***********************************************************************************************
ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ನೋವನ್ನು ತೀವ್ರವಾಗಿ ಅನುಭವಿಸಿ ಪಟ್ಟಪಾಡುಗಳು ಸಾಕಷ್ಟಿವೆ. ಅದನ್ನು ಯಾರ ಬಳಿ ಹೇಳಿಕೊಳ್ಳುವುದಾಗಲಿ , ಹಂಚಿಕೊಳ್ಳುವುದಾಗಲಿ ಮಾಡುವುದಿಲ್ಲ ! ಅಂತಹ ಸಮಯದಲ್ಲಿ ಬರುವ ಸ್ನೇಹಿತನೇ ಈ ಏಕಾಂತ ; ಆ ನೋವು, ಸಂಕಟ , ವಿಮರ್ಶೆ ಎಲ್ಲವೂ ಒಮ್ಮೆಯೇ ಸುನಾಮಿಯಂತೆ ಅಪ್ಪಳಿಸುತ್ತದೆ. ಅಂತಹ ಒತ್ತಡವನ್ನು ಎದುರಿಸುವ ಶಕ್ತಿ ಇಲ್ಲದಿರೆ ಬದುಕುವುದು ಬಲು ಕಷ್ಟ! ಅಂತಹ ನೋವನ್ನು ತಕ್ಕ ಮಟ್ಟಿಗೆ ಬಿಚ್ಚಿಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ.
ಇಂತಹ ಸಂಕಟದ ವಿಷಯ ಬೇಕೇ ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಹೌದು ಇದು ಬೇಡವೆನಿಸಿದರೂ ಬರೆಯಲು ಯೋಚಿಸಿದ ಉದ್ದೇಶವೇನೆಂದರೆ ಕೆಲವರಿಗೆ ಈ ನೋವು ಎಂಬುದು ತಮಗೆ ಮಾತ್ರ ಸೀಮಿತವಾಗಿದೆ ಎಂದು ಅವರ ಚೌಕಟ್ಟಿನಲ್ಲಿ ಮಾತ್ರ ಯೋಚಿಸಿ ಪರರ ರೀತಿಯ ಹಾಗೆ ನಾನು ಯಾಕೆ ಇಲ್ಲ ? ನನಗು ಅವರ ಹಾಗೆ ಸೌಕರ್ಯ ಇದ್ದಿದರೆ ಈ ರೀತಿ ಆಗುತ್ತಿರಲಿಲ್ಲ ಎಂಬ ಅನೇಕ ಪ್ರಶ್ನೆಗಳು ಉದ್ಭವವಾಗುವುದು ಸರ್ವೇ ಸಾಮಾನ್ಯ. ಅಂತಹ ಎಲ್ಲ ಪ್ರಶ್ನೆಗಳಿಗೆ ಈ ಅಲ್ಪ ಮತಿಯಿಂದ ಉತ್ತರಿಸುವ ಪ್ರಯತ್ನವಷ್ಟೇ. ಪೀಟಿಕೆಯೇ ಹೆಚ್ಚಾಯ್ತು ಮೂಲ ವಸ್ತು ಬರಲಿ ಎಂದು ಮನದಲ್ಲಿ ಕೇಳಿಕೊಳ್ಳುತ್ತಿದ್ದೀರ ? ಸರಿ ಇನ್ನು ತಡವೇಕೆ ಬನ್ನಿ ಹೋಗೋಣ ನೋವಿನ ಲೋಕಕ್ಕೆ !!
