ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, December 25, 2014

ಕಲ್ಲಿನೊಳಿನ ಮೆದು ಮನಸು

_________________
ರಾಗಿ ಕಾಳ ಕಲ್ಲಿನಂತಿದ್ದ
ನನ್ನೀ ಮನವನು
ಅರೆದು ಪುಡಿ ಪುಡಿ ಮಾಡಿ
ಬಿಸಿ ನೀರ ಪ್ರೀತಿಯನೋಯ್ದು
ನಿನ್ನ ಕಣ್ಣ ಕೋಲಲಿ
ಮೆದುವಾಗಿ ತಿರುವೆನ್ನನು
ಮುದ್ದು ಮಾಡಿ
ಆವ ಗಂಟಿಲ್ಲದೇ
ರಾಗಿ ಮುದ್ದೆಯಾಗಿಸಿದ
ನಿನ್ನ ಪ್ರೇಮಕೆ ಶರಣು!
~ ಜಿ.ಪಿ.ಗಣಿ~

Wednesday, December 17, 2014

ಒಲ್ಲದ ಮಾತಿಗೆ
ಸಲ್ಲದ ಪರದಾಟ!
ಮೌನ ಗೀತೆಗೆ
ಸಾಹಿತ್ಯದ ಕಾದಾಟ!

ಸಾಧನ
______
ಇರುವುದೊಂದು ಜೀವನ
ಆಗಬೇಕದು ಪಾವನ
ಅದಕೆ ಬೇಕೊಂದು ಸಾಧನ
ಅದುವೇ ತಿಳಿಯಾದ ಮನ!
ಸಾಮರ್ಥ್ಯ!
_________________
ಹೊರಲು ಶಕ್ತಿಯುಹುದೆಂದು
ತೋಳ್ಬಲದಲ್ಲಿ ಬೆಟ್ಟವನೆತ್ತಲಾದೀತೇ?
ಉದರಕೆ ಹಸಿವಿಹುದೆಂದು
ಕಣ್ಮುಂದಿರುವ ಭೋಜನವನೆಲ್ಲವನು ತಿನ್ನಲಾದೀತೇ?
ಬಟ್ಟೆಯು ಹರಿಯುವುದು
ದಪ್ಪದಳತೆಯ ದೇಹವ ಧರಿಸಿದಾಗ!!
ಹೊಟ್ಟೆಯು ಹೆರುವುದು
ದೇಹದಲಿ ಹೆಚ್ಚು ಹೊರೆಯಾದಾಗ!!
ಮನವು ಹರಿಯುವುದು
ತಡೆ ಇಲ್ಲದಾದಾಗ!
ಕೊಳೆತು ನಾರುವುದು
ತಡೆಯನೊಡ್ಡಿದಾಗ!
ಬೇಕೆಂದಾಗ ತಡೆ
ಬೇಡದಾದಾಗ ನಡೆ
ತಡೆ-ನಡೆಯೊಳಗಿನ
ಕಣ್ಣಾ ಮುಚ್ಚಾಲೆಯಾಟವೇ
ಸಾಮರ್ಥ್ಯದ ಜೀವನ!
~ ಜಿ.ಪಿ.ಗಣಿ~

ಈರುಳ್ಳಿಯ ಕವಲೊಳಗೆ

ನಿನ್ನಯ ಬದುಕಿನ ರುಚಿಗಾಗಿ
ಒಗ್ಗರಣೆ ಸಾಧನವಾಗಿ
ನನ್ನೆದೆಯ ಒಂದೊಂದು
ಈರುಳ್ಳಿಯ ಕವಲುಗಳನು
ಕತ್ತರಿಸಿತಿರುವೆ!
ಕತ್ತರಿಸುವ ಮುನ್ನ
ನೀ ತುಸು ಯೋಚಿಸು
ನಿನ್ನೊಳಿನ ಹೆಂಗರುಳು
ಕಣ್ಣಂಚಲಿ
ಹಿಂಡಿ ಹಿಂಡಿ
ಕಣ್ಣೀರ ನೋವಾಗಬಹುದು!
ಕತ್ತರಿಸುವ ಸಮಯದಿ ಸಿಕ್ಕ
ಕೊಳೆತ ಕವಲುಗಳನು
ಕಂಡೆನ್ನನೆಂದಿಗೂ ಬಿಸಾಡದಿರು
ಯಾರೋ ಬಿಟ್ಟು ಹೋದ ನೋವಿನ
ಗಾಯವದು;
ಬದಿಗಿಟ್ಟು
ಉಳಿದ ಕವಲುಗಳನು
ಕತ್ತರಿಸಿ ನಿನ್ನೊಳಿನ ಕರುಳ
ಬಂಧವ ರುಚಿಸು!
~ಜಿ.ಪಿ.ಗಣಿ~

ಕುತ್ತಿಗೆಯ ಬೇನೆ
__________
ಕುತ್ತಿಗೆಯ ಬೇನೆಯಲಿ
ತಲೆ ದಿಂಬು ಬೇಕು ಬೇಡವೆಂಬ
ಅರಿವಿಲ್ಲದೆ ಬೇನೆಯ ಬೆನ್ನಿಗೆ
ಮುಲಾಮು ಹಚ್ಚಲಾಗದೆ
ಸಲಾಮು ಹೊಡೆದು
ಉಸಿರ ಇಂಚು ಇಂಚನು
ಸಂಚಿನಲಿ ಅಳೆದು
ಬೇನೆಯ ಮರೆವುದೇ
ಶಾಂತಯೋಗ!!
ಹೃದಯ ರಂಗೋಲಿ
____________
ನನ್ನೆದೆಯ ಖಾಲಿ ಪುಟಕೆ
ನಿನ್ನಯ ನೆನಪಿನ
ಬಣ್ಣ ಬಣ್ಣದ ಭಾವ ಲೇಖನಿಗಳು
ಚಿತ್ತಾರ ಮೂಡಿಸಿ ನನ್ನ
ಮನವನೆಲ್ಲಾ ರಂಗೇರಿಸಿರುತ್ತವೆ
ಪ್ರೇಮದಿಬ್ಬನಿ!
________
ನಿನ್ನಯ ನೆನಪಿನ ಚಳಿಗೆ
ನನ್ನೆದೆಯು ನಡುಗುತ್ತಿದೆ
ಬೆಚ್ಚನೆಯ ಪ್ರೇಮಗಂಬಳಿಯ
ಹೊದಿಕೆಯಾಗಿ
ಆವರಿಸುವೆಯಾ ಓ ಗುಲಾಭಿ
ನನ್ನೀ ಮನವನು

೧-
ಪ್ರೇಮವೆಂದು ಹಕ್ಕಿಯನು
ಬಂದನದಿ ಸಾಕಿ ಸಲಹಿದರದುವೇ
ದಾಸತ್ವ!
ಹೊರ ಬಿಟ್ಟದರ 
ಸ್ವಾತಂತ್ರ್ಯವನು ಸವಿದರದುವೇ
ತಾಯತ್ವ!

