? ಎಲ್ಲರಿಗೂ ಎಲ್ಲರಲ್ಲೂ ತಮ್ಮತನ ಹುಡುಕಿಕೊಂಡು ಬದುಕಬೇಕೆಂಬ ಆಸೆ-ಆಕಾಂಕ್ಷೆಗಳು ಇರುತ್ತವೆ. ಅವುಗಳನ್ನು ಇತಿ-ಮಿತಿಯಾಗಿ ಸವಿದರೇನೆ ಬದುಕು ನೋಡಲು ಚೆನ್ನ.  ಬಾಳ  ಕನ್ನಡಿಯಲ್ಲಿ  ನಮ್ಮನ್ನು ನಾವೇ ಚೆನ್ನಾಗಿ ಅರಿತು ಬದುಕ ಹಾದಿಯ ಹಸನಾಗಿಸೋಣ. ಎಲ್ಲರ ಜೊತೆಗೂಡಿ ನಲಿದು ಎಲ್ಲರಲ್ಲೂ ತಮ್ಮತನ ಹುಡುಕದೆ, ತಮ್ಮಲ್ಲಿ ತಾವು ಕೀಳರಿಮೆ ಹೊಂದದೆ ಮುಕ್ತವಾಗಿ ಸಂಭಾಷಣೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಂಡು ;  ಒಕ್ಕೊರಲಿನಿಂದ ಈ ಭೂಮಂಡಲವನ್ನು ಸ್ವರ್ಗಮಯವಾಗಿಸೋಣ!

ನಿಮ್ಮ ಒಳಿತನ್ನು ಬಯಸುವ 
~ಜಿ.ಪಿ.ಗಣಿ~
***********************************************************************************************

Thursday, November 8, 2012

ಏಕಾಂತದಿ ಮರುಗಿದ ಮನಕೊಂದು ಸಾಂತ್ವಾನ !!

***********************************************************************************************

                        ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ನೋವನ್ನು ತೀವ್ರವಾಗಿ ಅನುಭವಿಸಿ ಪಟ್ಟಪಾಡುಗಳು ಸಾಕಷ್ಟಿವೆ. ಅದನ್ನು ಯಾರ ಬಳಿ ಹೇಳಿಕೊಳ್ಳುವುದಾಗಲಿ , ಹಂಚಿಕೊಳ್ಳುವುದಾಗಲಿ ಮಾಡುವುದಿಲ್ಲ ! ಅಂತಹ ಸಮಯದಲ್ಲಿ ಬರುವ ಸ್ನೇಹಿತನೇ ಈ ಏಕಾಂತ ;  ಆ ನೋವು, ಸಂಕಟ , ವಿಮರ್ಶೆ ಎಲ್ಲವೂ ಒಮ್ಮೆಯೇ ಸುನಾಮಿಯಂತೆ ಅಪ್ಪಳಿಸುತ್ತದೆ. ಅಂತಹ ಒತ್ತಡವನ್ನು ಎದುರಿಸುವ ಶಕ್ತಿ ಇಲ್ಲದಿರೆ ಬದುಕುವುದು ಬಲು ಕಷ್ಟ! ಅಂತಹ ನೋವನ್ನು ತಕ್ಕ ಮಟ್ಟಿಗೆ ಬಿಚ್ಚಿಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ.
                   ಇಂತಹ ಸಂಕಟದ ವಿಷಯ ಬೇಕೇ ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಹೌದು ಇದು ಬೇಡವೆನಿಸಿದರೂ ಬರೆಯಲು ಯೋಚಿಸಿದ ಉದ್ದೇಶವೇನೆಂದರೆ ಕೆಲವರಿಗೆ ಈ ನೋವು ಎಂಬುದು ತಮಗೆ ಮಾತ್ರ ಸೀಮಿತವಾಗಿದೆ ಎಂದು ಅವರ ಚೌಕಟ್ಟಿನಲ್ಲಿ ಮಾತ್ರ ಯೋಚಿಸಿ ಪರರ ರೀತಿಯ ಹಾಗೆ ನಾನು ಯಾಕೆ ಇಲ್ಲ ? ನನಗು ಅವರ ಹಾಗೆ ಸೌಕರ್ಯ ಇದ್ದಿದರೆ ಈ ರೀತಿ ಆಗುತ್ತಿರಲಿಲ್ಲ ಎಂಬ ಅನೇಕ ಪ್ರಶ್ನೆಗಳು ಉದ್ಭವವಾಗುವುದು ಸರ್ವೇ ಸಾಮಾನ್ಯ. ಅಂತಹ ಎಲ್ಲ ಪ್ರಶ್ನೆಗಳಿಗೆ ಈ ಅಲ್ಪ  ಮತಿಯಿಂದ ಉತ್ತರಿಸುವ ಪ್ರಯತ್ನವಷ್ಟೇ. ಪೀಟಿಕೆಯೇ ಹೆಚ್ಚಾಯ್ತು ಮೂಲ ವಸ್ತು ಬರಲಿ ಎಂದು ಮನದಲ್ಲಿ ಕೇಳಿಕೊಳ್ಳುತ್ತಿದ್ದೀರ ? ಸರಿ ಇನ್ನು ತಡವೇಕೆ ಬನ್ನಿ ಹೋಗೋಣ ನೋವಿನ ಲೋಕಕ್ಕೆ !!

