ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, October 26, 2012

ಜೇನ ಹನಿಗಳು

***********************************************************************************************
ಪ್ರೀತಿಯ ಸ್ನೇಹಿತರು 
----------------------
ನಿನ್ನ ಕಂಡ ದಿನದಿಂದ ನನಗೆ ನಾಚಿಕೆ ಮತ್ತು 
ಅಂಜಿಕೆಯೆಂಬ ಸ್ನೇಹಿತರ ಪರಿಚಯವಾಯ್ತು !!

ಹುಣ್ಣಿಮೆ 
--------
ನಿನ್ನ ಮೊಗದ ಭಾವನೋಟದ ಪರಿಣಾಮ ತಿಂಗಳಿಗೊಮ್ಮೆ 
ಆಗುತ್ತಿದ್ದ ಹುಣ್ಣಿಮೆ ನಿತ್ಯವೂ ಬರುವಂತಾಯ್ತು !!

ಪ್ರೇಮಕಿರೀಟ
---------------
ನಿನ್ನ ಕೋಮಲವಾದ ತಲೆಗೂದಲನು ಹೆಣೆದು 
ನಿನ್ನ ಅಂದಕೆ ಕಿರೀಟವ ತೊಡಿಸುವಾಸೆ !!

ಹುಡುಗಾಟ
------------
ನಿನ್ನಯ ಮುದ್ದಾದ ಕಿವಿಯೋಲೆಯೊಡನೆ 
ಉಯ್ಯಾಲೆಯಾಡುತ ನಿನ್ನ ಕುಡಿನೋಟವ ಕಾಣುವಾಸೆ !!

 ಕೀಟಲೆ 
---------
ನಿನ್ನ ಪೀಡಿಸುತ ನಿನ್ನಯ ಮೊಗದಲ್ಲಿನ ಸಿಡುಕು 
ನೋಟಕೆ ಕನ್ನಡಿಯ ಹಿಡಿದು ಅಣಕಿಸುವಾಸೆ !!

ಪೂಜಾರಿ 
---------
ನಿತ್ಯವೂ ಭಕ್ತನಾಗಿ ನಿನ್ನ ಬಳಿ ಬರುತ್ತಿದ್ದ ನಾನು 
ಅದೇಕೋ ನಿನ್ನನು ಆರಾಧಿಸುವ ಪೂಜಾರಿಯಾದೆ !!

~ಜಿ.ಪಿ.ಗಣಿ~

***********************************************************************************************

Tuesday, October 23, 2012

ಮಾಯಾಸಾಗರ (ಆತ್ಮಾವಲೋಕನದಲ್ಲೊಂದು ಆತ್ಮಹತ್ಯೆ !!)

***********************************************************************************************
ಓ ಮಾಯೆಯೇ 
ದೂರ ಹೋಗೆಂದರೂ 
ಸನಿಹ ಬಂದೇಕೆ ಕಾಡುವೆ !
ಬೇಡವೆನ್ನುವ ಆಸೆಯ ಬೇಕೆಂದು
ಮನವನೇಕೆ  ಕದಡುವೆ !

ಆತ್ಮಕೆ ಸಲ್ಲದ್ದು ; ದೇಹಕೆ ಸಲ್ಲುವುದು 
ದೇಹಕೆ ಸಲ್ಲದ್ದು ; ಆತ್ಮಕೆ ಸಲ್ಲುವುದು 
ಈ ದೇಹಾತ್ಮದ ತುಮುಲಗಳಿಗೆ 
ಬಲಿಯಾಗಿ ಮರುಗುತಿರುವ 
ಎನ್ನ ಜೀವದ ಸಂಕಟವನೇನೆಂದು ಅರುಹಲಿ ನಾನು !

ಸಂಕಟವೆಂಬ ಸಾಗರದ ಅಗಲವ 
ತಿಳಿಯಲೊರಟಿಹೆನು... ನಾನು!