-೨.
ಪ್ರೀತಿಗೆ ಬೇಲಿಯಿಲ್ಲ
ಸ್ನೇಹಕೆ ಆಕಾರವಿಲ್ಲ
-೩-
ಎಂದೂ ಕೇಳದ
ನನ್ನೊಳಗಿನ ಹೃದಯದ
ಬಡಿತ
ಕೇವಲ ನಿನ್ನ ಕಣ್ಣ
ರೆಪ್ಪೆಯ ಗಾಳಿಗೆ
ಕೇಳತೊಡಗಿದೆ
~ಜಿ.ಪಿ.ಗಣಿ~

Wednesday, November 19, 2014

ಅಂಧ ಅಂಧಕಾರ

***********************************************************************************************
ಎತ್ತ ನೋಡಿದರತ್ತ ಕತ್ತಲು
ಬರೀ ಕಪ್ಪು
ಅಲ್ಲಲ್ಲಿ ಬಿಳುಪು ಹೊಳಪು
ಒಂದಷ್ಟು ಮಿನುಗುತ್ತವೆ ಬೆತ್ತಲಾಗಲು...
ಮತ್ತಷ್ಟು ನಲುಗುತ್ತವೆ ಮರೆಯಾಗಲು...
ಒಂದೊಕ್ಕೊಂದು ಕವಚವಾಗಿಹವು
ಬದುಕಿನ ಹೊನಲು ಬೆಳಕಿನಾಟದಲ್ಲಿ
ಇಬ್ಬರೂ ಕಂಡಿಹರು ತಮ್ಮ
ನಿರ್ವಸ್ತ್ರ ದೇಹವ
ದೇಹದೊಳಗೊಂದು ಅಸ್ತ್ರವ
ಅಸ್ತ್ರದೊಳಗಣ
ಪ್ರಜ್ವಲತೆಯ ...
ಶಾಂತತೆಯ...
ಒಬ್ಬರು ಮತ್ತೊಬ್ಬರಿಗಾಧಾರ
ಇಬ್ಬರೂ ಬದುಕಿರಲಾರರು
ಮತ್ತೊಬ್ಬರ ತೊರೆದು
ಇದು ಬದುಕು
ಕತ್ತಲಿಲ್ಲದೇ ಬೆಳಕನರಿಯಲಾಗದು
ಬೆಳಕಿಲ್ಲದೆ ಕತ್ತಲ ಕಾಣಲಾಗದು
ಒಂದು ಮೌನ
ಮತ್ತೊಂದು ಮಾತು
ಒಂದು ನೇತ್ರ
ಮತ್ತೊಂದು ಆತ್ಮ
ಆಟದೊಳಗಣ ಪಾಟವ
ನಿತ್ಯವೂ ಜಪಿಸುವುದೆ ನಿತ್ಯಕರ್ಮ
~ಜಿ.ಪಿ.ಗಣಿ~

***********************************************************************************************

ಅಗೋಚರ

***********************************************************************************************
ಆಗಸವೆಂಬ ಅಂತ್ಯವಿಲ್ಲದ ವೃತ್ತದ ಪರಿಧಿಯಲ್ಲಿ
ನೀನೆಲ್ಲಿ ಅಡಗಿದ್ದೆ?
ಲೆಕ್ಕಕೆ ಸಿಗಲಾರದಷ್ಟು ಸೌರಮಂಡಲಗಳಿಹವಿಲ್ಲೀ... 
ಆದರೂ ಅದರೊಳಗಿನ ಭೂಮಿ ನೀನಾ?
ಮೌನ ನೀನಾಗಿ
ನನ್ನಾತ್ಮ ಜಾರುತಿದೆ ಕಾಣದೂರಿನೆಡೆಗೆ...
ನೀ ಜೀವ ಧರಿಸಿರುವೆ
ಎನಗೆ ಭಯವ ತಂದಿರುವೆ
ಯಾರು ನೀ! ಭಾವನೆಯೇ?
ನನ್ನೊಳಗೆ ನೀ ಹೇಗೆ ಬಂದೆ?
ಏಕೆ ಬಂದೆ?
ನನ್ನೊಳಗಿನ ನನ್ನಲ್ಲಿ
ನಿನ್ನ ಬಿಂಬವ ಕಾಣುತಿಹೆ
ನನ್ನ ನಾ ಮರೆಮಾಚುತಿಹೆ!
ಯಾರು ನೀ! ಭಾವನೆಯೇ?
ನನ್ನೊಳಗೆ ನೀ ಹೇಗೆ ಬಂದೆ?
ಏಕೆ ಬಂದೆ?
***********************************************************************************************

ಮನದ ತೃಷೆ

***********************************************************************************************
ಮೊದಲು ಬೂದಿಯಾಗು
ಓ ನೆನಪೇ
ನೀ ಕೆಂಡವಾಗೇ ಉಳಿದರೆ
ಕಷ್ಟವಾಗುವುದೀ ಹೃದಯಕೆ
ಎತ್ತಣ ಗಾಳಿ ಬೀಸಿ
ಎನ್ನ ಮನವು ಹೊತ್ತಿ
ಉರಿಯುವುದೋ
ನಾನರಿಯೆ...
ದಯಮಾಡಿಯೊಮ್ಮೆ ಯೋಚಿಸು...
ಇಲ್ಲವಾದರೆ ನೀ ಉಷೆಯಾಗಿ
ಮತ್ತೆ ಮನದ ಬುವಿಗೆ ಬರಬೇಕಾಗುತ್ತದೆ
~ಜಿ.ಪಿ.ಗಣಿ~
***********************************************************************************************

Friday, October 31, 2014

ದೀಪಾವಳಿ(ದೀಪದ ಹಾವಳಿ)