                   ನಿಮ್ಮ ಬದುಕಿನ  ಕಪ್ಪು-ಬಿಳುಪಿನ  ಚಿತ್ರ  ತೆರೆದುಕೊಳ್ಳಿ ಯಾವಾಗಲೋ ಒಮ್ಮೆ ಯಾರದರನ್ನು ಕಳೆದುಕೊಂಡಾಗ ; ಪ್ರೀತಿ ದೂರವಾದಾಗ ; ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ; ಮನೆಯಲ್ಲಿ ಬಡತನದಿಂದ ಬಳಲಿದಾಗ ;ಅನಾಥರಾಗಿ ಹುಟ್ಟಿ ಬದುಕುವಾಗ ; ಹೆಂಡತಿ ಗಂಡನ ಹಿಂಸೆಯಿಂದ ಬಳಲಿದಾಗ ; ಮುದ್ದಾದ ಹೆಂಡತಿ ಗಂಡನ  ತೊರೆದಾಗ ; ಮಕ್ಕಳು ಪೋಷಕರನ್ನು ಮರೆತಾಗ ; ಒಟ್ಟಾರೆ ನೋವಿಲ್ಲದ ಜೀವನವೇ ಇಲ್ಲ ಎಂದು ಹೇಳುತ್ತೇನೆ. ಮತ್ತಷ್ಟು ಹೇಳಲು ಹೊರಟರೆ ಸಮಸ್ಯೆಗಳ ನಿಘಂಟನ್ನು ಬರೆಯಬಹುದು. ಸದ್ಯಕ್ಕೆ ಇರಲಿ ಅಂತಹ ಕಹಿ ಘಟನೆಗಳನ್ನು ಒಮ್ಮೆ ತಿರುವಿ ನೋಡಿದಾಗ ಆ ಸಮಯದಲ್ಲಿ ಒಂದು ರೀತಿ ಹೊಟ್ಟೆಯನ್ನು ಯಾರೋ ಕಿವಿಚಿದಷ್ಟು ಧರ್ಮಸಂಕಟವಾಗುತ್ತಿದೆ, ಅಯ್ಯೋ ..!ಅಮ್ಮ ಯಾಕಿಷ್ಟು ಯಾತನೆ ಎಂದು ಚೀರಬೇಕೆಂದಿದ್ದರೂ ಚೀರದೆ ಅದನ್ನು ಹೃದಯಕ್ಕೆ ಹೊಕ್ಕಿಸಿ ನೋವಿನಿಂದ ಉಂಟಾದ ಕಿಡಿಯು  ಹೊತ್ತಿ ಉರಿಯಲಾರಂಭಿಸಿ ಜಮದಘ್ನಿಯಂತೆ ಆರ್ಭಟಿಸಿ ದಗದಗ ಶರೀರವನೆಲ್ಲ  ಉರಿದು , ಹಿಂಡಿ ಹಿಸುಕಿ ಮುದ್ದೆಯಾಗಿಸಿಬಿಡುತ್ತದೆ.ಒಮ್ಮೊಮ್ಮೆ ಬೆಟ್ಟದ ತುದಿಯಲ್ಲಿ ಕುಳಿತು ನೀಳೆತ್ತರವಾದ ಭೂಮಿಯ ನೋಡಬೇಕೆನಿಸುವಷ್ಟು ಮನಸ್ಸು ನಮಗರಿಯದಂತೆ ನಮ್ಮೊಳಗಿನ ಆಳಕ್ಕೆ ಇಳಿದುಬಿಡುತ್ತದೆ.ಸಂಕಟವೆಂಬ ಶತ್ರುವನ್ನು ಯುದ್ದದಲ್ಲಿ ಮಣಿಸಲಾಗದೆ ಮಳೆಯ ರಭಸದ ಒಡೆತಕ್ಕೆ ನಿಲ್ಲಬೇಕೆನಿಸಿಸುತ್ತದೆ. ಸಿಕ್ಕಿದ ಕಡೆಯಲ್ಲ ಗುದ್ದಬೇಕೆನಿಸುತ್ತದೆ. ತಲೆಯನ್ನು ಚಚ್ಚಿಕೊಳ್ಳುವಷ್ಟು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.ಪ್ರಪಂಚ ಏಕೆ ಹೀಗೆ ಹುಚ್ಚರಂತೆ ಬಡಿದಾಡುತ್ತಿದೆ ! ಮನದೊಳಗೆ ಯಾತನೆಯನ್ನು ಹೊರಹಾಕದೆ ಒಬ್ಬರ ಮೇಲೊಬ್ಬರು ಎಗರಾಡಿ , ಕಾದಾಡಿ ಏಕೆ ಹೀಗೆ ನಿರ್ಜೀವಿಯಾಗುತ್ತಿದ್ದಾರೆ.ಅರಿಯುವ ಮನಸ್ಸಿದ್ದರೂ ಬುದ್ದಿಗೆ ಅದೆಲ್ಲಿ ಮಂಕುಬಡಿದು ಲದ್ದಿ ಹೊಕ್ಕಿತ್ತೋ ಗೊತ್ತಿಲ್ಲ ತಾಳ್ಮೆಯಿಲ್ಲದೆ , ವಿಮರ್ಶೆ ಮಾಡದೆ , ಏನನ್ನೂ ಪರಾಂಬರಿಸದೇ ಒಂದೇ ಸಮನೆ ಯುದ್ದದ್ದಲ್ಲಿ ಅಮಾಯಕರ ಮೇಲೆ ಎರಗುವ ಪರಿಯಂತೆ ನಂಬಿಕೆ , ಪ್ರೀತಿ , ವಾತ್ಸಲ್ಯ , ಮಮತೆ ಎಂಬ ಬದುಕಿನ ಈ ಅಂಗಾಂಗಳನು ಕೊಚ್ಚಿ ಹಾಕುತ್ತಾರೆ.ಈ ಬದುಕಿನ ಸಂಬಂಧಗಳೇ ಹಾಗೆ ಬಂಧವಿಲ್ಲದೆ ಬಂಧನವಾಗಿಹೊಗಿವೆ ಎನ್ನುವಷ್ಟು ಜಿಗುಪ್ಸೆ , ವೈರಾಗ್ಯ ಬಂದುಬಿಡುತ್ತದೆ. ಹಾಗಾದರೆ ಇದಕ್ಕೆ ಕೊನೆಯಿಲ್ಲವೇ ಎಂಬ ಪ್ರಶ್ನೆ ಬರಲಾರದೆ ಇರದು !!ಇಂತಹ ಪ್ರಶ್ನೆಗೆ ಮೋಡಗಳ ವಿಭಿನ್ನ ಉದಾಹರಣೆ ಕೊಟ್ಟು ಹೇಳಬಯಸುತ್ತೇನೆ.
                   ಕೆಲವರು ಬಿಳಿ ಮೋಡದ ಹಾಗೆ ನಾನಾಕಾರದ ಮೋಡವ ತೋರಿ ಆಕರ್ಷಿಸುತ್ತಾರೆ .ಆದರೆ ಕೆಲಕಾಲ ಮಾತ್ರ  ಇದ್ದು  ಮತ್ತೆ ಅದರಾಕಾರ ಬದಲಾಯಿಸಿ ಹಾಗೆ ಗಾಳಿಯಲ್ಲಿ ಮುಂದೆ ಚಲಿಸಿಬಿಡುವಂತೆ ಹೊರಟುಹೋಗುತ್ತಾರೆ . ಇನ್ನು ಕೆಲವರು ಮುಸ್ಸಂಜೆಯಲಿ ತಣ್ಣನೆಯ  ಗಾಳಿ ಬೀಸಿ  ಜಿನುಗುವ ಮಳೆತರಿಸುವ ಮೋಡಗಳ ಹಾಗೆ ,ಮನೋಲ್ಲಾಸವ ಕೊಟ್ಟು ಹರ್ಷೋದ್ಗಾರಕ್ಕೆ ಎಡೆ ಮಾಡಿಕೊಡುತ್ತಾರೆ. ಇವೆ ಸವಿನೆನಪುಗಳಾಗುವವು .ಇನ್ನು ಕೊನೆಯ ಭಾಗದವರು ಅದೇ ಅದೇ ದಟ್ಟ ಕಾರ್ಮೋಡದಂತೆ ಚಲಿಸದೆ ಹಾಗೆ ನಮ್ಮನ್ನು ನೋಡುತ್ತಾ ಮೇಲೆ ನಿಂತು ಕಗ್ಗತ್ತಲೆಯನಿತ್ತು ಕೊನೆಗೆ ಸಿಡಿಲಾರ್ಭಟದಿಂದ ಗುಡುಗಿ ಆಲಿಕಲ್ಲಿನ ಮಳೆಯ ಬೀಳಿಸಿ ನಿಲ್ಲಲ್ಲಾರದೆ ಕೊಚ್ಚಿಕೊಂಡು ಹೋಗುವಷ್ಟು ನೋವಿತ್ತಿಬಿಡುತ್ತವೆ. ಎಲ್ಲ ಭಗವಂತನ ಲೀಲಾಮೃತವಷ್ಟೇ . ಅವನಿತ್ತರೆ  ಯಾವ ಮೋಡಗಳು  ಬೇಕಾದರೂ ಬರಬಹುದು, ಮೊದಲಿನೆರಡು ಮೋಡಗಳು ಬದುಕಿನಲ್ಲಿ ಅಷ್ಟೇನೂ ನೆನಪಿಗೆ ಉಳಿಯುವುದಿಲ್ಲ ಆದರೆ ಮೂರನೇ ಮೋಡ ಮೊದಲೇ ತನ್ನ ಸಿಡಿಲು ಗುಡುಗು ಆರ್ಭಟದಿಂದ ಎಚ್ಚರಿಸುತ್ತವೆ,ಎಚ್ಚರ ತಪ್ಪಿ ಅವುಗಳು ಭಾರಿಸುವ ಆಲಿಕಲ್ಲಿನ ಏಟಿಗೆ ಸಿಗಲಿಚ್ಚಿಸಿದರೆ ಅನುಭವಿಸುವ ಹೊಣೆ ನಾವೇ ಹೊರಬೇಕು, ಆ ಕಹಿ ನೆನಪಿನ ಗಾಯಗಳು ಮಾಸದೆ ಹಾಗೆ ಉಳಿದುಬಿಡುತ್ತದೆ.ಒಮ್ಮೊಮ್ಮೆ ಬದುಕುವುದು ಕೂಡ ಕಷ್ಟ. ಅದಕ್ಕಾಗಿಯೇ ಬದುಕಲ್ಲಿ ಸಿಗುವ ಅಲ್ಪ ಸುಖವನ್ನು ಅನುಭವಿಸುತ್ತ ಧನಾತ್ಮಕ ಚಿಂತನೆಯೊಂದಿಗೆ ಸದ್ಗುಣಗಳನ್ನು ಬೆಳೆಸಿಕೊಂಡು ಸತ್ಕಾರ್ಯಗಳನ್ನು ಮಾಡುತ್ತಾ ಅನ್ಯರಿಗೆ ಕೇಡನ್ನು ಬಯಸದೆ ಜೀವಿಸಬೇಕು . ಈಗಿನ ಕಾಲದಲ್ಲಿ ಮೋಸಕ್ಕೆ ಪ್ರತಿ ಮೋಸ , ಏಟಿಗೆ-ತಿರುಗೇಟು , ಹೀಗೆ ಮಾಡುತಿದ್ದರೆ ಪ್ರಕೃತಿಯ ನಿಯಮಕ್ಕೆ ಬಾಹಿರವಾದ ನಡವಳಿಕೆಯಾಗಿ ಅದರ ಫಲಿತಾಂಶವನ್ನು ನಾವೇ ಹೊರಬೇಕಾಗುತ್ತದೆ. ಕನಸು , ಆಸೆ , ನಿರೀಕ್ಷೆ ಇವೆ ಬದುಕಿನ ದುಃಖದ ಮೂಲ ಬುನಾದಿ ಹೊಂದಿರುವವು. ಇವುಗಳ ಪ್ರೇರಣೆ ಹೆಣ್ಣು- ಹೊನ್ನು-ಮಣ್ಣು ಈ ಮೂರರ ಮಿಶ್ರಣ ,ಇವುಗಳು ಅತಿಯಾದಾಗ ಅಥವಾ ನೆರವೇರದೇ ಇದ್ದಾಗ ಮರುಕ ಹುಟ್ಟಿಸುತ್ತವೆ, ಯಾತನೆಯನ್ನು ತರಿಸುತ್ತವೆ.ಬದುಕು ಸಾಕೆನಿಸುವಷ್ಟು ಒಡೆತ ಕೊಡುತ್ತವೆ.ಅವುಗಳ ಹಿಂದೆ ನಾವು ಬೀಳದೆ ಅವುಗಳನ್ನೇ ನಮ್ಮ ಹಿಂದೆ ಬರುವ ಹಾಗೆ ಮಾಡಿಕೊಂಡು ಬದುಕುವುದೇ ಜೀವನ! ಎಲ್ಲರಿಗು ಎಲ್ಲದರಲ್ಲೂ ಶಕ್ತಿ ,ಯುಕ್ತಿ ಲಭಿಸಲಿ ಅದಕ್ಕಿನ್ನ ಮಿಗಿಲಾಗಿ ಒಬ್ಬ ಮಾನವನಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಾನವೀಯತೆಯಿಂದ ಜಗದ ಉದ್ದಾರವಾಗಲಿ ಎಂದು ಕಾಣದ ಆ ಮಾರ್ಮಿಕ ದಿವ್ಯಚೇತನನನ್ನು ಕೇಳಿಕೊಳ್ಳುತ್ತೇನೆ.