ಅಳೆಯಲೊರಡುತ್ತಲೇ ಮನಕೇಕೋ  
ಜೀವನ ಸಾಕೆನಿಸುವಷ್ಟು ಬೇಸರ !
ಭಾವುಕತೆಯೆಂಬ ಅಲೆಯ ಆರ್ಭಟಕೆ 
ಪ್ರಶ್ನೆಗಳು ಏಳುತ್ತಿವೆ ಸರಸರ !
ಮನಸ್ಸಿಗೆ ಎಲ್ಲದಕೂ
ಉತ್ತರ ಸಿಗಬೇಕೆಂಬ ಅವಸರ !
ಆ ಅವಸರದಿ ಆದ ಅವಘಡವ 
ಕಂಡೆನಿಸಿತು, ಬದುಕೊಂದು 
ಮೌಡ್ಯದೊಳಗಿನ ಮರ್ಮ !
ತಿಳಿಯಿತದುವೆ
ಭೇದಿಸಲಾಗದ ಕರ್ಮ  !

ಈ ಅನಂತ ಬದುಕಿನ ಅನಂತ 
ತೊಳಲಾಟದಿ ಏನನ್ನೂ ಅರ್ಥೈಸಿಕೊಳ್ಳಲಾಗದ
ಜೀವವಿದ್ದರೇನು !! ಸತ್ತರೇನು !!

~ಜಿ.ಪಿ.ಗಣಿ~

          ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಬದುಕನ್ನು ಸೂಕ್ಷ್ಮವಾಗಿ ಕಂಡು ಬಂದವರೇ ... ಆ ಸೂಕ್ಷ್ಮ ಸಮಯದಲ್ಲಿ ನಮ್ಮ ಆತ್ಮಕ್ಕೆ- ದೇಹ, ದೇಹಕ್ಕೆ - ಆತ್ಮ,  ಒಟ್ಟಾರೆ ದೇಹಾತ್ಮದ ಜೀವಕ್ಕೆ ನಾವು ಹತ್ತಿರವಾಗುವ ಹುಮ್ಮಸ್ಸು ಬರುತ್ತದೆ ಹಾಗೆಯೇ ಬದುಕಬೇಕೆನ್ನುವ ತೇಜಸ್ಸನ್ನು ಕಳೆದುಕೊಳ್ಳುವ ನಿರ್ಧಾರವೂ ಬರಬಹುದು. ಒಟ್ಟಿನಲ್ಲಿ ನಮ್ಮ ಇಚ್ಚಾಶಕ್ತಿಯ ಮೇಲೆ ನಮ್ಮ ಬದುಕು ನಿಂತಿದೆ. ಅಂತಹ ನಮ್ಮ ಇಚ್ಚಾಶಕ್ತಿಯನ್ನು ಸದಾ ಕಾಲ ಸುಬಧ್ರವಾಗಿ ಇರಿಸಿಕೊಳ್ಳೋಣ... ಬದುಕು ಇರುವತನಕ ಎದೆಗುಂದದೆ ಬದುಕೋಣ. 

"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"

***********************************************************************************************

Friday, October 12, 2012

ಪ್ರೀತಿಯ ಸವಿಮುತ್ತುಗಳು !!

***********************************************************************************************

-೧-

ಹಸಿದ ಮನಸ್ಸೆಂಬ ಮಗುವಿಗೆ ಎದೆಹಾಲನುಣಿಸಿ 
ಸಂತೈಸುವ ತಾಯಿಯಂತೆ ನಿನ್ನಯ ಸವಿ ನೆನಪುಗಳು !

-೨-

ಕಪ್ಪಾದ ನನ್ನ ಬಾಳೆಂಬ ಕೋಗಿಲೆಗೆ ಇಂಪಾದ ದನಿಯಂತೆ 
ನೀನು ಬಂದೆ ಮನಕೆ ಉಲ್ಲಾಸ ತಂದೆ !

-೩-

ನಿನ್ನಯ ನೆನಪುಗಳ ಬೇರು ಗಟ್ಟಿಯಾಗಿರುವತನಕ ಎನ್ನಯ ಮನಸ್ಸೆಂಬ ಸಸಿಯಲ್ಲಿ 

ಮಲ್ಲಿಗೆಯಾಗಿ ನೀನು ಅರಳಿ ಸುಗಂಧವ ಬೀರುತ ಎನ್ನ ಮನವ ತಣಿಸುವೆ!

~ ಜಿ. ಪಿ .ಗಣಿ ~
***********************************************************************************************