ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, February 5, 2014

ಆತ್ಮಲಿಂಗ

*********************************************************************************************** ಆತ್ಮದ ನಡೆ ಸರಿಯಾಗಿದ್ದೆಡೆ
ಮನಸೆಲ್ಲಾ ದೇವಾಲಯದಂತೆ
ಧೈರ್ಯದಿಂ ಮುನ್ನುಗ್ಗುವ ಮನಕೆ
ದೈವದ ಬಲ ಸದಾ ಇರುವುದಂತೆ

ಕಣ್ಣ ರೆಪ್ಪೆ
ತೆರೆದರೂ ನೀನೇ
ಮುಚ್ಚಿದರೂ ನೀನೇ
ಅದುವೇ ನೇತ್ರವೆಂಬ ಆತ್ಮಲಿಂಗ
ಸಮರ್ಪಿಸಿರುವೆನು ನಿನಗೆ
ದೇವಾ...
ಎನ್ನಯ ಈ ಅಂತರಂಗ
ಈ ದೇಗುಲದೊಳು
ಭಕ್ತಿಯನ್ಹೊರತು
ನಾನೇನನೂ ಬೇಡೆನು
ಓ ಹರನೇ
ಸಲಹಿ ಕಾಪಾಡೆನ್ನ ಮನವನು.

*********************************************************************************************** 

Monday, February 3, 2014

ಹೂವೆಂಬ ಚೇತನ

*********************************************************************************************** ಹೂವು ನಾನು ನನಗೂ ಒಂದು ಬದುಕಿದೆ...

ಹುಟ್ಟಿ ಸಾಯುವ
ಮೂರು ದಿನದ ಈ ಬದುಕಿನಲಿ
ನನಗೂ ಇದ್ದವು ನೂರಾರು ಕನಸುಗಳು
ಬೆಳೆಯುವ ಆತುರದಲ್ಲಿ
ಉದುರಿಹೋಗುವೆನೆಂಬ
ಅರಿವಿರದೆ ಹುಡುಕುತ್ತಿದ್ದೆ ಸಂಪನ್ಮೂಲಗಳು

ಉಸಿರಾಡಲು ನಿರಂತರ ಗಾಳಿ ಬೀಸುತಿತ್ತು
ಆಸೆಯ ದಾಹಕೆ ನೀರಿನ ಹನಿ ಜಿನುಗುತ್ತಿತ್ತು
ಅರಳುವ ಮೋಹಕೆ ಸೂರ್ಯನ ಸ್ಪರ್ಶ ಸಾಕಿತ್ತು

ಕಾಣದೆ ಅವಿತಿದ್ದ ತನ್ನೊಳಗಿನ
ಯೌವ್ವನ ಮೈದಳೆದು ನಿಂತಿತ್ತು
ಜಗತ್ತಿನೆದುರು ತನ್ನ ಸೌಂದರ್ಯವ
ಪ್ರಜ್ಞೆಯಿಲ್ಲದೆ ಬೆತ್ತಲಾಗಿಸಿತ್ತು.

ಹೂವು ನಾನು ನನಗೂ ಒಂದು ಮನಸಿದೆ ...

ನನ್ನ ಕನಸಿನ ಬಣ್ಣಗಳ ಕದಡಿ ಹೋದವರೆಷ್ಟೋ
ಸಿಹಿ ನೆನಪಿನ ಮಕರಂದವ ಹೀರಿ ನಕ್ಕವರೆಷ್ಟೋ
ಕರುಳಬಳ್ಳಿಯ ಕಿತ್ತು ತಮ್ಮ ಮುಡಿಗೆ ಮೊಡೆದವರೆಷ್ಟೋ...

ಹೂವು ನಾನು ನನಗೂ ಒಂದು ನೋವಿದೆ...