***********************************************************************************************
ಜಡ ಹತ್ತಿಯೋಳ್ ಹೊಸೆದ
ಈ ಶರೀರವನ್ ತೋಯ್ದು
ನೆನೆಸುವ ಆತ್ಮ ತೈಲದೋಳ್
ಸುಜ್ಞಾನ ಮಾನವೀಯತೆಯ
ಅಂಶವಿಹುದು
ಆದಿ ಅಂತ್ಯದೋಳ್
ಹುದುಗಿಪ ಮದ್ದೆಂಬ
ಅಂಧಕಾರವನ್
ಹೊತ್ತಿಸಿ ಶಬ್ದದಿಂ
ನೋವನ್ ಹೊರಗರುಚಿ
ಕಾಮನಬಿಲ್ಲಿನ ಚಿತ್ತಾರವನ್
ಹರ್ಷದಿ ಎದೆಗಪ್ಪಿ
ಸ್ವರ್ಗವನ್ ದೀಪವಾಳಿಯಂದು
ಕಾಣತಿರ್ಪರು
~ಜಿ.ಪಿ.ಗಣಿ~
***********************************************************************************************

Tuesday, October 21, 2014

ಇವನಾರವ? ಇವನಾರವ? ಇವನಾರವ?

***********************************************************************************************
ಆರ್ಯಾರಿಗೂ ಗುರುವಾಗಲಾರರು
ಗುರುವಾಗುವನೊಬ್ಬನೇ
ಅವ ಪರಮ ಗುರುವು
ಎಲ್ಲರೊಳಗಿರ್ಪನು
ಆತ್ಮ ಕಳಶದೋಳ್ ಜನಿಪನು
ಮಸ್ತಕದಿಂ ಬಾಹ್ಯ ಲೋಕವನ್
ಎಣಿಸಿ-ಕುಣಿಸಿ
ಸಂತೈಸಿ
ಹೃದಯಜ್ಯೋತಿಯೋಳ್ ಜಗವ ಬೆಳಗಿಪನು
ಅವ ಸೂರ್ಯನು
ಅವ ಚಂದ್ರನು
ಅವ ಸಜೀವ
ಅವ ನಿರ್ಜೀವ
ಆರವನ್ ಎಂದೊಡೆ
ಚಿತ್ತದೋಳ್
ಮಸಣದ
ಚಿಂತೆ ಕಾಣತಿರ್ಪುದು
ಆವ ದಿಕ್ಕಿಗೂ ಸಿಗದ
ಪರಿಧಿಯೊಳಗಣ ಬಿಂದು ಅವನ್
ಅಣು ಅಣುವಿನೊಳಗಣಾ
ಮರ್ಮವನಾರು ಬಲ್ಲರೋ ಶಂಭುಲಿಂಗ!
~ ಜಿ.ಪಿ.ಗಣಿ~
***********************************************************************************************

Tuesday, September 30, 2014

ಎಲ್ಲವೂ ಅಯೋಮಯ!

***********************************************************************************************
ಕಳೆಯಂತೆ ಇದ್ದ ಹಸಿರ ಪೈರಲಿ
ಜೊಳ್ಳು ದೇಹವ ತ್ಯಜಿಸಿ ಅಕ್ಕಿಯಾಗಿ
ನಾ ಹೊರ ಬಂದೆ 
ನಿನ್ನಯ ಹಸಿವ ನೀಗಿಸಲು...
ನಾ ಸೂಕ್ಷ್ಮ ಕಣವಾದೆ,
ನಿನಗೆ ಬೇಕಾದ ಆಕಾರದಿ
ಕರಗಿ... ಬೆಂದು
ಇಡ್ಲಿಯಾದೆ, ದೋಸೆಯಾದೆ
ಒಮ್ಮೊಮ್ಮೆ ನೀ ಕೊಟ್ಟ ಏಟಿಗೆ
ಸೀದು ಕರಕಲು ರೊಟ್ಟಿಯಾದೆ...
ನಿತ್ಯವೂ ನಿನಗಾಗಿ
ಅನ್ನವಾಗಿ ಬರುವೆ
ನಿನ್ನಲ್ಲಿ ಬೆರೆವೆ
ನನ್ನ ನಾ ಮರೆವೆ
ನನ್ನೊಳಗಿನ ನನ್ನಲಿ
ಸದಾ ನಿನ್ನನೇ ಕಾಣುವೆ!
ಏಕೋ ತಿಳಿಯುತ್ತಿಲ್ಲ!
ನಾ ಹುಟ್ಟಿದ್ದು...
ನನಗಾಗಿಯೋ?
ನಿನಗಾಗಿಯೋ?
ಪೈರು ಮೊದಲ?
ಭತ್ತ ಮೊದಲ?
ಅಕ್ಕಿಯಾಗಿ ಹೊರ ಬಂದ
ನಾ ಮೊದಲ?
ನಿನಗೆ ತೋಚಿದಂತೆ ಆಡಿಸುತಿರುವ
ನೀ ಮೊದಲ?

~ಜಿ.ಪಿ.ಗಣಿ~

***********************************************************************************************

Tuesday, September 23, 2014

***********************************************************************************************
ಸುಂದರ ಚಂದಿರನಂತ
ನಿನ್ನ ಮೊಗವ ಕಂಡಾಗ
ನಿನ್ನ ಸನಿಹ ಬೇಕೆನಿಸುತ್ತದೆ!
ಹತ್ತಿರದಿ ನಿಂತು
ನಿನ್ನ ನಿರ್ಜೀವತನವ ತಿಳಿದಾಗ ಈ ಪ್ರೀತಿ 
ಇಷ್ಟೇಯೇ ಎಂದು ಮರುಕ ಹುಟ್ಟುತ್ತದೆ!
ಇದ್ದೂ ಇಲ್ಲದ
ಸದ್ದಿಲ್ಲದೇ ಸುದ್ದಿ ಹರಡುವ
ಮನಸ್ಸಿನಿಂದ ಮನಸ್ಸಿಗೆ ಹಾರುವ
ತಿಳಿದೂ ಅರಿಯದ
ಗಾಳಿಗೂ ಸಿಲುಕುದ
ಅಗ್ನಿಗೂ ನಿಲುಕದ
ನೀರಿಗೂ ಬಳುಕದ
ಸಾಂಕ್ರಾಮಿಕ ರೋಗವಿದುವೇ
ಹುಚ್ಚು ಪ್ರೇಮ!!
***********************************************************************************************

