ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Showing posts with label ಲೇಖನಗಳು. Show all posts
Showing posts with label ಲೇಖನಗಳು. Show all posts

Monday, February 3, 2014

ಜಿಜ್ಞಾಸೆ


*********************************************************************************************** ಅರಿಸಿನ ಕುಂಕುಮವೆಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರದ್ದೇ ಆದ ಮೌಲ್ಯವನ್ನು ಪಡೆದುಕೊಂಡಿದೆ. ಇವು ಮದುವೆಯಾದ ಹೆಣ್ಣಿನ ಅಂದಕೆ ಭೂಷಣವು, ಸುಮಂಗಲಿಯ ಸಂಕೇತವು, ಜೊಲ್ಲು ನಾಯಿಗಳಿಗೆ ಕಾಳಿಮಾತೆಯ ಅವತಾರವೂ ಆಗಿ ಸೂಚಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮೌಲ್ಯ ನಶಿಸಿಹೋಗುತ್ತಿದೆ. ನಶಿಸಿಹೋಗುವುದಿರಲಿ ಅದನು ಹಾಕಿಕೊಳ್ಳುವ ಸಂಕೆಯೂ ಬಹಳಷ್ಟು ಕ್ಷೀಣಿಸಿ ಮಾಯವಾಗತೊಡಗಿದೆ. ಮತ್ತಷ್ಟು ಇದರಲ್ಲಿ ಮೌಡ್ಯ ಎಂದರೆ ಯಾರೋ ಹರಕೆಯೊತ್ತರೆಂದು ಕುಂಕುಮವ ಬೆಟ್ಟದ ಮೆಟ್ಟಿಲಿಗೆ ಹಾಕುತ್ತಾ ಹೋಗುವುದು. ಹಾಗಾದರೆ ಒಂದು ಪ್ರಶ್ನೆ, ಮನೆಯಲ್ಲಿ ಕುಂಕುಮ ಕೈಜಾರಿ ಕೆಳಗೆ ಬಿದ್ದರೆ ಅದು ಅಪಶಕುನ; ಅಂದಮೇಲೆ ಪಾದರಕ್ಷೆಗಳನು ಹಾಕಿ ತಿರುಗುವ ಮೆಟ್ಟಿಲಲಿ ಹಾಕುವ ಕುಂಕುಮಕೆ ಮೈಲಿಗೆಯಾಗಲಿಲ್ಲವೇ? ಒಮ್ಮೆ ಒಂದು ವಸ್ತುವಿಗೆ ಪೂಜ್ಯ ಸ್ಥಾನ ಕೊಟ್ಟಮೇಲೆ ಅದಕ್ಕೆ ಅದರ ಕಿರೀಟವ ತೊಡಿಸಲೇಬೇಕು. ಇಲ್ಲವಾದರೆ ಆ ಸ್ಥಾನಕೆ ಬೆಲೆಯಲ್ಲಿ ? ಈ ರೀತಿ ಮಾಡುವವರಿಗಿಂತ ಈ ಸಂಪ್ರದಾಯವ ನಂಬದಿರುವವರೇ ಲೇಸು. ಅರ್ಧ ಇತ್ತ ಇನ್ನರ್ಧ ಅತ್ತ ಹೀಗೆ ಎಡಬಿಡಂಗಿಯವತಾರ ಎಂದಿಗೂ ಸಲ್ಲ. ಯಾವುದೇ ವಿಷಯವಾಗಲಿ ನಂಬಿದರೆ ಪೂರ್ತಿ ನಂಬಬೇಕು, ಇಲ್ಲವಾದರೆ ಒಂದು ಅಣುವಿನಷ್ಟೂ ನಂಬಬಾರದು. ಹೇಳಿಕೆಯ ಮಾತು ಕೇಳಿ ಅದನು ನಂಬುವ ಮೊದಲು ಅದನು ಪರಾಂಬರಿಸಿ ಮುನ್ನಡೆಯುವುದು ಸಶಕ್ತ ನಾಗರೀಕನ ಕರ್ತವ್ಯವಲ್ಲವೇ?
***********************************************************************************************

Thursday, October 31, 2013

ಬೇಕು-ಬೇಡ ಎನ್ನುವ ಬೆಳೆ-ಕಳೆಯ ಕಾದಾಟ!


***********************************************************************************************
ಬದುಕೆಂಬ ಹೊಲದಲ್ಲಿ ಬೇಕು ಎನ್ನುವ ಬೆಳೆಯನ್ನು ಬಿತ್ತುತ್ತಾ ಹೋದಷ್ಟು ಬೇಡವಾದ ಸಮಸ್ಯೆಗಳು, ಕಳೆಗಳು, ಹುಳ-ಹುಪ್ಪಟೆಗಳು ಹೆಚ್ಚಾಗುತ್ತಾ ನಮ್ಮ ಬೇಕೆನ್ನುವ ಬೆಳೆಯ ನಾಶ ಮಾಡುತ್ತವೆ, ಅದಕ್ಕಾಗಿಯೆ ಆದಷ್ಟು ನಮಗೆ ಬೇಕು ಎನ್ನುವ ಆ ಬೆಳೆಯನ್ನು ಪೋಷಿಸಿ ಬೆಳೆಸುವುದು, ನಮ್ಮೆಲ್ಲರ ಹೊಣೆಯೇ ಹೊರತು ಅದಕ್ಕೆ ಪ್ರಕೃತಿ ಹೊಣೆಯಲ್ಲ. ನಮ್ಮ ಕೆಲಸ ಕೇವಲ ನಮಗೆ ಬೇಕಾದುದನ್ನು ಆರಿಸಿಕೊಳ್ಳುವುದು, ಬೆಳೆಸುವುದು ಮತ್ತು ಉಳಿಸಿಕೊಳ್ಳುವುದೇ ಹೊರತು ಪ್ರಜ್ಞಾಹೀನರಾಗಿ ಕೂರುವುದಲ್ಲ. ಹುಟ್ಟಿದಾಗ ಬರುವ ಈ ಪ್ರಜ್ಞೆ ಜ್ಞಾನವಾಗಿ ನಂತರ ಸತ್ತಾಗ ಪ್ರಜ್ಞಾಹೀನವಾಗುವುದು ಇದ್ದೇ ಇದೆ. ಸಾಯುವ ಮುಂಚೆಯೇ ಈ ಪ್ರಜ್ಞಾಹೀನರಾಗುವುದು ಎಷ್ಟು ಸರಿ! ಪ್ರಕೃತಿ ನಮ್ಮ ಹುಟ್ಟಿದಂದಿನಿಂದ ನಮಗೆ ಬೇಕಾದುದನ್ನು ಆರಿಸಿಕೊಳ್ಳಲು ಬಿಟ್ಟಿರುವಾಗ ನಮ್ಮ ಸಾವನ್ನು ಅದಕ್ಕೆ ಏಕೆ ಆಯ್ಕೆ ಮಾಡಿಕೊಳ್ಳಲು ಬಿಡಬಾರದು. ಈ ಆತ್ಮಹತ್ಯೆಯಿಂದ ಪ್ರಕೃತಿಗೆ ನೀನು ಮೋಸ ಮಾಡುತ್ತಿಲ್ಲವೇ ಓ ಮನುಜ? ಆತ್ಮಹತ್ಯೆ ಮಾಡಿಕೊಳ್ಳುವ ಹಕ್ಕು ನಿನಗಿಲ್ಲ. ಉಸಿರಲಿ ಉಸಿರಾಗಿ ಪ್ರಕೃತಿಯೇ ನಿನ್ನ ಕರೆದೊಯ್ಯುವ ತನಕ ಉಸಿರಾಡುವುದ ನೀನೆಂದಿಗೂ ಮರೆಯದಿರು. ನಿನ್ನ ಬೇಕು ಬೇಡಗಳ ನಡುವಿನ ಅಂತರವನ್ನು ಅರ್ಥ ಮಾಡಿಕೊಂಡು ಕೊನೆಯ ಉಸಿರಿರುವತನಕ ಪ್ರಕೃತಿಯು ದಯಪಾಲಿಸುವ ಬುದ್ದಿ ನೀ ಅರಿತು ಪ್ರಕೃತಿಯ ಒಳಗೊಂದು ಪ್ರಕೃತಿ ನಿನಾಗೋ ಓ ಮೂಢ!
***********************************************************************************************

Sunday, October 20, 2013

ಆಯುಧ ಪೂಜೆಯಲ್ಲೂ ಆಧುನೀಕತೆ / ಆಧುನೀಕತೆಯಲ್ಲಿ ಆಡಂಬರದ ಭಕ್ತಿ!