ಉಸಿರಾಡುತಿದ್ದ ಗಾಳಿಯೇ ನನ್ನ ಗಂಧವ ಸವೆಯಲು ಶುರು ಮಾಡಿತ್ತು
ಬೆಚ್ಚನೆಯ ಸ್ಪರ್ಶವಿತ್ತ ಬೆಳಕೇ ನನ್ನ ಕೆಕ್ಕರಿಸಿ ನೋಡುತ್ತಿತ್ತು
ಆಸೆಯ ದಾಹವ ತೀರಿಸಲಿದ್ದ ನೀರೇ ಮೋಹದೆನ್ನ ಮನವ ಹೀರುತ್ತಿತ್ತು

ಅರಳಿ ಬಾಡುವ ಈ ಕಮಾನಿನಲ್ಲಿ
ಕಲಿತದ್ದು, ಕೊಟ್ಟದ್ದು, ಬಿಟ್ಟದ್ದು
ಯಾವುದೂ ಪರರ ಅರಿವಿಗೆ ಬಾರದ್ದು

ಅರಳುವಾಗಲ್ಹರಸಿದವರು
ಬಾಡುವಾಗಲೂ ಉಳಿದರು
ಕೊಳೆತು ಮಣ್ಣಲಿ ಮಣ್ಣಾಗಿಸಿದರು
ಗಳಿಸಿದ್ದೇನೂ ಉಳಿಸಲಾಗಲಿಲ್ಲ
ಉಳಿದದ್ದು ಒಂದೇ ಅದು ಸಾರ್ಥಕತೆಯು...

ಹೂವು ನಾನು ನನಗೂ ಒಂದು ಗರ್ವವಿದೆ...

ಅಣುವಲಿ ಅಣುವಾಗಿದ್ದೆನಗೆ
ಪ್ರಕೃತಿಯು ಆಕಾರವನಿತ್ತಿತ್ತು
ಒಳಗಿನ ಒಳಗನು ಅರಿಯದೆ
ನನ್ನನು,
ಕೊನೆಗೂ ಅಣುವಾಗಿಸಿ...ಬಿಟ್ಟಿತ್ತು.
ನಾನೇ ಪ್ರಕೃತಿಯು
ಎಂದು
ಭೀಗುವ ಸಂತಸ
ಮನದಲಿ ಮೂಡಿತ್ತು.

~ ಜಿ.ಪಿ.ಗಣಿ~

*********************************************************************************************** 

ಕಾಮದ ಅಲೆ

*********************************************************************************************** ಕದ್ದು ಇಣುಕುವ ನೋಟಕೆ
ಅರಿವಿಲ್ಲ
ತನ್ನ ಕಣ್ಣಿಗೆ
ಕಾಮದ ಕಾಮಾಲೆ
ಬಡಿದಿದೆಯೆಂದು /
ಜ್ಞಾನವೆಂಬ ಮದ್ದನು
ಮೆದುಳೆಂಬ ವೈದ್ಯನ
ಬಳಿ ಒಯ್ದರೆ
ಹೇಳಬಹುದೇನೋ
ಸರಿಹೋಗುತ್ತದೆಂದು //

