ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, June 23, 2012

ಮುಂಜಾನೆಯ ಕುಹೂ .. ಕುಹೂ .. !!

***********************************************************************************************
           ಮುಂಜಾನೆ ಏಳುವುದೆಂದರೆ ಅದೇಕೋ ಗೊತ್ತಿಲ್ಲ, ಪುಟಾಣಿ ಮಗು ತನ್ನ ಬಳಿ ಇದ್ದ ಆಟಿಕೆಯನ್ನು ಕೇಳಿದಾಗ ಕೊಡದೇ ಇದು ನನ್ನದು -ಇದು ನನ್ನದು ,ನಾ ಯಾರಿಗೂ ಕೊಡುವುದಿಲ್ಲವೆಂದು ಮಾಡುವ ಮೊಂಡಾಟದಂತೆ ಮನವು ಮುಂಜಾನೆಯ ಅರೆನಿದ್ರೆಯನ್ನು ಬಿಟ್ಟುಕೊಡಲು ಹಿಂಜರಿಯುತಿತ್ತು .ಅದನ್ನು ಪುಸಲಾಯಿಸಿ ಹೇಗೋ ಎದ್ದು ಕಣ್ಣನ್ನು ಹೊಸಕುತ್ತ - ಮೈ-ಕೈ - ಮುರಿದು ನಿತ್ಯಕರ್ಮವೆಲ್ಲ ಮುಗಿಸಿ ಎಂದಿನಂತೆ ಮುಂಜಾನೆಯ ನಿಧಾನಗತಿಯ ಓಟ ಬೆಟ್ಟದ ಹಾದಿಯಲಿ ಸಾಗಿತ್ತು ಎಂದೂ ಕಾಣದ  ಅಚ್ಚರಿ !! ಇಂದು ಗೋಚರಿಸಲು ನನಗಾಗಿ ಕಾದಿತ್ತು !!......................................................
..........ಹೀಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ಮುದ್ದಾದ ಮರವೊಂದರಲ್ಲಿ ಕೋಗಿಲೆಯು ನನ್ನ ಕೂಗೀ-ಕೂಗೀ ಕರೆದಂತಾಯ್ತು .ಮನಸ್ಸು ಕಾಣದ ಹಾಗೆ ಕೋಗಿಲೆಯತ್ತ ಮುಖ ಮಾಡಿ ಅದರ ಕುಹೂ .. ಕುಹೂ .. ನಿನಾದವನ್ನು ಮೂಖ-ವಿಸ್ಮಯವಾಗಿ ಆಲಿಸತೊಡಗಿತ್ತು. ದೇಹವು ಮಾಯೆಯಿಂದ ರಸ್ತೆಯ ಬದಿಗೆ ಕಟ್ಟಿದ್ದ ತಡೆ -ಕಟ್ಟೆಯ ಮೇಲೆ ಆಸನವ ಹೊಂದಿತ್ತು !! ಮತ್ತದೇ ಕುಹೂ .. ಕುಹೂ .. ಎಂಬ ಗಾನಸುಧೆ ಎಡೆಬಿಡದೆ ಪ್ರತಿ ಅಂದಾಜು -  ಸೆಕೆಂಡುಗಳಿಗೊಮ್ಮೆ ಕಿವಿಯಲ್ಲಿ ಗುನುಗಿ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು
