***********************************************************************************************
ಜಿಟಿ ಜಿಟಿ ಮಳೆಗೆ ರಕ್ತವೆಲ್ಲವೂ
ಹೆಪ್ಪುಗಟ್ಟಿ ಹಿಡಿದ ಹಾಸಿಗೆಯಿಂದ
ಏಳುವಂತಿರಲಿಲ್ಲ ...
ನೆನೆ ನೆನೆದು ಲೊಳ ಲೊಳಲೆಂದು
ನಾಸಿಕದಿ ಹೊರಹರಿದುಬರುತ್ತಿತ್ತು
ಮೂಗಿನ ಹೊಳೆಯು...
ತಲೆ ಹಿಡಿದುಕೊಂಡಿತ್ತು
ಕಿವಿಯ ಗವಿಯೊಳಗೆ
ತಂಗಾಳಿ ಹೊಕ್ಕಿ ...
ಶಿರಕೆ ಮಂಗನ ಟೋಪಿ ಧರಿಸಿ
ಹಣೆಗೆ ಅಮೃತಾಂಜನ ಮೆತ್ತಿ
ನಸೆಯ ಮೂಸಿ ಸೀನುತ್ತ
ಬೆಚ್ಚನೆಯ ಸ್ವೆಟರನು ತೊಟ್ಟು
ಕುರಿಗಂಬಳಿಯ ಹೊದ್ದಿಕೊಂಡು
ಗುಡುಗಿನ ಶಬ್ದವ ಕೇಳಿ
ಯಮನ ಚಾವಟಿಯೇಟೆಂದು
ಕೋಣನ ಸವಾರಿಯ ಮಾಡುತಿರುವನೆಂದು
ಅಜ್ಜಿಯು ಗುಡುಗುತ್ತಿದ್ದಳು...
ಭಯದಿ ಮುದುರಿಕೊಂಡು
ಸಿಡಿಲು ಗುಡುಗಿನ ಜೋಗುಳದಿ
ಮಲಗಿದೆಡೆ ಸ್ವರ್ಗವನಪ್ಪಿದಾನಂದ!!!!
~ಜಿ.ಪಿ.ಗಣಿ~
***********************************************************************************************