"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"

ನಿಮ್ಮೆಲ್ಲರ ಒಳಿತನ್ನು ಬಯಸುವ
~ಜಿ.ಪಿ.ಗಣಿ~
***********************************************************************************************

Wednesday, November 7, 2012

ಅನಾಥವಾಗುವ ಮುನ್ನ ಅನಂತವಾಗು!!

***********************************************************************************************
ಬರೆಯುವ ಕೈಗಳಿವೆ 
ಬೆರೆಯುವ ಮನಗಳಿವೆ 
ಮಾಸದ ಸವಿ ನೆನಪುಗಳು 
ಅಚ್ಚಳಿಯದೆ ಹಾಗೆ ಉಳಿದಿವೆ
ಸ್ಪಂದಿಸಲು ಮನವು
ಹಾತೊರೆಯುತಿದೆ
ಆದರದು ಸೋಮಾರಿತನಕೆ
ಸಿಕ್ಕಿ ಬಳಲುತಿದೆ
ಇದು ಅಂಜಿಕೆಯೋ ?
ಇದು ಸ್ವಾರ್ಥವೋ ?
ಇದು ಅಸಡ್ಡೆಯೋ ?
ಅನ್ಯರ ಜೊತೆ ಸೇರಿದೆಡೆ
ಮನಕೆ ದೊರೆವುದು
ಧೈರ್ಯವೆಂಬ ಸೇನೆಯ ಪಡೆ
ಬದುಕಿಗೆ ಸಿಗುವುದೊಂದು
ಶಿಸ್ತಿನ ನಡೆ !

~ಜಿ.ಪಿ.ಗಣಿ~
***********************************************************************************************

Friday, October 26, 2012

ಜೇನ ಹನಿಗಳು

***********************************************************************************************
ಪ್ರೀತಿಯ ಸ್ನೇಹಿತರು 
----------------------
ನಿನ್ನ ಕಂಡ ದಿನದಿಂದ ನನಗೆ ನಾಚಿಕೆ ಮತ್ತು 
ಅಂಜಿಕೆಯೆಂಬ ಸ್ನೇಹಿತರ ಪರಿಚಯವಾಯ್ತು !!

ಹುಣ್ಣಿಮೆ 
--------
ನಿನ್ನ ಮೊಗದ ಭಾವನೋಟದ ಪರಿಣಾಮ ತಿಂಗಳಿಗೊಮ್ಮೆ 
ಆಗುತ್ತಿದ್ದ ಹುಣ್ಣಿಮೆ ನಿತ್ಯವೂ ಬರುವಂತಾಯ್ತು !!

ಪ್ರೇಮಕಿರೀಟ
---------------
ನಿನ್ನ ಕೋಮಲವಾದ ತಲೆಗೂದಲನು ಹೆಣೆದು 
ನಿನ್ನ ಅಂದಕೆ ಕಿರೀಟವ ತೊಡಿಸುವಾಸೆ !!

ಹುಡುಗಾಟ
------------
ನಿನ್ನಯ ಮುದ್ದಾದ ಕಿವಿಯೋಲೆಯೊಡನೆ 
ಉಯ್ಯಾಲೆಯಾಡುತ ನಿನ್ನ ಕುಡಿನೋಟವ ಕಾಣುವಾಸೆ !!

 ಕೀಟಲೆ 
---------
ನಿನ್ನ ಪೀಡಿಸುತ ನಿನ್ನಯ ಮೊಗದಲ್ಲಿನ ಸಿಡುಕು 
ನೋಟಕೆ ಕನ್ನಡಿಯ ಹಿಡಿದು ಅಣಕಿಸುವಾಸೆ !!

ಪೂಜಾರಿ 
---------
ನಿತ್ಯವೂ ಭಕ್ತನಾಗಿ ನಿನ್ನ ಬಳಿ ಬರುತ್ತಿದ್ದ ನಾನು 
ಅದೇಕೋ ನಿನ್ನನು ಆರಾಧಿಸುವ ಪೂಜಾರಿಯಾದೆ !!

~ಜಿ.ಪಿ.ಗಣಿ~

***********************************************************************************************

Tuesday, October 23, 2012

ಮಾಯಾಸಾಗರ (ಆತ್ಮಾವಲೋಕನದಲ್ಲೊಂದು ಆತ್ಮಹತ್ಯೆ !!)

***********************************************************************************************
ಓ ಮಾಯೆಯೇ 
ದೂರ ಹೋಗೆಂದರೂ 
ಸನಿಹ ಬಂದೇಕೆ ಕಾಡುವೆ !
ಬೇಡವೆನ್ನುವ ಆಸೆಯ ಬೇಕೆಂದು
ಮನವನೇಕೆ  ಕದಡುವೆ !

ಆತ್ಮಕೆ ಸಲ್ಲದ್ದು ; ದೇಹಕೆ ಸಲ್ಲುವುದು 
ದೇಹಕೆ ಸಲ್ಲದ್ದು ; ಆತ್ಮಕೆ ಸಲ್ಲುವುದು 
ಈ ದೇಹಾತ್ಮದ ತುಮುಲಗಳಿಗೆ 
ಬಲಿಯಾಗಿ ಮರುಗುತಿರುವ 
ಎನ್ನ ಜೀವದ ಸಂಕಟವನೇನೆಂದು ಅರುಹಲಿ ನಾನು !

ಸಂಕಟವೆಂಬ ಸಾಗರದ ಅಗಲವ 
ತಿಳಿಯಲೊರಟಿಹೆನು... ನಾನು!

ಅಳೆಯಲೊರಡುತ್ತಲೇ ಮನಕೇಕೋ  
ಜೀವನ ಸಾಕೆನಿಸುವಷ್ಟು ಬೇಸರ !
ಭಾವುಕತೆಯೆಂಬ ಅಲೆಯ ಆರ್ಭಟಕೆ 
ಪ್ರಶ್ನೆಗಳು ಏಳುತ್ತಿವೆ ಸರಸರ !
ಮನಸ್ಸಿಗೆ ಎಲ್ಲದಕೂ
ಉತ್ತರ ಸಿಗಬೇಕೆಂಬ ಅವಸರ !
ಆ ಅವಸರದಿ ಆದ ಅವಘಡವ 
ಕಂಡೆನಿಸಿತು, ಬದುಕೊಂದು 
ಮೌಡ್ಯದೊಳಗಿನ ಮರ್ಮ !
ತಿಳಿಯಿತದುವೆ
ಭೇದಿಸಲಾಗದ ಕರ್ಮ  !

ಈ ಅನಂತ ಬದುಕಿನ ಅನಂತ 
ತೊಳಲಾಟದಿ ಏನನ್ನೂ ಅರ್ಥೈಸಿಕೊಳ್ಳಲಾಗದ
ಜೀವವಿದ್ದರೇನು !! ಸತ್ತರೇನು !!

~ಜಿ.ಪಿ.ಗಣಿ~

          ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಬದುಕನ್ನು ಸೂಕ್ಷ್ಮವಾಗಿ ಕಂಡು ಬಂದವರೇ ... ಆ ಸೂಕ್ಷ್ಮ ಸಮಯದಲ್ಲಿ ನಮ್ಮ ಆತ್ಮಕ್ಕೆ- ದೇಹ, ದೇಹಕ್ಕೆ - ಆತ್ಮ,  ಒಟ್ಟಾರೆ ದೇಹಾತ್ಮದ ಜೀವಕ್ಕೆ ನಾವು ಹತ್ತಿರವಾಗುವ ಹುಮ್ಮಸ್ಸು ಬರುತ್ತದೆ ಹಾಗೆಯೇ ಬದುಕಬೇಕೆನ್ನುವ ತೇಜಸ್ಸನ್ನು ಕಳೆದುಕೊಳ್ಳುವ ನಿರ್ಧಾರವೂ ಬರಬಹುದು. ಒಟ್ಟಿನಲ್ಲಿ ನಮ್ಮ ಇಚ್ಚಾಶಕ್ತಿಯ ಮೇಲೆ ನಮ್ಮ ಬದುಕು ನಿಂತಿದೆ. ಅಂತಹ ನಮ್ಮ ಇಚ್ಚಾಶಕ್ತಿಯನ್ನು ಸದಾ ಕಾಲ ಸುಬಧ್ರವಾಗಿ ಇರಿಸಿಕೊಳ್ಳೋಣ... ಬದುಕು ಇರುವತನಕ ಎದೆಗುಂದದೆ ಬದುಕೋಣ. 

