ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, November 19, 2014

ಅಂಧ ಅಂಧಕಾರ

***********************************************************************************************
ಎತ್ತ ನೋಡಿದರತ್ತ ಕತ್ತಲು
ಬರೀ ಕಪ್ಪು
ಅಲ್ಲಲ್ಲಿ ಬಿಳುಪು ಹೊಳಪು
ಒಂದಷ್ಟು ಮಿನುಗುತ್ತವೆ ಬೆತ್ತಲಾಗಲು...
ಮತ್ತಷ್ಟು ನಲುಗುತ್ತವೆ ಮರೆಯಾಗಲು...
ಒಂದೊಕ್ಕೊಂದು ಕವಚವಾಗಿಹವು
ಬದುಕಿನ ಹೊನಲು ಬೆಳಕಿನಾಟದಲ್ಲಿ
ಇಬ್ಬರೂ ಕಂಡಿಹರು ತಮ್ಮ
ನಿರ್ವಸ್ತ್ರ ದೇಹವ
ದೇಹದೊಳಗೊಂದು ಅಸ್ತ್ರವ
ಅಸ್ತ್ರದೊಳಗಣ
ಪ್ರಜ್ವಲತೆಯ ...
ಶಾಂತತೆಯ...
ಒಬ್ಬರು ಮತ್ತೊಬ್ಬರಿಗಾಧಾರ
ಇಬ್ಬರೂ ಬದುಕಿರಲಾರರು
ಮತ್ತೊಬ್ಬರ ತೊರೆದು
ಇದು ಬದುಕು
ಕತ್ತಲಿಲ್ಲದೇ ಬೆಳಕನರಿಯಲಾಗದು
ಬೆಳಕಿಲ್ಲದೆ ಕತ್ತಲ ಕಾಣಲಾಗದು
ಒಂದು ಮೌನ
ಮತ್ತೊಂದು ಮಾತು
ಒಂದು ನೇತ್ರ
ಮತ್ತೊಂದು ಆತ್ಮ
ಆಟದೊಳಗಣ ಪಾಟವ
ನಿತ್ಯವೂ ಜಪಿಸುವುದೆ ನಿತ್ಯಕರ್ಮ
~ಜಿ.ಪಿ.ಗಣಿ~

***********************************************************************************************

ಅಗೋಚರ

***********************************************************************************************
ಆಗಸವೆಂಬ ಅಂತ್ಯವಿಲ್ಲದ ವೃತ್ತದ ಪರಿಧಿಯಲ್ಲಿ
ನೀನೆಲ್ಲಿ ಅಡಗಿದ್ದೆ?
ಲೆಕ್ಕಕೆ ಸಿಗಲಾರದಷ್ಟು ಸೌರಮಂಡಲಗಳಿಹವಿಲ್ಲೀ... 
ಆದರೂ ಅದರೊಳಗಿನ ಭೂಮಿ ನೀನಾ?
ಮೌನ ನೀನಾಗಿ
ನನ್ನಾತ್ಮ ಜಾರುತಿದೆ ಕಾಣದೂರಿನೆಡೆಗೆ...
ನೀ ಜೀವ ಧರಿಸಿರುವೆ
ಎನಗೆ ಭಯವ ತಂದಿರುವೆ
ಯಾರು ನೀ! ಭಾವನೆಯೇ?
ನನ್ನೊಳಗೆ ನೀ ಹೇಗೆ ಬಂದೆ?
ಏಕೆ ಬಂದೆ?
ನನ್ನೊಳಗಿನ ನನ್ನಲ್ಲಿ
ನಿನ್ನ ಬಿಂಬವ ಕಾಣುತಿಹೆ
ನನ್ನ ನಾ ಮರೆಮಾಚುತಿಹೆ!
ಯಾರು ನೀ! ಭಾವನೆಯೇ?
ನನ್ನೊಳಗೆ ನೀ ಹೇಗೆ ಬಂದೆ?
ಏಕೆ ಬಂದೆ?
***********************************************************************************************

ಮನದ ತೃಷೆ

***********************************************************************************************
ಮೊದಲು ಬೂದಿಯಾಗು
ಓ ನೆನಪೇ
ನೀ ಕೆಂಡವಾಗೇ ಉಳಿದರೆ
ಕಷ್ಟವಾಗುವುದೀ ಹೃದಯಕೆ
ಎತ್ತಣ ಗಾಳಿ ಬೀಸಿ
ಎನ್ನ ಮನವು ಹೊತ್ತಿ
ಉರಿಯುವುದೋ
ನಾನರಿಯೆ...
ದಯಮಾಡಿಯೊಮ್ಮೆ ಯೋಚಿಸು...
ಇಲ್ಲವಾದರೆ ನೀ ಉಷೆಯಾಗಿ
ಮತ್ತೆ ಮನದ ಬುವಿಗೆ ಬರಬೇಕಾಗುತ್ತದೆ
~ಜಿ.ಪಿ.ಗಣಿ~
***********************************************************************************************