***********************************************************************************************

ಜಿಜ್ಞಾಸೆ

*********************************************************************************************** ಅರಿಸಿನ ಕುಂಕುಮವೆಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರದ್ದೇ ಆದ ಮೌಲ್ಯವನ್ನು ಪಡೆದುಕೊಂಡಿದೆ. ಇವು ಮದುವೆಯಾದ ಹೆಣ್ಣಿನ ಅಂದಕೆ ಭೂಷಣವು, ಸುಮಂಗಲಿಯ ಸಂಕೇತವು, ಜೊಲ್ಲು ನಾಯಿಗಳಿಗೆ ಕಾಳಿಮಾತೆಯ ಅವತಾರವೂ ಆಗಿ ಸೂಚಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮೌಲ್ಯ ನಶಿಸಿಹೋಗುತ್ತಿದೆ. ನಶಿಸಿಹೋಗುವುದಿರಲಿ ಅದನು ಹಾಕಿಕೊಳ್ಳುವ ಸಂಕೆಯೂ ಬಹಳಷ್ಟು ಕ್ಷೀಣಿಸಿ ಮಾಯವಾಗತೊಡಗಿದೆ. ಮತ್ತಷ್ಟು ಇದರಲ್ಲಿ ಮೌಡ್ಯ ಎಂದರೆ ಯಾರೋ ಹರಕೆಯೊತ್ತರೆಂದು ಕುಂಕುಮವ ಬೆಟ್ಟದ ಮೆಟ್ಟಿಲಿಗೆ ಹಾಕುತ್ತಾ ಹೋಗುವುದು. ಹಾಗಾದರೆ ಒಂದು ಪ್ರಶ್ನೆ, ಮನೆಯಲ್ಲಿ ಕುಂಕುಮ ಕೈಜಾರಿ ಕೆಳಗೆ ಬಿದ್ದರೆ ಅದು ಅಪಶಕುನ; ಅಂದಮೇಲೆ ಪಾದರಕ್ಷೆಗಳನು ಹಾಕಿ ತಿರುಗುವ ಮೆಟ್ಟಿಲಲಿ ಹಾಕುವ ಕುಂಕುಮಕೆ ಮೈಲಿಗೆಯಾಗಲಿಲ್ಲವೇ? ಒಮ್ಮೆ ಒಂದು ವಸ್ತುವಿಗೆ ಪೂಜ್ಯ ಸ್ಥಾನ ಕೊಟ್ಟಮೇಲೆ ಅದಕ್ಕೆ ಅದರ ಕಿರೀಟವ ತೊಡಿಸಲೇಬೇಕು. ಇಲ್ಲವಾದರೆ ಆ ಸ್ಥಾನಕೆ ಬೆಲೆಯಲ್ಲಿ ? ಈ ರೀತಿ ಮಾಡುವವರಿಗಿಂತ ಈ ಸಂಪ್ರದಾಯವ ನಂಬದಿರುವವರೇ ಲೇಸು. ಅರ್ಧ ಇತ್ತ ಇನ್ನರ್ಧ ಅತ್ತ ಹೀಗೆ ಎಡಬಿಡಂಗಿಯವತಾರ ಎಂದಿಗೂ ಸಲ್ಲ. ಯಾವುದೇ ವಿಷಯವಾಗಲಿ ನಂಬಿದರೆ ಪೂರ್ತಿ ನಂಬಬೇಕು, ಇಲ್ಲವಾದರೆ ಒಂದು ಅಣುವಿನಷ್ಟೂ ನಂಬಬಾರದು. ಹೇಳಿಕೆಯ ಮಾತು ಕೇಳಿ ಅದನು ನಂಬುವ ಮೊದಲು ಅದನು ಪರಾಂಬರಿಸಿ ಮುನ್ನಡೆಯುವುದು ಸಶಕ್ತ ನಾಗರೀಕನ ಕರ್ತವ್ಯವಲ್ಲವೇ?
***********************************************************************************************

ಒಂದಷ್ಟು ಬಿಡಿ ಹನಿಗಳು

*********************************************************************************************** -೧-
ರಾತ್ರಿಯೆಂಬ ಮೌನದ ಮಹಲಿಗೆ
ನೀನೇ ಪಟ್ಟದರಸಿ /
ನಿತ್ಯವೂ ಬರುವೆನು ನಿದಿರೆಯ
ಮದಿರೆಗೆ ನಿನ್ನನರಸಿ /

-೨-
ನಿನ್ನಯ ನೆನಪೆಂಬ ನವಿಲುಗರಿಯ
ಎನ್ನ ಮನದ ಹೊತ್ತಗೆಯಲಿ
ಆಗಾಗ ಬಚ್ಚಿಡುತ್ತೇನೆ.
ಹೊತ್ತಗೆಯ ಪುಟವ ಮತ್ತೆ
ತೆರೆದಾಗ ಅದು ಮರಿಹಾಕಿರುತ್ತದೆ.

-೩-
ವರ್ಷಾನುಗಟ್ಟಲೆ ಕಷ್ಟಪಟ್ಟು ಬೆಳೆದ ಪ್ರೀತಿಯ ಬೆಳೆಯು
ಅನುಮಾನವೆಂಬ ಮೂರು ತಾಸಿನ ಮಳೆಗೆ ಸಂಪೂರ್ಣ ನಾಶವಾಗಿತ್ತು.