"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"

***********************************************************************************************

Friday, October 12, 2012

ಪ್ರೀತಿಯ ಸವಿಮುತ್ತುಗಳು !!

***********************************************************************************************

-೧-

ಹಸಿದ ಮನಸ್ಸೆಂಬ ಮಗುವಿಗೆ ಎದೆಹಾಲನುಣಿಸಿ 
ಸಂತೈಸುವ ತಾಯಿಯಂತೆ ನಿನ್ನಯ ಸವಿ ನೆನಪುಗಳು !

-೨-

ಕಪ್ಪಾದ ನನ್ನ ಬಾಳೆಂಬ ಕೋಗಿಲೆಗೆ ಇಂಪಾದ ದನಿಯಂತೆ 
ನೀನು ಬಂದೆ ಮನಕೆ ಉಲ್ಲಾಸ ತಂದೆ !

-೩-

ನಿನ್ನಯ ನೆನಪುಗಳ ಬೇರು ಗಟ್ಟಿಯಾಗಿರುವತನಕ ಎನ್ನಯ ಮನಸ್ಸೆಂಬ ಸಸಿಯಲ್ಲಿ 

ಮಲ್ಲಿಗೆಯಾಗಿ ನೀನು ಅರಳಿ ಸುಗಂಧವ ಬೀರುತ ಎನ್ನ ಮನವ ತಣಿಸುವೆ!

~ ಜಿ. ಪಿ .ಗಣಿ ~
***********************************************************************************************

Thursday, September 6, 2012

ಪ್ರೀತಿಯ ಅಣಿಮುತ್ತುಗಳು !!

***********************************************************************************************
೧ .ಮುನ್ನುಡಿ
    *********
    ಖಾಲಿ  ಪುಸ್ತಕದ ಪುಟವ ತೆಗೆದು ಲೇಖನಿ ಹಿಡಿದಾಗಲೆಲ್ಲ,
     ಅಂತರಂಗದಲ್ಲಿ ನಿನ್ನಯ ಸವಿನೆನಪಿನ ಮುಖಪುಟವು ತೆರೆದುಕೊಳ್ಳುತ್ತದೆ!

೨. ಸೌಂದರ್ಯ
     **********
     ಬಾನಂಗಳದಿ ಮಿನುಗುವ ನಕ್ಷತ್ರಗಳಿದ್ದರೂ 
    ಮನಕೆ ಮುದ ನೀಡುವ ಚಂದಿರ ನೀನಲ್ಲವೇ !

೩ .ಕಣ್ಮಿಂಚು
    **********
    ಕಪ್ಪೆ-ಚಿಪ್ಪನೋಲುವ ನಿನ್ನ ಕಣ್ಣ ರೆಪ್ಪೆಯು ತೆರೆದೊಡನೆ 
    ನಿನ್ನ ಕಣ್ಣೆಂಬ ರತ್ನದ ಹೊಳಪಿಗೆ ನನ್ನ ದೃಷ್ಟಿಯೇ ಮಾಯವಾಗುತ್ತವೆ !

೪. ಮುಗುಳ್ನಗೆ
     **********
     ನಿನ್ನಯ ಮುದ್ದಾದ ಮುಂಗುರಳ ಕಂಡು 
     ನನ್ನೊಳಿನ ಮನಸ್ಸೆಂಬ ಮಗುವು  ಎನ್ನ ಅಂತರಂಗಕೆ ಕಚಗುಳಿ ಇಡುತ್ತಿತ್ತು !

೫ .ತಾಯಿಯ ಪ್ರತಿರೂಪ !!
     *****************
     ನಿನ್ನ ಮೇಲಿನ ಹುಚ್ಚು ಪ್ರೀತಿಯಲಿ,
     ಅರ್ಥವಿಲ್ಲದೆ ಬರುವ ನಿನ್ನಯ ನುಡಿಗಳನು ಕೇಳುವ ತಾಯಿ ನಾನಾದೆ !

೬ . ಪ್ರೀತಿಯ ನಶೆ!!
     *************
     ನಿನ್ನ ನೆನೆಪೆಂಬ ಮದುಪಾನವ ನೀ ನನಗೆ ಕುಡಿಸಿದೆ,
     ಆ ನಶೆಯಿಂದ ಹೊರ ಬರಲು ನೀ ಬಳಿ  ಬರಬೇಕಿದೆ! 

-@(ಜಿ.ಪಿ.ಗಣಿ)@-
***********************************************************************************************

Sunday, September 2, 2012

ಹಾಗೆ ಸುಮ್ಮನೆ

***********************************************************************************************
೧.   ಕಲ್ಪನೆಗೂ ಮೀರದ ಹೆಣ್ಣಿಲ್ಲ!
      ಆ ಕಲ್ಪನೆಯ ಮಾಡಿಕೊಳ್ಳುವ ಗಂಡಿಗಿಂತ ಮತ್ತೊಬ್ಬ ಕವಿಯಿಲ್ಲ !!

೨.   ಪ್ರತಿಯೊಬ್ಬ ಗಂಡಿನಲ್ಲೊಬ್ಬಳು  ಹೆಣ್ಣಿರುತ್ತಾಳೆ !
       ಅವಳೇ ಆ ಹೆಣ್ಣಿನ ಸೌಂದರ್ಯದ ಗಂಟನ್ನು ಬಿಚ್ಚುತ್ತಾಳೆ !!

೩.   ಭಾವನೆಯೇ ಕವಿಗೆ ಬೇಕಾದ ಸರಕುಗಳು!
       ಅವು ಇಲ್ಲದಿರೆ ಕವಿತೆಗಳಾಗುವವು ಬರೀ ಹರಕು ಬಟ್ಟೆಗಳು !!

      -@(ಜಿ.ಪಿ.ಗಣಿ)@-
***********************************************************************************************

Friday, August 31, 2012

ಸಾಧನೆ

***********************************************************************************************
ಪ್ರೀತಿಗೆ ಕರಗದಿರೋ ಹೃದಯವಿಲ್ಲ
ಬಕುತಿಗೆ ಮೆಚ್ಚದಿರೋ ದೇವರಿಲ್ಲ 
ಪ್ರೀತಿಯೆಂಬ ಬಕುತಿಯು ನಿನ್ನಲ್ಲಿರೆ 
ಸಾಧನೆಯ ಕಿರೀಟ ನಿನ್ನ ಮುಡಿಗೇರಲು ಸಂಶಯವಿಲ್ಲ !!
-@(ಜಿ.ಪಿ.ಗಣಿ)@ - 
***********************************************************************************************

ರಕ್ತದಾನ : ರಕ್ತದಾನವೇ ಜೀವದಾನ ಅದು ಕೊಡುವುದು ನಮ್ಮಯ ಆತ್ಮಕೆ ಸಮಾಧಾನ!!

***********************************************************************************************
ಮುಂಜಾನೆಯ ಹೊಸಗಾಳಿ ಸೇವಿಸದಿರೆ
ಮನಸಿಗುಲ್ಲಾಸ ದೊರೆವುದೇ?
ತಿಂದ ಆಹಾರ ಉದರದಿ ಜೀರ್ಣವಾಗದಿದ್ದರೆ
ಮತ್ತೆ ತಿನ್ನುವ ಅವಕಾಶ ಬರುವುದೇ ?
ಇಂತಹ ಹೊಸದು ಬಯಸುವ ಶರೀರವು 
ನೊಂದ ಜೀವಕೆ ರಕ್ತದಾನವ ಮಾಡಿದೆಡೆ 
ನೀ ಉಲ್ಲಾಸದ ರಕುತವ ಚಿಮ್ಮಿಸದೇ ಬಿಡುವೆಯೇನೋ ಶಂಭುಲಿಂಗ !!

-@(ಜಿ.ಪಿ.ಗಣಿ)@ - 
***********************************************************************************************

Tuesday, August 28, 2012

ಮೂಖ-ವೇದನೆಯೇ ಕಣ್ಣೀರ ಸಾಧನೆ !!

***********************************************************************************************
ಬುದ್ದಿಯು ಹೇಳಿತು ನಿನ್ನ ನೆನಪು ನಶ್ವರವೆಂದು !
ಹೃದಯ ಹೇಳಿತು ನಿನ್ನ ನೆನಪೇ ಅಮರವೆಂದು !!
ನಡುವೆ ಮನವು ಕಣ್ಣಿಗೆ ಹೇಳಿತು ಕಂಬನಿಯ ಸುರಿಸೆಂದು !!!

