ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, March 6, 2012

ಅಮ್ಮ ( ಅನಂತ ಮಮತೆ )

***********************************************************************************************
ಈ ಪ್ರಯತ್ನ ನನ್ನ ಜನುಮದಾತೆಯಿಂದಲೇ ಪ್ರಾರಂಭಿಸಬೇಕೆಂಬ ಹುಚ್ಚು ಬಯಕೆ. ಆಕೆಯ ಅನಂತಾನಂತ ಮಮತೆಯಲಿ ಬೆಂದು , ಕರಗಿ ನೀರಾಗಿ , ಕಣ್ಣೀರ ಧಾರೆಯ ಹರಿಸಿ , ಆನಂದವ ಪಟ್ಟವನು ನಾನು.ನೋವುಗಳಿಂದ ಹೊರಬರಲು ಪಟ್ಟ ಹರಸಾಹಸದ ಒಂದು ಸಣ್ಣ ತುಣುಕು ಈ ಕವಿತೆ.ಅಮ್ಮ ಎಂಬ ಹೆಸರಿನಲ್ಲೇ ಇರುವ ಆ ಎರಡಕ್ಷರದ ವಿಸ್ತರಣೆಯೇ ನಾನಿಟ್ಟಿರುವ ಶೀರ್ಷಿಕೆ "ಅನಂತ ಮಮತೆ" :


ನಿನ್ನ ಆಸರೆಯಲ್ಲಿ ಹುದುಗಿ
ಕುಳಿತ ಪುಟ್ಟ ಕಂದ ನಾನು!
ನಿನ್ನ ನೋವಿನಲಿ ನನ್ನ ನಲಿಸಿದ
ಮಹಾನ್ ಸಾದ್ವಿ ನೀನು !
ಪುಟ್ಟ ಶರೀರವನಿತ್ತೆ
ನಿನ್ನ ನೆತ್ತರ ಕೊಟ್ಟೆ
ಬೇಡವೆಂದರೂ ಮಮತೆಯ ಸೆಲೆಯಲ್ಲಿ
ಎನ್ನ ಬಂದಿಸಿ ಪ್ರೀತಿಯನಿತ್ತೆ !
ಅಮ್ಮ ನಿನಗೆ ನೀನೇ ಸಾಟಿ !!


ಪ್ರೀತಿಯ ಸೆಲೆಯಲ್ಲಿ ನಾ ಬೆಂದು
ಬಸವಳಿದೆ , ತಿಳಿಯದೆ ನಾ ಸೋಮಾರಿಯಾದೆ !
ಮರೆತು ಮತ್ತೆಲ್ಲೋ ಪ್ರೀತಿಯ ಬಲೆಯ ಬೀಸಲು ಹೋದೆ
ಬಲೆಗೆ ಪ್ರೀತಿ ಸಿಗದೇ ನಾನೇ ಸಿಲುಕಿ
ಮರುಗಿ , ಕಂಗಾಲಾಗಿ ಹೋದೆ !
ಅದೆಲ್ಲೋ ಕೂಗಿತು ನಿನ್ನ ಕರುಳಿನ ಕೂಗು
ಮತ್ತೆ ನಾನಾದೆ ನಿನ್ನ ಪ್ರೀತಿಯ ಮಗು
ಆ ಬಲೆಗೆ ನಾನೆಂದೆ ನೀ ಎನ್ನ ಬಿಟ್ಟು ತೊಲಗು!
ಅಮ್ಮ ನಿನಗೆ ನೀನೇ ಸಾಟಿ !!


ಸಾಯುತಿದ್ದವನ ನೀ ಪಾರುಮಾಡಿಬಿಟ್ಟೆ
ಬದುಕುವ ಹಂಬಲ ನೀ ಹೆಚ್ಚಿಸಿಕೊಟ್ಟೆ
ಕಾಣದ ದಾರಿಯ ನೀ ತೋರಿಕೊಟ್ಟೆ
ನಿನ್ನ ಪ್ರೀತಿಯ ಮಮತೆಯಲಿ
ನನ್ನ ನಾ ಮರೆತುಬಿಟ್ಟೆ
ನನಗಾಗಿ ನಿನ್ನ ಉಸಿರು ಬಿಗಿದಿಟ್ಟೆ
ನನ್ನ ಆಶಾಕಿರಣದ ಜೀವನದ
ಜ್ಯೋತಿಯ ನೀ ಹೊತ್ತಿಸಿಬಿಟ್ಟೆ
ಅಮ್ಮ ನಿನಗೆ ನೀನೇ ಸಾಟಿ !!


ನನಗಾಗಿ ಎಲ್ಲ ನಿನಗೇನೂ ಇಲ್ಲ
ಹಗಲಲ್ಲ , ಇರುಳಲ್ಲ , ನಿನ್ನ ಮಮತೆಗೆ
ನನ್ನ ಕರುಳು ಹಿಗ್ಗಿ ಹೋಯಿತಲ್ಲ
ನಿನ್ನ ಜೀವವ ವತ್ತೆ ಇಟ್ಟೆ, ನಾ ಹೊರ
ಬರಲು , ನೀ ಅತ್ತು ನುಡಿದೆ
ಈ ಜೀವವೇ ನಿನಗಿರಲು
ಮರುಗಿದೆ ಈ ಎನ್ನ ಒಡಲು
ನನ್ನ ನೆತ್ತರಲ್ಲಿ ಬಂತು ನೀನಿತ್ತ ಹಾಲ್ಗಡಲು
ಅಮ್ಮ ನಿನಗೆ ನೀನೇ ಸಾಟಿ !!

-@(-ಗಣಿ -)@-

ಅಮ್ಮನ ಮಮತೆ ನಾಲ್ಕು ಸಾಲುಗಲ್ಲಿ ವರ್ಣಿಸಲು ಅಸಾಧ್ಯ , ಆದರೆ ಇಲ್ಲಿಯವರೆಗಿನ ನನ್ನ ಬದುಕಿನ ಅನುಭವವ ಹೇಳುವ ಒಂದು ಪ್ರಯತ್ನ ಅಷ್ಟೇ.
***********************************************************************************************

Sound of heart ( ಹೃದಯದ ದನಿ)


"ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ"

ಈ ಪುಟ್ಟ ಸಾಲುಗಳ ಸ್ಮರಿಸುತ್ತ ನನ್ನ ಬ್ಲಾಗಿನ ಉದ್ಗಾಟನೆಯನ್ನು ಮಾಡಿರುತ್ತೇನೆ.

"ವಿವಿಧತೆಯಲ್ಲಿ ಏಕತೆ ಎಂಬಂತೆ , ವಿಭಿನ್ನ ಚಿತ್ರಣಗಳನ್ನು ಸಾರುವ ನಾವೆಲ್ಲರೂ ಹೇಳ ಹೊರಟಿರುವ ವಸ್ತು ಪ್ರೀತಿ ಅದೇ ಬದುಕಿನ ಮೂಲ ಬುನಾದಿ."

ಮಾನವ ಜನ್ಮ ದೊಡ್ಡದು , ಹಾಳುಮಾಡಿಕೊಳ್ಳದಿರಿ ಹುಚ್ಚಪ್ಪಗಳಿರ ಎಂದು ಎಲ್ಲೋ ಕೇಳಿದ ನೆನಪು . ಪ್ರಪಂಚದಲ್ಲಿ ಹೃದಯವಿಲ್ಲದ ಮಾನವನಿಲ್ಲ , ಎಷ್ಟೇ ಕ್ರೂರಿಯಾದರು ಆತನು ಕರಗದೆ ಇರದ ಕೊಂಡಿ ಇಲ್ಲ . ಆ ಕೊಂಡಿಯ ಬೆಸೆಯುತ್ತ ,ಮಾನವತೆಯ ಸಾರುವುದೇ ಈ ನನ್ನ "ಹೃದಯದ ದನಿ ". ನಾನು ಮುಂದೆ ಬರೆಯುವ ಎಲ್ಲಾ ಬರಹಗಳಲ್ಲಿ ತಪ್ಪಿದ್ದರೆ ತೆಗಳಿಕೆ ,ಸರಿ ಅನ್ನಿಸಿದರೆ ಹೊಗಳಿಕೆ ಮತ್ತು ವಿಮರ್ಶೆಗೆ ಬಿದ್ದರೆ ಸಲಹೆಗಳಿಗೆ ನನ್ನ ಹೃದಯದ ಬಾಗಿಲು ಸದಾ ತೆರೆದಿರುತ್ತದೆ. ಒಟ್ಟಿನಲ್ಲಿ ನನ್ನ ಹೃದಯದ ಬಡಿತದ ಜೊತೆಜೊತೆಯಲ್ಲಿ ಹೊರಹೊಮ್ಮುವ ಕಾಣದ ಆ ಮಾರ್ಮಿಕ ಲೋಕದ ದನಿಯ ಸದೃಡಗೊಳಿಸಿ ,ವಾಸ್ತವದೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳುತ 'ಹೃದಯದ ದನಿ'ಯ ಮುಗಿಲು ಮುಟ್ಟಿಸುವ ಒಂದು ಪುಟ್ಟ ಪ್ರಯತ್ನ .