ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, January 31, 2016

ಭವತಿ ಭಿಕ್ಷಾಂದೇಹಿ!!

***********************************************************************************************
ಗೋಡೆಗಳ ಪದರಗಳು
ಹೆಚ್ಚುತಲಿವೆ
ದಿನವೂ...
ನಾ ಮುಂದು ತಾ ಮುಂದೆಂದು
ಸರಣಿಯಲಿ ಬರಲು
ಆರ ಬರಹದ ಘಮಲನು ಸವೆಯಲಿ
ಆರ ಪಟಕೆ ಬಿಂಬವಾಗಲಿ
ಹಸಿದ ಮನದ ಹೊಟ್ಟೆಗೆ
ವಿವಿಧ ಬಗೆಯ ರುಚಿ ರುಚಿಯ
ಹಬ್ಬದೂಟ
ಅಲ್ಲಲ್ಲಿ ಚೂರು
ಉಪ್ಪು
ಹುಳಿ
ಖಾರ
ಏನು ಮಾಡಲಿ ಮರುಳೆ
ಉಂಬುವುದಕಿರುವುದು
ಕಿರಿದಾದ ಮಂದಮತಿಯ
ಉದರವು...
ಫೇಸುಬುಕ್ಕಿನ ಗೋಡೆ
ಬಾಣೆಲೆಯಲಿ
ಬಿದ್ದದಷ್ಟೋ ತಿನಿಸುಗಳಿಗೆ
ಎನ್ನ ಮೇಲಿವೆ ಸಹಜ ಮುನಿಸು
ಅಲ್ಪ ಅಣು ಗುಲಗಂಜಿ wink emoticon
ಈ ಹೃದಯ ಸ್ವೀಕರಿಸುವುದೆಲ್ಲವನು
ನಿಮ್ಮಯಾ ಸರದಿ ಬರುವವರೆಗೂ ...
ಸಂತನಿವನು ಆದರಿಸಿ ನಿಮ್ಮೊಲವಿನ
ಆದರಾತಿತ್ಯದೊಳು...
~ಜಿ.ಪಿ.ಗಣಿ~
***********************************************************************************************

Saturday, January 30, 2016

ಅವರ್ ಬಿಟ್ ಇವರ್ ಬಿಟ್ ಇನ್ಯಾರ್ ?

