ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, March 4, 2014

ಕಣ್ (ನೂರು) ಕಣ್ಣೂರು ಎಕ್ಸ್ ಪ್ರೆಸ್

***********************************************************************************************
        ಇದು ಕಾಲ್ಪನಿಕ ಕತೆಯಲ್ಲ, ಕಣ್ಣಿಗೆ ಕಂಡದ್ದು ಮೆದುಳೆಂಬ ಹಾರ್ಡ್ ಡಿಸ್ಕ್ ಗೆ ಸೇವ್ ಆದದ್ದು. ಇಲ್ಲಿ ಬರುವ ಎಲ್ಲ ಪಾತ್ರಗಳು ಅವರವರದ್ದೇ ಆಗಿರುತ್ತದೆ. ಯಾವ ಹೆಸರಾಗಲಿ, ಮಣ್ಣಾಗಲಿ ಈ ಕತೆಯಲ್ಲಿ ಇರುವುದಿಲ್ಲ. ಕೇವಲ ಅವರವರ ವಯಸ್ಸಿನ ಮುಖದ ಮತ್ತು ಇಂದ್ರಿಯ ಭಾವಗಳೇ ಸಾಕ್ಷಿ. ಈ ಕತೆಗೆ ಯಾವ ನ್ಯಾಯವಾದಿಗಳ ತೀರ್ಪು ಬೇಕಿಲ್ಲ. ಓದುವಾಗ ಆಗುವ ಉದ್ರೇಕಗಳಿಗೆ ನೀವೇ ಜವಾಬ್ದಾರರು. ಇದು ಯಾವುದೇ ಕಾಮಶಾಸ್ತ್ರವಲ್ಲ, ಕೇವಲ ನೈಜ ಮತ್ತು ನೈಸರ್ಗಿಕ ಭಾವಗಳ ಒಂದು ತುಲನೆ. ಓದಲು ಬಯಸದವರು ಇಲ್ಲಿಗೇ ನಿಲ್ಲಿಸತಕ್ಕದ್ದು, ಅಕಸ್ಮಾತ್ ಮನಸು ಓದಲು ಬಯಸಿತ್ತಿರುವುದು ಎನಿಸುವುದಾದರೆ, ಓದಿ ಕುತೂಹಲವನ್ನು ಶಮನಗೊಳಿಸಿಕೊಳ್ಳತಕ್ಕದ್ದು .