***********************************************************************************************
ಅಂದು ಆಯುಧ ಪೂಜೆ, ಆಗಷ್ಟೇ ನನ್ನ ದ್ವಿಚಕ್ರ ವಾಹನಕ್ಕೆ ದೃಷ್ಟಿಯಾಗಬಾರದೆಂದು ನಿಂಬೆ ಹಣ್ಣು ಮೆಣಸಿನಕಾಯಿ ಮತ್ತೆ ಎರಡು ಚಿಗುರಿದ ಬಾಳೆಕಂದನ್ನು ಕಟ್ಟಿ ಪೂಜೆ ಮಾಡಿ ಸುತ್ತಾಡಿ ಬರುವ ಎಂದು ಹೊರಟೆ.  ಸ್ನೇಹಿತನನ್ನು ಭೇಟಿ ಮಾಡುವ ಎಂದು ಅವನಿಗೆ ಕರೆ ಮಾಡಿ ಅವನ ಮನೆಗೆ ಹೋದೆ. ಮನೆ ದೇವಸ್ತಾನದ ಬಳಿಯಲ್ಲಿ ಇದ್ದದ್ದರಿಂದ ನನ್ನ ದ್ವಿಚಕ್ರ ವಾಹನವನ್ನು ಅವನ ಮನೆಯ ಮುಂದೆಯೇ ನಿಲ್ಲಿಸಿ ಇಬ್ಬರೂ ಮಾತನಾಡುತ್ತ ದೇವಸ್ತಾನ ಸೇರಿದೆವು. ಕೂರುವ ಬೆಂಚಿನ ಮೇಲೆ ಕುಳಿತು ಸ್ಕೂಲಿನ ಹಳೆ ನೆನಪುಗಳು ಈಗಿನ ಬದುಕಿನ ಪುಟಗಳ ಸ್ವಲ್ಪ ಹಿಂದೆ ತಿರುವಿ  ಹರಟೆ ಶುರು ಮಾಡಿದ್ದೆವು. ಮೂರು ದೇವಸ್ತಾನಗಳು ಇದ್ದವು ಎರಡು ದೇವಸ್ತಾನಗಳು ಬಾಗಿಲು ಮುಚ್ಚಿದ್ದವು, ಒಂದು ದೇವಸ್ತಾನದಲ್ಲಿ ಬಂದವರ ವಾಹನಗಳಿಗೆ ಪೂಜೆ ಭರದಿಂದ ಸಾಗಿತ್ತು. ಒಂದರ ನಂತರ ಮತ್ತೊಂದು. ಹಾಗೆಯೇ ಒಬ್ಬರು ಆಂಟಿ ಮತ್ತು ಅವರ ಮಗ ಒಂದು ಆಕ್ಟಿವ ಸ್ಕೂಟರ್ ಮತ್ತೊಂದು ಸೈಕಲ್ಲು, ಪೂಜೆ ಮುಗಿದಿತ್ತು. ಕಣ್ಣಲ್ಲಿ ಇವೆಲ್ಲದರ ವೀಕ್ಷಣೆಯೊಂದಿಗೆ ನಮ್ಮಿಬ್ಬರ ಮಾತುಕತೆ ಮುಂದುವರೆದಿತ್ತು.
ನನ್ನ ಸ್ನೇಹಿತ ಸುಮ್ಮನೆ ಮಾತಿಗೆ, "ಏನೋ ಆ ಆಂಟಿ ಸ್ಕೂಟರ್ ನ ದೇವಸ್ತಾನ ಸುತ್ತ ರೌಂಡ್ ಹಾಕುಸ್ತರೆ ಅನ್ಸುತ್ತೆ, ಸ್ಕೂಟರ್ಗು ಪ್ರದಕ್ಷಿಣೆ ಹಾಕುಸ್ಬೋದೇನೋ ಮಗ ಅಂತ ಹೇಳಿದ ಅಷ್ಟೇ, ಪಾರ್ಕಿಂಗ್ ಮಾಡಬಹುದು ಅಂದುಕೊಂಡರೆ ಆಂಟಿ ದೇವಸ್ತಾನದ ಸುತ್ತ ತನ್ನ ಸ್ಕೂಟರ್ ಸವಾರಿ ಮಾಡಿಯೇ ಬಿಡುವುದ, ಅದರ ಜೊತೆಗೆ ತನ್ನ ಮಗನನ್ನೂ ಕೂಡ ಹಿಂದೆ ಬಾಡಿಗಾರ್ಡ್ ನಂತೆ ಕರೆದೊಯ್ದರು. ಹರಟೆ ಹೊಡೆಯುತಿದ್ದ ನಮಗೆ ಹುಸಿ ನಗು ಶುರುವಾಗಿತ್ತು, ನಂತರ ಆಂಟಿ ಹಾಗೆಯೇ ದ್ವಿಚಕ್ರವಾಹನ ಚಲಿಸಿಕೊಂಡು ನಮ್ಮ ಮುಂದೆಯೇ ಬಂದರು, ಸ್ನೇಹಿತ ಏನೋ ಆಂಟಿ ನಕ್ತವ್ರೆ ಅಂತ ಮೊಕ್ಕೆ ಹುಗ್ಯೋಕ್ ಏನಾದ್ರೂ ಬತ್ತಾವ್ರ ಅಂದ, ನೋಡಿದ್ರೆ ಇನ್ನೆರಡು ಮುಚ್ಚಿದ್ದ ದೇವಸ್ತಾನಗಳ ಪ್ರದಕ್ಷಿಣೆ ಶುರುವಾಗಿತ್ತು, ನಮ್ಮ ಹುಸಿ ನಗು ಹೊಟ್ಟೆ ಬಿರಿಯುವ ನಗುವಾಗಿತ್ತು. ಸೈಕಲ್ಲು ಹೊಡೆಯುತಿದ್ದ ಮಗನಿಗೆ ನಮ್ಮಿಬ್ಬರ ನಗು ಅರ್ಥವಾಗಿತ್ತು, ಅಮ್ಮ ನಾನು ಹೋಗ್ತೀನಿ ಅಂತ ಸೈಕಲ್ಲನ್ನು ತಿರುಗಿಸಿ ದೌಡಾಯಿಸಲು ಶುರು ಮಾಡಿದ್ದ ಅಷ್ಟರಲ್ಲಿ ಅವರ ಅಮ್ಮ ಹೇ ಬಾರೋ ಇನ್ನೊಂದು ದೇವಸ್ತಾನ ಇದೆ ಎಂದರು, ಮಗ ಸುತ್ತ ಬಂದ್ರೆ ಸೈಕಲ್ ಪಂಕ್ಚರ್ ಆಗುತ್ತೆ ನಾನ್ ಹೋಗ್ತೀನಿ ಅಂದ, ಹೇ ಏನು ಆಗಲ್ಲ  ಸುಮ್ನೆ ಬಾರೋ ಲಾಸ್ಟ್ ರೌಂಡು ಅಂತ ಹೇಳಿ ರೌಂಡ್ ಅಂದರೆ ವಾಹನಾಸೀನರಾಗಿ ಪ್ರದಕ್ಷಿಣೆ ಮುಗಿಸಿದ್ದರು. ಇವೆಲ್ಲವೂ ಕಾಮಿಡಿ ಸರ್ಕಸ್ನಂತೆ ಭಾಸವಾಗತೊಡಗಿತ್ತು. ಆದರೂ ಏನಪ್ಪಾ ಮಾಡ್ರನ್ ದುನಿಯಾ ಎಲ್ಲವೂ ಯಂತ್ರೋಮಯ ಆಗುತ್ತಿರುವ ಈ ಕಾಲದಲ್ಲಿ ಮುಂದೊಂದು ದಿನ ಮನೆಯಲ್ಲೇ ಕುಳಿತು ರೋಬೋ ಕಳಿಸಿ ದೇವರ ಬಳಿ ಪ್ರಸಾದ ಅರ್ಚನೆ ಮಾಡಿಸಿಕೊಂಡು ಬರುವಂತೆ ಹೇಳಿ ಕಳಿಸಬಹುದು. ಇರುವ ಜೀವವ ಮರೆತು ಈ ಮನುಷ್ಯ ತಾನೇ ಸೃಷ್ಟಿಕರ್ತನಾಗಲು ಹೊರಟಿದ್ದಾನೆಯೇ  ಎನ್ನುವ ಪ್ರಶ್ನೆಯೂ ಕಾಡತೊಡಗಿತ್ತು! ಅಯ್ಯೋ ಬಾರಪ್ಪ ಇರ್ಲಿ ಪ್ರಪಂಚದ ಬಗ್ಗೆ ಯೋಚನೆ ಮಾಡ್ತಾ ಕುಂತ್ರೆ ನಾವ್ ಜೀವನವೆಲ್ಲ ಹಿಂಗೆ ಕುಂತಿರ್ತಿವಿ ಅಂತ ಅವನ ಮನೆಯ ಬಳಿ ಹೋದರೆ, ಸಣ್ಣ ಎರಡು ಬಾಳೆ ಗಿಡ ಅಂದುಕೊಂಡು ಬೀದಿ ಹಸು ನನ್ನ ದ್ವಿಚಕ್ರವಾಹನದಲ್ಲಿದ್ದ ಬಾಳೆಕಂದಿನ ಎಲೆಗಳನ್ನು ಪೂರ್ತಿ ತಿಂದು ಮುಗಿಸಿ ಹೊರಟು ಹೋಗಿತ್ತು.ಬಾಡಿ ಕೊಳೆತುಹೋಗಬೇಕಿದ್ದ ಆ ಚಿಗುರೆಲೆ ಆ ಹಸುವಿನ ಹೊಟ್ಟೆಯ ಹಸಿವ ಸ್ವಲ್ಪ ಮಟ್ಟಿಗೆ ತಣಿಸಿತಲ್ಲ ಎಂಬ ಸಂತಸವಾಯಿತು. ಹಾಗೆಯೇ ಮತ್ತೊಂದು ಪ್ರಶ್ನೆ, ಹೌದಲ್ಲವೇ!! ಈ ರೀತಿ ಎಷ್ಟೋ ಹಸಿವಿನಿಂದ ಬಳಲುವವರಿಗೆ ನಾವು ಅಲ್ಲಿ ಇಲ್ಲಿ ತೋರಿಕೆಗೆ ಆಡಂಬರಕ್ಕೆ ದುಂದು ವ್ಯಚ್ಚ ಮಾಡುತ್ತೇವೆ. ಕೈಲಾಗದ ಮನಗಳಿಗೆ ಸಹಾಯ ಹಸ್ತ ನೀಡಿದರೆ ಅವರ ಆಶಿರ್ವಾದವೇ ದೈವ ನೀಡುವ ವರವಲ್ಲವೇ!!
***********************************************************************************************

