ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, March 24, 2013

ಸೂತ್ರವಿರದ ಗಾಳಿಪಟ

***********************************************************************************************
ಮನದಲ್ಲಿ ಶಾಂತಿಯಿಲ್ಲ ,
ಬರೆಯಲು ಸ್ಪೂರ್ತಿಯಿಲ್ಲ ,
ಖಾಲಿ ಪುಟದ ಮೇಲೆ ನಿನ್ನ 
ಮುಖದ ಪಟವೂ ಕಾಣುತ್ತಿಲ್ಲ ,
ಬರಡಾಗಿದೆ ಮನವು ಇಂದು
ಕಾಣದಾಗಿದೆ ದಾರಿ ಎತ್ತ ಹೋಗಲೆಂದು ,
ಪದಗಳ ಜೊತೆ ನಡೆದಿದೆ ನಿನ್ನ ಹುಡುಕಾಟ
ನಿನ್ನಯ ನೆನಪಿನೊಂದಿಗೆ ಸಾಗಿದೆ ಸೆಣಸಾಟ ,
ಬರುವುದಾದರೆ ಬಂದು ಬಿಡು ನೀ ಪದಗಳಾಗಿ
ತೊರೆಯುವುದಾದರೆ ನೀ ತೊರೆದುಬಿಡು ಕಣ್ಣ ಹನಿಗಳಾಗಿ ,
ನಾನಿಲ್ಲದ ನೀನು
ನೀನಿಲ್ಲದ ನಾನು
ಬರೀ ಪಾತ್ರವೇನು ?
ಜೀವನದ ಪುಟವ , ಗಾಳಿಪಟವ ಮಾಡಿದೆ
ನೀನಿದ್ದ ತನಕ ಅದು ಸೂತ್ರವಿದ್ದ ಗಾಳಿಪಟ
ನಿನ್ನ ಅಗಲಿಕೆ ಇಂದು ಮಾಡಿದೆ
ಸೂತ್ರ ಕಳೆದು ಕೊಂಡ ನಿನ್ನಯ ನೆನಪಿನ ಚಿತ್ರಪಟ ,
ಗಾಳಿ ಬೀಸಿದಲ್ಲಿಗೆ ಹೋಗುವ ಹಾಗೆ
ಆಗಾಗ ಗೋತ ಹೊಡೆಯುತ್ತಲೇ ಇದೆ.
ನೆನಪಿನ ದಾರವು ಇರುವ ತನಕ
ನಿನ್ನೊಂದಿಗೆ ಸೆಣಸಾಟ ,
ಅದು ತುಂಡರಿಸಿದಾಗ
ಮತ್ತೆ ಶುರುವಾಗುವುದು
ಗಾಳಿಪಟದ ಹುಡುಕಾಟ ...!! ಹುಡುಕಾಟ... !!

~ಜಿ.ಪಿ.ಗಣಿ~

***********************************************************************************************

Friday, March 15, 2013

ಕಾಮನ್ ಸೆನ್ಸು !

***********************************************************************************************
ಬೂದಿ ಮುಚ್ಚಿದ ಕೆಂಡದಂತಿರ್ಪ 
ನೋವನ್ ಬಗೆದು, ಸುಡಲ್ 
ಎಡೆಗಯ್ದೆಡೆ, ಮೂರ್ಖ ನಾನಾಗುವೆ !
ಶಾಂತ ಮನದೊಳ್ 
ನೀರ ಹೊಯ್ಯ್ವಂತೆ 
ದುಗುಡವನ್ ಶಮನಗೊಳಿಸೆ, ಜಾಣ ನಾನಾಗುವೆ !

~ಜಿ.ಪಿ.ಗಣಿ~
***********************************************************************************************

ದೊಡ್ದತನದಲ್ಲಿ ದಡ್ಡತನ !

***********************************************************************************************
ಬುದ್ದಿ ಹೇಳುವ ಅಧಿಕಾರವಂ ಪಡೆದು 
ಕೊಂಕು ಮಾತನಾಡುವ ಜನರ ನೋಡ !
ಮಾಡುವ ಕಾಯಕವಂ ತಿದ್ದುವ ಮನವಿಲ್ಲದೆಡೆ 
ಜರಿದು ಅಣಕಿಸುವ ಉದ್ದಟತನ ನೋಡ !
ಹಿರಿತನದ ಅಹಮಿನಲಿ ಕಿರಿತನವ ತೋರಿ 
ದೊಡ್ದವನೆನುವ ದಡ್ಡನಾದ ಗತಿಯ ನೋಡೋ ಶಂಭುಲಿಂಗ !

~ಜಿ.ಪಿ.ಗಣಿ~
***********************************************************************************************

ರಾತ್ರಿ !

***********************************************************************************************
ನನ್ನ ಮನವೆಂಬ 
ಶಾಂತ ಕಡಲ ಕನ್ನಡಿಯಲಿ 
ಆಗಸದಿ ಮಿನುಗುವ ನಕ್ಷತ್ರ ಚಂದಿರರ
ತೋರಿಸುವ ಸಮಯ !
ನಿನ್ನ ಕಲ್ಪನೆಯಲಿ
ಒಲವೆಂಬ ಮೃಷ್ಟಾನ್ನವ, ಬಸೆದು 
ಹೃದಯದ ಹಸಿವ ನೀಗಿಸುವ 
ಅಮೃತಂಗಮಯ !

