ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, November 10, 2012

ಹೇಳುವುದು ಸುಲಭ ಮಾಡುವುದು ಕಷ್ಟ !!

***********************************************************************************************
ನಮ್ಮ ಜೀವನವೇ ಒಂದು ರೀತಿಯ ಒಗಟಂತೆ , ಎಲ್ಲವನ್ನು ತಿಳಿಯಹೊರಟಿರುವ ನಾವು ಬುದ್ದಿ ಬಲಿತಂತೆ ಕಾಣದ ಕೈಗಳು ಮೋಸ ಮಾಡುತ್ತವೆ ಹಾಗೂ ಮಾಡಿಸುತ್ತವೆ, ಸೂತ್ರದ ಗೊಂಬೆಗಳಾಗಿ ಆಡುವ ನಾವು ಕೆಲವೊಮ್ಮೆ ಅನುಭವಕ್ಕೆ ಭಾಸವಾಗಿ, ಅಯ್ಯೋ !! ಹೀಗಾಯಿತಲ್ಲ ಎಂದು ಪರಿತಪಿಸುವುದು ಸರ್ವೇ ಸಾಮಾನ್ಯ . ಸುಮ್ಮನೆ ಹಾಗೆ ನಮ್ಮ-ನಿಮ್ಮಯ ಜೀವನದ ಪುಟಗಳ ಹಿಂದೆ ತಿರುವಿ ನೋಡಿದರೆ ಅರಿವಾಗುತ್ತದೆ . ಅನೇಕ ಬಾರಿ ತಪ್ಪು - ಒಪ್ಪುಗಳ ನಡುವೆ ಬೆಂದು ಸರಿದಾರಿಯ ಕಂಡುಕೊಂಡಿರುತ್ತೇವೆ.ನಮ್ಮ ಕಿರಿಯರು ಅಥವಾ ಸ್ನೇಹಿತರು ಆ ತಪ್ಪು ಮಾಡುವರೆಂಬ ಅರಿವಾಗುತ್ತಲೇ ; ಎಚ್ಚರಿಕೆಯ ಗಂಟೆ , ತಿಳುವಳಿಕೆಯ ಮಾತುಗಳು , ಆಹಾ ! ಏನು ಸರ್ವಜ್ಞರಂತೆ ತಿಳುವಳಿಕೆ ಕೊಟ್ಟಿದ್ದೂ ಕೊಟ್ಟಿದ್ದೆ.ಅದೇ ರೀತಿ ಕೆಲವಷ್ಟು ಅನುಭವಗಳು ನಮ್ಮ ಅರಿವಿಗೆ ಬಾರದೆ ಹೋಗುತ್ತವೆ, ಅನುಭವ ಸ್ವತಃ ಪಡೆಯದೇ ಬರಿ ಸಾಂತ್ವಾನ ಹೇಳುವ ಕಾರ್ಯ ನಮ್ಮದಾಗಿರುತ್ತದೆ.ಒಮ್ಮೆ ನಾವು ಅನುಭವವವಿಲ್ಲದಿದ್ದರೂ  ಆಂತರ್ಯದಿಂದ ಹೊರಬರುವ  ಕಾಣದ ಅಗೋಚರವಾದ ವಾತ್ಸಲ್ಯದ ಸಾಂತ್ವಾನ ಮತ್ತು ಧೈರ್ಯ  ತುಂಬುವ ಮಾತುಗಳು ಅತ್ಯುನ್ನತ ಶಕ್ತಿ ಹೊಂದಿರುತ್ತದೆ. ಅದೇ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬಾರದೇ ಮಾಡಿದ ತಪ್ಪುಗಳನ್ನೇ ಮಾಡುತ್ತಾ ದೇವರನ್ನು ಶಪಿಸುತ್ತ ಹಣೆಬರಹಕ್ಕೆ ಬೊಟ್ಟು ಮಾಡುತ್ತಾ ನಮ್ಮೊಳಗಿನ ಆತ್ಮಸ್ಥೈರ್ಯವನ್ನು ಕೊಲ್ಲುತ್ತಾ ಹೋಗುತ್ತೇವೆ .