Wednesday, August 20, 2014

ನಿಷ್ಕಲ್ಮಶ ಭಾವ

***********************************************************************************************
ನಿನ್ನಯ ಭಾವಚಿತ್ರದ ನಗುವಿಗೆ
ಸಾವಿರ ಭಾವಗಳು
ಜೀವವಿಲ್ಲದೇ ಜೀವ ತುಂಬುವುದು
ಈ ಉಸಿರಲ್ಲಿ
ಅದರಲ್ಲಿಹುದೊಂದೇ ನೋಟ
ಆತ್ಮಕೆ ಪ್ರೀತಿಯ ಮಗುವಿನೊಂದಿಗೆ
ಕಣ್ಣಾಮುಚ್ಚಾಲೆಯಾಟ
ನೀ ಬಳಿ ಇಲ್ಲದಿದ್ದರೂ
ನಿನ್ನ ಛಾಯೆಗೆ
ಎಂದಿಗೂ ಸಾವಿಲ್ಲ
~ಜಿ.ಪಿ.ಗಣಿ~
***********************************************************************************************

Friday, August 15, 2014

ನಿತ್ಯವೂ ಸ್ವಾತಂತ್ರ

***********************************************************************************************
ಸುತ್ತಲೂ ಕತ್ತಲು 
ಮೇಘಗಳ ಹುಡುಕಾಟದಲ್ಲಿ 
ಎಲ್ಲವೂ ತಿಳಿಯಾಗುವುದು 
ಬೆಳಗಾಗುವ ಹೊತ್ತಿಗೆ...
ನಸು ಮುಂಜಾವಿನಲಿ 
ಚಿಗುರುವ ಹಸಿ ಕನಸುಗಳು
ಆಗಸದಿ ಮೆತ್ತಿಟ್ಟ ಶ್ವೇತವರ್ಣದ ಶಿಲ್ಪಗಳು
ಎತ್ತೆತ್ತಲೂ ಹಕ್ಕಿಗಳ ಗಾನಮಾಲೆ
ಕಣ್ಣಿಗೆ ಕಾಣುವುದೆಲ್ಲಾ ಹೊಸತು

ತಣ್ಣನೆಯ ಗಾಳಿಯ ಸಂಚಲನ
ಜಡ ದೇಹದೊಳಗೆ...
ನಿತ್ರಾಣ ಬದುಕಿಗೆ ಉಸಿರಾಡಲು ಅದೇನೋ ರೋಮಾಂಚನ
ಪ್ರಕೃತಿಯೊಳಗಿನ ಪ್ರತಿಕೃತಿಯ ಸವಿಯಲು ನಿತ್ಯವೂ ಜನನ
ಯಾರ ಹಂಗಿಲ್ಲದೇ ಕರ್ಮವೆಲ್ಲವೂ ನಡೆಯುತಿಹುದು
ಅಣು ಅಣುವಿನ ಜತನದಿಂದ
ಕಾಣದ ಮಾಯೆಯ ಆತ್ಮದ ಬಲದಿಂದ
ಸ್ವಾತಂತ್ರ್ಯದ ಸಲಾಕೆಯಿಂದ

ನೆನ್ನೆಯೆಂಬಾ ಬಂಧನದ ಬಿಡುಗಡೆಗಾಗಿ ಹೋರಾಟ
ನಾಳೆಯ ಕಾಣದ ಬದುಕಿಗೆ ತಿರುಳಿಲ್ಲದ ಸೆಣಸಾಟ
ಸ್ವಾತಂತ್ರ್ಯವಿಹುದಿಲ್ಲೀ... 
ನಿತ್ಯಕೆ-ಸತ್ಯಕೆ
ದಿನವೂ ಹಾರಿಸಬೇಕು
ಬಾಳಿನ ಹರುಷದ ವಿಜಯ ಪತಾಕೆ

~ಜಿ.ಪಿ.ಗಣಿ~ 
***********************************************************************************************

Sunday, July 6, 2014

ಕರ್ಮಣ್ಯೇ ವಾದಿಕಾರಸ್ತೆ!!

***********************************************************************************************
ಹಸಿರೆಲೆಗಳಿಂದೇರಿದ ಹನಿಯ ಮುತ್ತು ಆವಿಯಾಗಿಹುದೋ
ಕರಗಿ ಭುವಿಯನ್ ಸೇರಲ್ ಬಯಸಿತಿರ್ಪುದು

ಹಸಿವ ಬೇಗೆಯೋಳ್ ಹೃದಯವಂ ಹಿಸುಕಿದಂತಾದೆಡೆ
ಖಾಲಿಯಾಗಿಹ ಉದರವನ್ ಭರ್ತಿಯಾಗಿಪುದೇ

ಸೋಲೆಂಬ ಭಯಂ ಆತ್ಮದೊಳಗಿರಲ್
ಗೆಲುವೆಂಬ ಭಕ್ತಿಯನ್ ಆರಾಧಿಸಲಾಗಿಪುದೇ

ಆತ್ಮದೋಳ್ ಸಾವಿನ ಶಂಕೆಯನ್ ಹೊತ್ತು
ದೇಹವನ್ ದೂಶಿಸಿದೆಡೆ ಸ್ವರ್ಗವನ್ ಪಡೆಯಲಾಗಿಪುದೇ

ಚಿಂತೆಯೆಂಬಾ ಚಿತೆಯೋಳ್ ಹುದುಗಿ
ಜೀವ ಭಿಕ್ಷೆಯನ್ ಕೇಳಿದೆಡೆ
ಚಿತೆಯನ್ ಸುಡುವ ಬೆಂಕಿಯೋಳ್
ಆಲಾಪನೆಯೂ ಬೆಂದು ಬೂದಿಯಾಗದಿರ್ಪುದೇ

ತಳಮಳದಿಂ ಬಳಲ್ತಿರುವ ಮಸ್ತಕವನ್
ಅಡಗಿಸುವ ದಿಟ್ಟ ಧೀರತನಂ ನಿನ್ನಾತ್ಮದೊಳಲ್ಲದೇ
ಮತ್ತೆಲ್ಲೋ ಹುಡುಕಲಾಗಿಪುದೇ

ಮನಸು ಭಾರದೊಳಿರಲ್ ಕತ್ತಲಾವರಿಪುದು
ನಿಮಿಷ ನಿಮಿಷವನ್ ಪ್ರೀತಿಸಲ್ ಬದುಕು ಹಸನಾಗುವುದು
ಕರ್ಮವನ್ ನಡೆಸುತಲಿ ಫಲವನ್ ಅವನ ಪಾದಕರ್ಪಿಸಿದೆಡೆ
ಆತ್ಮಗರ್ಭದೋಳ್ ಆತನವತರಿಸುವನು