Saturday, November 10, 2012

ಹೇಳುವುದು ಸುಲಭ ಮಾಡುವುದು ಕಷ್ಟ !!

***********************************************************************************************
ನಮ್ಮ ಜೀವನವೇ ಒಂದು ರೀತಿಯ ಒಗಟಂತೆ , ಎಲ್ಲವನ್ನು ತಿಳಿಯಹೊರಟಿರುವ ನಾವು ಬುದ್ದಿ ಬಲಿತಂತೆ ಕಾಣದ ಕೈಗಳು ಮೋಸ ಮಾಡುತ್ತವೆ ಹಾಗೂ ಮಾಡಿಸುತ್ತವೆ, ಸೂತ್ರದ ಗೊಂಬೆಗಳಾಗಿ ಆಡುವ ನಾವು ಕೆಲವೊಮ್ಮೆ ಅನುಭವಕ್ಕೆ ಭಾಸವಾಗಿ, ಅಯ್ಯೋ !! ಹೀಗಾಯಿತಲ್ಲ ಎಂದು ಪರಿತಪಿಸುವುದು ಸರ್ವೇ ಸಾಮಾನ್ಯ . ಸುಮ್ಮನೆ ಹಾಗೆ ನಮ್ಮ-ನಿಮ್ಮಯ ಜೀವನದ ಪುಟಗಳ ಹಿಂದೆ ತಿರುವಿ ನೋಡಿದರೆ ಅರಿವಾಗುತ್ತದೆ . ಅನೇಕ ಬಾರಿ ತಪ್ಪು - ಒಪ್ಪುಗಳ ನಡುವೆ ಬೆಂದು ಸರಿದಾರಿಯ ಕಂಡುಕೊಂಡಿರುತ್ತೇವೆ.ನಮ್ಮ ಕಿರಿಯರು ಅಥವಾ ಸ್ನೇಹಿತರು ಆ ತಪ್ಪು ಮಾಡುವರೆಂಬ ಅರಿವಾಗುತ್ತಲೇ ; ಎಚ್ಚರಿಕೆಯ ಗಂಟೆ , ತಿಳುವಳಿಕೆಯ ಮಾತುಗಳು , ಆಹಾ ! ಏನು ಸರ್ವಜ್ಞರಂತೆ ತಿಳುವಳಿಕೆ ಕೊಟ್ಟಿದ್ದೂ ಕೊಟ್ಟಿದ್ದೆ.ಅದೇ ರೀತಿ ಕೆಲವಷ್ಟು ಅನುಭವಗಳು ನಮ್ಮ ಅರಿವಿಗೆ ಬಾರದೆ ಹೋಗುತ್ತವೆ, ಅನುಭವ ಸ್ವತಃ ಪಡೆಯದೇ ಬರಿ ಸಾಂತ್ವಾನ ಹೇಳುವ ಕಾರ್ಯ ನಮ್ಮದಾಗಿರುತ್ತದೆ.ಒಮ್ಮೆ ನಾವು ಅನುಭವವವಿಲ್ಲದಿದ್ದರೂ  ಆಂತರ್ಯದಿಂದ ಹೊರಬರುವ  ಕಾಣದ ಅಗೋಚರವಾದ ವಾತ್ಸಲ್ಯದ ಸಾಂತ್ವಾನ ಮತ್ತು ಧೈರ್ಯ  ತುಂಬುವ ಮಾತುಗಳು ಅತ್ಯುನ್ನತ ಶಕ್ತಿ ಹೊಂದಿರುತ್ತದೆ. ಅದೇ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬಾರದೇ ಮಾಡಿದ ತಪ್ಪುಗಳನ್ನೇ ಮಾಡುತ್ತಾ ದೇವರನ್ನು ಶಪಿಸುತ್ತ ಹಣೆಬರಹಕ್ಕೆ ಬೊಟ್ಟು ಮಾಡುತ್ತಾ ನಮ್ಮೊಳಗಿನ ಆತ್ಮಸ್ಥೈರ್ಯವನ್ನು ಕೊಲ್ಲುತ್ತಾ ಹೋಗುತ್ತೇವೆ .
                                 ಪರರ ಕರೆಗೆ ಓ ಗೊಡುವ ಮನವು  ತನ್ನೊಳಗಿನ ಆತ್ಮಕೆ ಕವಚ ನೀಡುವುದಿಲ್ಲವೇಕೆ ? ಅದಕ್ಕೆ ಏನೋ ಹೇಳುವುದು;  ಮನುಷ್ಯ ಸಂಗ ಜೀವಿ , ಪರಾವಲಂಬಿ ಎಂದು. ಸ್ವಯಂ ಆತ್ಮಸುಖವ ಬಿಟ್ಟು ಬಾಹ್ಯಲೋಕದ ಸುಖಕ್ಕೆ ಮಾರುಹೋಗುತ್ತಾನೆ .ಆ ಸುಖ ಕೇವಲ ನಶ್ವರ, ಅಲ್ಪ ಸುಖ ಸುಲಭವಾಗಿ ಕೈಗೆಟುಕುವಂತವು. ಆತ್ಮಸುಖ ಅನಂತ ಸುಖ ಅದು ಕೈಗೆಟುಕದೇ  ಇರುವುದು. ಸಿದ್ಧಿಸುವ ಮನವಿರಬೇಕು ಅದಕ್ಕೆ ಅಲ್ಲವೇ ಹೇಳುವುದು , ಮನಸ್ಸಿನಂತೆ ಮಹಾದೇವ  ಎಂದು ಯಾವುದೇ ಕೆಲಸ ಮಾಡುವ ಮುನ್ನ ಶುದ್ದ ಪಡಿಸಬೇಕಾದದ್ದು ನಮ್ಮ ಮನಸನ್ನು; ಪರಿಶುದ್ದ ಮನಸ್ಸಿಲ್ಲದ ಶರೀರ ಧೂಳು  ಹಿಡಿಯುವ ನಿರ್ಜೀವ ವಸ್ತುವಿನಂತೆ ; ಮನದಲ್ಲಿ ಶುದ್ದತೆ ,ಬುದ್ದಿಯಲ್ಲಿ ಸ್ಥಿರತೆ ಮತ್ತು ಜ್ಞಾನದಲ್ಲಿ ಪರಿಣತೆ ಎಲ್ಲವೂ ಇದ್ದರೆ  ನಮ್ಮ ಪ್ರತಿಯೊಂದು ಕಾರ್ಯವು ಫಲಕಾರಿಯಾಗುವುದು. ನಮ್ಮೊಳಗಿನ ಶಕ್ತಿಯನ್ನು ಸದಾ ಪರರಿಂದ ಅರಿಯುವ ಬದಲು ನಮ್ಮನ್ನು ನಾವೇ ಹುಡುಕಿ ಅರ್ಥೈಸಿಕೊಂಡರೆ ಅದಕ್ಕಿನ್ನ ಮಿಗಿಲಾದ ಭಾಗ್ಯ ಮತ್ತೇನು ? ನಾನು ಯಾರು ? ನನ್ನ ಸಾಮರ್ಥ್ಯ ಎಂತದ್ದು ?ನನ್ನ  ಆಶಯಗಳೇನು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಕೊಂಡರೆ ಬದುಕಿಗೆ ಬೇಕಾದ ಮಾರ್ಗ ಸಿಗದೇ ಇರುವುದೇ ? ಈಗಲು ಅಷ್ಟೇ ಇವೆಲ್ಲ ಹೇಳುವುದು ಎಷ್ಟು ಸುಲಭವೋ ಕಾರ್ಯಗತವಾಗಿಸಲು ಅಷ್ಟೇ  ಕಷ್ಟ ,ಆದರೆ ಅಸಾಧ್ಯವೇನಲ್ಲ !! ಅಲ್ಲವೇ? ಎಲ್ಲರಿಗೂ ಎಲ್ಲರಲ್ಲೂ ತಮ್ಮತನ ಹುಡುಕಿಕೊಂಡು ಬದುಕಬೇಕೆಂಬ ಆಸೆ-ಆಕಾಂಕ್ಷೆಗಳು ಇರುತ್ತವೆ. ಅವುಗಳನ್ನು ಇತಿ-ಮಿತಿಯಾಗಿ ಸವಿದರೇನೆ ಬದುಕು ನೋಡಲು ಚೆನ್ನ.  ಬಾಳ  ಕನ್ನಡಿಯಲ್ಲಿ  ನಮ್ಮನ್ನು ನಾವೇ ಚೆನ್ನಾಗಿ ಅರಿತು ಬದುಕ ಹಾದಿಯ ಹಸನಾಗಿಸೋಣ. ಎಲ್ಲರ ಜೊತೆಗೂಡಿ ನಲಿದು ಎಲ್ಲರಲ್ಲೂ ತಮ್ಮತನ ಹುಡುಕದೆ, ತಮ್ಮಲ್ಲಿ ತಾವು ಕೀಳರಿಮೆ ಹೊಂದದೆ ಮುಕ್ತವಾಗಿ ಸಂಭಾಷಣೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಂಡು ;  ಒಕ್ಕೊರಲಿನಿಂದ ಈ ಭೂಮಂಡಲವನ್ನು ಸ್ವರ್ಗಮಯವಾಗಿಸೋಣ!

