*********************************************************************************************** ಹೂವು ನಾನು ನನಗೂ ಒಂದು ಬದುಕಿದೆ...
ಹುಟ್ಟಿ ಸಾಯುವ
ಮೂರು ದಿನದ ಈ ಬದುಕಿನಲಿ
ನನಗೂ ಇದ್ದವು ನೂರಾರು ಕನಸುಗಳು
ಬೆಳೆಯುವ ಆತುರದಲ್ಲಿ
ಉದುರಿಹೋಗುವೆನೆಂಬ
ಅರಿವಿರದೆ ಹುಡುಕುತ್ತಿದ್ದೆ ಸಂಪನ್ಮೂಲಗಳು
ಉಸಿರಾಡಲು ನಿರಂತರ ಗಾಳಿ ಬೀಸುತಿತ್ತು
ಆಸೆಯ ದಾಹಕೆ ನೀರಿನ ಹನಿ ಜಿನುಗುತ್ತಿತ್ತು
ಅರಳುವ ಮೋಹಕೆ ಸೂರ್ಯನ ಸ್ಪರ್ಶ ಸಾಕಿತ್ತು
ಕಾಣದೆ ಅವಿತಿದ್ದ ತನ್ನೊಳಗಿನ
ಯೌವ್ವನ ಮೈದಳೆದು ನಿಂತಿತ್ತು
ಜಗತ್ತಿನೆದುರು ತನ್ನ ಸೌಂದರ್ಯವ
ಪ್ರಜ್ಞೆಯಿಲ್ಲದೆ ಬೆತ್ತಲಾಗಿಸಿತ್ತು.
ಹೂವು ನಾನು ನನಗೂ ಒಂದು ಮನಸಿದೆ ...
ನನ್ನ ಕನಸಿನ ಬಣ್ಣಗಳ ಕದಡಿ ಹೋದವರೆಷ್ಟೋ
ಸಿಹಿ ನೆನಪಿನ ಮಕರಂದವ ಹೀರಿ ನಕ್ಕವರೆಷ್ಟೋ
ಕರುಳಬಳ್ಳಿಯ ಕಿತ್ತು ತಮ್ಮ ಮುಡಿಗೆ ಮೊಡೆದವರೆಷ್ಟೋ...
ಹೂವು ನಾನು ನನಗೂ ಒಂದು ನೋವಿದೆ...
ಉಸಿರಾಡುತಿದ್ದ ಗಾಳಿಯೇ ನನ್ನ ಗಂಧವ ಸವೆಯಲು ಶುರು ಮಾಡಿತ್ತು
ಬೆಚ್ಚನೆಯ ಸ್ಪರ್ಶವಿತ್ತ ಬೆಳಕೇ ನನ್ನ ಕೆಕ್ಕರಿಸಿ ನೋಡುತ್ತಿತ್ತು
ಆಸೆಯ ದಾಹವ ತೀರಿಸಲಿದ್ದ ನೀರೇ ಮೋಹದೆನ್ನ ಮನವ ಹೀರುತ್ತಿತ್ತು
ಅರಳಿ ಬಾಡುವ ಈ ಕಮಾನಿನಲ್ಲಿ
ಕಲಿತದ್ದು, ಕೊಟ್ಟದ್ದು, ಬಿಟ್ಟದ್ದು
ಯಾವುದೂ ಪರರ ಅರಿವಿಗೆ ಬಾರದ್ದು
ಅರಳುವಾಗಲ್ಹರಸಿದವರು
ಬಾಡುವಾಗಲೂ ಉಳಿದರು
ಕೊಳೆತು ಮಣ್ಣಲಿ ಮಣ್ಣಾಗಿಸಿದರು
ಗಳಿಸಿದ್ದೇನೂ ಉಳಿಸಲಾಗಲಿಲ್ಲ
ಉಳಿದದ್ದು ಒಂದೇ ಅದು ಸಾರ್ಥಕತೆಯು...
ಹೂವು ನಾನು ನನಗೂ ಒಂದು ಗರ್ವವಿದೆ...
ಅಣುವಲಿ ಅಣುವಾಗಿದ್ದೆನಗೆ
ಪ್ರಕೃತಿಯು ಆಕಾರವನಿತ್ತಿತ್ತು
ಒಳಗಿನ ಒಳಗನು ಅರಿಯದೆ
ನನ್ನನು,
ಕೊನೆಗೂ ಅಣುವಾಗಿಸಿ...ಬಿಟ್ಟಿತ್ತು.
ನಾನೇ ಪ್ರಕೃತಿಯು
ಎಂದು
ಭೀಗುವ ಸಂತಸ
ಮನದಲಿ ಮೂಡಿತ್ತು.
~ ಜಿ.ಪಿ.ಗಣಿ~
***********************************************************************************************
No comments:
Post a Comment