~ಜಿ.ಪಿ.ಗಣಿ~
***********************************************************************************************

Thursday, June 19, 2014

ಪ್ರೇಮ ಖೈದಿ

***********************************************************************************************
ನಿನ್ನಯ ನೆನಪೆಂಬ
ಬಲೆಯ ಬೀಸಿ 
ಅರಿವಳಿಕೆಯನು ಕೊಟ್ಟು 
ಎನ್ನ ಬಂಧಿಸಬೇಡ
ನನ್ನನು ನನ್ನ ಪಾಡಿಗೆ ಬಿಟ್ಟುಬಿಡು
ಓ ಗುಲಾಬಿ
ನಿನ್ನಯ ಪ್ರೇಮ ಮೃಗಾಲಯದಲ್ಲಿ
ನನ್ನನೆಂದಿಗೂ ದಾಸನಾಗಿಸಬೇಡ
ಸ್ವಚ್ಛಂದವಾಗಿ ಬದುಕ ನಡೆಸೋಣ
ಬರುವೆಯಾ ಓ ಗುಲಾಬಿ
ಹಸಿರಿನ ವನದಲ್ಲಿ
ಪ್ರೀತಿಯ ಬನದಲ್ಲಿ
ನವ ಬದುಕಿನಂಗಳಕೆ
ಮುನ್ನುಡಿಯಾಗಿ ಬಿಡಿಸೋಣ
ಬಣ್ಣ ಬಣ್ಣದ ರಂಗವಲ್ಲಿ
.
.
.
~ಜಿ.ಪಿ.ಗಣಿ~

***********************************************************************************************

ಅಮೃತಧಾರೆ

***********************************************************************************************
ಕಣ್ಣೆಂಬ ಆಗಸದೊಳ್'
ತುಂತುರು ಹನಿಯನ್ನಿತ್ತೆಡದು ಪನ್ನೀರು
ಬೋರ್ಗರೆವ ಮಳೆಯಾದರದು ಕಣ್ಣೀರು
ಎರಡೂ ನಿನ್ನದಲ್ಲವೇ ಓ ಗುಲಾಭಿ
ಮುಳ್ಳೆಂಬ ನೋವಲಿ ಚುಚ್ಚಿದೆಡೆ ಕಣ್ಣೀರ ಧಾರೆ
ನಲಿವೆಂಬ ದಳದಿ ನಗುವ ಬೀರಿದರದೇ ಪನ್ನೀರ ಧಾರೆ
ಬೆಂಗಾಡಿನ ನನ್ನೀ ಬದುಕ; ನೀ ಬೆಳಗಲು ಬರುವೆಯಾ ಅಮೃತಧಾರೆ

~ ಜಿ.ಪಿ.ಗಣಿ~

***********************************************************************************************

Thursday, June 12, 2014

ರಕ್ತದೊತ್ತಡ

***********************************************************************************************
ಕಸಿಯುತಿರುವ ಮನದ ಭಾವನೆಯ ಹೊನಲು
ಬಾಡುತಿರುವ ಆಸೆಯೆಂಬ ಹೂವಿನ ಘಮಲು

ದೂರವಾಗುತಿಹುದು ಎದೆಯ ಬಡಿತ ಉಸಿರಿಗೆ ಸಿಗದೇ
ಮರೆಯಾಗುತಿಹುದು ಕನಸುಗಳು ವಾಸ್ತವದ ಅರಿವಿರದೇ

ಭಾರವಾಗಿಹುದೆಲ್ಲವೂ ಮೌನದ ಮಡಿಲಲ್ಲಿ
ಅರೆಹುಚ್ಚು ಮತಿಗೆ ಚಿಂತೆಯೆಂಬ ಒತ್ತಡದ ಸುಳಿಯಲ್ಲಿ

ಗಂಟಲೊಳಗಿಳಿಯುವ ನೀರಿಗೂ ಆಹಾಕಾರ
ಒಣಗುತ್ತಿರುವುದೇಕೋ ಹಸಿರ ಅಂತರಂಗದಲಿ
ಬದುಕೆಂಬ ಕುಡಿಯೊಡೆದ ಬೀಜ

~ಜಿ.ಪಿ.ಗಣಿ~
***********************************************************************************************

Saturday, June 7, 2014

ಚಿನ್ನದ ಗಿರವಿ ಅಂಗಡಿ

***********************************************************************************************
ನೀನೆಂಬ ಚಿನ್ನದ ಗಿರವಿ ಅಂಗಡಿಗೆ
ನನ್ನ ಹೃದಯದೋಲೆಯನು ಗಿರವಿ ಇಟ್ಟ
ಆ ದಿನದಿಂದ ನಾನು ಬಡವನಾಗಿದ್ದೇನೆ
ನಿನ್ನ ಹುಚ್ಚು ಬಡ್ಡಿಯ ಪ್ರೀತಿಯಲಿ
ನಾನು ಮುಳುಗಿಹೊಗಿದ್ದೇನೆ
ಮತ್ತೆ ನನ್ನ ಹೃದಯದೋಲೆಯನು
ಬಿಡಿಸಿಕೊಳ್ಳುವ ಶಕ್ತಿಯು ಎನಗಿಲ್ಲ
ದಯಮಾಡಿ ಉತ್ತರಿಸು
ನನ್ನ ಬದುಕನು ಕೈಹಿಡಿದು ನೀ ಉದ್ದರಿಸು

~ಜಿ.ಪಿ.ಗಣಿ~

***********************************************************************************************

ಹುಚ್ಚು ಭಾವದ ನಿಚ್ಚಳ ಪ್ರೀತಿ

***********************************************************************************************
ಸಕ್ಕರೆಯ ಪಾಕದ ಪ್ರೀತಿಗೆ ಜಾಮೂನಿನಂತಹ ಭಾವಗಳು
ಪ್ರೀತಿಯ ಸಕ್ಕರೆಯ ಪಾಕದ ಸವಿಯು ಕೊನೆಯವರೆಗೂ 
ಭಾವವೆಂಬ ಜಾಮೂನು ಪಾಕದಲ್ಲೇ ಮುಳುಗಿರುವವರೆಗೂ
ಮನಸ್ಸಿಗೆ ಸಂದೇಶ ಜಾ"ಮೂನು"
ಪಾಕವಿಲ್ಲದ ಬರಿಯ ಭಾವಗಳ ಸವಿಯು ಕೇವಲ ಅಪೀಮು

---
ನಿನ್ನ ಕಣ್ಣ ನೋಟದ ಮಿಂಚಿನ ಸಿಡಿಲಿಗೆ
ಹೃದಯದರಮನೆಯ ದೀಪಗಳೆಲ್ಲ
ಹೊತ್ತಿ ಬೆಳಕ ತಂದಿತು.