ಹಾಗೆ ಅಲ್ಲಿ -ಇಲ್ಲಿ  ಕೇವಲ   ಚಿತ್ರಪಟಗಳಲ್ಲಿ ಬಿಟ್ಟರೆ ಪಕ್ಷಿಧಾಮಗಳಲ್ಲಿ ಕಂಡ ನೆನಪು. ಆದರೆ ಸ್ವಾತಂತ್ರ್ಯದಿ ತನ ಮನ ಬಿಚ್ಚಿ ಹಾಡುವ ಗಾನ ಕುಸುಮೆಯನ್ನು ಮನಸೂರೆಗೊಂಡು ಕಣ್ತುಂಬ ನೋಡಿದ್ದು!! 
ಇದೆ ಮೊದಲು , ಅದನ್ನು  ನಂದಿಸುತ್ತಲೇ ನನ್ನ ಬಾಯಿಂದ ಕುಹೂ .. ಕುಹೂ .. ! ಎಂಬ ಮೆಲ್ಲ ದನಿಯ ಶಬ್ದ ನನಗರಿಯದೆ ಹೊರಹೊಮ್ಮತೊಡಗಿತ್ತುಆದರೆ ಏನು ವಿಷಾದವೆಂದರೆ ಸತತವಾಗಿ ಕೂಗುತಿದ್ದ ಕೋಗಿಲೆಯು ನನ್ನ ದನಿಯಿಂದ ಕೊಂಚ ಹೊತ್ತು ಸುಮ್ಮನಾಯಿತು !! :( 
   ಮತ್ತೆ ನನ್ನ ಮೆಲ್ಲ ದನಿ ಶುರುವಾಯ್ತು , ಅದಕ್ಕೆ ಪ್ರತ್ಯುತ್ತರವಾಗಿ ಕೋಗಿಲೆಯು ತನ್ನ ಇಂಪಾದ ಶಬ್ದದಿಂದ ಮಾತಿಗೆ ಕುಳಿತವರಂತೆ ನನ್ನೊಡನೆ ತನ್ನ ದನಿಯಿಂದ ಆಕರ್ಷಿಸಿತ್ತು . ಹೇಗೆ ನಮಗೆ ಹೊರ -ರಾಜ್ಯದಲ್ಲಿ ನಮ್ಮ ಮಾತೃ ಭಾಷೆಯವರು ಸಿಕ್ಕರೆ ಪಟ - ಪಟನೆ ಮಾತುಗಳು ಸಂತಸದಿಂದ ಹರಿಯತೊಡಗುತ್ತವೋ, ಹಾಗೆ ಕೋಗಿಲೆಗೆ ತನ್ನ ಭಾಷೆಯವರು ಸಿಕ್ಕರೆಂದು ನನ್ನೊಂದಿಗೆ ಮನ ಬಿಚ್ಚಿ  ಮಾತನಾಡುತಿತ್ತು. ಅಬ್ಬಾ !!  ಸಮಯದಲ್ಲಿ ಕಾಗೆಗೆ ಕೋಗಿಲೆ ದನಿ ಬಂದ ಹಾಗೆ ನನ್ನ ಮನಕೆ ಹರುಷ ತುಂಬಿ ಮನೋಲ್ಲಾಸದಿಂದ ಭೀಗುತಿತ್ತು. ಹೇಗೆ ಕಣ್ಮುಂದೆ ರತಿ ನಿಂತರೆ ಹೊರ ಲೋಕವು ಮರೆಯಾಗುವುದೋ  ರೀತಿ ಮನಕೆ ಭಾಸವಾಗುತಿತ್ತು . ಇದು ಸುಮಾರು ಇಪ್ಪತ್ತು ನಿಮಿಷಗಳು ನಡೆದಿರಬಹುದೇನೋ!! ಮುಂದೆ ಸಾಗಲು ಏಕೋ ಮನವು ಒಪ್ಪುತ್ತಲೇ ಇರಲಿಲ್ಲ . ಹೇಗೋ ಮಗುವಿಗೆ ಸಾಂತ್ವನ ಹೇಳಿ ಒಪ್ಪಿಸುವಂತೆ  ಮನವೊಲಿಸಿ ಮುಂದೆ ಸಾಗಿದೆ ... 