ನಿಮ್ಮ ಒಳಿತನ್ನು ಬಯಸುವ 
~ಜಿ.ಪಿ.ಗಣಿ~
***********************************************************************************************

Thursday, November 8, 2012

ಏಕಾಂತದಿ ಮರುಗಿದ ಮನಕೊಂದು ಸಾಂತ್ವಾನ !!

***********************************************************************************************

                        ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ನೋವನ್ನು ತೀವ್ರವಾಗಿ ಅನುಭವಿಸಿ ಪಟ್ಟಪಾಡುಗಳು ಸಾಕಷ್ಟಿವೆ. ಅದನ್ನು ಯಾರ ಬಳಿ ಹೇಳಿಕೊಳ್ಳುವುದಾಗಲಿ , ಹಂಚಿಕೊಳ್ಳುವುದಾಗಲಿ ಮಾಡುವುದಿಲ್ಲ ! ಅಂತಹ ಸಮಯದಲ್ಲಿ ಬರುವ ಸ್ನೇಹಿತನೇ ಈ ಏಕಾಂತ ;  ಆ ನೋವು, ಸಂಕಟ , ವಿಮರ್ಶೆ ಎಲ್ಲವೂ ಒಮ್ಮೆಯೇ ಸುನಾಮಿಯಂತೆ ಅಪ್ಪಳಿಸುತ್ತದೆ. ಅಂತಹ ಒತ್ತಡವನ್ನು ಎದುರಿಸುವ ಶಕ್ತಿ ಇಲ್ಲದಿರೆ ಬದುಕುವುದು ಬಲು ಕಷ್ಟ! ಅಂತಹ ನೋವನ್ನು ತಕ್ಕ ಮಟ್ಟಿಗೆ ಬಿಚ್ಚಿಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ.
                   ಇಂತಹ ಸಂಕಟದ ವಿಷಯ ಬೇಕೇ ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಹೌದು ಇದು ಬೇಡವೆನಿಸಿದರೂ ಬರೆಯಲು ಯೋಚಿಸಿದ ಉದ್ದೇಶವೇನೆಂದರೆ ಕೆಲವರಿಗೆ ಈ ನೋವು ಎಂಬುದು ತಮಗೆ ಮಾತ್ರ ಸೀಮಿತವಾಗಿದೆ ಎಂದು ಅವರ ಚೌಕಟ್ಟಿನಲ್ಲಿ ಮಾತ್ರ ಯೋಚಿಸಿ ಪರರ ರೀತಿಯ ಹಾಗೆ ನಾನು ಯಾಕೆ ಇಲ್ಲ ? ನನಗು ಅವರ ಹಾಗೆ ಸೌಕರ್ಯ ಇದ್ದಿದರೆ ಈ ರೀತಿ ಆಗುತ್ತಿರಲಿಲ್ಲ ಎಂಬ ಅನೇಕ ಪ್ರಶ್ನೆಗಳು ಉದ್ಭವವಾಗುವುದು ಸರ್ವೇ ಸಾಮಾನ್ಯ. ಅಂತಹ ಎಲ್ಲ ಪ್ರಶ್ನೆಗಳಿಗೆ ಈ ಅಲ್ಪ  ಮತಿಯಿಂದ ಉತ್ತರಿಸುವ ಪ್ರಯತ್ನವಷ್ಟೇ. ಪೀಟಿಕೆಯೇ ಹೆಚ್ಚಾಯ್ತು ಮೂಲ ವಸ್ತು ಬರಲಿ ಎಂದು ಮನದಲ್ಲಿ ಕೇಳಿಕೊಳ್ಳುತ್ತಿದ್ದೀರ ? ಸರಿ ಇನ್ನು ತಡವೇಕೆ ಬನ್ನಿ ಹೋಗೋಣ ನೋವಿನ ಲೋಕಕ್ಕೆ !!