---
ನಿನ್ನ ಕೂದಲಿನ ಪರೆದೆಯು
ನಮ್ಮಿಬ್ಬರೊಡನೆ ಕಣ್ಣಾಮುಚ್ಚಾಲೆಯಾಡುತ
ಮನದ ಕೂಸಿಗೆ ಕಚಗುಳಿಯಿಡುತಿತ್ತು

---
ನಿನ್ನಯ ಮುದ್ದಾದ ಮೊಗವೆಂಬ ಗೊಂಬೆಯು
ನನ್ನಯ ಮುಗ್ದ ಹೃದಯಕೂಸನು ಆಟವಾಡಲು ಬಾ ಎಂದು ಕರೆಯುತ್ತಿದೆ.

---
ನಿನ್ನೊಂದು ಆ ಮುಗುಳುನಗೆ
ಮನದ ಮನೆಯ ತುಂಬೆಲ್ಲಾ ದೀಪಾವಳಿಯ ಹಬ್ಬದ ಸಡಗರ.

~ಜಿ.ಪಿ.ಗಣಿ~

***********************************************************************************************

Monday, May 12, 2014

ಮಸಣದ ಹೂವು

***********************************************************************************************
ಕತ್ತಲೆಯಾಗುತ್ತಲೇ ಎಚ್ಚರವಾಗುವ
ಹೃದಯ ಮಸಣದ ಮೋಹಿನಿಯೇ
ನಿನ್ನ ಗೆಜ್ಜೆಯ ನಾದಕೆ ಕಣ್ಣ ರೆಪ್ಪೆಯ ಬಡಿತ
ಕಿವಿಯ ತಮಟೆಯ ಮಿಡಿತ
ನೀನುಟ್ಟ ಬಿಳಿಸೀರೆಯ ಹಿಂಬಾಲಿಸುತ
ನಿನ್ನಯ ಮೊಗವ ಕಾಣುವ ತುಡಿತ
ನಿತ್ಯವೂ ಕಾಡುತಿರುವೆ
ಮೊಗವ ತೋರದೆ ಮತ್ತೆ ಮರೆಯಾಗುತಿರುವೆ
ಯಾರು ನೀನು ನನಗೆ
ಮಸಣದ ಹೂವೇ?
ಗಂಧವಿಲ್ಲ,
ವರ್ಣವಿಲ್ಲ,
ಆಕಾರವಿಲ್ಲ
ಯಾರು ನೀನು ನನಗೆ
ಮಸಣದ ಹೂವೇ?

~ ಜಿ.ಪಿ.ಗಣಿ~

***********************************************************************************************

ಓ ಪ್ರೀತಿಯೇ ನೀನೆಂದಿಗೂ ಆಗದಿರು ನೀಲಿ ವರ್ಣದ ಸುಂದರಿ !!!

***********************************************************************************************
ಜೇಬಲ್ಲಿ ಕಾಸಿಲ್ಲ
ಮನದಲ್ಲಿ ಅಳುಕಿಲ್ಲ
ಬಿಕ್ನಾಸಿ ಬದುಕಿಗೆ ಚೌಕಾಸಿ ಬೇಕು
ಪ್ರೀತೀನ ಪಡೆಯಲು ತಿರ್ಕೆ ಶೋಕಿ ಸಾಕು

ತೋರಿಕೆಯ ಈ ಪ್ರೀತಿ
ಇದಕೆ ಆಯಸ್ಸು
ಕೇವಲ ಒಂದು ದಿನ
ಅದುವೇ ಪ್ರೇಮಿಗಳ ದಿನ

ನಿತ್ಯವೂ ನಡೆಯುವುದು ಕದನ
ಇದುವೇ ನೆಲೆಯಿಲ್ಲದ ಸದನ
ಮಾತು ಮಾತಿಗೂ ಬದಲಾಗುವ ವದನ
ತಣ್ಣಗಾಗಲು ಹಾಗೊಮ್ಮೆ ಹೀಗೊಮ್ಮೆ ಚುಂಬನ

ಆರು ಇದ್ದರೆ, ಆ ಹುಡುಗಿ
ಮೂರೂ ಬಿಟ್ಟರೆ, ಈ ಹುಡುಗಿ
ಅವಳೇ ವಯ್ಯಾರದ ಬೆಡಗಿ
ಹುಡುಗನಾಗುವನು ಸೂಲಂಗಿ
ಅವಳ ನೆನಪಲ್ಲೇ
ಕೊರಗೀ ಕೊರಗೀ

ನೆಪಕ್ಕಷ್ಟೇ ಆಕೆ ಸ್ನೇಹಿತೆ
ಇವನಲ್ಲಿ ಇರುವುದೆಲ್ಲ ದುರ್ನಡತೆ
ಅವಳೂ ಏನು ಕಮ್ಮಿ ಇಲ್ಲ
ಇವನಿಗಿಂತ ಸಿಕ್ಕರೆ ಒಳ್ಳೆಯ ನಲ್ಲ
ಪರಾರಿಯಾಗಲು
ಹೊಂಚು ಹಾಕುವುದನು ಮರೆಯುವುದೇ ಇಲ್ಲ

ಪರಿಣಿತರಿವರೀರ್ವರು
ಅವರವರ ಚಪಲದ ಕಡೆಗೆ
ಅರಿವಿಲ್ಲದ ಈ ಪ್ರೀತಿಯ ಬೇಟೆ
ಮಾಡುತಿದೆ ನಿಷ್ಠೆಯ ಸುಲಿಗೆ

~ಜಿ.ಪಿ. ಗಣಿ~

***********************************************************************************************

Thursday, May 8, 2014

ಪ್ರೇಮ ಶಿಲ್ಪಿ

***********************************************************************************************
ಬರಿಗಲ್ಲಿನಂತಿದ್ದ ಹೃದಯಕೆ
ಪ್ರೀತಿಯ ಉಳಿಯೇಟನಿತ್ತು
ಶಿಲೆಯಾಗಿಸಿದೆ ನೀನೆನ್ನನು
ಮೌನ ಶಿಲ್ಪಿಯಾಗಿ
ಕಣ್ಮುಂದೆ ನೀ ಸುಳಿದ ದಿನವೇ
ಹೃದಯ ಶಿಲೆಯ ರೂಪರೇಖೆಯನು
ನಿನ್ನಯ ನಗುವು ಬರೆದಿತ್ತು
ಕಣ್ಣ ನೋಟದ ಉಳಿಗೆ
ನಿನ್ನಯ ಮೊಗದ ಸುತ್ತಿಗೆಯೇಟು
ಜೋರಾಗಿ ಆಗಾಗ ಬೀಳುತ್ತಿತ್ತು
ಮನದಲ್ಲಿನ ಜಡವು ಕಳಚಿ ಒಂದೊಂದಾಗಿ
ಆಕಾರ ಪಡೆಯುತ್ತಿತ್ತು
ಬಂದಿತ್ತೊಂದು ದಿನ
ಪ್ರೀತಿಯ ಹೃದಯ ಶಿಲೆಯ
ಲೋಕದ ಪ್ರದರ್ಶನಕ್ಕಿಡಲು
ಬಂಧನಗಳೆಂಬ ಮಾರಾಟದ ವಸ್ತುವಾಗಿಸಲು
ಮತ್ಯಾರೋ ಕೊಂಡು ಹೋದರು
ಮೂಢ ಜನಗಳ ಮಾತಿನ ಶಂಕೆಗೆದರಿ
ಪರರ ಕಣ್ಣಿಗೆ ಸುಂದರ ಹೃದಯ ಶಿಲೆಯು ನಾನು
ಆದರೊದರೊಳಗಿನ ಜೀವ ಮೂರ್ತಿ

ಕೇವಲ ನೀನು! ಕೇವಲ ನೀನು!

~ಜಿ.ಪಿ.ಗಣಿ~

***********************************************************************************************

ಬೆಸುಗೆಯ ಕೊಂಡಿ ಕಳಚಿದಾಗ

***********************************************************************************************
ಬಾಂಧವ್ಯದ ಬೆಸುಗೆಯಲಿ ಕಳಚಿರುವುದೊಂದು ಕೊಂಡಿ
ಎಷ್ಟು ಬಾರಿ ಬೆಸೆಯಲೆತ್ನಿಸಿದರೂ ಸವೆಯುತಲಿಹುದು
ಸವೆದು ಸವೆದು ತನ್ನ ಇರುವನ್ನೇ ಮರೆತುಹೋಗಿಹುದು
ಬೆಸುಗೆಗಾಗಿ ಮಣೆ ಹಾಕಲು ಭಿಕ್ಷೆ ಬೇಡುವ ಪರಿಸ್ಥಿತಿಯಿರಲು
ಮಣಿಯದ ಈ ಬಂಧನದ ಬಾಂಧವ್ಯಕೆ
ಸತ್ತ ಆತ್ಮವೂ ಅಳುತಿಹುದು ತಾ ತ್ಯಜಿಸಿದ ದೇಹವ ಮತ್ತೆ ಸೇರಲು
ಚಿಂತಿಸಿ ಫಲವಿಲ್ಲ, ಮತ್ಯಾವ ಬೆಸುಗೆಯು ಕಾದಿಹುದೋ ಯಾರು ತಿಳಿದಿಹರು
ನಿನ್ನಾತ್ಮದಯಾಸ್ಕಾಂತವನು ಶಮನಗೊಳಿಸೋ ಓ ಅಂತರಾತ್ಮ
ಮತ್ತೊಮ್ಮೆ ಮರುಜನ್ಮವ ನೀನವತರಿಸಬಹುದು
ಅಲ್ಲಿಯವರೆಗೂ ತಾಳ್ಮೆಯಿತ್ತು ಕಾಯುತಿರು... !

~ಜಿ.ಪಿ.ಗಣಿ~
***********************************************************************************************

Saturday, April 5, 2014

ಇನ್ನಾದರೂ ನಿನ್ನುಸಿರಿಗೆ ಉಸಿರನು ನೀ ಬೆರೆಸು

***********************************************************************************************

 ಇನ್ನಾದರೂ ನಿನ್ನುಸಿರಿಗೆ ಉಸಿರನು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು

ನಿರಂತರ ಗುಡುಗುವ ಹೃದಯವು
ಇತ್ತೀಚಿಗೆ ಕಂಪಿಸುತ್ತಿದೆ
ಭಾರವೆನಿಸುತಿದೆ
ಓಟದ ಆಟ ಸಾಕಾಗಿಹೋಗಿದೆ
ಕಾಣದ ಮಿಡಿತ ಮರುಗಿ ಕಂಬನಿಗರೆದು
ಸಾಂತ್ವನಕಾಗಿ ಹಂಬಲಿಸುತಿದೆ
ಮಿಡಿತಕ್ಕೆ ಹಿಡಿತವ ತರುವ
ವೈದ್ಯನ ಪೋಷಣೆ ಬೇಕಾಗಿದೆ
ಅಳಲು ತೋಡಿಕೊಳ್ಳಲು ತಾಯಿಯಂತಹ
ಮಮತೆಗಾಗಿ ಕಾಯುತ್ತಿದೆ
ಬದುಕ ಮುನ್ನಡೆಸಲು ತಂದೆಯಂತಹ
ಅಧಿಪತಿಗಾಗಿ ಹಪಹಪಿಸುತ್ತಿದೆ.
ಇನ್ನಾದರೂ ನಿನ್ನ ಬದುಕ ಬದುಕೆಂದು
ಸಾರಿ ಸಾರಿ ಚೀರುತ್ತಿದೆ
ಜೀವಕೆ ಜೀವವಾಗುವ ಹೊತ್ತಿಗೆ
ನಿರ್ಜೀವವಾಗುವ ಘಟ್ಟ
ನಾಲ್ಕು ಜನರು ಕಾಯುತ್ತಿರುವರು
ಹೊತ್ತೊಯ್ಯಲು ನಿನ್ನ ಚಟ್ಟ

ಇನ್ನಾದರೂ ನಿನ್ನುಸಿರಿಗೆ ಉಸಿರು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು
ಮನಸಿನೊಳು ಬರುವುದು ಅರಿವಿನ ಸೊಗಸು
ಇದೇ ಸ್ವರ್ಗ!! ಇದೇ  ಸ್ವರ್ಗ!!

~ಜಿ.ಪಿ.ಗಣಿ~
***********************************************************************************************

Tuesday, April 1, 2014

ನಿನ್ನ ಪ್ರೀತಿಯ ಗರ್ಭವೆಂಬ ದೇವಾಲಯದಿ...