    ಸಮಯ ಸುಮಾರು '೮' ಗಂಟೆ, ಮೈಸೂರಿನತ್ತ ಪ್ರಯಾಣ ಮಾಡಲು ಹೊರಟಿದ್ದು ಓಟದಲ್ಲಿ, ಮೈಸೂರಿಗಲ್ಲ! ಟಿಕೆಟ್ ಕೌಂಟರ್ನಲ್ಲಿ ಟಿಕೆಟ್ ತೆಗೆದುಕೊಳ್ಳಲು. ಕಾರಣ ನಿಗದಿತ ರೈಲು ಸಿಗದೇ ಹೋಗಬಹುದೆಂದು. ಕಣ್ಣೂರು ಎಕ್ಸ್ ಪ್ರೆಸ್ ೮:೨೦ಕ್ಕೆ ಹೊರಡಲು ಸಿದ್ದವಾಗಿ ನಿಂತಿತ್ತು. ಅಂತೂ ಸರ್ಕಸ್ ಹೊಡೆದು ಟಿಕೆಟ್ ತೆಗೆದುಕೊಂಡೆ. ರೈಲು ಹೊರಡಲು ಎರಡೇ ನಿಮಿಷ ಬಾಕಿ ಉಳಿದಿತ್ತು . ಮತ್ತೆ ಓಟ, ಓಡಿ ಓಡಿ ಸುಸ್ತಾಗಿ ಬಂದವನೇ ಸೆಕೆಂಡ್ ಕ್ಲಾಸ್ ಬೋಗಿಯತ್ತ ನಿಂತೆ.
"ಸದ್ಯ, ಇನ್ನು ಹೊರಟಿಲ್ಲ!!" ಎಂದು ನಿಟ್ಟುಸಿರು ಬಿಡುತ್ತಾ... ಬೋಗಿಯ ಒಳಗೆ ನಡೆದೆ. ನಡೆದವನೇ; ಇದ್ದ ಲಗೇಜನ್ನು ಮೇಲಿರುವ ಲಗೇಜಿನ ಕಂಪಾರ್ಟ್ಮೆಂಟ್ನಲ್ಲಿ ಇರಿಸಿ ಕುಳಿತೆ. ಎದುರು ಸೀಟಿನಲ್ಲಿ ಒಬ್ಬರು ೩೦ ವಯಸ್ಸಿನ ಹೆಂಗಸು, ಪಕ್ಕದಲ್ಲಿ ಆಕೆಯ ಬಲಕ್ಕೆ ಯಜಮಾನ, ಎಡಕ್ಕೆ ಆಕೆಯ ಅಮ್ಮ. ಅದು ಸರಿ, ಇವರ ವಿವರ ಕುಳಿತಕೂಡಲೇ ಹೇಗೆ ತಿಳಿಯಿತು? ಅಂತ ತಲೆ ಕೊರಿತಿದ್ದೀಯ!!, ನಾನು ಕೂತಾಗ ಅವರ ಸಂಭಾಷಣೆ ಜಾರಿಯಲ್ಲಿತ್ತು. ಅದಕ್ಕಾಗಿ ಪಾತ್ರಗಳ ಪರಿಚಯ ಬೇಗನೆ ಮೆದುಳಿಗೆ ತಿಳಿಯಿತು. ಇನ್ನು ನನ್ನ ಪಕ್ಕದಲ್ಲಿ ಒಬ್ಬ ೩೫ರ ಆಸುಪಾಸಿನ ಗಂಡಸು. ಅವರ ಪಕ್ಕದಲ್ಲಿ ಕೂತಿದ್ದರು ಇಬ್ಬರು ನವ ದಂಪತಿಗಳು. ಕತೆಗೆ ಮೂಲ ವಸ್ತು ಇವರೇ, "ಹೀರೋ- ಹೀರೋಇನ್" ಕೂಡ ಇವರೇ. ಸರಿಯಾಗಿ ಕಣ್ಣ್ ಬಿಟ್ಕಂಡ್ ಓದ್ಕೊಂಡ್ ಹೋಗಿ ಇಲ್ಲಿಂದ. 