ನಿಮ್ಮ ಬದುಕಿನ ಕಪ್ಪು-ಬಿಳುಪಿನ ಚಿತ್ರ ತೆರೆದುಕೊಳ್ಳಿ ಯಾವಾಗಲೋ ಒಮ್ಮೆ ಯಾರದರನ್ನು ಕಳೆದುಕೊಂಡಾಗ ; ಪ್ರೀತಿ ದೂರವಾದಾಗ ; ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ; ಮನೆಯಲ್ಲಿ ಬಡತನದಿಂದ ಬಳಲಿದಾಗ ;ಅನಾಥರಾಗಿ ಹುಟ್ಟಿ ಬದುಕುವಾಗ ; ಹೆಂಡತಿ ಗಂಡನ ಹಿಂಸೆಯಿಂದ ಬಳಲಿದಾಗ ; ಮುದ್ದಾದ ಹೆಂಡತಿ ಗಂಡನ ತೊರೆದಾಗ ; ಮಕ್ಕಳು ಪೋಷಕರನ್ನು ಮರೆತಾಗ ; ಒಟ್ಟಾರೆ ನೋವಿಲ್ಲದ ಜೀವನವೇ ಇಲ್ಲ ಎಂದು ಹೇಳುತ್ತೇನೆ. ಮತ್ತಷ್ಟು ಹೇಳಲು ಹೊರಟರೆ ಸಮಸ್ಯೆಗಳ ನಿಘಂಟನ್ನು ಬರೆಯಬಹುದು. ಸದ್ಯಕ್ಕೆ ಇರಲಿ ಅಂತಹ ಕಹಿ ಘಟನೆಗಳನ್ನು ಒಮ್ಮೆ ತಿರುವಿ ನೋಡಿದಾಗ ಆ ಸಮಯದಲ್ಲಿ ಒಂದು ರೀತಿ ಹೊಟ್ಟೆಯನ್ನು ಯಾರೋ ಕಿವಿಚಿದಷ್ಟು ಧರ್ಮಸಂಕಟವಾಗುತ್ತಿದೆ, ಅಯ್ಯೋ ..!ಅಮ್ಮ ಯಾಕಿಷ್ಟು ಯಾತನೆ ಎಂದು ಚೀರಬೇಕೆಂದಿದ್ದರೂ ಚೀರದೆ ಅದನ್ನು ಹೃದಯಕ್ಕೆ ಹೊಕ್ಕಿಸಿ ನೋವಿನಿಂದ ಉಂಟಾದ ಕಿಡಿಯು ಹೊತ್ತಿ ಉರಿಯಲಾರಂಭಿಸಿ ಜಮದಘ್ನಿಯಂತೆ ಆರ್ಭಟಿಸಿ ದಗದಗ ಶರೀರವನೆಲ್ಲ ಉರಿದು , ಹಿಂಡಿ ಹಿಸುಕಿ ಮುದ್ದೆಯಾಗಿಸಿಬಿಡುತ್ತದೆ.ಒಮ್ಮೊಮ್ಮೆ ಬೆಟ್ಟದ ತುದಿಯಲ್ಲಿ ಕುಳಿತು ನೀಳೆತ್ತರವಾದ ಭೂಮಿಯ ನೋಡಬೇಕೆನಿಸುವಷ್ಟು ಮನಸ್ಸು ನಮಗರಿಯದಂತೆ ನಮ್ಮೊಳಗಿನ ಆಳಕ್ಕೆ ಇಳಿದುಬಿಡುತ್ತದೆ.ಸಂಕಟವೆಂಬ ಶತ್ರುವನ್ನು ಯುದ್ದದಲ್ಲಿ ಮಣಿಸಲಾಗದೆ ಮಳೆಯ ರಭಸದ ಒಡೆತಕ್ಕೆ ನಿಲ್ಲಬೇಕೆನಿಸಿಸುತ್ತದೆ. ಸಿಕ್ಕಿದ ಕಡೆಯಲ್ಲ ಗುದ್ದಬೇಕೆನಿಸುತ್ತದೆ. ತಲೆಯನ್ನು ಚಚ್ಚಿಕೊಳ್ಳುವಷ್ಟು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.