                                 ಪರರ ಕರೆಗೆ ಓ ಗೊಡುವ ಮನವು  ತನ್ನೊಳಗಿನ ಆತ್ಮಕೆ ಕವಚ ನೀಡುವುದಿಲ್ಲವೇಕೆ ? ಅದಕ್ಕೆ ಏನೋ ಹೇಳುವುದು;  ಮನುಷ್ಯ ಸಂಗ ಜೀವಿ , ಪರಾವಲಂಬಿ ಎಂದು. ಸ್ವಯಂ ಆತ್ಮಸುಖವ ಬಿಟ್ಟು ಬಾಹ್ಯಲೋಕದ ಸುಖಕ್ಕೆ ಮಾರುಹೋಗುತ್ತಾನೆ .ಆ ಸುಖ ಕೇವಲ ನಶ್ವರ, ಅಲ್ಪ ಸುಖ ಸುಲಭವಾಗಿ ಕೈಗೆಟುಕುವಂತವು. ಆತ್ಮಸುಖ ಅನಂತ ಸುಖ ಅದು ಕೈಗೆಟುಕದೇ  ಇರುವುದು. ಸಿದ್ಧಿಸುವ ಮನವಿರಬೇಕು ಅದಕ್ಕೆ ಅಲ್ಲವೇ ಹೇಳುವುದು , ಮನಸ್ಸಿನಂತೆ ಮಹಾದೇವ  ಎಂದು ಯಾವುದೇ ಕೆಲಸ ಮಾಡುವ ಮುನ್ನ ಶುದ್ದ ಪಡಿಸಬೇಕಾದದ್ದು ನಮ್ಮ ಮನಸನ್ನು; ಪರಿಶುದ್ದ ಮನಸ್ಸಿಲ್ಲದ ಶರೀರ ಧೂಳು  ಹಿಡಿಯುವ ನಿರ್ಜೀವ ವಸ್ತುವಿನಂತೆ ; ಮನದಲ್ಲಿ ಶುದ್ದತೆ ,ಬುದ್ದಿಯಲ್ಲಿ ಸ್ಥಿರತೆ ಮತ್ತು ಜ್ಞಾನದಲ್ಲಿ ಪರಿಣತೆ ಎಲ್ಲವೂ ಇದ್ದರೆ  ನಮ್ಮ ಪ್ರತಿಯೊಂದು ಕಾರ್ಯವು ಫಲಕಾರಿಯಾಗುವುದು. ನಮ್ಮೊಳಗಿನ ಶಕ್ತಿಯನ್ನು ಸದಾ ಪರರಿಂದ ಅರಿಯುವ ಬದಲು ನಮ್ಮನ್ನು ನಾವೇ ಹುಡುಕಿ ಅರ್ಥೈಸಿಕೊಂಡರೆ ಅದಕ್ಕಿನ್ನ ಮಿಗಿಲಾದ ಭಾಗ್ಯ ಮತ್ತೇನು ? ನಾನು ಯಾರು ? ನನ್ನ ಸಾಮರ್ಥ್ಯ ಎಂತದ್ದು ?ನನ್ನ  ಆಶಯಗಳೇನು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಕೊಂಡರೆ ಬದುಕಿಗೆ ಬೇಕಾದ ಮಾರ್ಗ ಸಿಗದೇ ಇರುವುದೇ ? ಈಗಲು ಅಷ್ಟೇ ಇವೆಲ್ಲ ಹೇಳುವುದು ಎಷ್ಟು ಸುಲಭವೋ ಕಾರ್ಯಗತವಾಗಿಸಲು ಅಷ್ಟೇ  ಕಷ್ಟ ,ಆದರೆ ಅಸಾಧ್ಯವೇನಲ್ಲ !! ಅಲ್ಲವೇ? ಎಲ್ಲರಿಗೂ ಎಲ್ಲರಲ್ಲೂ ತಮ್ಮತನ ಹುಡುಕಿಕೊಂಡು ಬದುಕಬೇಕೆಂಬ ಆಸೆ-ಆಕಾಂಕ್ಷೆಗಳು ಇರುತ್ತವೆ. ಅವುಗಳನ್ನು ಇತಿ-ಮಿತಿಯಾಗಿ ಸವಿದರೇನೆ ಬದುಕು ನೋಡಲು ಚೆನ್ನ.  ಬಾಳ  ಕನ್ನಡಿಯಲ್ಲಿ  ನಮ್ಮನ್ನು ನಾವೇ ಚೆನ್ನಾಗಿ ಅರಿತು ಬದುಕ ಹಾದಿಯ ಹಸನಾಗಿಸೋಣ. ಎಲ್ಲರ ಜೊತೆಗೂಡಿ ನಲಿದು ಎಲ್ಲರಲ್ಲೂ ತಮ್ಮತನ ಹುಡುಕದೆ, ತಮ್ಮಲ್ಲಿ ತಾವು ಕೀಳರಿಮೆ ಹೊಂದದೆ ಮುಕ್ತವಾಗಿ ಸಂಭಾಷಣೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಂಡು ;  ಒಕ್ಕೊರಲಿನಿಂದ ಈ ಭೂಮಂಡಲವನ್ನು ಸ್ವರ್ಗಮಯವಾಗಿಸೋಣ!

ನಿಮ್ಮ ಒಳಿತನ್ನು ಬಯಸುವ 
~ಜಿ.ಪಿ.ಗಣಿ~
***********************************************************************************************

No comments:

Post a Comment