***********************************************************************************************
ವಾಟ್ಸಪ್ ವಡ್ರ (ವಾವ): ಅಲ್ಲ ಕಲ್ಲ , ಅದೇಟ್ ಕಿತ ಕಾಲಿ ಕುಂತಿವ್ನಿ. ಈ ಬಡ್ಡೆತದ್ ಮನ್ಸು ಅದೇನ್ ಆಟ ಆಡ್ತದೆ ಅಂತಿನಿ. ವಾಟ್ಸಪ್ನಾಗೆ whatsup ಅಂತ ಅಪ್ಪು ಡೌನು ಮ್ಯಾಲಿಂದ ಕೆಳಿಕಿ ಟಚ್ ಸ್ಕ್ರೀನಾಗೆ ಒತ್ತುತಾನೆ ಇರ್ತದೆ.
ಫೇಸ್ಬುಕ್ ಗಡ್ರ (ಫೇಗ): ಸುಮ್ಕಿರ್ಲಾ ವಡ್ರ! ನಾನು ಫೇಸ್ಬುಕ್ನಾಗೆ ಲೈಕ್, ಕಾಮೆಂಟು ಶೇರು ಎಲ್ಲಾ ಮಾಡ್ತಿವ್ನಿ. ನನ್ಮುಂದೆ ನೀ ಏನಾರ ಯೋಳು ಫೇಸ್ಬುಕ್ಕೆಯಾ ಗ್ರೇಟು.
ವಾವ: ವಾಟ್ಸಪ್ಪೆ ಗ್ರೇಟು!!
ಫೇಗ: ಫೇಸ್ಬುಕ್ಕೆ ಗ್ರೇಟು!!
ಮಾತಿನ ಕುಸ್ತಿ ಹಿಂಗೆ ನಡೀತಾ ಇತ್ತು ... ಆಮ್ಯಾಕೆ ಬ್ಯಾಬ ಮಾತ್ ಸುರು ಮಾಡ್ತನ್ ನೋಡ್ರಿ...
ಬ್ಯಾಲೆನ್ಸ್ ಬಸ್ಯ (ಬ್ಯಾಬ): ಅಲ್ಲ ಬಡ್ಡಿವೆ, ಬೆಳ್ಗೆ ಬೆಳ್ಗೆ ಹೋಗೋ ಟೈಮ್ನಾಗ್ ಅದೇನ್ರುಲ್ಲ ನಿಮ್ದು?
ವಾವ : ಅಲ್ಲಲೇ! ನೀನಾ ಹೇಳ, ವಾಟ್ಸಪ್ನಾಗೆ
ಕಾಲ್ ಮಾಡ್ಬೈದು, ಮೆಸೇಜ್ ಕಳ್ಬೈದು, ಫೋಟೋ, ವೀಡಿಯೋ, ಸಾಂಗು ಎಲ್ಲಾ ಶೇರ್ ಮಾಡ್ವೈದು ಗ್ರೂಪ್ನಾಗ್ ಕುಂತ್ ಕಾಳ್ ಹರ್ಟಿ ಹೊಡಿಬೈದು ಅಂತದ್ರಾಗೆ ಅವ ಹೇಳ್ತನ ಫೇಸ್ಬುಕ್ಕೆಯಾ ಗ್ರೇಟು ಅಂತ.
ಫೇಗ: ಸುಮ್ಕಿರ್ಲ ಕಂಡಿದನಿ ಕನ್ನ... ಫೇಸ್ಬುಕ್ನಾಗೆ ಲೈಕ್ ಕಾಮೆಂಟು ಶೇರು ಅದೇಟ್ ಜನ ಮಾಡವೆ ಅಂತ ತೋರ್ಸ್ತದೆ ಲೆಕ್ಕ ಹಾಕಂಗೆ ಇಲ್ಲ ಗೊತ್ತ ನಿಂಗೆ. ಅದೆಷ್ಟ್ ಬೇಕಾರ ಫ್ರೆಂಡ್ಸ ಮಾಡ್ಕಾಬೈದು. ವಾಟ್ಸಪ್ಪು ನಂಬರ್ ಕಳ್ದೋದ್ರ ಯಾನ ಮಾಡದು ...
ಬ್ಯಾಬ: ಅಲ್ಲ ಕಂಡ್ರುಲ್ಲ.. ಈ ಫೇಸ್ಬುಕ್ ವಾಟ್ಪ್ಸಪ್ಪು ಅಂತ ಅದ್ಯಾವ್ ಹಾಳ್ಗೆರೆ ಹೈದಾ ಕಂಡ್ ಹಿಡುದ್ನೋ.. ಕುಂತ್ರು ನಿಂತ್ರು ಬರಿ ಒತ್ತದೆಯಾ ಕ್ಯಾಮೆ... ಅವ ಎಲ್ಗೋದಾ? ಇವ ಎಲ್ಗೋದಾ ? ಇವ ಏನ್ಮಾಡ್ದ ?ಅವ ಎನ್ಮಾಡ್ದ?.. ಇವ್ಳು ಹೆಂಗವ್ಳೆ, ಅವ್ಳ ಸಂದಾಗವ್ಳೆ.. ಇದೇ ಆಗೋಯ್ತು. ನೆಮ್ದಿಯಾಗಿ ಹೋಗೋಕು ಬಿಡಕ್ಕಿಲ್ಲಾ. ನಿಮ್ದುನ್ ನೀವ್ ತೊಳ್ಕೊಳ್ಳೊದ್ ಬಿಟ್ಟು ಬ್ಯಾರ್ಯೋರ್ದೆಲ್ಲಾ ಯಾಕ್ರುಲ್ಲಾ ನಿಮ್ಗೆ... ಅದ್ ಹೋಕಳ್ಲಿ ನೇಗ್ಲಿಟ್ಕಂಡು ಉಳೋಕೋಗ್ರುಲ್ಲಾ ಅಂದ್ರೆ ಮೊಬೈಲ್ ಇಟ್ಕಂಡ್ ಒತ್ಕೋ ಕುಂತವೆ ... ತೂ ನಿಮ್ ಮೊಕಕ್ಕಿಷ್ಟು... ಉಡ್ದಾರಾ ಗಟ್ಟಿ ಇಲ್ದೆ ಇದ್ರು ಉದ್ದಾರಾ ಆದವಾ ಇವು. ಹಾಳ್ಗೆರೆವು... ಮಾಡೋ ಕ್ಯಾಮೆ ನೆಟ್ಟಗೆ ಮಾಡ್ರುಲ್ಲಾ.. ಮಂಗ್ ಬಡ್ಡಿವೆ. ಮೊಬೈಲ್ನ ಸೈಡ್ಗಿಟ್ಟು ಐಲ್ಗಳಂಗಾಡದ್ ಬುಡಿ. ಉಡ್ದಾರನು ಗಟ್ಟಯಾಯ್ತದೆ. ದೇಸನು ಉದ್ದಾರ ಆಯ್ತದೆ.
~ಜಿ.ಪಿ.ಗಣಿ~
***********************************************************************************************