***********************************************************************************************

ಬಟ್ಟ ಬಯಲಾದ ಲೋಕದ ಬಣ್ಣವ
ನಾನೆಂದಿಗೂ ನೋಡಲಾರೆ...
ಅರಿವಿರದ ಪಂಚೇಂದ್ರಿಯವ ಹೊತ್ತು
ನಿನ್ನ ಕರುಳ ಬಳ್ಳಿಗೆ ಮೊಗ್ಗಾಗಿ ಅರಳುವಾಗಲಿದ್ದೊಂಬತ್ತು
ತಿಂಗಳೇ ಎನ್ನ ಬದುಕಿನ ಸಾರ್ಥಕ್ಯ ಕ್ಷಣವು
ಮತ್ತೆ ಚಡಪಡಿಸುತಿದೆ ಈ ಎನ್ನ ಒಡಲು
ನಿನ್ನ ಪ್ರೀತಿಯ ಗರ್ಭವೆಂಬ ದೇವಾಲಯದಿ
ಧ್ಯಾನಿಸಲು!!
ನಿನ್ನ ವಾತ್ಸಲ್ಯದ ಮಮತೆಯ ಆರಾಧಿಸಲು//

~ ಜಿ.ಪಿ.ಗಣಿ ~

***********************************************************************************************

ತುಟಿ

***********************************************************************************************

------ತುಟಿಯಂಚಿನ ಆಪತ್ತು---------
ಮುತ್ತಿಡುವ ತುಟಿಯಂಚಲಿವೆ ರಕ್ಕಸನ ಪ್ರತಿರೂಪ,
ಅತಿರೇಕಕ್ಕಿಳಿದೆಡೆ ಅದರದ್ದೇ ಪ್ರತಾಪ
ಸತ್ಯ ಹೊರ ಹೊಮ್ಮುವ ಆ ಸ್ವರೂಪವೇ ಕುರೂಪ

------ತುಟಿಯಂಚಿನ ಗಮ್ಮತ್ತು--------
ಪ್ರೀತಿಯ ಭಾವದಿ ಹತ್ತಿರ ಬಂದೆಡೆ
ಮಧುರ ಚುಂಬನ
ಹೃದಯದೇರುಪೇರಿನ ರಕ್ತ ಸಂಚಲನ
ಮನಸು ಮನಸಿನ ಸಂಕಲನ
ಇಂಪಾದ ಕೋಗಿಲೆಯ ಗಾಯನ
ಏಕಾಂತವ ಬಯಸುವ ನಯನ
ವದನ ವದನಗಳ ಸಮ್ಮಿಲನ
ಪ್ರೀತಿ ಪ್ರಣಯದ ಆಲಿಂಗನ
ಹೃದಯ ಭಾವದ ಏಕೀಕರಣ
ಇದುವೇ ಪ್ರೇಮ ಧ್ಯಾನದ ವಶೀಕರಣ

~ಜಿ.ಪಿ.ಗಣಿ~

***********************************************************************************************
***********************************************************************************************
***********************************************************************************************

/ಜೊಳ್ಳು ಹನಿಗಳು\

***********************************************************************************************

----೧----
ಮನವೆಂಬ ಮನೆಯ
ಮುಂಬಾಗಿಲಿಗೆ
ರಂಗೋಲಿಯ ಚಿತ್ತಾರ
ಮನದೊಳಗಿನ ಅಂಗಳದೊಳಗೆ
ಯಾರಿಗೂ ಕಾಣದ
ಸ್ಮಶಾನದ ಅವತಾರ

---೨---
ಹಚ್ಚ ಹಸುರಿನ ಕಾಡಿನ ಮದ್ಯೆ
ಬಿರುಬಿಸಿಲು ಸುಡುವಷ್ಟು ಮರುಭೂಮಿ
ಮನದ ಶಾಂತ ಸಾಗರಕೆ ಆಗಾಗ
ಬಡಿದೆಬ್ಬಿಸುವುದು ಕಾಣದ ಸುನಾಮಿ

***********************************************************************************************

Tuesday, March 11, 2014

***********************************************************************************************

ಯಾರೋ ಅಂದರು, ನಿನಗೇಕೆ ಬೇಕು? ಈ ಬರೆಯುವ ತೆವಲು!
ನಾನೆಂದೆ,
ಇದು ತೆವಲಲ್ಲ ಮರುಳೆ
ಮನಕ್ಕಿರುವ ಅನುಭವದ ಅಮಲು
ಹೊರ ಹೊಮ್ಮುವುದು ಆತ್ಮಸಂತೃಪ್ತಿಯ ಘಮಲು!

ಮತ್ತೆ ನನ್ನ ಪ್ರಶ್ನೆ, ನಿನಗೇಕೆ ಬೇಕು ಈ ಕಡ್ಡಿಯಾಡಿಸುವ ತೆವಲು!

***********************************************************************************************
***********************************************************************************************

ಕನ್ನಡಿಯ ಮುಂದೆ
ನೀ ನಿಂತಾಗ
ನಿನ್ನ ಮೊಗವ
ಕಾಣುವ
ನಿನ್ನ ಕಣ್ಣ
ಗೋಲಿಗಳಲಿ
ನಿನ್ನನೇ ಹಿಡಿದು
ನನ್ನನು ಮರೆಯುವಾಸೆ!

***********************************************************************************************

---- ನೀವು ಹೇಳಿದ್ದು, ನಾನು ಕೇಳಿದ್ದು ---

***********************************************************************************************
ಪುಟ್ಟ ಹೆಣ್ಣು ಮಗಳ ಮೊಗದಲ್ಲಿ ನಗುವಿದ್ದರೆ
ಮನವೆಲ್ಲಾ ಬೃಂದಾವನ
ಹರೆಯದ ಹುಡುಗಿಯ ಮೊಗದಲ್ಲಿ ನಗುವಿದ್ದರೆ
ಮನದ ನೆಲದೊಳಗೇ ಕಂಪನ
ಮದುವೆಯ ನಂತರ ಹುಡುಗಿಯ ಮೊಗದಲ್ಲಿ ನಗುವಿದ್ದರೆ
ಮನವು ಬಯಸುವುದು ಆಲಿಂಗನ
ಮಕ್ಕಳಾದ ಬಳಿಕ ಹುಡುಗಿಯ ಮೊಗದಲ್ಲಿ ನಗುವಿದ್ದರೆ
.
.
.
.
.
.
.
.
.
ನಂಗೊತ್ತಿಲ್ಲ ಸಾಮಿ!

***********************************************************************************************