                   ನಿಮ್ಮ ಬದುಕಿನ  ಕಪ್ಪು-ಬಿಳುಪಿನ  ಚಿತ್ರ  ತೆರೆದುಕೊಳ್ಳಿ ಯಾವಾಗಲೋ ಒಮ್ಮೆ ಯಾರದರನ್ನು ಕಳೆದುಕೊಂಡಾಗ ; ಪ್ರೀತಿ ದೂರವಾದಾಗ ; ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ; ಮನೆಯಲ್ಲಿ ಬಡತನದಿಂದ ಬಳಲಿದಾಗ ;ಅನಾಥರಾಗಿ ಹುಟ್ಟಿ ಬದುಕುವಾಗ ; ಹೆಂಡತಿ ಗಂಡನ ಹಿಂಸೆಯಿಂದ ಬಳಲಿದಾಗ ; ಮುದ್ದಾದ ಹೆಂಡತಿ ಗಂಡನ  ತೊರೆದಾಗ ; ಮಕ್ಕಳು ಪೋಷಕರನ್ನು ಮರೆತಾಗ ; ಒಟ್ಟಾರೆ ನೋವಿಲ್ಲದ ಜೀವನವೇ ಇಲ್ಲ ಎಂದು ಹೇಳುತ್ತೇನೆ. ಮತ್ತಷ್ಟು ಹೇಳಲು ಹೊರಟರೆ ಸಮಸ್ಯೆಗಳ ನಿಘಂಟನ್ನು ಬರೆಯಬಹುದು. ಸದ್ಯಕ್ಕೆ ಇರಲಿ ಅಂತಹ ಕಹಿ ಘಟನೆಗಳನ್ನು ಒಮ್ಮೆ ತಿರುವಿ ನೋಡಿದಾಗ ಆ ಸಮಯದಲ್ಲಿ ಒಂದು ರೀತಿ ಹೊಟ್ಟೆಯನ್ನು ಯಾರೋ ಕಿವಿಚಿದಷ್ಟು ಧರ್ಮಸಂಕಟವಾಗುತ್ತಿದೆ, ಅಯ್ಯೋ ..!ಅಮ್ಮ ಯಾಕಿಷ್ಟು ಯಾತನೆ ಎಂದು ಚೀರಬೇಕೆಂದಿದ್ದರೂ ಚೀರದೆ ಅದನ್ನು ಹೃದಯಕ್ಕೆ ಹೊಕ್ಕಿಸಿ ನೋವಿನಿಂದ ಉಂಟಾದ ಕಿಡಿಯು  ಹೊತ್ತಿ ಉರಿಯಲಾರಂಭಿಸಿ ಜಮದಘ್ನಿಯಂತೆ ಆರ್ಭಟಿಸಿ ದಗದಗ ಶರೀರವನೆಲ್ಲ  ಉರಿದು , ಹಿಂಡಿ ಹಿಸುಕಿ ಮುದ್ದೆಯಾಗಿಸಿಬಿಡುತ್ತದೆ.ಒಮ್ಮೊಮ್ಮೆ ಬೆಟ್ಟದ ತುದಿಯಲ್ಲಿ ಕುಳಿತು ನೀಳೆತ್ತರವಾದ ಭೂಮಿಯ ನೋಡಬೇಕೆನಿಸುವಷ್ಟು ಮನಸ್ಸು ನಮಗರಿಯದಂತೆ ನಮ್ಮೊಳಗಿನ ಆಳಕ್ಕೆ ಇಳಿದುಬಿಡುತ್ತದೆ.ಸಂಕಟವೆಂಬ ಶತ್ರುವನ್ನು ಯುದ್ದದಲ್ಲಿ ಮಣಿಸಲಾಗದೆ ಮಳೆಯ ರಭಸದ ಒಡೆತಕ್ಕೆ ನಿಲ್ಲಬೇಕೆನಿಸಿಸುತ್ತದೆ. ಸಿಕ್ಕಿದ ಕಡೆಯಲ್ಲ ಗುದ್ದಬೇಕೆನಿಸುತ್ತದೆ. ತಲೆಯನ್ನು ಚಚ್ಚಿಕೊಳ್ಳುವಷ್ಟು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.ಪ್ರಪಂಚ ಏಕೆ ಹೀಗೆ ಹುಚ್ಚರಂತೆ ಬಡಿದಾಡುತ್ತಿದೆ ! ಮನದೊಳಗೆ ಯಾತನೆಯನ್ನು ಹೊರಹಾಕದೆ ಒಬ್ಬರ ಮೇಲೊಬ್ಬರು ಎಗರಾಡಿ , ಕಾದಾಡಿ ಏಕೆ ಹೀಗೆ ನಿರ್ಜೀವಿಯಾಗುತ್ತಿದ್ದಾರೆ.ಅರಿಯುವ ಮನಸ್ಸಿದ್ದರೂ ಬುದ್ದಿಗೆ ಅದೆಲ್ಲಿ ಮಂಕುಬಡಿದು ಲದ್ದಿ ಹೊಕ್ಕಿತ್ತೋ ಗೊತ್ತಿಲ್ಲ ತಾಳ್ಮೆಯಿಲ್ಲದೆ , ವಿಮರ್ಶೆ ಮಾಡದೆ , ಏನನ್ನೂ ಪರಾಂಬರಿಸದೇ ಒಂದೇ ಸಮನೆ ಯುದ್ದದ್ದಲ್ಲಿ ಅಮಾಯಕರ ಮೇಲೆ ಎರಗುವ ಪರಿಯಂತೆ ನಂಬಿಕೆ , ಪ್ರೀತಿ , ವಾತ್ಸಲ್ಯ , ಮಮತೆ ಎಂಬ ಬದುಕಿನ ಈ ಅಂಗಾಂಗಳನು ಕೊಚ್ಚಿ ಹಾಕುತ್ತಾರೆ.ಈ ಬದುಕಿನ ಸಂಬಂಧಗಳೇ ಹಾಗೆ ಬಂಧವಿಲ್ಲದೆ ಬಂಧನವಾಗಿಹೊಗಿವೆ ಎನ್ನುವಷ್ಟು ಜಿಗುಪ್ಸೆ , ವೈರಾಗ್ಯ ಬಂದುಬಿಡುತ್ತದೆ. ಹಾಗಾದರೆ ಇದಕ್ಕೆ ಕೊನೆಯಿಲ್ಲವೇ ಎಂಬ ಪ್ರಶ್ನೆ ಬರಲಾರದೆ ಇರದು !!ಇಂತಹ ಪ್ರಶ್ನೆಗೆ ಮೋಡಗಳ ವಿಭಿನ್ನ ಉದಾಹರಣೆ ಕೊಟ್ಟು ಹೇಳಬಯಸುತ್ತೇನೆ.
                   ಕೆಲವರು ಬಿಳಿ ಮೋಡದ ಹಾಗೆ ನಾನಾಕಾರದ ಮೋಡವ ತೋರಿ ಆಕರ್ಷಿಸುತ್ತಾರೆ .ಆದರೆ ಕೆಲಕಾಲ ಮಾತ್ರ  ಇದ್ದು  ಮತ್ತೆ ಅದರಾಕಾರ ಬದಲಾಯಿಸಿ ಹಾಗೆ ಗಾಳಿಯಲ್ಲಿ ಮುಂದೆ ಚಲಿಸಿಬಿಡುವಂತೆ ಹೊರಟುಹೋಗುತ್ತಾರೆ . ಇನ್ನು ಕೆಲವರು ಮುಸ್ಸಂಜೆಯಲಿ ತಣ್ಣನೆಯ  ಗಾಳಿ ಬೀಸಿ  ಜಿನುಗುವ ಮಳೆತರಿಸುವ ಮೋಡಗಳ ಹಾಗೆ ,ಮನೋಲ್ಲಾಸವ ಕೊಟ್ಟು ಹರ್ಷೋದ್ಗಾರಕ್ಕೆ ಎಡೆ ಮಾಡಿಕೊಡುತ್ತಾರೆ. ಇವೆ ಸವಿನೆನಪುಗಳಾಗುವವು .ಇನ್ನು ಕೊನೆಯ ಭಾಗದವರು ಅದೇ ಅದೇ ದಟ್ಟ ಕಾರ್ಮೋಡದಂತೆ ಚಲಿಸದೆ ಹಾಗೆ ನಮ್ಮನ್ನು ನೋಡುತ್ತಾ ಮೇಲೆ ನಿಂತು ಕಗ್ಗತ್ತಲೆಯನಿತ್ತು ಕೊನೆಗೆ ಸಿಡಿಲಾರ್ಭಟದಿಂದ ಗುಡುಗಿ ಆಲಿಕಲ್ಲಿನ ಮಳೆಯ ಬೀಳಿಸಿ ನಿಲ್ಲಲ್ಲಾರದೆ ಕೊಚ್ಚಿಕೊಂಡು ಹೋಗುವಷ್ಟು ನೋವಿತ್ತಿಬಿಡುತ್ತವೆ. ಎಲ್ಲ ಭಗವಂತನ ಲೀಲಾಮೃತವಷ್ಟೇ . ಅವನಿತ್ತರೆ  ಯಾವ ಮೋಡಗಳು  ಬೇಕಾದರೂ ಬರಬಹುದು, ಮೊದಲಿನೆರಡು ಮೋಡಗಳು ಬದುಕಿನಲ್ಲಿ ಅಷ್ಟೇನೂ ನೆನಪಿಗೆ ಉಳಿಯುವುದಿಲ್ಲ ಆದರೆ ಮೂರನೇ ಮೋಡ ಮೊದಲೇ ತನ್ನ ಸಿಡಿಲು ಗುಡುಗು ಆರ್ಭಟದಿಂದ ಎಚ್ಚರಿಸುತ್ತವೆ,ಎಚ್ಚರ ತಪ್ಪಿ ಅವುಗಳು ಭಾರಿಸುವ ಆಲಿಕಲ್ಲಿನ ಏಟಿಗೆ ಸಿಗಲಿಚ್ಚಿಸಿದರೆ ಅನುಭವಿಸುವ ಹೊಣೆ ನಾವೇ ಹೊರಬೇಕು, ಆ ಕಹಿ ನೆನಪಿನ ಗಾಯಗಳು ಮಾಸದೆ ಹಾಗೆ ಉಳಿದುಬಿಡುತ್ತದೆ.ಒಮ್ಮೊಮ್ಮೆ ಬದುಕುವುದು ಕೂಡ ಕಷ್ಟ. ಅದಕ್ಕಾಗಿಯೇ ಬದುಕಲ್ಲಿ ಸಿಗುವ ಅಲ್ಪ ಸುಖವನ್ನು ಅನುಭವಿಸುತ್ತ ಧನಾತ್ಮಕ ಚಿಂತನೆಯೊಂದಿಗೆ ಸದ್ಗುಣಗಳನ್ನು ಬೆಳೆಸಿಕೊಂಡು ಸತ್ಕಾರ್ಯಗಳನ್ನು ಮಾಡುತ್ತಾ ಅನ್ಯರಿಗೆ ಕೇಡನ್ನು ಬಯಸದೆ ಜೀವಿಸಬೇಕು . ಈಗಿನ ಕಾಲದಲ್ಲಿ ಮೋಸಕ್ಕೆ ಪ್ರತಿ ಮೋಸ , ಏಟಿಗೆ-ತಿರುಗೇಟು , ಹೀಗೆ ಮಾಡುತಿದ್ದರೆ ಪ್ರಕೃತಿಯ ನಿಯಮಕ್ಕೆ ಬಾಹಿರವಾದ ನಡವಳಿಕೆಯಾಗಿ ಅದರ ಫಲಿತಾಂಶವನ್ನು ನಾವೇ ಹೊರಬೇಕಾಗುತ್ತದೆ. ಕನಸು , ಆಸೆ , ನಿರೀಕ್ಷೆ ಇವೆ ಬದುಕಿನ ದುಃಖದ ಮೂಲ ಬುನಾದಿ ಹೊಂದಿರುವವು. ಇವುಗಳ ಪ್ರೇರಣೆ ಹೆಣ್ಣು- ಹೊನ್ನು-ಮಣ್ಣು ಈ ಮೂರರ ಮಿಶ್ರಣ ,ಇವುಗಳು ಅತಿಯಾದಾಗ ಅಥವಾ ನೆರವೇರದೇ ಇದ್ದಾಗ ಮರುಕ ಹುಟ್ಟಿಸುತ್ತವೆ, ಯಾತನೆಯನ್ನು ತರಿಸುತ್ತವೆ.ಬದುಕು ಸಾಕೆನಿಸುವಷ್ಟು ಒಡೆತ ಕೊಡುತ್ತವೆ.ಅವುಗಳ ಹಿಂದೆ ನಾವು ಬೀಳದೆ ಅವುಗಳನ್ನೇ ನಮ್ಮ ಹಿಂದೆ ಬರುವ ಹಾಗೆ ಮಾಡಿಕೊಂಡು ಬದುಕುವುದೇ ಜೀವನ! ಎಲ್ಲರಿಗು ಎಲ್ಲದರಲ್ಲೂ ಶಕ್ತಿ ,ಯುಕ್ತಿ ಲಭಿಸಲಿ ಅದಕ್ಕಿನ್ನ ಮಿಗಿಲಾಗಿ ಒಬ್ಬ ಮಾನವನಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಾನವೀಯತೆಯಿಂದ ಜಗದ ಉದ್ದಾರವಾಗಲಿ ಎಂದು ಕಾಣದ ಆ ಮಾರ್ಮಿಕ ದಿವ್ಯಚೇತನನನ್ನು ಕೇಳಿಕೊಳ್ಳುತ್ತೇನೆ.