Wednesday, January 20, 2016

***********************************************************************************************

ಜಡ್ಡು ದೇಹದ 
ಪೊರೆ ಕಳಚುವ ಹಬ್ಬ
ಮನೆ ಮನೆಗೆ ತೆರಳಿ
ಮುದ್ದು ಮುದ್ದು 
ಪುಟ್ಟ ಗೌರಿಯರು
ಸಂತಸದಿ ಎಳ್ಳು ಬೀರುವ ಹಬ್ಬ
ಎಳ್ಳು ಬೆಲ್ಲವ ಜಗಿದು
ಮತ್ತೆ ನವ ಕಾಂತಿಯ
ಚೈತನ್ಯವ ತರುವ ಹಬ್ಬ

~ಜಿ.ಪಿ.ಗಣಿ~
***********************************************************************************************

Friday, January 15, 2016

ಮಾಯಾ ಶಕ್ತಿ (Law of conservation of energy)

***********************************************************************************************
ಜನನದ ಬಳಿಕ ಜನಕನ
ವೀರ್ಯದ ಹೆಸರು ತಿಳಿದಿಲ್ಲ
ತನ್ನ ರೂಪವನದು ತೊರೆದು
ತನ್ನೊಳಿನ ಶಕ್ತಿಯನು
ವಿಂಗಡಿಸಿ ವಿಂಗಡಿಸಿ
ಪಂಚಭೂತಗಳನೊಂದೊಡಲ
ಸೂರಿನಡಿಯಿರಿಸಿ
ಸಂಬಂಧವನು ಬೆಸೆದಿಹುದು...
ಪಂಚೇಂದ್ರಿಯಗಳೆಂಬ
ಶಸ್ತ್ರಾಸ್ತ್ರಗಳನು
ಭ್ರಮೆಯ
ಮಾಯಾಪಂಜರದೊಳಿಟ್ಟು
ಸುಖ ದುಃಖವೆನುವ
ಕುರುಡು ಚದುರಂಗವನಾಡಿಸಿ
ಜಗದ ಶಕ್ತಿಯನು ಜಗಿಸಿ
ಚೇತನ ಶಕ್ತಿಯನು ಅಗೆಸಿ
ಒಡಲುಡುಪಿನೊಳಹೊರಗನು ಒಗೆಸಿ
ಹಿಂಡಿ ಹಿಂಡಿ ಶಕ್ತಿಯನು
ಕುಂದಿಸಿ-ಮಥಿಸಿ-ಶಪಿಸಿ-ಹರಸಿ-ಶೋಧಿಸಿ
ಪಂಚಭೂತಗಳಲೈಕ್ಯವಾಗುವ
ಮತ್ತೊಂದು ಶಕ್ತಿಗೆ ಹೆಸರಿಹುದೆ?
ಉಸಿರಿಹುದೆ?
ಆದಿ-ಅಂತ್ಯವಿಹುದೇ?

~ಜಿ.ಪಿ.ಗಣಿ~
***********************************************************************************************

Sunday, January 10, 2016

ಜ್ಞಾನೋದಯ! (Enlightenment)

***********************************************************************************************
ಕರೆಯುತಿದೆ ತನ್ನೆರಡು
ಬಾಹುಗಳಾಲಿಂಗನಕಾಗಿ
ಅರೆ ಉಸಿರನು ಪೂರ್ಣಗೊಳಿಸಲು
ಅಣು ಅಣು ಜೀವಿಯ ಬೆಸೆಯಲು
ದೇಹಾತ್ಮ ಒಂದಾಗಿ
ಪರಮಾತ್ಮನ ಜನನವಾಗಲು...

~ಜಿ.ಪಿ.ಗಣಿ~
***********************************************************************************************