ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, August 26, 2013

ದುಷ್ಟಸಂಹಾರ!

***********************************************************************************************
ಹೆಣ್ಣೆಂದರೆ ಮರುಗುವುದೇಕೋ
ಈ ಹುಚ್ಚು ಮನವು
ಎದೆಯಾಲನುಂಡು
ವಾತ್ಸಲ್ಯದಿ ಬೆಳೆದು
ತಪ್ಪೊಪ್ಪುಗಳ ಬದಿಗಿರಿಸಿ
ಹರಸುವ ಕೈಗಳ
ವರವೋ- ಶಾಪವೋ
ನಾ ಅರಿಯೆ!

ನೇರ ದೇಹವ
ಸೀಳಿದೆರಡು ಭಾಗದಿ
ಕಾಣದ ಹೃದಯವ
ಸರಿದೂಗಲೆಂದಿತ್ತ
ದೇವರ ನಾಕವೋ
ಅದನೂ ನಾ ತಿಳಿಯೆ!

ಯೌವ್ವನದ ಮದ ಶಿರಕ್ಕೇರಿ
ಆಕರ್ಷಣೆಯ ಅಡಿಯಾಳಾಗಿ
ಬಲಿಯಾಗಲು ಹೊರಟಿರುವ
ಜೊಲ್ಲೊತ್ತ ನಾಯಿಯೇ
ಹೇಗೆ ಹೇಳಲಿ ನಿನ್ನಂತರಂಗ
ತೊಳಲಾಟವನು
ವ್ಯಾಮೋಹದ ಗಾಳಿಯು
ಬೀಸಿದಂತಿದೆ
ನಿನ್ನ ಮನ ಹೊಕ್ಕು
ಹೊಗೆಯಾಡಿ ಉರಿದು
ಕಾಮದ ಜಮದಗ್ನಿಯ ಹೊತ್ತಿಸಿ
ಹೆಚ್ಚಿಸಿ ಮನದ ಕೌತುಕಗಳಿಗೆ
ಪುಷ್ಟಿ ನೀಡಿದಂತಿದೆ!

ತಡೆಯಿಲ್ಲದ ನಡೆಯಿಂದಾಗಿ
ಕೊರಗುತ್ತಿವೆ ಹೆಂಗರುಳುಗಳು!
ದಾನವನಾಗಿ ಮೃಗದಂತೆ
ಎರಗುವದನೇಕೆ ಕಲಿತೆ!
ಹೆತ್ತ ತಾಯ ಮಮತೆಯು
ನಿನ್ನ ಕಣ್ಣಿಗೆ ಕಾಣಲಿಲ್ಲವೇ!
ಅಕ್ಕ ತಂಗಿಯ ಪ್ರೀತಿಯು
ನಿನ್ನರಿವಿಗೆ ಬಾರಲಿಲ್ಲವೇ!

ಕಾಮಾಲೆ ಕಣ್ಣಿಗೆ
ಕಾಣುವುದೆಲ್ಲ ಹಳದಿಯಂತೆ
ಕಾಮಾಲೆ ರೋಗವು ನಿನ್ನ ಬಿಡದೆ
ನೀ ಮನುಜನಾಗುವುದಿಲ್ಲ
ಎರಡು ತೊಟ್ಟು ಹಸಿವಿಗಾಗಿ
ನರಭಕ್ಷಕನಾಗಿಹೋದೆಯಲ್ಲೋ
ನಾ ಕಾಳಿಯವತಾರ ತಾಳುವವರೆಗೂ
ನಿನ್ನಾಟಕೆ ಕೊನೆಯೇ ಇಲ್ಲ!

~ಜಿ.ಪಿ.ಗಣಿ~
***********************************************************************************************

No comments:

Post a Comment