"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"

ನಿಮ್ಮೆಲ್ಲರ ಒಳಿತನ್ನು ಬಯಸುವ
~ಜಿ.ಪಿ.ಗಣಿ~
***********************************************************************************************

Friday, August 10, 2012

ದ್ವಂದ್ವ ಮನಸ್ಸಿನ ಆಟವೇ ಬದುಕಿನ ಮೂಲ ಪಾಠ!!

***********************************************************************************************
           ಭಾವನೆಯ ಬೆನ್ನೇರಿ, ಜಿಜ್ಞಾಸೆಗೆ ಒತ್ತುಕೊಟ್ಟು ,ಈ ವಿಷಯದ ಆಳಕ್ಕಿಳಿದು ಸ್ವಲ್ಪ ಇದರ ಬೇರು ಹೇಗಿರಬಹುದೆಂಬ ಪ್ರಯತ್ನ ಮಾಡಿದೆ, ಅದೆಷ್ಟರಮಟ್ಟಿಗೆ ನಿಮಗೆ ಹಿಡಿಸುವುದೋ ನೋಡಬೇಕು!! ತಪ್ಪಿದ್ದರೆ ಕ್ಷಮಿಸಿ , ಇದು ಕೇವಲ ನನ್ನ ಮನದ ಆಂತರ್ಯದ ಮಾತುಗಳಷ್ಟೇ . ಸರಿ, ಬರೀ ಪೀಟಿಕೆಯೇ ಆಯ್ತು ಲೇಖನ ಶುರುವಾಗಲಿ ಎನ್ನುವಿರಾ ? ಬನ್ನಿ ಮತ್ತೆ ಹಿಂಗೋಗಿ ಹಾಂಗ್ ಓದಿ ಬಂದ್ಬುಡುವ !!