-@(ಜಿ.ಪಿ.ಗಣಿ)@ -
***********************************************************************************************

Friday, August 24, 2012

ಮಾಯಾಂಗಿನಿ

***********************************************************************************************
ಮಚ್ಚಿನಂತೆ ಹರಿತವಾದ ನಿನ್ನ ಸೌಂದರ್ಯದಿ 
ತೆಂಗಿನಕಾಯಿಯಂತಹ ಎನ್ನಯ ಮನದ ಸಿಪ್ಪೆಯನ್ನು ಸುಲಿದು 
ಅಂತರಂಗವೆಂಬ ಕಳಶವ ಬೇಧಿಸಿ 
ಹೃದಯವೆಂಬ ತಿಳಿಯಾದ ಬಿಳಿ ಕವಚದೊಳಗೆ
ಎಳನೀರಿನಂತೆ ಸವಿಯಾಗಿದ್ದ ನನ್ನನ್ನೇ ಹೀರಿಬಿಟ್ಟೆಯಲ್ಲೇ !!

-@(ಜಿ.ಪಿ.ಗಣಿ)@ -
***********************************************************************************************

Wednesday, August 15, 2012

ಮನದೊಳಗಿರ್ಪ ಸ್ವರ್ಗ !!

***********************************************************************************************
ಮನಸ್ಸೆಂಬ ದೇವೇಂದ್ರನ ತಣಿಸಲು 
ನರ್ತನೆಗಯ್ಯಲು ಬಂದಿಪ ಬೆರೆಳೆಂಬ
ನರ್ತಕಿಯರ ಕಾಣಿಬೋ!!
ಗಣಕಯಂತ್ರದಕ್ಷರ ಮೇಲಿನೊಳು 
ಬಳುಕು ನಡುವಲಿ ನೃತ್ಯವಾಡುವಾ ಪರಿಯ ಕಾಣಿಬೋ !!
ಇಂತಪ್ಪ ಭಾವೇಂದ್ರನ ಲೋಕದಿ 
ಭಾವಸಿಂಚನಗಯ್ವ ಪದಪುಂಜಗಳ 
ಕಂಡೆನ್ನ ಕಂಗಳಲಿ ಹೊಸ ಹುರುಪು 
ಎದೆ ಹೊಕ್ಕಿ ಸಂತಸದಿ ಹಕ್ಕಿಯಂತಾರಿಪ ಸೊಗಡ ಕಾಣಿಬೋ !!

@(ಜಿ.ಪಿ.ಗಣಿ)@
***********************************************************************************************

Sunday, August 12, 2012

ಜಿಜ್ಞಾಸೆ

***********************************************************************************************
ಜೋತುಬಿದ್ದ ಮನಕೆ 
ಪ್ರೀತಿಯೆಂಬ ತೈಲದೊಳ್
ಸ್ಪೂರ್ತಿಯ ಶಾಖವಿತ್ತು 
ನಿವಿರದಿರ್ದೆಡೆ
ಮನಕೆ ಉಲ್ಲಾಸವೆಂಬ 
ಕಾಂತಿ ದೊರೆವುದೇ?
-@(ಜಿ .ಪಿ .ಗಣಿ )@-
***********************************************************************************************

Friday, August 10, 2012

ದ್ವಂದ್ವ ಮನಸ್ಸಿನ ಆಟವೇ ಬದುಕಿನ ಮೂಲ ಪಾಠ!!

***********************************************************************************************
           ಭಾವನೆಯ ಬೆನ್ನೇರಿ, ಜಿಜ್ಞಾಸೆಗೆ ಒತ್ತುಕೊಟ್ಟು ,ಈ ವಿಷಯದ ಆಳಕ್ಕಿಳಿದು ಸ್ವಲ್ಪ ಇದರ ಬೇರು ಹೇಗಿರಬಹುದೆಂಬ ಪ್ರಯತ್ನ ಮಾಡಿದೆ, ಅದೆಷ್ಟರಮಟ್ಟಿಗೆ ನಿಮಗೆ ಹಿಡಿಸುವುದೋ ನೋಡಬೇಕು!! ತಪ್ಪಿದ್ದರೆ ಕ್ಷಮಿಸಿ , ಇದು ಕೇವಲ ನನ್ನ ಮನದ ಆಂತರ್ಯದ ಮಾತುಗಳಷ್ಟೇ . ಸರಿ, ಬರೀ ಪೀಟಿಕೆಯೇ ಆಯ್ತು ಲೇಖನ ಶುರುವಾಗಲಿ ಎನ್ನುವಿರಾ ? ಬನ್ನಿ ಮತ್ತೆ ಹಿಂಗೋಗಿ ಹಾಂಗ್ ಓದಿ ಬಂದ್ಬುಡುವ !!