~ಜಿ.ಪಿ.ಗಣಿ~
***********************************************************************************************

Wednesday, March 6, 2013

ಭಾವದರಗಣಿ

***********************************************************************************************
1. ತುಮುಲ !

ನಿನ್ನ ಈ ಮೌನ 
ನನ್ನಲ್ಲಿ ಶುರುವಾಯಿತು ಬಿಗುಮಾನ !

2. ಕಣ್ಣ ಮುಚ್ಚಾಲೆ !

ನಿನ್ನ ಮರೆಯಾಗುವಿಕೆ 
ನನ್ನಲ್ಲಿ ಏನೋ ಚಡಪಡಿಕೆ !

3. ಭಾವಸ್ಪರ್ಶ !

ನಿನ್ನ ನೆನೆಪೆಂಬ ಪ್ರೀತಿಯ ಚುಂಬನ 
ನನ್ನ ಮನದೊಳಗೇಕೋ ಕಂಪನ !

4.  ಗುಳಿಗೆ !

ನಿನ್ನ ತುಟಿಯಿಂದ ಬಂದರೆ ಒಂದು ಮಾತು 
ನನಗೆ ತರಿಸುವುದು ಮತ್ತು !

5. ಹಬ್ಬ !

ನಿನ್ನ ಮುದ್ದಾದ ಒಂದು ನಗು 
ಅಂತರಂಗಕೆ ಹಬ್ಬದ ಸೊಬಗು !

6.  ಸ್ವರ್ಗ !

ನಿನ್ನಯ ನೆನೆಪಿನ ಕಲ್ಪನೆಯ ಲೋಕ 
ನನ್ನ ಜೀವಕೆ ಸಂತೃಪ್ತಿಯನೀಯುವ ಸುಂದರ ನಾಕ !

7. ಅರಗಿಣಿ !

ಮೌನದ ಲೋಕಕೆ ನೀನೆ ಚಿನ್ನದ ಗಣಿ 
ಆ ಮೌನದಿ ಮಾತನಾಡಿಸುವ ನೀನೆ ನನ್ನ ಭಾವದರಗಿಣಿ !

8. ತುಂಟಾಟ !

 ನಿನ್ನ ಸಿಡುಕು ಮೂತಿಯ ಕಾಣಲೆನೆಗೆ ಅದೆಲ್ಲಿಲ್ಲದ ಸಂತೋಷ 
ಪೀಡಿಸಿ ಪೀಡಿಸಿ ನಿನ್ನ ಮುದ್ದಾದ ಕೈಗಳಿಂದ ತಿವಿಸಿಕೊಳ್ಳಲು ಆಹಾ ಎಂತಸ ಉಲ್ಲಾಸ !

9. ತ್ಯಾಗಮಯ ಪ್ರೀತಿ !

ನಿನ್ನೊಡನೆ ಪಂದ್ಯ ಕಟ್ಟುವ ಆಸೆ 
ಪಂದ್ಯದಲ್ಲಿ ಸೋತು ನಿನ್ನ ಗೆಲ್ಲುವ ಮಹದಾಸೆ !

10. ಮುಗ್ದತೆ !

ನಿನ್ನ ಮುದ್ದಾದ ಚಂದಿರನಂತ ಮೊಗವ ನೋಡುತ 
ನಿನ್ನ ಮಡಿಲಲ್ಲಿ ಮಗುವಂತೆ ಮಲಗುವಾಸೆ !

11. ಲೀನ !

ನಿನ್ನ ಕಣ್ಣಲಿ ನಾ ಬೆರೆತು ನನ್ನ ಕಣ್ಣಲಿ ನೀ ಬೆರೆತು 
ನಾ ನೀನಾಗುವ ಆಸೆ ನೀ ನಾನಾಗುವ ಆಸೆ !

12. ಮುದ್ದು  !

ನಿನ್ನ ಪ್ರೀತಿಯ ಕೈಗಳಿಂದ ಎನ್ನ ಗಲ್ಲವ ಚಿವುಟಿ 
ತಲೆಗೆ ಮೊಟಕಿಸಿಕೊಳ್ಳುವ ಆಸೆ !

13. ಅಮೃತ !

ನಿನ್ನ ಪ್ರೀತಿಯೆಂಬ ಪಾನಕವ ಎನಗೆ ಕುಡಿಸಿ 
ಎನ್ನೊಳಗಿನ ಮೂಕ ಭಾವದ ಗಿಣಿಗೆ ಮಾತು ಕಲಿಸಿದೆ !

14. ಸ್ಪಂದನೆ / ತಾಳ ಮೇಳ :

ನಿನ್ನ ಕಾಲ್ಗೆಜ್ಜೆಯ ಸದ್ದಿಗೆ 
ಎನ್ನ ಹೃದಯದ ಬಡಿತ ತಾಳ ಹಾಕುತಿದೆ !

***********************************************************************************************