ಪ್ರಪಂಚ ಏಕೆ ಹೀಗೆ ಹುಚ್ಚರಂತೆ ಬಡಿದಾಡುತ್ತಿದೆ ! ಮನದೊಳಗೆ ಯಾತನೆಯನ್ನು ಹೊರಹಾಕದೆ ಒಬ್ಬರ ಮೇಲೊಬ್ಬರು ಎಗರಾಡಿ , ಕಾದಾಡಿ ಏಕೆ ಹೀಗೆ ನಿರ್ಜೀವಿಯಾಗುತ್ತಿದ್ದಾರೆ.ಅರಿಯುವ ಮನಸ್ಸಿದ್ದರೂ ಬುದ್ದಿಗೆ ಅದೆಲ್ಲಿ ಮಂಕುಬಡಿದು ಲದ್ದಿ ಹೊಕ್ಕಿತ್ತೋ ಗೊತ್ತಿಲ್ಲ ತಾಳ್ಮೆಯಿಲ್ಲದೆ , ವಿಮರ್ಶೆ ಮಾಡದೆ , ಏನನ್ನೂ ಪರಾಂಬರಿಸದೇ ಒಂದೇ ಸಮನೆ ಯುದ್ದದ್ದಲ್ಲಿ ಅಮಾಯಕರ ಮೇಲೆ ಎರಗುವ ಪರಿಯಂತೆ ನಂಬಿಕೆ , ಪ್ರೀತಿ , ವಾತ್ಸಲ್ಯ , ಮಮತೆ ಎಂಬ ಬದುಕಿನ ಈ ಅಂಗಾಂಗಳನು ಕೊಚ್ಚಿ ಹಾಕುತ್ತಾರೆ.ಈ ಬದುಕಿನ ಸಂಬಂಧಗಳೇ ಹಾಗೆ ಬಂಧವಿಲ್ಲದೆ ಬಂಧನವಾಗಿಹೊಗಿವೆ ಎನ್ನುವಷ್ಟು ಜಿಗುಪ್ಸೆ , ವೈರಾಗ್ಯ ಬಂದುಬಿಡುತ್ತದೆ. ಹಾಗಾದರೆ ಇದಕ್ಕೆ ಕೊನೆಯಿಲ್ಲವೇ ಎಂಬ ಪ್ರಶ್ನೆ ಬರಲಾರದೆ ಇರದು !!ಇಂತಹ ಪ್ರಶ್ನೆಗೆ ಮೋಡಗಳ ವಿಭಿನ್ನ ಉದಾಹರಣೆ ಕೊಟ್ಟು ಹೇಳಬಯಸುತ್ತೇನೆ.
ಕೆಲವರು ಬಿಳಿ ಮೋಡದ ಹಾಗೆ ನಾನಾಕಾರದ ಮೋಡವ ತೋರಿ ಆಕರ್ಷಿಸುತ್ತಾರೆ .ಆದರೆ ಕೆಲಕಾಲ ಮಾತ್ರ ಇದ್ದು ಮತ್ತೆ ಅದರಾಕಾರ ಬದಲಾಯಿಸಿ ಹಾಗೆ ಗಾಳಿಯಲ್ಲಿ ಮುಂದೆ ಚಲಿಸಿಬಿಡುವಂತೆ ಹೊರಟುಹೋಗುತ್ತಾರೆ . ಇನ್ನು ಕೆಲವರು ಮುಸ್ಸಂಜೆಯಲಿ ತಣ್ಣನೆಯ ಗಾಳಿ ಬೀಸಿ ಜಿನುಗುವ ಮಳೆತರಿಸುವ ಮೋಡಗಳ ಹಾಗೆ ,ಮನೋಲ್ಲಾಸವ ಕೊಟ್ಟು ಹರ್ಷೋದ್ಗಾರಕ್ಕೆ ಎಡೆ ಮಾಡಿಕೊಡುತ್ತಾರೆ. ಇವೆ ಸವಿನೆನಪುಗಳಾಗುವವು .ಇನ್ನು ಕೊನೆಯ ಭಾಗದವರು ಅದೇ ಅದೇ ದಟ್ಟ ಕಾರ್ಮೋಡದಂತೆ ಚಲಿಸದೆ ಹಾಗೆ ನಮ್ಮನ್ನು ನೋಡುತ್ತಾ ಮೇಲೆ ನಿಂತು ಕಗ್ಗತ್ತಲೆಯನಿತ್ತು ಕೊನೆಗೆ ಸಿಡಿಲಾರ್ಭಟದಿಂದ ಗುಡುಗಿ ಆಲಿಕಲ್ಲಿನ ಮಳೆಯ ಬೀಳಿಸಿ ನಿಲ್ಲಲ್ಲಾರದೆ ಕೊಚ್ಚಿಕೊಂಡು ಹೋಗುವಷ್ಟು ನೋವಿತ್ತಿಬಿಡುತ್ತವೆ. ಎಲ್ಲ ಭಗವಂತನ ಲೀಲಾಮೃತವಷ್ಟೇ . ಅವನಿತ್ತರೆ ಯಾವ ಮೋಡಗಳು ಬೇಕಾದರೂ ಬರಬಹುದು, ಮೊದಲಿನೆರಡು ಮೋಡಗಳು ಬದುಕಿನಲ್ಲಿ ಅಷ್ಟೇನೂ ನೆನಪಿಗೆ ಉಳಿಯುವುದಿಲ್ಲ ಆದರೆ ಮೂರನೇ ಮೋಡ ಮೊದಲೇ ತನ್ನ ಸಿಡಿಲು ಗುಡುಗು ಆರ್ಭಟದಿಂದ ಎಚ್ಚರಿಸುತ್ತವೆ,ಎಚ್ಚರ ತಪ್ಪಿ ಅವುಗಳು ಭಾರಿಸುವ ಆಲಿಕಲ್ಲಿನ ಏಟಿಗೆ ಸಿಗಲಿಚ್ಚಿಸಿದರೆ ಅನುಭವಿಸುವ ಹೊಣೆ ನಾವೇ ಹೊರಬೇಕು, ಆ ಕಹಿ ನೆನಪಿನ ಗಾಯಗಳು ಮಾಸದೆ ಹಾಗೆ ಉಳಿದುಬಿಡುತ್ತದೆ.ಒಮ್ಮೊಮ್ಮೆ ಬದುಕುವುದು ಕೂಡ ಕಷ್ಟ. ಅದಕ್ಕಾಗಿಯೇ ಬದುಕಲ್ಲಿ ಸಿಗುವ ಅಲ್ಪ ಸುಖವನ್ನು ಅನುಭವಿಸುತ್ತ ಧನಾತ್ಮಕ ಚಿಂತನೆಯೊಂದಿಗೆ ಸದ್ಗುಣಗಳನ್ನು ಬೆಳೆಸಿಕೊಂಡು ಸತ್ಕಾರ್ಯಗಳನ್ನು ಮಾಡುತ್ತಾ ಅನ್ಯರಿಗೆ ಕೇಡನ್ನು ಬಯಸದೆ ಜೀವಿಸಬೇಕು . ಈಗಿನ ಕಾಲದಲ್ಲಿ ಮೋಸಕ್ಕೆ ಪ್ರತಿ ಮೋಸ , ಏಟಿಗೆ-ತಿರುಗೇಟು , ಹೀಗೆ ಮಾಡುತಿದ್ದರೆ ಪ್ರಕೃತಿಯ ನಿಯಮಕ್ಕೆ ಬಾಹಿರವಾದ ನಡವಳಿಕೆಯಾಗಿ ಅದರ ಫಲಿತಾಂಶವನ್ನು ನಾವೇ ಹೊರಬೇಕಾಗುತ್ತದೆ. ಕನಸು , ಆಸೆ , ನಿರೀಕ್ಷೆ ಇವೆ ಬದುಕಿನ ದುಃಖದ ಮೂಲ ಬುನಾದಿ ಹೊಂದಿರುವವು. ಇವುಗಳ ಪ್ರೇರಣೆ ಹೆಣ್ಣು- ಹೊನ್ನು-ಮಣ್ಣು ಈ ಮೂರರ ಮಿಶ್ರಣ ,ಇವುಗಳು ಅತಿಯಾದಾಗ ಅಥವಾ ನೆರವೇರದೇ ಇದ್ದಾಗ ಮರುಕ ಹುಟ್ಟಿಸುತ್ತವೆ, ಯಾತನೆಯನ್ನು ತರಿಸುತ್ತವೆ.ಬದುಕು ಸಾಕೆನಿಸುವಷ್ಟು ಒಡೆತ ಕೊಡುತ್ತವೆ.ಅವುಗಳ ಹಿಂದೆ ನಾವು ಬೀಳದೆ ಅವುಗಳನ್ನೇ ನಮ್ಮ ಹಿಂದೆ ಬರುವ ಹಾಗೆ ಮಾಡಿಕೊಂಡು ಬದುಕುವುದೇ ಜೀವನ! ಎಲ್ಲರಿಗು ಎಲ್ಲದರಲ್ಲೂ ಶಕ್ತಿ ,ಯುಕ್ತಿ ಲಭಿಸಲಿ ಅದಕ್ಕಿನ್ನ ಮಿಗಿಲಾಗಿ ಒಬ್ಬ ಮಾನವನಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಾನವೀಯತೆಯಿಂದ ಜಗದ ಉದ್ದಾರವಾಗಲಿ ಎಂದು ಕಾಣದ ಆ ಮಾರ್ಮಿಕ ದಿವ್ಯಚೇತನನನ್ನು ಕೇಳಿಕೊಳ್ಳುತ್ತೇನೆ.