      ಹುಡುಗಿ, ಕೇರಳದ ಮೂಲವೆಂದು ತೊಟ್ಟ ಸೀರೆ ಮತ್ತು ಇಟ್ಟಿದ್ದ ಹಣೆಯ ಬೊಟ್ಟು ಹೇಳುತಿತ್ತು. ಒಂದೇ ಸಮನೆ ವಟವಟ ಎಂದು ಗಂಡನೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಳು. ಅಯ್ಯೋ, ಏನು ಇವರ ಮಾತಿನ ಗೋಳು ಎಂದರೆ, ಕಿವಿಗೆ ಯಾವುದೇ ಬಾಗಿಲು ಹಾಕಿರಲಿಲ್ಲ. ಬಂದ ಗಾಳಿ ಹಾಗೆಯೇ ಕಿವಿಯ ತಮಟೆಗೆ ಬಡಿದು, ಮೆದುಳಿಗೆ ಸಂದೇಶ ರವಾನಿಸುತಿತ್ತು. ಅರ್ಧ ಮಲಯಾಳಿ ಇನ್ನರ್ಧ ಇಂಗ್ಲೀಷು ಒಟ್ಟಿನಲ್ಲಿ ಮಲವಾದ ಇಂಗ್ಲೀಷು, ಚೀ ಏನಿದು! ಮಲ್ಲು ಇಂಗ್ಲೀಷು ಕಿವಿಗೆ ಅಪ್ಪಳಿಸುತಿತ್ತು. ಪಾಪ ಇನ್ನು ಹುಡುಗು ಬುದ್ದಿ ಹೋಗಿರಲಿಲ್ಲ ಅನಿಸುತ್ತೆ. ಅವರ ಸಂಭಾಷಣೆಯ ಜಲಕ್ ಹೀಗೆ...
ಅವಳು,  "I won't show you that message, He didn't send anything".
ಅವನು, "Hey, please Chinnu, Show me. Please!!.
ಅವಳು, I'll show you in the morning!!.
ಕೆಲವು ಸೆಕೆಂಡುಗಳ ನಂತರ "Dear, take it, See what he has sent".
ಅವನು ನೋಡುತ್ತಾ, Oh!! Dear Happy Journey!!
ಅವಳು, Are you jealous!!
ಅವನು, No, It's ok. you are my sweet heart. Then a small Hug.
ನನಗೋ, ಏನಪ್ಪಾ ಈ ಜೋಡಿ! ಅಂತ ಅಂದುಕೊಂಡು ಸುತ್ತಾ ನೋಡುದ್ರೆ, ಪಕ್ಕದಲ್ಲಿ ಕೂತವರ ಗಮನ ಎಲ್ಲ ಅವರ ಕಡೆ ಸೆಳೆದುಕೊಂಡಿದ್ದರು. ಇರಲಿ, "ಇದು ಎಂತಾ ಲೋಕವಯ್ಯ" ಅಂತ ನಾನು ಲಗೇಜಿನ ಕಂಪಾರ್ಟ್ಮೆಂಟ್ ಏರಿ ತಲೆ ದಿಂಬಾಗಿ ಬ್ಯಾಗನ್ನು ಇಟ್ಟು ಮಲಗಿದೆ. ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು.

"ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ"

ಈ ಅಣ್ಣಾವ್ರ ಹಾಡು ಕೇಳುತ್ತಾ... ನಂತರ ಒಂದು ಗಾಡ ನಿದ್ರೆಯಲ್ಲಿ ಮುಳುಗಿದ್ದೆ. ಮತ್ತೆ ಎಚ್ಚರವಾಯಿತು. ಯಾರೋ ಕೈ ಅಲುಗಾಡಿಸಿ, "ಅಣ್ಣ" ಎದ್ದೇಳು!, ಹಂಗೆ ಪಕ್ಕಕ್ಕೆ ಒತ್ತು, ಎಂದ.
ನಾನು: ಬಾಸು, ಇದರ ಹೈಟು ಕಡ್ಮೆ, ಕೂರಕ್ಕೆ ಆಗಕ್ಕಿಲ್ಲ ಕಷ್ಟ ಆಯ್ತದೆ ಮುಂದೆ ಸೀಟ್ ನೋಡ್ಕೋ ಗುರುವೇ, ಅಂದರೂ ಅಲ್ಲಿಯೇ ನಿಂತ. ನನ್ನ ಮನಸ್ಸಿನಲ್ಲಿ, ಯಾಕೆ? ಎಂದು ಅವನ ಕಣ್ಣ ನೋಟ ನೋಡಿದರೆ, ಮಲ್ಲು ಜೋಡಿಯ ಕಡೆ ಕೈ ಮಾಡಿತ್ತು.
ನನ್ ಕಣ್ಣೋ,!! ಸುಮ್ನಿರಲಾರ್ದೆ ಆಕಡೆ ನೋಡ್ತು. ಸಂದರ್ಭ ಹೆಂಗಿತ್ತಂದ್ರೆ, "ರವಿಚಂದ್ರನ್-ರಂಬಾ" ಜೋಡಿ ಕಣ್ಮುಂದೆ ಬಂತು. ಇದೇನಪ್ಪ ಇದು. ಇನ್ನು ನಾನು ನಿದ್ದೆ ಮಾಡ್ತಿದ್ದೀನ? ಹೆಂಗೆ!! ಅಂತ, ನನಗೆ ಡೌಟು ಹುಟ್ಕಂತು. ಮನಸ್ಸು ಬ್ಯಾಡ ಅಂದ್ರು, ಮಂಗ ಮುಂಡೆದು ಈ ತಲೆ ಕೇಳಬೇಕಲ್ಲ, ವಯಸ್ಸು ಅಂತದ್ದೇ. ಕಣ್ಣು ಆ ಕಡೆ ನಡೀ ಅಂತಿತ್ತು. ನೋಡಲು ಅಂಜಿಕೆ. ಒಮ್ಮೆ ನೋಡಿದೆ, ಮತ್ತೊಮ್ಮೆ ಸುತ್ತಲೂ ಕಣ್ಣಾಡಿಸಿದೆ. ಆಮೇಲೆ ನಾನೇನೂ ನೋಡಿಲ್ಲ ಅನ್ನುವ ಹಾಗೆ ಕಣ್ಣ ನೋಟ ತಿರುವಿದೆ. ಮತ್ತೆ ಇದೇ ಪ್ರಯಾಸ, ಹಾಗೆ ಮಾಡುವಾಗ ಸುತ್ತ ಇದ್ದ ಒಂದಷ್ಟು ಹೊಸ ಪಾತ್ರಗಳು ಕಣ್ಣಿಗೆ ಕಂಡವು. ಸಿಂಗಲ್ ಸೀಟಲ್ಲಿ ಅಪ್ಪ ಮತ್ತು ಸುಮಾರು ೫ ವರ್ಷದ ಮಗ. ಓಡಾಡುವ ಜಾಗದಲ್ಲಿ ನಿಂತಿದ್ದ ಇಬ್ಬರು ತರುಣರು ಮತ್ತು ಮಲ್ಲು ಜೋಡಿಯ ಪಕ್ಕದಲ್ಲಿ ಮೂರ್ವರು, ಮದ್ಯ ವಯಸ್ಸು, ಮುದಿ ವಯಸ್ಸು ಮತ್ತು ಒಂದು ಹೆಂಗಸು.