-೪-
ಬರೆಯಬೇಕೆಂದು ಕುಳಿತಾಗಲೆಲ್ಲ
ಎನ್ನ ಮನವಾಗುವುದು ಮರುಭೂಮಿ /
ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಕೊಂಡಾಗ
ಎಚ್ಚರವಾಗುವಳೊಬ್ಬಳು ನನ್ನೊಳಗೆ ಅಂತರ್ಗಾಮಿ /

--ಜಿ.ಪಿ. ಗಣಿ--

***********************************************************************************************
***********************************************************************************************
ನಿನ್ನಿಂದ ದೂರಹೋಗುವ ಪ್ರಯತ್ನವ
ನಾ ನಿರಂತರ ನಡೆಸುತಿರುವೆನು
ದೂರವಾಗುವ ವೇಗವ ಮುಟ್ಟಲಾಗುತ್ತಿಲ್ಲ
ತಾಂತ್ರಿಕ ದೋಷವು ಹೆಚ್ಚಾಗಿದೆ.
ಮನಸು ಹೇಳುವುದನು ಕೇಳದೆ ಹುಚ್ಚಾಗಿದೆ
ಇನ್ನಾದರೂ ನಿನ್ನ ಗುರುತ್ವಾಕರ್ಷಣೆಯ
ಬಲವ ಮೊಟಕುಗೊಳಿಸುವೆಯ/

***********************************************************************************************

ಬ್ರಹ್ಮಚರ್ಯ

*********************************************************************************************** ಮದುವೆಯಾಗುವ ತನಕ
ಬೇಕಿತ್ತು ಅಮ್ಮನ ಕೈತುತ್ತು
ಹೆಂಡತಿ ಬಂದಮೇಲೆ
ಅವಳ ಕೈತುತ್ತೆ ಸವಿಮುತ್ತು
ಅದಕೆ ನಿತ್ಯವೂ ನೀ ನಡೆಸಬೇಕು
ಪೊಳ್ಳು ಓಲೈಕೆಯ ಕಸರತ್ತು

ಅದಕಿನ್ನ ಮಿಗಿಲೋ ಈ ಬ್ರಹ್ಮಚರ್ಯ
ಅದಕ್ಕೆ ನೀ ಪಡೆಬೇಕಿಲ್ಲ ಆಶ್ಚರ್ಯ

ಒಳಗಿರುವನೊಬ್ಬ ನಳಮಹರಾಜ
ನಿತ್ಯವೂ ದುಡಿಯುವನಿವನು
ಅಮ್ಮನ ಕೈತುತ್ತ ತಿಂದ ಆ ಸವಿಯ ನೆನೆಯುತ್ತ
ತಾನು ಮಾಡಿದ ಮೃಷ್ಟಾನ್ನವ ಕಣ್ಣಿಗೊತ್ತುತ್ತ
ಕಣ್ಣೀರ ಹನಿಯಲ್ಲಿ ಪನ್ನೀರ ಹರಿಸುವನು.

***********************************************************************************************

ಉದ್ವೇಗ

***********************************************************************************************
ಮಸುಕಾಗಿಹುದೆಲ್ಲವೂ ಮನದೊಳಗೆ
ಬಳಲುತಿಹುದೀ ದೇಹವು ನೋವಿನ ಸುಳಿಯೊಳಗೆ
ಕಾರಣವ ಹುಡುಕುವ ಕಾರಣಕೆ ಉತ್ತರ ಸಿಗುತ್ತಿಲ್ಲ
ಕತ್ತಲೆಯ ಶಾಂತತೆಯ ಅನುಭವಿಸುವ ಪರಿವೇ ಅರಿವಾಗುತ್ತಿಲ್ಲ
ಬೆಳಕು ಬೇಕೆನಿಸುವ ಮಸ್ತಕಕ್ಕೆ ಧ್ಯಾನದ ಸುಳಿವಿಲ್ಲ
ಹಸಿದ ಹೊಟ್ಟೆಗೆ ಹಳಸಿದ ಅನ್ನಕ್ಕೂ ಸುಂಕವಿಲ್ಲ

***********************************************************************************************