ಜೀವನದ ಪ್ರಮುಖ ಮತ್ತು ತಿಳಿಯಲು  ಸದಾ ಹಾತೊರೆಯುವ ವಿಷಯವೆಂದರೆ ಅದೇ ದ್ವಂದ್ವತೆ .ಪ್ರತಿಯೊಂದು ಕರ್ಮದಲ್ಲೂ ಸರಿ -ತಪ್ಪು , ಒಳಿತು -ಕೆಡುಕು ,ಸೋಲು -ಗೆಲುವು  ಹೀಗೆ ಹೇಳುತ್ತಾ ಹೋದರೆ ನಮಗೆ  ತಿಳಿಯದಂತೆ ವಿರುದ್ದ ಪದಗಳ ಜೋಡಣೆ ಮಾಡಿ ಮೂಟೆ ಕಟ್ಟಿಹಾಕಿದಂತಾಗುತ್ತದೆ ಅದು ಹಾಗೆ ಇರಲಿ ಬಿಡಿ . ಆದರೆ ಇಲ್ಲಿ ನಮಗೆ  ಕಾಡುತ್ತಿರುವ ದ್ವಿಮುಖ ಹೊಂದಿರುವ ಏಕೈಕ ವಸ್ತು ದ್ವಂದ್ವ ಅಲ್ಲವೇ ? ಒಮ್ಮೊಮ್ಮೆ ಅನಿಸಿರಬಹುದು ,ಇದು ನಮಗೆ  ದೈವ ಇತ್ತ ಶಾಪವೋ -ವರವೋ ಎಂದು . ಅರೆ ಮತ್ತೆ ಏನಿದು ವಿಷಯದ ಸಾರ ಹೇಳ ಹೊರಡುತ್ತಲೇ ಮತ್ತದೇ ದ್ವಂದ್ವ ಪದಗಳ ಬಳಕೆ ಎನ್ನುವಿರಾ ? ಅದೇ ಹೇಳಲು ಒದ್ದಾಡುತ್ತಿರುವುದು . ಯಾವ ವಿಷಯವಾಗಲಿ ಅದರ ವಿಮರ್ಶೆ ಅಥವಾ ಚರ್ಚೆಗೆ ಗ್ರಾಸವಾದರೆ ಎರಡು ಉತ್ತರಗಳು , ಎರಡು ಯೋಜನೆಗಳು ಹೊರ ಬರುವುದಲ್ಲವೇ ? ಹಾಗೆಯೇ ಪ್ರತಿಯೊಂದು ಚಲನ-ವಲನದಲ್ಲೂ ದ್ವಂದ್ವ ಇದ್ದೆ ಇರುತ್ತದೆ . ಅದೇ ಅಲ್ಲವೇ ಇದರೊಳಗಿನ ರಹಸ್ಯ !
                ದ್ವಂದ್ವತೆಯ ಮಹತ್ವ ತಿಳಿಯಲು ಒಂದು ಸಣ್ಣ ಕಲ್ಪನೆಯ ಮಾಡಿಕೊಳ್ಳುವ ಬನ್ನಿ . ಮತ್ತೆಲ್ಲೋ ಕಲ್ಪನೆಯ ಆಗರ ಕಟ್ಟುವುದು ಬೇಡ ನಮ್ಮ ದೇಹವೇ ತೆಗೆದುಕೊಳ್ಳುವ ಬನ್ನಿ . ರುಂಡ, ಮುಂಡ, ಕೈ ಕಾಲು ಎಂದು ವಿಂಗಡಿಸಿರುವ  ಈ ಶರೀರವ ನೇರವಾಗಿ ಸೀಳಿದರೆ ಸಮ್ಮಿತಿಯಂತೆ  ಕಾಣುವುದಲ್ಲವೇ !! ಆದರೆ ಅವೆರಡು ಭಾಗಗಳು ಸಮನಾಗಿರುವವೇ ಎಂದು ಎಂದಾದರೂ ಯೋಚಿಸಿದ್ದೀರಾ ? ಅವುಗಳಲ್ಲಿ ಸಣ್ಣ ಕೊರತೆಗಳು ಇದ್ದೆ ಇರುತ್ತವೆ. ಮತ್ತೊಂದು ಎಂದರೆ ಪ್ರಪಂಚದಲ್ಲಿ ಸಂಪೂರ್ಣ  ಸಿಧ್ಧಿ ಸಿಗುವುದು ಅಸಾಧ್ಯ !! ಮತ್ತೆ ಈ ಶರೀರಕ್ಕೆ ಬಂದರೆ ಮುಖ್ಯ ಅಂಗಗಳಾದ ಹೃದಯ ಮತ್ತು ಮೆದುಳು ಒಂದು ರೀತಿಯ ರಾಜ -ಮಂತ್ರಿಯರಿದ್ದ ಹಾಗೆ, ಇಬ್ಬರ ವಿಚಾರಗಳು ಸೇರಿ ಒಂದು ನಿರ್ಧಾರಕ್ಕೆ  ಬಂದರೆ ಆ ಕೆಲಸ  ಸಾಫಲ್ಯ. ಮೆದುಳು ಕೂಡ ಎರಡು ಭಾಗವೇ ಏಕೆಂದರೆ ಈಗಾಗಲೇ ಶರೀರವ ಸೀಳಿ ಆಗಿದೆ . ಒಮ್ಮೆ ಈ ಸೀಳಿದ ಶರೀರದ ಎಡ ಭಾಗವ ಒಮ್ಮೆ ಕನ್ನಡಿಯಲ್ಲಿ ಅಂಟಿಕೊಂಡಂತೆ  ಹಿಡಿದು ನೋಡಿ ಸಂಪೂರ್ಣ ಶರೀರ ಭಾಸವಾಗುವುದು. 
                    ಈಗ ನೋಡಿ ನಿಜವಾದ ದ್ವಂದ್ವಕ್ಕೆ ಸರಿಯಾದ ಉತ್ತರ ಸಿಗುವುದು.ನಾವು ಹೊಂದಿರುವ ಹೃದಯ ಒಂದೇ ಆದರೆ ಕನ್ನಡಿಯಲ್ಲಿ ಮತ್ತೊಂದು ಹೃದಯ ಕಾಣಿಸುತ್ತಿದೆ .ಆದರೆ ಅದು ವಾಸ್ತವದಲ್ಲಿ ಬಲಭಾಗದಲ್ಲಿ ಇಲ್ಲ , ಕೇವಲ ಅದರ ಬಿಂಬ ಹಾಗೆಯೇ ಈ ಬದುಕಿನ ಪಯಣದಲ್ಲಿ ,ಇಂತಹ ಎರಡು ವಿರುದ್ದ ದಿಕ್ಕಿನ ಅಂಗಾಗಳ ಜೋಡಿಸಿ ಎಡಕ್ಕೆ ಹೃದಯವಿತ್ತು ಪರಮಾತ್ಮ ನಮ್ಮನ್ನು ಸದಾ ಕಾಪಾಡುವ, ಆದರೆ ಬಲಕ್ಕೆ ಕಾಣದ ಹೃದಯವ ನಾವುಗಳೇ ಹುಡುಕುತ್ತ ದಿಕ್ಕು ತಪ್ಪುತ್ತೇವೆ. ಆದರೂ ಪಕ್ಕದಲ್ಲಿರುವ ಪರಮಾತ್ಮ ನಮಗೇ ಗೋಚರವಾಗುವುದೇ ಇಲ್ಲ .ಇದೆ ಅಲ್ಲವೇ ದ್ವಂದ್ವತೆ .
                      ಎಲ್ಲೋ ಉತ್ತರ ಹುಡುಕುವುದು ವ್ಯರ್ಥ ಪಯತ್ನ ಸುಮ್ಮನೆ ಏಕೆ ಧೃತಿಗೆಡುವಿರಿ. ಒಳಿತು -ಕೆಡುಕು ,ಸರಿ-ತಪ್ಪು , ಸೋಲು-ಗೆಲುವು , ಹುಟ್ಟು -ಸಾವು ಇನ್ನು ಹತ್ತು ಹಲವೂ ,ಇವೆಲ್ಲವೂ  ಒಂದೇ ನಾಣ್ಯದ ಎರಡು ಮುಖಗಳು ಮತ್ತು ದ್ವಂದ್ವತೆಯ ಮೂಲ ಮಂತ್ರಗಳು, ಇವು ಇರುವುದು ಮಾತ್ರ ವಿರುದ್ದ ದಿಕ್ಕಿನಲ್ಲಿ ಆದರೆ ಅವುಗಳ ನಡೆಗಳು ಮಾತ್ರ ಅನಂತ . ಆದರೆ ಅವೆರಡರ ಸಮಾನ ತಕ್ಕಡಿ ಹಿಡಿದು ಜ್ಞಾನವೆಂಬ ಜ್ಯೋತಿಗೆ ಬುದ್ದಿಯ  ಕೊಟ್ಟು ನಡೆಸಬೇಕು . ಉದಾಹರೆಣೆಗೆ ಹೇಳುತ್ತೇನೆ( ಅನಂತ.......  -4,-3,-2.-1.0,1,2.3.4......ಅನಂತ )ಎಷ್ಟು ಧನಾತ್ಮಕ ಮತ್ತು ಋಣಾತ್ಮಕ ಯೋಚನೆಗಳೇ ಆಗಲಿ ಅದಕ್ಕೆ ಒಂದು ಉತ್ತರ ಇದ್ದೆ ಇರುತ್ತದೆ. ಮತ್ತೊಂದು ತಲೆಯಲ್ಲಿರಲಿ ನಾವು  ಶೂನ್ಯ  ಎಂದು  .  ಬದುಕು ನಮ್ಮ ದ್ವಂದ್ವತೆಯಿಂದ ಹೊರಬರುವ ಉತ್ತರದ  ಅಡಿಪಾಯದ ಮೇಲೆ ನಿಂತಿದೆ . ಒಂದು ರೀತಿಯ ಇಕ್ಕಟ್ಟು ಅಲ್ಲವೇ!! ಹೌದು ಆದರೂ ಹೇಳುತ್ತೇನೆ . ದ್ವಂದ್ವತೆ ದೈವ ಇತ್ತ ವರ. ಎಲ್ಲ ಹಾದಿಯೂ  ಸುಗಮವಾಗಿ ಇದ್ದರೆ ಜೀವನ  ಬೇಸರವೆನಿಸುವುದು. ಅದಕ್ಕೆ ಹಿಟ್ಲರ್ ಹೇಳಿರುವ ಒಂದು ನುಡಿ ಜ್ಞಾಪಕಕ್ಕೆ ಬರುತ್ತಿದೆ . ಕೆಡುಕು ಯೋಚನೆ ನಮ್ಮ ಸುರಕ್ಷಿತಗೆ ಆದರೆ ಒಳ್ಳೆಯ ಯೋಚನೆ ನಮ್ಮ ಯೋಜನೆಯ ಸಾಕಾರಕ್ಕೆ ಎಂದು . ಹಗಲಾದ ಮೇಲೆ ಇರುಳಿನ ಹಾಗೆ ಒಂದಾದ ನಂತರ ಮತ್ತೊಂದು  ಬಂದೇ  ಬರುತ್ತದೆ. ಅದಕ್ಕಾಗಿ ದೃಡಕಾಯ ಮನವಿರಬೇಕು. ಒಟ್ಟಿನಲ್ಲಿ ದ್ವಂದ್ವತೆಗೆ ಸಾವಿಲ್ಲ ,ಅದು ಬದುಕಿನ ಒಂದು  ಅವಿಭಾಜ್ಯ ಅಂಗ ಮತ್ತು ಅತ್ಯವಶ್ಯಕ . ಎದ್ದಾಗ ಹಿಗ್ಗದೆ ಬಿದ್ದಾಗ ಕುಗ್ಗದೆ ...ಈ ಏಳು -ಬೀಳಿನ ನಡುವೆ ಮನಸ್ಸನು  ತಟಸ್ಥಗೊಳಿಸಿ ಸರಿಯಾದ ಹಾದಿಯ ಹುಡುಕೋಣ.
                ಕೊನೆಯಲ್ಲಿ ಸಣ್ಣ ಕಿವಿ-ಮಾತು : ಪ್ರತಿಯೊಂದು ವಿಷಯದಲ್ಲೂ ಚಲನವಲನದಲ್ಲೂ ಎರಡು ನಿರ್ಧಾರಗಳು ಇದ್ದೆ ಇರುತ್ತವೆ ಅದೇ ದ್ವಂದ್ವ ಅದಕ್ಕಾಗಿ ಒಂದು ಸರಿಯಾದ ನಮ್ಮ ಆತ್ಮಕ್ಕೆ ಸ್ಪಷ್ಟವಿರುವ ದಾರಿ ಹಿಡಿದು ಮುನ್ನಡೆಯಬೇಕು. ಒಮ್ಮೆ ಅತ್ತ ನಡೆಯಲು ಪ್ರಾರಂಬಿಸಿದ ಮೇಲೆ ಹಿಂದುರುಗುವ ಮಾತು ಬರಬಾರದು ಅದು ಎಂತಹ ಪರಿಸ್ತಿತಿಯಾದರೂ ಸರಿ. ಏಕೆಂದರೆ ಮತ್ತೆ ಹಿಡಿದ ಹಾದಿಯಲ್ಲಿ ಮತ್ತಷ್ಟು ದ್ವಂದ್ವ ನಿರ್ಧಾರಗಳು ಕಾಯುತ್ತಿರುತ್ತವೆ . ಅದು ನಮ್ಮ ಜೊತೆಯಲ್ಲಿ ನಿತ್ಯ- ನಿರಂತರವಾಗಿ ಸಾಗುತ್ತಿರುತ್ತದೆ. ಎಲ್ಲವೂ ನಿಮ್ಮ ನಿಮ್ಮ ನಿರ್ಧಾರಗಳ ಮೇಲೆ ನಿಮ್ಮ ಬದುಕಿನ ಒಳಿತು -ಕೇಡು ನಿಂತಿದೆ.