ಜೀವನದ ಪ್ರಮುಖ ಮತ್ತು ತಿಳಿಯಲು  ಸದಾ ಹಾತೊರೆಯುವ ವಿಷಯವೆಂದರೆ ಅದೇ ದ್ವಂದ್ವತೆ .ಪ್ರತಿಯೊಂದು ಕರ್ಮದಲ್ಲೂ ಸರಿ -ತಪ್ಪು , ಒಳಿತು -ಕೆಡುಕು ,ಸೋಲು -ಗೆಲುವು  ಹೀಗೆ ಹೇಳುತ್ತಾ ಹೋದರೆ ನಮಗೆ  ತಿಳಿಯದಂತೆ ವಿರುದ್ದ ಪದಗಳ ಜೋಡಣೆ ಮಾಡಿ ಮೂಟೆ ಕಟ್ಟಿಹಾಕಿದಂತಾಗುತ್ತದೆ ಅದು ಹಾಗೆ ಇರಲಿ ಬಿಡಿ . ಆದರೆ ಇಲ್ಲಿ ನಮಗೆ  ಕಾಡುತ್ತಿರುವ ದ್ವಿಮುಖ ಹೊಂದಿರುವ ಏಕೈಕ ವಸ್ತು ದ್ವಂದ್ವ ಅಲ್ಲವೇ ? ಒಮ್ಮೊಮ್ಮೆ ಅನಿಸಿರಬಹುದು ,ಇದು ನಮಗೆ  ದೈವ ಇತ್ತ ಶಾಪವೋ -ವರವೋ ಎಂದು . ಅರೆ ಮತ್ತೆ ಏನಿದು ವಿಷಯದ ಸಾರ ಹೇಳ ಹೊರಡುತ್ತಲೇ ಮತ್ತದೇ ದ್ವಂದ್ವ ಪದಗಳ ಬಳಕೆ ಎನ್ನುವಿರಾ ? ಅದೇ ಹೇಳಲು ಒದ್ದಾಡುತ್ತಿರುವುದು . ಯಾವ ವಿಷಯವಾಗಲಿ ಅದರ ವಿಮರ್ಶೆ ಅಥವಾ ಚರ್ಚೆಗೆ ಗ್ರಾಸವಾದರೆ ಎರಡು ಉತ್ತರಗಳು , ಎರಡು ಯೋಜನೆಗಳು ಹೊರ ಬರುವುದಲ್ಲವೇ ? ಹಾಗೆಯೇ ಪ್ರತಿಯೊಂದು ಚಲನ-ವಲನದಲ್ಲೂ ದ್ವಂದ್ವ ಇದ್ದೆ ಇರುತ್ತದೆ . ಅದೇ ಅಲ್ಲವೇ ಇದರೊಳಗಿನ ರಹಸ್ಯ !
                ದ್ವಂದ್ವತೆಯ ಮಹತ್ವ ತಿಳಿಯಲು ಒಂದು ಸಣ್ಣ ಕಲ್ಪನೆಯ ಮಾಡಿಕೊಳ್ಳುವ ಬನ್ನಿ . ಮತ್ತೆಲ್ಲೋ ಕಲ್ಪನೆಯ ಆಗರ ಕಟ್ಟುವುದು ಬೇಡ ನಮ್ಮ ದೇಹವೇ ತೆಗೆದುಕೊಳ್ಳುವ ಬನ್ನಿ . ರುಂಡ, ಮುಂಡ, ಕೈ ಕಾಲು ಎಂದು ವಿಂಗಡಿಸಿರುವ  ಈ ಶರೀರವ ನೇರವಾಗಿ ಸೀಳಿದರೆ ಸಮ್ಮಿತಿಯಂತೆ  ಕಾಣುವುದಲ್ಲವೇ !! ಆದರೆ ಅವೆರಡು ಭಾಗಗಳು ಸಮನಾಗಿರುವವೇ ಎಂದು ಎಂದಾದರೂ ಯೋಚಿಸಿದ್ದೀರಾ ? ಅವುಗಳಲ್ಲಿ ಸಣ್ಣ ಕೊರತೆಗಳು ಇದ್ದೆ ಇರುತ್ತವೆ. ಮತ್ತೊಂದು ಎಂದರೆ ಪ್ರಪಂಚದಲ್ಲಿ ಸಂಪೂರ್ಣ  ಸಿಧ್ಧಿ ಸಿಗುವುದು ಅಸಾಧ್ಯ !! ಮತ್ತೆ ಈ ಶರೀರಕ್ಕೆ ಬಂದರೆ ಮುಖ್ಯ ಅಂಗಗಳಾದ ಹೃದಯ ಮತ್ತು ಮೆದುಳು ಒಂದು ರೀತಿಯ ರಾಜ -ಮಂತ್ರಿಯರಿದ್ದ ಹಾಗೆ, ಇಬ್ಬರ ವಿಚಾರಗಳು ಸೇರಿ ಒಂದು ನಿರ್ಧಾರಕ್ಕೆ  ಬಂದರೆ ಆ ಕೆಲಸ  ಸಾಫಲ್ಯ. ಮೆದುಳು ಕೂಡ ಎರಡು ಭಾಗವೇ ಏಕೆಂದರೆ ಈಗಾಗಲೇ ಶರೀರವ ಸೀಳಿ ಆಗಿದೆ . ಒಮ್ಮೆ ಈ ಸೀಳಿದ ಶರೀರದ ಎಡ ಭಾಗವ ಒಮ್ಮೆ ಕನ್ನಡಿಯಲ್ಲಿ ಅಂಟಿಕೊಂಡಂತೆ  ಹಿಡಿದು ನೋಡಿ ಸಂಪೂರ್ಣ ಶರೀರ ಭಾಸವಾಗುವುದು. 
                    ಈಗ ನೋಡಿ ನಿಜವಾದ ದ್ವಂದ್ವಕ್ಕೆ ಸರಿಯಾದ ಉತ್ತರ ಸಿಗುವುದು.ನಾವು ಹೊಂದಿರುವ ಹೃದಯ ಒಂದೇ ಆದರೆ ಕನ್ನಡಿಯಲ್ಲಿ ಮತ್ತೊಂದು ಹೃದಯ ಕಾಣಿಸುತ್ತಿದೆ .ಆದರೆ ಅದು ವಾಸ್ತವದಲ್ಲಿ ಬಲಭಾಗದಲ್ಲಿ ಇಲ್ಲ , ಕೇವಲ ಅದರ ಬಿಂಬ ಹಾಗೆಯೇ ಈ ಬದುಕಿನ ಪಯಣದಲ್ಲಿ ,ಇಂತಹ ಎರಡು ವಿರುದ್ದ ದಿಕ್ಕಿನ ಅಂಗಾಗಳ ಜೋಡಿಸಿ ಎಡಕ್ಕೆ ಹೃದಯವಿತ್ತು ಪರಮಾತ್ಮ ನಮ್ಮನ್ನು ಸದಾ ಕಾಪಾಡುವ, ಆದರೆ ಬಲಕ್ಕೆ ಕಾಣದ ಹೃದಯವ ನಾವುಗಳೇ ಹುಡುಕುತ್ತ ದಿಕ್ಕು ತಪ್ಪುತ್ತೇವೆ. ಆದರೂ ಪಕ್ಕದಲ್ಲಿರುವ ಪರಮಾತ್ಮ ನಮಗೇ ಗೋಚರವಾಗುವುದೇ ಇಲ್ಲ .ಇದೆ ಅಲ್ಲವೇ ದ್ವಂದ್ವತೆ .
                      ಎಲ್ಲೋ ಉತ್ತರ ಹುಡುಕುವುದು ವ್ಯರ್ಥ ಪಯತ್ನ ಸುಮ್ಮನೆ ಏಕೆ ಧೃತಿಗೆಡುವಿರಿ. ಒಳಿತು -ಕೆಡುಕು ,ಸರಿ-ತಪ್ಪು , ಸೋಲು-ಗೆಲುವು , ಹುಟ್ಟು -ಸಾವು ಇನ್ನು ಹತ್ತು ಹಲವೂ ,ಇವೆಲ್ಲವೂ  ಒಂದೇ ನಾಣ್ಯದ ಎರಡು ಮುಖಗಳು ಮತ್ತು ದ್ವಂದ್ವತೆಯ ಮೂಲ ಮಂತ್ರಗಳು, ಇವು ಇರುವುದು ಮಾತ್ರ ವಿರುದ್ದ ದಿಕ್ಕಿನಲ್ಲಿ ಆದರೆ ಅವುಗಳ ನಡೆಗಳು ಮಾತ್ರ ಅನಂತ . ಆದರೆ ಅವೆರಡರ ಸಮಾನ ತಕ್ಕಡಿ ಹಿಡಿದು ಜ್ಞಾನವೆಂಬ ಜ್ಯೋತಿಗೆ ಬುದ್ದಿಯ  ಕೊಟ್ಟು ನಡೆಸಬೇಕು . ಉದಾಹರೆಣೆಗೆ ಹೇಳುತ್ತೇನೆ( ಅನಂತ.......  -4,-3,-2.-1.0,1,2.3.4......ಅನಂತ )ಎಷ್ಟು ಧನಾತ್ಮಕ ಮತ್ತು ಋಣಾತ್ಮಕ ಯೋಚನೆಗಳೇ ಆಗಲಿ ಅದಕ್ಕೆ ಒಂದು ಉತ್ತರ ಇದ್ದೆ ಇರುತ್ತದೆ. ಮತ್ತೊಂದು ತಲೆಯಲ್ಲಿರಲಿ ನಾವು  ಶೂನ್ಯ  ಎಂದು  .  ಬದುಕು ನಮ್ಮ ದ್ವಂದ್ವತೆಯಿಂದ ಹೊರಬರುವ ಉತ್ತರದ  ಅಡಿಪಾಯದ ಮೇಲೆ ನಿಂತಿದೆ . ಒಂದು ರೀತಿಯ ಇಕ್ಕಟ್ಟು ಅಲ್ಲವೇ!! ಹೌದು ಆದರೂ ಹೇಳುತ್ತೇನೆ . ದ್ವಂದ್ವತೆ ದೈವ ಇತ್ತ ವರ. ಎಲ್ಲ ಹಾದಿಯೂ  ಸುಗಮವಾಗಿ ಇದ್ದರೆ ಜೀವನ  ಬೇಸರವೆನಿಸುವುದು. ಅದಕ್ಕೆ ಹಿಟ್ಲರ್ ಹೇಳಿರುವ ಒಂದು ನುಡಿ ಜ್ಞಾಪಕಕ್ಕೆ ಬರುತ್ತಿದೆ . ಕೆಡುಕು ಯೋಚನೆ ನಮ್ಮ ಸುರಕ್ಷಿತಗೆ ಆದರೆ ಒಳ್ಳೆಯ ಯೋಚನೆ ನಮ್ಮ ಯೋಜನೆಯ ಸಾಕಾರಕ್ಕೆ ಎಂದು . ಹಗಲಾದ ಮೇಲೆ ಇರುಳಿನ ಹಾಗೆ ಒಂದಾದ ನಂತರ ಮತ್ತೊಂದು  ಬಂದೇ  ಬರುತ್ತದೆ. ಅದಕ್ಕಾಗಿ ದೃಡಕಾಯ ಮನವಿರಬೇಕು. ಒಟ್ಟಿನಲ್ಲಿ ದ್ವಂದ್ವತೆಗೆ ಸಾವಿಲ್ಲ ,ಅದು ಬದುಕಿನ ಒಂದು  ಅವಿಭಾಜ್ಯ ಅಂಗ ಮತ್ತು ಅತ್ಯವಶ್ಯಕ . ಎದ್ದಾಗ ಹಿಗ್ಗದೆ ಬಿದ್ದಾಗ ಕುಗ್ಗದೆ ...ಈ ಏಳು -ಬೀಳಿನ ನಡುವೆ ಮನಸ್ಸನು  ತಟಸ್ಥಗೊಳಿಸಿ ಸರಿಯಾದ ಹಾದಿಯ ಹುಡುಕೋಣ.
                ಕೊನೆಯಲ್ಲಿ ಸಣ್ಣ ಕಿವಿ-ಮಾತು : ಪ್ರತಿಯೊಂದು ವಿಷಯದಲ್ಲೂ ಚಲನವಲನದಲ್ಲೂ ಎರಡು ನಿರ್ಧಾರಗಳು ಇದ್ದೆ ಇರುತ್ತವೆ ಅದೇ ದ್ವಂದ್ವ ಅದಕ್ಕಾಗಿ ಒಂದು ಸರಿಯಾದ ನಮ್ಮ ಆತ್ಮಕ್ಕೆ ಸ್ಪಷ್ಟವಿರುವ ದಾರಿ ಹಿಡಿದು ಮುನ್ನಡೆಯಬೇಕು. ಒಮ್ಮೆ ಅತ್ತ ನಡೆಯಲು ಪ್ರಾರಂಬಿಸಿದ ಮೇಲೆ ಹಿಂದುರುಗುವ ಮಾತು ಬರಬಾರದು ಅದು ಎಂತಹ ಪರಿಸ್ತಿತಿಯಾದರೂ ಸರಿ. ಏಕೆಂದರೆ ಮತ್ತೆ ಹಿಡಿದ ಹಾದಿಯಲ್ಲಿ ಮತ್ತಷ್ಟು ದ್ವಂದ್ವ ನಿರ್ಧಾರಗಳು ಕಾಯುತ್ತಿರುತ್ತವೆ . ಅದು ನಮ್ಮ ಜೊತೆಯಲ್ಲಿ ನಿತ್ಯ- ನಿರಂತರವಾಗಿ ಸಾಗುತ್ತಿರುತ್ತದೆ. ಎಲ್ಲವೂ ನಿಮ್ಮ ನಿಮ್ಮ ನಿರ್ಧಾರಗಳ ಮೇಲೆ ನಿಮ್ಮ ಬದುಕಿನ ಒಳಿತು -ಕೇಡು ನಿಂತಿದೆ.