 ಅಯ್ಯೋ, ಕಾಮಣ್ಣ!! ಎಲ್ಲಿದ್ದೆ ನೀನು? ಯಾಕೆ ಬಂದೆ? ಅಂತ ಬಯ್ಕೊತಾ...  ಕಣ್ಣು, ಕಣ್ಣಾ-ಮುಚ್ಚಾಲೆ ಆಟ ಆಡ್ತಾನೆ ಇತ್ತು. ಆಮೇಲೆ ಸ್ವಲ್ಪ ಸಮಯದ ನಂತರ...  ಎಲ್ಲ ಸರಿ! ಅವರಿಗೇ ಏನು ನಾಚ್ಕೆ ಇಲ್ಲ ನಾನ್ಯಾಕ್ ಗುರು ಕಣ್ಣಾ ಮುಚ್ಚಾಲೆ ಆಡ್ಕಂಡು ನೋಡ್ಬೇಕು ಅಂತ. ಎದ್ದು ಕುಳಿತುಕೊಂಡೆ. ನೋಡುದ್ರೆ ಅರ್ಧ ಮೊದಲ ರಾತ್ರಿಯ ಸಿನೆಮಾನೇ ನಡ್ದಂಗ್ ಕಣ್ಮುಂದೆ ಭಾಸವಾಗಿತ್ತು. ಮಲ್ಲು ಹುಡುಗಿ ಹುಡುಗನ ತೊಡೆಯ ಮೇಲೆ ಮಲಗಿದ್ದಳು. ಅವರಿಬ್ಬರ ಮಾತು ನಿರಂತರ ಸಾಗಿತ್ತು. ನಮ್ಮನ್ನೆಲ್ಲ ಕಡೆಗಣಿಸಿ ಅವರಿಬ್ಬರೂ ಅವರ ಲೋಕದಲ್ಲೇ ಇದ್ದರು.
ಹುಡುಗನೋ ನನ್ನ ಕಡೆಯೇ ನೋಡುತಿದ್ದ. ಹೆಂಡತಿಯ ಸೆರಗನ್ನು ಮುಚ್ಚುತ್ತಲೇ ಇದ್ದ. ಅಲ್ಲಿಯವರೆಗೂ ನಾನೇನೂ ನೋಡಿರಲಿಲ್ಲ. ಅವನು ಹಾಗೆ ಮಾಡಿದ್ದರಿಂದ ನನ್ನೊಳಗಿನ ಕಾಮಣ್ಣ ಮತ್ತೆ ಎಲ್ಲಿಂದಲೋ ಬಂದ. ಮತ್ತೆ ನಾನು ಅವನಿಗೆ ಗುರು ಮುಚ್ಕೊಂಡ್ ಹೋಗ್ತಿಯ ಸುಮ್ನೆ ಬಂದು ತೊಂದ್ರೆ ಕೊಡ್ಬೇಡ ಅಂತ ಹೇಳ್ತಾನೆ ಇದ್ದೆ, ಮುಂಡೆದು ಬತ್ತಾನೆ ಇತ್ತು. ಹಂಗೆಯ ಸುತ್ತ ಮತ್ತೊಮ್ಮೆ ಕಣ್ಣು ಮಿಕ್ಕ ಪಾತ್ರದಾರಿಗಳತ್ತ ಸಾಗಿತ್ತು. ಎಲ್ಲರಲ್ಲೂ ಅದೇ ಭಾವ. ಪಕ್ಕದಲ್ಲೇ ಕುಳಿತಿದ್ದವ, ನಿದ್ರಿಸುವ ಹಾಗೆ ನಾಟಕ ಮಾಡುತ್ತಾ ಬಲಗಡೆ ವಾಲುತ್ತ ಅವರ ಸರಸವ ನೋಡುತಿದ್ದ. ನಾನು ನೋಡುವೆನೆಂದು ಆಗಾಗ ನನ್ನೊಂದಿಗೆ ಕಣ್ಣಾ ಮುಚ್ಚಾಲೆ! ಇನ್ನು ಮುದಿ ವಯಸ್ಸಿನ ತಾತ ಬಾಯಿ ಬಿಟ್ಟುಕೊಂಡು ನೋಡುತಿದ್ದ, ಆ ಹೆಂಗಸೋ ನೋಡಿ ನಾಚಿಕೆಯಲ್ಲಿ ಸುತ್ತಲೂ ನೋಡಲಾಗದೆ ನೆಲ ನೋಡುತ್ತಿದ್ದಳು. ಸಿಂಗಲ್ ಸೀಟಿನ ಅಪ್ಪ ನನ್ನನ್ನು ನೋಡಿ ನಾನೇನು ನೋಡಿಲ್ಲ ಎನ್ನುವ ಭಾವ ಕಣ್ಣಲ್ಲಿ ತೋರಿಸುತ್ತಿದ್ದ. ಪಾಪ ಆ ೫ ವರ್ಷದ ಮಗುವಿಗೆ ಏನು ಗೊತ್ತಾಗಬೇಕು. ಅದು ಎದ್ದು ಬಂದು ನಿಂತು ನೋಡ್ತಿದ್ರೆ, ಅವನ ಅಪ್ಪ ಕರ್ದು, "ಬಾಪ್ಪ ಇಲ್ಲಿ ಕೂತ್ಕೋ, ಅಲ್ಲಿ ಹೋಗ್ಬಾರ್ದು" ಅಂತಿದ್ದ.
ಅವರಿಬ್ಬರ ಸರಸ ಸಲ್ಲಾಪದ ದೃಶ್ಯ ಹೀಗಿತ್ತು. ಒಂದಷ್ಟು ಅವರ ಹಾವ ಭಾವಗಳ ನೋಡಿ ಸಂಭಾಷಣೆಯ ಊಹಿಸಿದ್ದು.