"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"
ನಿಮ್ಮೆಲ್ಲರ ಒಳಿತನ್ನು ಬಯಸುವ
~ಜಿ.ಪಿ.ಗಣಿ~
***********************************************************************************************
"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"
ನಿಮ್ಮೆಲ್ಲರ ಒಳಿತನ್ನು ಬಯಸುವ
~ಜಿ.ಪಿ.ಗಣಿ~
***********************************************************************************************
ಎಲ್ಲವನೂ ಎಲ್ಲರ ಬಳಿ ಬಿಚ್ಚಿಡಲಾಗದೆನ್ನುವುದು ಅಷ್ಟೇ ಸತ್ಯ! ಆದರೆ ಬಿಚ್ಚಿಡಲಾಗದ ಕೊರಗಿನಲ್ಲೆ ಬಿದ್ದು ಬೇಯುವುದೂ ಸಲ್ಲ!
ReplyDeleteಹೃದಯವಾಣಿಯಿದಂತೂ ದಿಟ! ಸತ್ವಯುತ ಮಾತುಗಳು ಗಣೇಶ್! ಜೊತೆಗೆ ಅಭಿನಂದನೆಗಳು ಅವಧಿಯಲಿ 'ಸಾಂತ್ವನ'ದ ಸ್ಥಾನಕ್ಕೆ!
http://avadhimag.com/?p=69824
ಚೆನಾಗಿದೆ ಸಾರ್..ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ...ಚೆನಾಗಿದೆ..ಇಷ್ಟವಾಯ್ತು..ಸುಂದರವಾದ ಚಿತ್ರವೂ ಕೂಡಾ..
ReplyDeleteಬರೆಯುತ್ತಿರಿ...
ನಮಸ್ತೆ :)
ಸವಿನೆನಪುಗಳ ಆಗಸವನ್ನು ಆನಂದದಿ ನೋಡುವಾಗ ಒಮ್ಮೊಮ್ಮೆ ಮರುಕಳಿಸುತ್ತವೆ ಸಿಹಿ - ಕಹಿಯೆಂಬ ನೆನಪುಗಳ ಮೋಡಗಳು.
ReplyDeleteತುಂಬಾ ಚೆನ್ನಾಗಿದೆ ಗಣಿ ನಿನ್ನ ' ಹೃದಯವಾಣಿ'. ಶಾರದಾಂಬೆಯ ಕೃಪಾಹಸ್ತ ಸದಾ ನಿನ್ನ ಮೇಲಿರಲೆಂದು ಹಾರೈಸುತ್ತೇನೆ ತಮ್ಮಾ.