  ನಿಮ್ಮ ನಲ್ಮೆಯ 
-@(ಜಿ.ಪಿ.ಗಣಿ)@-
***********************************************************************************************

Monday, July 30, 2012

ಹಬ್ಬದ ಮೆರುಗು !!

***********************************************************************************************
ಪಾಶ್ಚಾತ್ಯ ಬದುಕಿಗೆ ವಾಲುತ್ತಿರುವ 
ಹೆಂಗಳೆಯರ ಮಹಾ ಪೂರ .....
ದಿನನಿತ್ಯ ಅದೆಂಥ ! ಬಳುಕು 
ನಡುಗೆಯ ವಯ್ಯಾರ ......
ಬಂತಮ್ಮ !! ಆಷಾಡ ಶುಕ್ರವಾರ ...
ಶ್ರಾವಣದ ಮಹಾಲಕ್ಷ್ಮಿಯ ಪೂಜೆಯ ವಾರ... 
ಬರಿದಾದ ಹಣೆಗೆ ಬಿತ್ತು  
ತಿಲಕ ಶ್ರೇಷ್ಟ ಸಿಂಧೂರ ....
ಮುಡಿಗೆ  ಮಲ್ಲಿಗೆಯ ಹೂವಿನ ಹಾರ ...
ಕೊರಳಿಗೆ ಏರುವ ಆಭರಣಗಳು ಬಲು ಭಾರ...
ಸೀರೆಯುಟ್ಟ ನೆರಿಗೆಗಳು ಅಪಾರ ...
ಆಹಾ ! ಭಾರತೀಯ ಹೆಣ್ಣಿನ ಅಂದವ ಮೆರುಗು ಗೊಳಿಸುವುದು 
ವಿಶಿಷ್ಟ -ವರ್ಣಮಯ  ಸಿಂಗಾರ ...
ಇಂತಹ ಹಬ್ಬಗಳಿಂದ ಆಗುವುದಲ್ಲವೇ 
ನಮ್ಮ ಸಂಸ್ಕೃತಿಯ ಜೀರ್ಣೋದ್ದಾರ !!!! 

-@(ಜಿ.ಪಿ.ಗಣಿ)@-
***********************************************************************************************

Saturday, June 30, 2012

ಸಾರ್ಥಕ ಜೀವನ !!

***********************************************************************************************
ಹುಟ್ಟೆಂಬುದು..
ಹೆತ್ತ ತಾಯ
ಗರ್ಭದಿ ಹೊರ ಬರುವುದು ,
ಸಾವೆಂಬುದು..
ಭೂ - ತಾಯಿಯ 
ಗರ್ಭದೊಳ  ಹೊಕ್ಕುವುದು !!
ಈ ಬಂದು-ಹೋಗುವ 
ನಡುವಿನಂತರದಿ 
ಆ ಗರ್ಭ ಹೊತ್ತ ತಾಯರ 
ನಗಿಸಿ ಋಣವ ತೀರಿಸುವುದೇ ಸಾರ್ಥಕ ಜೀವನ!!

-@(ಜಿ.ಪಿ.ಗಣಿ)@-
***********************************************************************************************

Thursday, June 28, 2012

ಓ ಅನಂತರೆ!!

***********************************************************************************************
ಅನಾಥರು ನಾವ್ ಅನಾಥರು 
ಎಂದು ಮರುಗಬೇಡಿ ಮನಗಳೇ
ಜಗದಿ ಸಂಬಂಧಗಳ ಬಲೆಯೊಳಗೆ 
ಬಿದ್ದೊದ್ದಾಡಿ ಹೊರಬರಲು 
ಕಾಯುತಿರುವ ಮನುಜರ  ನೋಡಿರೋ !
ನಿಮಗ್ಯಾವ  ಹಂಗಿಲ್ಲ ,
ನಿಮಗ್ಯಾರ ಭಯವಿಲ್ಲ ,
ನಿಮ್ಮಯ ಮನವು ತೋರುವುದು 
ತಾಯಿಯ ಮಮತೆಯ ,
ತಂದೆಯ ಪ್ರೀತಿಯ ,
ಹುಟ್ಟಿನಿಂದಲೇ ನಿಮ್ಮ 
ಅಸ್ತಿತ್ವದ ತಳಪಾಯವ 
ಗಟ್ಟಿಮಾಡುವ  ಸಾಮರ್ಥ್ಯವ 
ನೀಡಿದ ನಮ್ಮ ಶಂಭುಲಿಂಗನ ಕೊಂಡಾಡಿರೊ!!
-@(ಜಿ.ಪಿ.ಗಣಿ)@-
***********************************************************************************************

ಓ ನನ್ನ ಮುದ್ದು ಸೈಕಲ್ಲೇ ...

*********************************************************************************************** 
            ತಾಳ್ಮೆ ಇದ್ದವ್ರ್ಗ್ ಮಾತ್ರ !!!!! ನೋಡ್ರಿ ಗಣ್ಯಾತಿ -ಗಣ್ಯರೇ , ನಂಗೆ ಬರಿಬೇಕಾರೆ ಗೊತ್ತಿರ್ಲಿಲ್ಲ !! ಸುಮ್ನೆ ಕುಶಿನಾಗೆ ಕೂತ್ಕೋ ಗೀಚ್ಬುಟ್ಟೆ , ಆಮ್ಯಾಗ್ ನೋಡ್ತಿವ್ನಿ ! ಶ್ಯಾನೆ ಉದ್ದಕ್ಕಾಗ್ಬುಟ್ಟಿತ್ತು  ಅಂತೀನಿ . ಹು ,,, !! ಅದ್ಯಾನೋ ಅಂತಾರಲ್ಲ ಧೀರ್ಘ ಅಂತ ಹಂಗಾತು ,,, ! ಏನೋ  ನಂದು ಸೈಕಲ್ಗೆ ಮೇಲೆ ಪ್ಯಾರ್ಗೆ ಆಗ್ಬಿಡ್ತು ಅದ್ಕೆ ಮನ್ಸು ಕಿಸ್ಕೊಂಡು ಯಾನ್ಯಾನೋ  ಗೀಚ್ಬುಟ್ಟದೆ ,,, ತಪ್ಯಾಗಿದ್ರೆ ಹೊಟ್ಟೆಗ್  ಹಾಕಂಬುಡಿ ದಯವಿಟ್ಟು  :))))))))) ಆಯ್ತೆ ??? 

ಓ ನನ್ನ ಮುದ್ದು ಸೈಕಲ್ಲೇ ...
________________

ಓ ನನ್ನ ಮುದ್ದು ಸೈಕಲ್ಲೇ !!
ಅಪ್ಪನ ಬಾಳಿನ ರಥವೆ,
ನಿನ್ನಯ ನಗು ಮೊಗವ 
ಕಂಡೆನ್ನ ಮನದಲಿ 
ನಿನ್ನಯ  ಸವಾರಿಯ 
ಮಾಡಬೇಕೆಂಬ  
ಬಯಕೆ  ಮೂಡಿದ್ದು 
ನಿನಗೆ ನೆನಪಿದಯಾ.........?

ನಿನ್ನ ಒಂದು ಪೆಡಲಿನಲಿ 
ನನ್ನೊಂದು ಕಾಲನಿರಿಸಿ 
ಮಗದೊಂದು ಕಾಲನು 
ಭೂ - ತಾಯಿಯ ಮೇಲಿರಿಸಿ 
ಇಬ್ಬೊರೊಡನಾಟವಾಡಿ 
ಅರೆಪೆಡಲು ಕಲಿತು ,
ಡಬ್ಬಲ್ಲು ರೈಡಿಂಗು 
ಸಾಹಸಮಾಡಲೆಂದು
ಗೆಳೆಯನೊಡನೆ ಹೊರಟಾಗ 
ಆಯ ತಪ್ಪಿ ಬಿದ್ದು 
ಮೂವರು  ಮಯ್ಯಿ   - ಕೈಯ್ಯನು 
ತರಚಿಕೊಂಡಾದ  ಗಾಯದ ಕಲೆಗಳು 
ನಿನಗೆ ನೆನಪಿದೆಯಾ .......................?