ಅವನು ಅವಳ ಮುಖವನ್ನು ಹಿಡಿದು ಮುದ್ದಾಡುತಿದ್ದ, ನಂತರ ಅವಳು ಎದ್ದು ಕೂತಳು. ಇವನು ಅವಳ ಎದೆಯ ಮೇಲೆ ತಲೆಯನ್ನಿಟ್ಟು ಮಗುವಿನಂತೆ ಮಲಗಿದ. ಅವಳು ಮಲಗು ತಾಚಿ ಮಾಡು ಅಂತ ಅವನ ತಲೆಯನ್ನು ಸವರುತ್ತಾ ಹಣೆಗೆ ಒಂದು ಮುತ್ತಿಟ್ಟಳು. ನಂಗೋ, ಏನ್ ಗುರು ಇದು ರೀಲೋ? ರಿಯಲ್ಲೋ? ಅಂತ ದ್ವಂದ್ವ ಕಾಡ್ತಿತ್ತು. ಆದರೆ ಈಗ ಸುತ್ತ ನೋಡುವ ಆ ವಿವಿಧ ನೋಟಗಳ ಕಡೆ ಗಮನ ಹರಿಯಿತು. ಅವರೆಲ್ಲರ ಭಾವಗಳು, ಎಂತಹ ವಿಚಿತ್ರ ಅನುಭವವಿದು. ಆದರೂ ಆ ಜೋಡಿಗಳು ಯಾರ ಬಗ್ಗೆಯೂ ಕಿಂಚಿತ್ ಕೂಡ ತಲೆಕೆಡಿಸಿಕೊಳ್ಳಲಿಲ್ಲ. ಅದೇ ನನಗೆ ಕುತೂಹಲ ಮೂಡಿಸಿತ್ತು.
ಇದ್ದ ಕಾಮಣ್ಣನನ್ನು ಹೊರಗೆ ಅಟ್ಟಿಯಾಗಿತ್ತು, ಮನಸ್ಸೆಂಬ ಮತ್ತೊಬ್ಬ ಸನ್ಯಾಸಿಗೆ ಆಹ್ವಾನ ಬಂದಿತ್ತು. ಇಷ್ಟು ಹೊತ್ತು ನೋಡುತಿದ್ದ ನನ್ನ ನೋಟ ಬದಲಾಗಿತ್ತು. ಅವರಿಬ್ಬರ ನಡುವಿನ ಮಗುವಿನಂತಹ ಪ್ರೀತಿ ಕಾಣತೊಡಗಿತ್ತು. ಮೋಹದ ಬದಲಿಗೆ ವಾತ್ಸಲ್ಯ, ಪ್ರೀತಿಯ ಹೊಂದಿದ ದೃಶ್ಯಕ್ಕೆ, ಆಲೋಚನೆ ಮುನ್ನುಡಿ ಬರೆದಿತ್ತು!. ಮತ್ತೆ ಕಣ್ಣ ನೋಟ ಆಕಡೆ ಹರಿಯಿತು ಆದರೆ ಮೋಹದಿಂದಲ್ಲ, ಕಾಮದಿಂದಲೂ ಅಲ್ಲ. ಪ್ರೀತಿಯಲ್ಲಿರುವ ಆ ಪ್ರಾಪಂಚಿಕ ಅರಿವಿಲ್ಲದಿರುವಿಕೆ, ಎರಡು ಮನಸ್ಸುಗಳ ನಿರಂತರ ಸಂಭಾಷಣೆಯ ಕಡೆಗೆ. ಹೌದು!, ಇಂದು ನಮ್ಮ ಸುತ್ತಾ ಏನಾಗುತ್ತಿದೆ? ಎಲ್ಲವೂ ವ್ಯಾಪಾರೀಕರಣ, ಹೆಣ್ಣನ್ನು ಆಕರ್ಷಣೆಗೆ ಬಳಸಿಕೊಂಡು ಅವಳನ್ನು ವ್ಯಾಪಾರಕ್ಕೆ ಬಳಸಿಕೊಳ್ಳುತ್ತಾ ನೋಡುವ ನೋಟವೇ ಕಾ"ಮುಕ(ಖ)"ವಾಗಿದೆ.
ನೋಡುವ ನೋಟ ಬದಲಾಗಬೇಕು, ಮಾತನಾಡುವ ಶೈಲಿ ಬದಲಾಗಬೇಕು. ಹೆಚ್ಚಾಗಿ ನಮ್ಮೆಲ್ಲೆರ ಆಲೋಚನೆಗಳು ಶುದ್ದವಾಗಿ ಸ್ವಚ್ಚಂದವಾಗಿರಬೇಕು. ಎಲ್ಲ ವಿಚಾರಧಾರೆಯನ್ನು ಮುಕ್ತವಾಗಿ ಮಾತನಾಡುವ ಧೈರ್ಯ ಬೇಕು. ಮನೋಭಾವ ಬರಬೇಕು.
ಅದಕ್ಕೆ "ದೃಶ್ಯ ಒಂದೇ! ಭಾವ ನೂರು, ನೋಟ ಹಲವಾರು!!"
"ಇರುವುದೊಂದೇ ಕನ್ನಡಿ ಅದರೊಳಗೆ ನೂರಾರು ಕಾಣದ ಬಿಂಬಗಳು". 
ಇವೆಲ್ಲವನ್ನೂ ಸ್ನೇಹಿತನೊಡನೆ ಹಂಚಿಕೊಂಡಾಗ ಕೆಳಗಿನ ವಿಜ್ಞಾನದ ಮತ್ತೊಂದು ಜ್ಞಾನೋದಯವಾಯಿತು.    

