***********************************************************************************************
ವರ್ಷವೆಲ್ಲಾ ಪರದಾಡುತ್ತ...
ಮೌಲ್ಯವಿಲ್ಲದ ಅನಿಸಿಕೆಗಳಿಗೆ
ಬಲಿಯಾಗಿ/
ಸುತ್ತಲಿನ ವಾತಾವರಣಕ್ಕೆ
ಅಡಿಯಾಳಾಗಿ/
ತರಕಾರಿ ಮಾರುಕಟ್ಟೆಯೊಳಗಿನ
ವ್ಯಾಪಾರದಂತೆ ನಿತ್ಯವೂ
ನಡೆಯುತ್ತಿರುವುದು ಚೌಕಾಶಿ/
ಆದರೂ ಪ್ರಜ್ಞೆಯಿರಬೇಕಾಗಿತ್ತು...
ದೇವರ ಕಾಣಲು ಜಾತ್ರೆಯ ದಿನವೇ ಬೇಕು/
ಕಾಲ್ತುಳಿತಕ್ಕೆ ಸಿಕ್ಕಿ ನರಳುವ ಆ ಯಾತನೆ
ಯಾರಿಗೆ ತಾನೇ ಬೇಕು?
ಆದರೂ ಅದು ಸಂಪ್ರದಾಯ!
ಹಾಗಾದೆಡೆ
ದೇವರು ಬೇರೆಯ ದಿನವು ಗುಡಿಯ ತ್ಯಜಿಸುವನೇ?
ಅದು ಕೇವಲ ಜಿಜ್ಞಾಸೆ!
ಆದರೂ ಪ್ರಜ್ಞೆಯಿರಬೇಕಾಗಿತ್ತು...
ಮಂಜು ಮುಸುಕಿದೆ
ಕಾಣದ ದಾರಿಗೆ/
ನಿತ್ಯವೂ ನಡೆಯುತ್ತಿದೆ ಸ್ಪರ್ಧೆ/
ಸೂರ್ಯನ ಕಿರಣ ಬರುವತನಕ
ಕಾಯುವ ಸೈರಣೆಯಿರಲಿಲ್ಲವೆಮಗೆ!
ಆದರೂ ಪ್ರಜ್ಞೆಯಿರಬೇಕಾಗಿತ್ತು...
ವಿದ್ಯಾರ್ಥಿಗೆ ಅಂಕ ಗಳಿಕೆಯ ಒದ್ದಾಟ
ಪರೀಕ್ಷೆಯ ಹಿಂದಿನ ದಿನದಂದು!
ಅಪ್ಪನಿಗೆ ತಳಮಳ ಮಗಳ ಮದುವೆಯ
ಹಿಂದಿನ ದಿನದಂದು!
ಅಂತ್ಯವಾಗುವ ಹೊತ್ತಿಗೆ
ಎಲ್ಲವೂ ಬರುವುದು ಒಮ್ಮೆಯೇ
ನಮ್ಮ ಬಳಿ ಇಲ್ಲದಿರುವುದೊಂದೇ
ಅದು ಸಮಯ! ಅದು ಸಮಯ!
ಅದಕೆ ಪ್ರಜ್ಞೆಯಿರಬೇಕಿತ್ತು//
---ಜಿ.ಪಿ.ಗಣಿ---
***********************************************************************************************
ಪ್ರಜ್ಞೆ ಇರಬೇಕು ಎಲ್ಲರಿಗೂ ಸಮಯಾಸಮದಲ್ಲೂ.
ReplyDelete