ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, November 10, 2015

ಹುಣ್ಣಿಮೆಯ ಚಂದ್ರ

***********************************************************************************************
ಹುಣ್ಣಿಮೆಯಂದು ಕಾಣುವ ನಿನ್ನ
ಗುಂಡಾದ ಮೊಗವ ಮುದ್ದಾಡುವ ಆಸೆ
ಕಪ್ಪು ಕಣ್ಣ ಗುಡ್ಡೆಗಳು ನಿನ್ನಂದದಿ
ಬಿಳುಪಾಗುವುದನು ಎದೆಗಪ್ಪುವಾಸೆ
ಬೆಳಕಲೂ ಜ್ವಾಲೆಯಾಗಿ ಉರಿಯದೆ
ತಂಪನೀಯುವ ನಿನ್ನ ಶಾಂತತೆಗೆ
ನನ್ನನೇ ಅರ್ಪಿಸುವಾಸೆ!

~ಜಿ.ಪಿ.ಗಣಿ~
***********************************************************************************************

Sunday, November 1, 2015

***********************************************************************************************
ಹೆಣ್ಣನು
ಹಣ್ಣೆಂದು ತಿಳಿದೆಡೆ
ರುಚಿಸಬೇಕೇನಿಸುವುದು
ಹೂವೆಂದುಕೊಂಡೆಡೆ
ಮುಡಿಯಬೇಕೆನಿಸುವುದು
ತಾಯೆಂದುಕೊಂಡೆಡೆ
ಪೂಜಿಸಬೇಕೆನಿಸುವುದು
ಮಗುವೆಂದುಕೊಂಡೆಡೆ
ತಾಯಿಯ ಭಾಗ್ಯ ದೊರೆವುದು
ನೋಡುವಾ ನೋಟದಲ್ಲಡಗಿಹುದು
ಮನಗುದುರೆಯ ಲಗಾಮು...
ಹುಚ್ಚೆದ್ದು ಕುಣಿಯದಂತೆ
ಹಾಕಬೇಕು ಕಣ್ಣಪಟ್ಟಿಗಳನು
ಹರಿಹರರನು ಜಾಗೃತಗೊಳಿಸೈ
ಧರ್ಮ ಮಾರ್ಗದೆಡೆಗೆ...!
~ಜಿ.ಪಿ.ಗಣಿ~
***********************************************************************************************

Saturday, October 31, 2015

***********************************************************************************************
ಭೂಮಿಗೂ ಕತ್ತಲೆಯ ನೋವಿಹುದು
ಲೋಕವದು ಅಂತರಂಗ ದರ್ಶನ
ಮೋಡಗಳ ಪೊರೆಯುಹುದು...
ತಿಳಿಯಾದೆಡೆ
ಮುದ್ದಾದ ಚಂದಿರನ ಮೊಗವಿಹುದು
ಧೃವತಾರೆಗಳ ಮಿನುಗುವ ನೋಟವಿಹುದು
ಕಾಣದಾ ಚೇತನನ ಬ್ರಹ್ಮಾಂಡವಿಹುದು
ಅಗೋಚರದ ಅವನಾಜ್ಞೆಯಿಹುದು
ಭೂಮಿಗೂ ಬೆಳಕಿನ ನಲಿವಿಹುದು
ಬಹಿರಂಗದ ಅರಿವಿಹುದು
ಇಂದ್ರಿಯಗಳ ಸಮ್ಮಿಲವಿಹುದು
ತನ್ನ ಸೌಂದರ್ಯದ ದಿವ್ಯದರುಶನವಾಗಿಹುದು
ಹಗಲ ನಶೆಯಲಿ ಇರುಳ
ಮರೆತರಾದೀತೇ
ಇರುಳ ಕೊರಳಲಿ
ಬೆಳಕಿಗುರುಳ ತೊಡಿಸಿದರಾದೀತೇ
ಕಪ್ಪು ಅರಿವಿನ ದೀವಿಗೆ
ಬೆಳಕು ಚೈತನ್ಯಕೆ ಸಾರಿಗೆ!!
~ಜಿ.ಪಿ.ಗಣಿ~
***********************************************************************************************

Friday, October 23, 2015

ಕತ್ತಲಲಿ ಭ್ರೂಣವಾಗಿ
ಹಗಲು-ರಾತ್ರಿಯ ಜಗಕೆ ನಾ ಬಂದೆ ಮಗುವಾಗಿ
ಹುಟ್ಟಿದಾಗ ಕನ್ನಡಿಯಲಿ ನೋಡಿದರೆ
ಕಾಣುತಿತ್ತು ಬರಿ ಬೋಳು ತಲೆ!!
ಪ್ರೌಢ ಹದಿ ಹರೆಯದಿ ಕಂಡಾಗವದು
ಕರಿಗೂದಲಿನ ತಲೆ!!
ಮುದಿ ಹರೆಯದಿ ಕಂಡಾಗ
ಆಗಿತ್ತು ಅದು ಬಿಳಿಗೂದಲಿನ ತಲೆ!!
ಸಾಯುವಾ ಮುನ್ನ ಕಂಡಾಗ
ಅಲ್ಲೊಂದು ಇಲ್ಲೊಂದು ಮಾಸಿರುವ ಸಣ್ಣಗೂದಲಿನ ತಲೆ
ನಂತರ ಪರರು ನೋಡುತ್ತಿದ್ದರು
ಎನ್ನ ಪಟವನು ಕನ್ನಡಿಯಾಗಿ
ಕಾರಣ ಎನ್ನ ಆತ್ಮಶರೀರವಾಗಿತ್ತು;
ಎರಡು ಹೋಳು!