Conservation of Energy :
"Energy can neither be created nor be destroyed, but it can be transformed into another form."
In the same way, "Thoughts can neither be created nor be destroyed, but it can be transformed into another form" as it is also an energy in the form of frequency"

***********************************************************************************************

1 comment:

  1. ಗೆಳೆಯ,

    ತಮ್ಮ ಈ ಲೇಖನ ಓದುಗರ ದೃಷ್ಟಿ ಕೋನವನ್ನೂ ಓರೆಗಿಡುತ್ತದೆ. ಜಗದ ಪರಿವೆಯೇ ಇಲ್ಲದೆ ತೆಕ್ಕೆಗೆ ಬೀಳುವ ಈಂ ಇಂತಹ ಹಲವು ಜೋಡಿಗಳು ನಗರಗಳ ಉದ್ಯಾನವನಗಳಲ್ಲಿ ಕಾಣಸಿಗುತ್ತಾರೆ. ಅದು ಆ ವಯಸಿನ ಪುಳಕ.

    ಆದರೆ, ಅದನ್ನು ಲೇಖಕ ಗಮನಿಸುತ್ತಾ ಕಾಮ ನಿಂದ ಸಂತನೆಡೆಗೆ ತಿರುಗುವ ಆಲೋಚನೆ ಇದೆ ಅಲ್ಲ ಅಲ್ಲಿಯೇ ಕಥನದ ಶ್ರೇಷ್ಠತೆ ಅಪರೂಪದ ್. ರಚನೆಯಾಗಿ ರೂಪಗೊಂಡಿದೆ.

    ನನಗೆ ಇಷ್ಟವಾದ ಮತ್ತೊಂದು ಸಂಗತಿ ಎಂದರೆ ಸರಾಗವಾದ ಆ ಶೈಲಿ.

    (ತಮ್ಮ ಬ್ಲಾಗ್ ವಾರ್ಷಿಕೋತ್ಸವದ ಈ ಶುಭ ವೇಳೆಯಲ್ಲಿ ತಮಗೆ ನನ್ನ ಕೋಟಿ ಅಭಿನಂದನೆಗಳು. ಹೀಗೆ ಬರೆಯುತ್ತಿರುವ ನಮಗಾಗಿ.

    ಸಾವಿರ ಹೃದಯಗಳನು ಬೆಸೆಯೋ ದಿವ್ಯ ಕೊಂಡಿ ಬ್ಲಾಗ್ ಲೋಕ. ಹಿರಿಯ ಕವಿಗಳಿಂದ ಕಿರಿಯ ಬರಹಗಾರ ವರೆಗೂ ದಿನ ನಿತ್ಯ ಸಂಭವಿಸುವ ನಿಶ್ಯಬ್ಧದ ಸಾಹಿತ್ಯ ಸಮ್ಮೇಳನವೇ ನಿಜ. ಇಲ್ಲದಿರೆ ಯಾವ ಗಂಗೇನಹಳ್ಳಿಯ ಪಲವಳ್ಳಿ ಮತ್ತೆ ಯಾವುದೋ ದೇಶದ ಬ್ಯಾಗಿಗೆ ಸರಸ್ವತಿ. ಇದು ದೇವರೆ ಬೆಸೆದ ಮುತ್ತಿನ ಹಾರ!

    ಇನ್ನು ನೀವು ಬರೆಯುವ ಅಕ್ಷರಗಳು ನನಗೆ ಅಯಸ್ಕಾಂತ ಅವು ಬರ ಸೆಳೆದು ಓದಿಸುತ್ತವೆ. ಬ್ಲಾಗ್ ಓದು ನನಗೆ ಅತೀವ ಮನೋ ನೆಮ್ಮದಿ ಕೊಡುವ ಕಾಯಕ.

    ನೀವು ನಿಜವಾದ ಗಣಿ. ಅಂತರಾಳದಿಂದ ಎತ್ತಿಕೊಡಿ ಚಿನ್ನ ರನ್ನಗಳನು. ಇನ್ನೂ...)

    ReplyDelete