        ಆದರೆ ವಿಸ್ಮಯವೆಂದರೆ ನಿಧಾನಗತಿಯ ಓಟ ಕೇವಲ ನಡುಗೆಯಾಗಿ ಮಾರ್ಪಟ್ಟಿತ್ತು .ಅದರ ಜೊತೆಗೆ ನಾಯಿಯು ತನ್ನ ಕಿವಿಯನ್ನು ನೆಟ್ಟಗೆ ಮಾಡುವಂತೆ ನನ್ನ  ಕಿವಿಯು ಹಿಗ್ಗಿ ನಿಂತಿತ್ತು !!
            ಕೇವಲ ಕೋಗಿಲೆಯ ಇಂಪು -ಸೊಂಪಾದ ಗಾನಸುದೆ ಕೇಳಿ ಸಂತಸ  ಉಲ್ಬಣಗೊಂಡಿದ್ದ ಮನಕೆ ಉಳಿದ ಪಕ್ಷಿಗಳು ತಮ್ಮ ಕಂಠಸಿರಿಯಿಂದ ತಮ್ಮೆಡೆಗೆ ಆಕರ್ಷಿಸತೊಡಗಿದ್ದವು , ಚಿಲಿ -ಪಿಲಿ , ಕರ -ಕರ , ಕುಟ್ರು - ಕುಟ್ರು , ಕಾ -ಕಾ , ಕುಯ್- ಕುಯ್ , ಸಿಳ್ಳೆ ಹೊಡೆಯುವಂತೆ ,ಅಬ್ಬಾ !!  ಎಲ್ಲೋ   ಸಂಗೀತ ವಾದ್ಯಗಳ ಲೋಕಕ್ಕೆ ಕಾಲಿಟ್ಟಂತೆ ಹೃದಯ ಸ್ಪರ್ಶಿಸತೊಡಗಿತ್ತು , ಮನವು ಹಕ್ಕಿಯಂತೆ ಆಗಸದಿ ತಣ್ಣನೆಯ ಗಾಳಿಯಲಿ ತೇಲತೊಡಗಿತ್ತು .
           ಸದಾ ಆಲೋಚನೆ , ವಿಮರ್ಶನೆ , ನೋವು - ನಲಿವಿನ ಅಳಲಾಟ ಹೀಗೆ ಬದುಕಿನ ದ್ವಂದತೆಯಲ್ಲಿ ಬೇಸತ್ತಿರುವ ಮನಕೆ ನವಲೋಕವು ಕಣ್ಮುಂದೆ ಚಲನಚಿತ್ರದಂತೆ ತೋರತೊಡಗಿತ್ತು . ಕಂಡು ಕಾಣದ ಹಾಗೆ ಇದ್ದ ಕಣ್ಣುಗಳಿಗೆ ಇಂದು ಅನೇಕ ಪಕ್ಷಿಗಳು ತಮ್ಮ ಸೌಂದರ್ಯಮಯ ಗಾನದಿಂದ ತಮ್ಮೆಡೆಗೆ ನೋಡುವಂತೆ ಉದ್ರೇಕಿಸುತ್ತಿದ್ದವು !! ರಸ್ತೆಯಲ್ಲಿ ಆಗಾಗ  ಸಾಗುತಿದ್ದ ವಾಹನಗಳ ಶಬ್ದಗಳು ಕೇಳುತ್ತಲೇ ಮನಸ್ಸೇಕೋ ದೂರದರ್ಶನದ ಚಾನಲ್ ಬದಲಿಸುವಂತೆ ಹಕ್ಕಿಗಳ ಗಾನ ಲೋಕಕ್ಕೆ ಕರೆದೊಯ್ಯುತ್ತಿತ್ತು . ಕಣ್ಮುಂದೆ ಮುಂಜಾನೆಯಲ್ಲಿ ಸುಂದರ ತರುಣಿಯರ ಕಂಡು ಕಣ್ಣುಗಳು ಮಿಟಿಕಿಸದೆ ನೇರ ನೋಟದಲ್ಲಿ ದಿಟ್ಟಿಸಿ ನೋಡಲು ಆಕರ್ಷಿಸಿದ್ದವುಆದರೆ ಇಂದೇಕೋ ಪ್ರಕೃತಿ  ಸೌಂದರ್ಯದ ಮುಂದೆ ಅದು ನಿಲ್ಲಲು ಅಶಕ್ತವಾಗಿತು. ರೀತಿ ಎಂದು ನನಗೆ ಆಗಿರಲಿಲ್ಲವಲ್ಲ ಎಂದು ಬೆರಗಾಗಿ ಮೂಖ-ವಿಸ್ಮಯನಾಗಿ ಹಕ್ಕಿಗಳ ದನಿಯ ಗುಂಗಿನಲ್ಲೇ ನನ್ನನ್ನು ಮಾಯೆಯೊಂದು ತಾನು ಅಂದುಕೊಂಡ  ಹಾಗೆ  ಆಡಿಸಿತ್ತು ಅನ್ನಿಸುತ್ತದೆ !! ಹಾಗೆ ಸ್ವಲ್ಪ ದೂರದಲ್ಲಿ ನಿಬ್ಬೆರಗಾಗಿ ನಿಂತುಹೊದೆ . ದಿನವೂ ಇನ್ನು ಅಷ್ಟು ದೂರ ಹೋಗಿ ಬರಬೇಕಲ್ಲ  ಎನ್ನುತ್ತಿದ್ದ ಮನವು ,ಇಂದೇಕೋ ಹಿಂದೇಟು ಹಾಕುತಿತ್ತು ಅಷ್ಟರಲ್ಲಿ  ಕಣ್ಣಿಗೆ ಮನೆಯ ಹತ್ತಿರದ ರಸ್ತೆ ಆಗಲೇ ಕಾಣಿಸುತ್ತಿತ್ತು . ಮನಸ್ಸಿಗೆ ಮತ್ತೆ ಪೀಕಲಾಟ , ಮಗುವಿನಂತೆ ನನಗೆ ಅದು ಬೇಕು , ಹುಹ್ ಇಲ್ಲ ಅಂದರೆ ನಾನು ಬರೋಲ್ಲ ಹುಹ್- ಹುಹ್ ಎಂದು ಹಠ ಮಾಡತೊಡಗಿತ್ತು. ದಿನವೂ ಒಂದು ತಾಸು ನಡೆಸುತಿದ್ದ   ನಿಧಾನಗತಿಯ  ಓಟ ಇಂದೇಕೋ ಎರಡೂವರೆ ತಾಸು ಕಾಲ್ನಡುಗೆಯಲ್ಲಿ ಮುಗಿದಿತ್ತು .ಸಮಯ ನೋಡಿ ಅಚ್ಚರಿಯಾಗಿತ್ತು !! ಹೇಗೋ ಮನಸ್ಸೆಂಬ ಮಗುವಿಗೆ ಮತ್ತೆ ಪುಸಲಾಯಿಸಿ ಮನೆಗೆ ಹಿಂದುರುಗಿ ಬಂದೆ ............ ಬಂದವನೇ  ಲೇಖನಿ -ಹಾಳೆಯನ್ನು ಹಿಡಿದು ಮುಂಜಾನೆಯ ವಿಸ್ಮಯ ಪಯಣದ ತುಣುಕನ್ನು ನಿಮ್ಮ ಮುಂದಿರಿಸಿದೆಅನುಭವಿಸಿದ್ದನ್ನು ನನಗೆ ತೋಚಿದ ರೀತಿಯಲ್ಲಿ ಹಾಗೆ ಇಳಿಸಿದ್ದೇನೆ . ಇಷ್ಟವಾದಲ್ಲಿ ನಿಮ್ಮ ಮನಸ್ಸಿಗೆ ಒಂದು ನಗೆ ಬೀರಿ ಹಸನ್ಮುಕಿಯಾಗಿರಿ . ಏನೋ ಪರವಾಗಿಲ್ಲ ಅಂದುಕೊಂಡಲ್ಲಿ ಒಂದು ಪುಟ್ಟ ಮಗುವೊಂದು ಕಥೆ ಹೇಳಲು ಪರದಾಡುವ ಸಂದರ್ಭವ ನೆನದು ಮುಗುಳ್ನಕ್ಕು ಬಿಡಿ .
*********ಕೊನೆಯಲ್ಲಿ ಒಂದು ಸಣ್ಣ ಕಿವಿ ಮಾತು . ಮುಂಜಾನೆಯ ಹಕ್ಕಿಗಳ ಸುಮಧುರ ಗಾನಲೋಕವ ಅನುಭವಿಸಲು ನೀವೂ ಪ್ರಯತ್ನಿಸಿ.ಬರಿ ಇಯರ್ ಫೋನ್ ಹಾಕಿಕೊಂಡು ಬೆಳಗ್ಗೆ  ಮತ್ತು ಸಂಜೆಯ ವೇಳೆ  ಸುತ್ತಾಡುವ ಬದಲು   ನಿಮ್ಮ ಕಿವಿಗೂ ಪ್ರಕೃತಿ ಕೊಡುವ ಇಂಪಾದ ದನಿಯ ಕೇಳಿಸಿ ********