ಆಯುಧ ಪೂಜೆಯಂದು 
ಹೂವಿನ ಹಾರವ ತೊಡಿಸಿ ,
ವಿಭೂತಿಯ ಪಟ್ಟೆಯ ಬಳಿಸಿ ,
ಬಾಳೆದಿಂಡಿನ ಮಲ್ಲಿಗೆಯ ಮೊಡಿಸಿ,
ರತಿಯಂತೆ ಸಿಂಗರಿಸಿ,
ನಿನ್ನ  ಕಾಲೆಂಬ ಚಕ್ರಕೆ 
ಬಲೂನೆಂಬ ಗೆಜ್ಜೆಯ ಕಟ್ಟಿ 
ಅದರ  ಸದ್ದಲಿ
ದಿಬ್ಬಣ ಹೊರಟಿದ್ದು 
ನಿನಗೆ ನೆನಪಿದೆಯಾ  ........................?

ಮುದ್ದಾದ ತರುಣಿಯರ 
ನೋಡಲು...!
ಹಿಗ್ಗುತ ಇಬ್ಬರೂ
ದೌಡಾಯಿಸಿದೊಮ್ಮೆಯಾದರೆ 
ಸ್ಲೋ  ಸೈಕಲ್ಲು ರೇಸಿನಲಿ
ನಾವಿಬ್ಬರೊಂದಾಗಿ 
ಮತ್ತಾತರುಣಿಯರ 
ಗಮನ ಸೆಳೆದುದು 
ನಿನಗೆ  ನೆನಪಿದಯಾ  ........................?

ಇಂದೇಕೊ ನೀ 
ಮೌನದಿ ಕೊರಗಿ ನಿನ್ನ 
ಮರೆತನೆಂದೋ -ಕಡೆಗಣಿಸಿದನೆಂದೋ ?
ಅಳುವ  ನಿನ್ನಯ  ಮೊಗವ  ಕಂಡು 
ನಿನ್ನ  ತಬ್ಬಿ  ಮತ್ತೆ  ಮುದ್ದಾಡಿ
ಸುತ್ತಾಡಿ ಬಂದು ನಿನಗಾಗಿ 
ಸವಿನೆನಹುಗಳ ಭಾವನಾಲಹರಿಯ
ರಸದೌತಣವ ಬಡಿಸಿರುವೆ 
ನಿನ್ನಯ ಮನಕೆ 
ಇಂದು ಸಂತಸವಾಗಿದೆಯಾ ...? 

ನಿನ್ನ ಪ್ರೀತಿಯ ಸವಾರ -@(ಜಿ.ಪಿ.ಗಣಿ)@-
*********************************************************************************************** 

Wednesday, June 27, 2012

ಲಕ್ಷ್ಮೀ ಮಹಾತ್ಮೆ !!

***********************************************************************************************
ಕಾಸು ಕಂಡವನು
ಲೋಕ ಮರೆತಂತಾಯ್ತು
ಕಣ್ಣು ಕಾಣದವನು
ಲೋಕ ಅರಿತಂತಾಯ್ತು
ನಡುವೆ ಎನ್ನಯ ಮನವು
ಕೊರಗಿ ,ಸುಂದರ  ಅರಿವು 
ಹೃದಯಾಳದಲಿ ನಾಟಿ ನಿಂತಂತಾಯ್ತು !!!

-@(ಜಿ.ಪಿ.ಗಣಿ)@-
***********************************************************************************************

ಪ್ರೇಯಸಿಯ ಕಣ್ಮಿಂಚು !!

***********************************************************************************************
ಮನಸ್ಸಿಲ್ಲದ
ಮನಸ್ಸಿನಿಂದ ,
ನನಸಾಗದ
ಕನಸ್ಸಿನಿಂದ ,
ನಾ ಹೇಗೆ?
ದೂರವಾಗಲಿ !!
ನಿನ್ನ ಕಂಗಳ 
ಬಾಹು -ಬಂಧನದಿಂದ !!!!

-@(ಜಿ.ಪಿ.ಗಣಿ)@-
***********************************************************************************************

Tuesday, June 26, 2012

ಪ್ರೇಮದ ಸೆಳೆತ !!

***********************************************************************************************
ನನಗಿಂತ ನಿನ್ನ 
ಹೊತ್ತ ಹೃದಯ
ಭಾರವಾಯಿತೆನೆಗೆ,
ಎಷ್ಟು ತಡೆದರೂ 
ನಿನ್ನೆಡೆಗೆ  ವಾಲುತಿಹುದು ,
ನಿನ್ನಯ ಪ್ರೇಮದಿ
ಸಮತಟ್ಟಾಗಿದ್ದ
ಮನದ ನೆಲವೂ..
ಇಳಿಜಾರಾಯ್ತೆ!!

-@(ಜಿ.ಪಿ.ಗಣಿ)@-
***********************************************************************************************

Monday, June 25, 2012

ಜಿಜ್ಞಾಸೆ-೩

***********************************************************************************************

ಕಣ್ಣ ರೆಪ್ಪೆಯು ರಕ್ಷಿಸುವದ 

ಮರೆತು ಮುಳ್ಳಾಗಿ ನಿಂತರೆ 

ಕಣ್ಣಿನ ಅಂದಕೆ ಸ್ಥಿರವೆಲ್ಲಿ ?

-@(ಜಿ.ಪಿ.ಗಣಿ)@-

***********************************************************************************************

ಜಿಜ್ಞಾಸೆ -೨

***********************************************************************************************
ಉದಯಿಸುವ ರವಿ - ಚಂದ್ರರಿಲ್ಲದಿರೆ ,
ರಾತ್ರಿ -ಹಗಲಿಗೆ ಬೆಲೆಯಲ್ಲಿ ?
ಕೆಚ್ಚೆದೆಯ ಮನಸಿಲ್ಲದಿರೆ ,
ಸುಖ - ದುಃಖಗಳ ಉಂಬುವ
ಜೀವಕೆ ಅರ್ಥವೆಲ್ಲಿ ?
ಹಾರೈಸುವ ಬುದ್ದಿ ಇಲ್ಲದಿರೆ, 
ಮನುಜನಾಗಿ ಮಾನವತೆಗೆ ನೆಲೆಯಲ್ಲಿ ?
ನನ್ನ ಮನದ ದನಿಗೆ ಸ್ಪಂದಿಸದಿರೆ, 
ನಾ ಬದುಕಿ ಫಲವೆಲ್ಲಿ ?

-@(ಜಿ.ಪಿ.ಗಣಿ)@-
***********************************************************************************************

ಪ್ರೀತಿ ಲಂಚವಾದರೆ

***********************************************************************************************
ಪ್ರೀತಿಯೆಂಬ ಲಂಚವ ಕೊಟ್ಟು
ಮೋಹವೆಂಬ ವೇದನೆ ಪಡೆಯುವ
ವ್ಯಾಪಾರದ ಪರಿಯ ಕಂಡು ಹುಸಿ
ನಗು ಮನದಲ್ಲಿ ಮೂಡುತಿದೆ.

-@(ಜಿ.ಪಿ.ಗಣಿ)@-
***********************************************************************************************

ಆಸೆಗೊಂದು ಕಡಿವಾಣ

***********************************************************************************************
ಆಸೆಯೆಂಬುದು ಮನಸ್ಸಿಗೆ  ಅನ್ನಿಸಬೇಕು  ಅಲರ್ಜಿ 
ಮನಸಿಗೆ ಅದ  ಕಾರ್ಯಗತ ಮಾಡಲು ಬೇಕು ಮುತುವರ್ಜಿ !!! 
ಅದಾದರೆ ನಮಗೆ ಸಿಗುವುದು ಸಾಕ್ಷಾತ್ಕಾರಕೆ ಅರ್ಜಿ !!

-@(ಜಿ.ಪಿ.ಗಣಿ)@-
***********************************************************************************************

ವೀರ ಕವಿ

***********************************************************************************************
ಮನಸ್ಸೆಂಬ ಸಾಗರದೊಳಗೆ
ಅನುಭವಗಳ ಅಲೆಯನೆಬ್ಬಿಸಿ 
ಆ  ಅಲೆಯ ಮೇಲೆ ರಂಗು - ರಂಗಿನ 
ಆಟವಾಡಿಸುವ ಪದಗಳ ಜೋಡಿಸಿ 
ಮನದೊಳಗಿನ ನೋವು - ನಲಿವಿನ 
ಚಿತ್ರಣವ ಬಿಂಬಿಸುವ ಲೇಖನಿಯೆಂಬ 
ಖಡ್ಗ ಹಿಡಿದವನೇ ವೀರ ಕವಿ !!!!!

-@(ಜಿ.ಪಿ.ಗಣಿ)@-
***********************************************************************************************