Thursday, October 15, 2015

ಅರಿವಳಿಕೆಯ ನಿದಿರೆ

***********************************************************************************************
ನಿದ್ರಾ ದೇವಿಯು
ನಿತ್ಯ ರಾತ್ರಿಯೋಳ್
ಮೆದುಳಿನೊಳ ತಲುಪುವಳ್ ... 
ಮಾಯಾಂಗಿನಿಯವಳು!
ಎನ್ನಾತ್ಮವಂ ಶರೀರದಿಂ
ಜಾರಿಪಿ ಕದ್ದೋಯ್ದು
ಮರಳಲ್ಲೇ
ಜೋಡಿಪಳೆನಗರಿವಾಗುವುದಾದೊಡಂ
ಮಾಯಾ ಅರಿವಳಿಕೆಯದುವೆನಗೆ!!
~ಜಿ.ಪಿ.ಗಣಿ~
***********************************************************************************************

Friday, October 2, 2015

ಮಾಡಿದ್ದುಣ್ಣೋ ಮಹರಾಯ (ಚಪಾತಿ ಚಪ್ ಚಪ್ )

***********************************************************************************************
ಬೆಂಡೆಯಾ ನಾರನುರಿದು
ಒಗ್ಗರಣೆಯಲಿ ಉಪ್ಪು ಖಾರವ ಬೆರೆಸಿ 
ಗೋದಿಹಿಟ್ಟಿನೊಳು ಕುಸ್ತಿಯನಾಡಿ
ಎಣ್ಣೆಯನಚ್ಚುತ ಕಾವಲಿಯಲಿ
ಗೋದಿ ಮೈಯನು ಕಾಯಿಸಿ
ಬೆಂಡೆ ಈರುಳ್ಳಿ ಸೌತೆಕಾಯಿಯಲಿ
ಮಜ್ಜನಗೈದೆಡೆ ಆ ಕ್ಷಣವೇ ಸೊಬಗು

~ಜಿ.ಪಿ.ಗಣಿ~
***********************************************************************************************

Friday, September 25, 2015

'ಸು'ವಾಸನೆ

***********************************************************************************************
ನಿತ್ಯವೂ ಹರಕೆಯಿಲ್ಲದೆ
ತೀರಿಸುವ ನಿತ್ಯಕರ್ಮಕೆ
ಬಡಿದಿದೆ ಹೊಲಸು ವಾಸನೆ
ಹಲಸಾಗಿ ಮುಳ್ಳಿರುವ ಪೊರೆಕೆಯು
ಗುಡಿಸುವುದು ಕಾಣುವಾ ಕಸವನು
ನಾರಿನಾ ನಡುವಿರುವ ತೊಳೆಯ
ಜೀರ್ಣಕೆ ಕಾದಿರುವುದೀ ಉದರದೊಳಿನ
ಕರುಳ ಎಳೆಯು
ತಿನ್ನುವಾ ಬಲಗೈಗೆ ಕೀರ್ತಿ ಒಲವು
ತೊಳೆಯುವಾ ಎಡಗೈಗೆ ಮೂರ್ತಿ ಫಲವು
ಸೇವಿಸುವ ಗಾಳಿಯಲಿ ಅದೆಷ್ಟು ಸುಗಂಧವೋ
ಬಿಡುವ ಗಾಳಿಯಲಿ ಅಳೆಯಲಾರದಷ್ಟು ದುರ್ಗಂಧವೋ
ಕಸದಲಿನ ರಸವೇ
ಹೊರಸೂಸುವ ಇಂದ್ರಿಯಾನುಭವ ಕಣವು
ಕೊಳೆತು ನಾರದಿರೆ
ಹೇಸಿಗೆಯು ಬಾರದಿರೆ
ಗೊಬ್ಬರಕೆ ಅಸ್ತಿತ್ವವೆಲ್ಲಿಹುದು?
ಮೇಲು ಕೀಳೆಂಬುದು
ಬಾಹ್ಯದೊಳಿರುವುದಷ್ಟೇ ಆಂತರ್ಯದೊಳಿಲ್ಲ
ಮೇಲೆಂಬುದು ಇಂದ್ರಿಯಾಲೋಲ
ಕೀಳೆಂಬುದು ಅಂತರ್ಜಾಲ
ತಿಪ್ಪೆಯಾ ಸಗಣಿಯಲಿ ಬರುವುದು ಬೆರಣಿ
ಸುಟ್ಟು ಬಿಸಿನೀರ ತರಿಸಿರೆ ಮೆದುವಾಗುವಳು
ಚರ್ಮವೆಂಬ ತರುಣಿ
ಹೊಲದಳು ನಾರುತ ಬಿರಿಯುವಳು ತಿನ್ನಲನ್ನವನು ಧರಣಿ
ಕರ್ಮಯೋಗಿಗಳು ನಾವಿಲ್ಲಿ ನೆಪವಾಗಿ
ಕೇವಲ ಕಾಲದ ಹಸಿವಿಗಾಗಿ...
~ಜಿ.ಪಿ.ಗಣಿ~
***********************************************************************************************