-@(-ಜಿ.ಪಿ.ಗಣಿ -)@-
***********************************************************************************************

6 comments:

  1. ಕೋಗಿಲೆಯಲ್ಲದಿದ್ದರೂ ಒಂದೆರಡು ಕಾಗೆಗಳ ಮುಂಜಾವ ನಿನಾದವನು ಆಲಿಸುವ ಭಾಗ್ಯ ನನ್ನದು. ನನ್ನ ಪುಟ್ಟ ಬಾಡಿಗೆಯರಮನೆಯ ಮುಂದೆರಡು ತೆಂಗಿನ ಮರ ಈ ಕೃಪೆಯನೀಯುತ್ತಿದೆ ನನಗೆ. ಜೊತೆಗೊಂದೆರಡು ಅಳಿಲು ಚಿಂವ್ ಚಿಂವ್. ಖುಷಿಕೊಡುತ್ತವೆ ನಿಮ್ಮ ಲೇಖನದಂತೆ.

    ReplyDelete
    Replies
    1. ತುಂಬಾ ಸಂತೋಷ ಪುಷ್ಪಣ್ಣ ,, ನಿಮ್ಮ ಕಿವಿಗೂ ಆ ಅನುಭವ ಕೇಳಿಸಿದಂತಾದರೆ ನನಗೆ ನಿಮ್ಮ ಮನಸ್ಸನ್ನು ಸಂತಸಗೊಳಿಸಿದ ನೆಮ್ಮದಿ :)))) ನಿಮ್ಮೆಲ್ಲರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ :))))

      Delete
  2. ಗಣಿsss..<3 ಮನಸ್ಸನ್ನು ಮಗುವಾಗಿಸುವ ಹಾಲು ಹೃದಯ ನಿನ್ನದು.. ಲೇಖನ ಓದುತ್ತಿದ್ದಂತೆ ನಿನ್ನೊಂದಿಗೇ ಚಾಮುಂಡಿ ಬೆಟ್ಟದ ಹಾದಿಯಲ್ಲಿ ಮಾತಿಗೆ ಕುಳಿತಂತೆನಿಸಿತು.. ಕವಿತೆಗಳಿಗಿಂತ ಗದ್ಯ ರಚನೆಯಲ್ಲಿ ನೀನು ಹಿಡಿತ ಸಾಧಿಸಿದ್ದೀಯ ಎನಿಸಿತು.. ತುಂಬಾ ಚೆನ್ನಾಗಿದೆ ಲೇಖನ.. ಮುಂಜಾನೆಯಲ್ಲಿ ಮಲಗಿದ್ದ ಮಗುವನ್ನು ಮುದ್ದಿಸಿ ಎಬ್ಬಿಸುವಂತೆ..:)))

    ReplyDelete
    Replies
    1. ನಿನ್ನ ಆತ್ಮೀಯತೆಗೆ ನನ್ನ ತುಂಬು ಮನದ ಧನ್ಯವಾದಗಳು ಪುಟ್ಟ :))) ನೀನು ಹೇಳಿದಂತೆ ನನಗೆ ಲೇಖನದಲ್ಲಿ ಹಿಡಿತವಿದೆ ಆದರೆ ಕವಿತೆಗಳ ಪ್ರಯತ್ನ ಏಕೆಂದರೆ ಸುಲಭವಾಗಿ ಅರ್ಥೈಸುವ ಗದ್ಯಕ್ಕೂ ತಲೆಗೆ ಕೆಲೆಸ ಕೊಟ್ಟೂ ಕೆರೆದುಕೊಳ್ಳುವ ಹಾಗೆ ಮಾಡುವ ಕವಿತೆಗಳಿಗೂ ಕೊಂಚ ವ್ಯತ್ಯಾಸ ಆದರೆ ಎರಡೂ ಅವುಗಳ ವಿಶಿಷ್ಟತೆ ಹೊಂದಿವೆ . ನಮ್ಮ ಚಲನಚಿತ್ರಗಳ ಹಾಗೆ ,,, ಸಂಪೂರ್ಣ ಚಿತ್ರಣ ಲೇಖನ ಇದ್ದ ಹಾಗೆ ಮಧ್ಯೆ ಬರುವ ಹಾಡುಗಳು ಕವಿತೆಗಳೇ ಅಲ್ಲವೆ :)))))

      Delete
  3. ಮನಸಿನ ಆಶಯ ಅತ್ಯಂತ ಹಿರಿದಾಗಿದೆ.ಕಾಳಜಿಯೂ ಅನನ್ಯವಾಗಿದೆ.

    ReplyDelete
    Replies
    1. ನಿಮ್ಮ ಅಭಿಲಾಷೆಗೆ ನನ್ನ ಮನದ ಧನ್ಯವಾದಗಳು ಸ್ವಾಮಿ :))))

      Delete