***********************************************************************************************
ನಿತ್ಯವೂ ಹರಕೆಯಿಲ್ಲದೆ
ತೀರಿಸುವ ನಿತ್ಯಕರ್ಮಕೆ
ಬಡಿದಿದೆ ಹೊಲಸು ವಾಸನೆ
ಹಲಸಾಗಿ ಮುಳ್ಳಿರುವ ಪೊರೆಕೆಯು
ಗುಡಿಸುವುದು ಕಾಣುವಾ ಕಸವನು
ನಾರಿನಾ ನಡುವಿರುವ ತೊಳೆಯ
ಜೀರ್ಣಕೆ ಕಾದಿರುವುದೀ ಉದರದೊಳಿನ
ಕರುಳ ಎಳೆಯು
ತಿನ್ನುವಾ ಬಲಗೈಗೆ ಕೀರ್ತಿ ಒಲವು
ತೊಳೆಯುವಾ ಎಡಗೈಗೆ ಮೂರ್ತಿ ಫಲವು
ಸೇವಿಸುವ ಗಾಳಿಯಲಿ ಅದೆಷ್ಟು ಸುಗಂಧವೋ
ಬಿಡುವ ಗಾಳಿಯಲಿ ಅಳೆಯಲಾರದಷ್ಟು ದುರ್ಗಂಧವೋ
ಕಸದಲಿನ ರಸವೇ
ಹೊರಸೂಸುವ ಇಂದ್ರಿಯಾನುಭವ ಕಣವು
ಕೊಳೆತು ನಾರದಿರೆ
ಹೇಸಿಗೆಯು ಬಾರದಿರೆ
ಗೊಬ್ಬರಕೆ ಅಸ್ತಿತ್ವವೆಲ್ಲಿಹುದು?
ಮೇಲು ಕೀಳೆಂಬುದು
ಬಾಹ್ಯದೊಳಿರುವುದಷ್ಟೇ ಆಂತರ್ಯದೊಳಿಲ್ಲ
ಮೇಲೆಂಬುದು ಇಂದ್ರಿಯಾಲೋಲ
ಕೀಳೆಂಬುದು ಅಂತರ್ಜಾಲ
ತಿಪ್ಪೆಯಾ ಸಗಣಿಯಲಿ ಬರುವುದು ಬೆರಣಿ
ಸುಟ್ಟು ಬಿಸಿನೀರ ತರಿಸಿರೆ ಮೆದುವಾಗುವಳು
ಚರ್ಮವೆಂಬ ತರುಣಿ
ಹೊಲದಳು ನಾರುತ ಬಿರಿಯುವಳು ತಿನ್ನಲನ್ನವನು ಧರಣಿ
ಕರ್ಮಯೋಗಿಗಳು ನಾವಿಲ್ಲಿ ನೆಪವಾಗಿ
ಕೇವಲ ಕಾಲದ ಹಸಿವಿಗಾಗಿ...
~ಜಿ.ಪಿ.ಗಣಿ~
***********************************************************************************************
***********************************************************************************************