  ನಿಮ್ಮ ನಲ್ಮೆಯ 
-@(ಜಿ.ಪಿ.ಗಣಿ)@-
***********************************************************************************************

Saturday, June 23, 2012

ಮುಂಜಾನೆಯ ಕುಹೂ .. ಕುಹೂ .. !!

***********************************************************************************************
           ಮುಂಜಾನೆ ಏಳುವುದೆಂದರೆ ಅದೇಕೋ ಗೊತ್ತಿಲ್ಲ, ಪುಟಾಣಿ ಮಗು ತನ್ನ ಬಳಿ ಇದ್ದ ಆಟಿಕೆಯನ್ನು ಕೇಳಿದಾಗ ಕೊಡದೇ ಇದು ನನ್ನದು -ಇದು ನನ್ನದು ,ನಾ ಯಾರಿಗೂ ಕೊಡುವುದಿಲ್ಲವೆಂದು ಮಾಡುವ ಮೊಂಡಾಟದಂತೆ ಮನವು ಮುಂಜಾನೆಯ ಅರೆನಿದ್ರೆಯನ್ನು ಬಿಟ್ಟುಕೊಡಲು ಹಿಂಜರಿಯುತಿತ್ತು .ಅದನ್ನು ಪುಸಲಾಯಿಸಿ ಹೇಗೋ ಎದ್ದು ಕಣ್ಣನ್ನು ಹೊಸಕುತ್ತ - ಮೈ-ಕೈ - ಮುರಿದು ನಿತ್ಯಕರ್ಮವೆಲ್ಲ ಮುಗಿಸಿ ಎಂದಿನಂತೆ ಮುಂಜಾನೆಯ ನಿಧಾನಗತಿಯ ಓಟ ಬೆಟ್ಟದ ಹಾದಿಯಲಿ ಸಾಗಿತ್ತು ಎಂದೂ ಕಾಣದ  ಅಚ್ಚರಿ !! ಇಂದು ಗೋಚರಿಸಲು ನನಗಾಗಿ ಕಾದಿತ್ತು !!......................................................
..........ಹೀಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ಮುದ್ದಾದ ಮರವೊಂದರಲ್ಲಿ ಕೋಗಿಲೆಯು ನನ್ನ ಕೂಗೀ-ಕೂಗೀ ಕರೆದಂತಾಯ್ತು .ಮನಸ್ಸು ಕಾಣದ ಹಾಗೆ ಕೋಗಿಲೆಯತ್ತ ಮುಖ ಮಾಡಿ ಅದರ ಕುಹೂ .. ಕುಹೂ .. ನಿನಾದವನ್ನು ಮೂಖ-ವಿಸ್ಮಯವಾಗಿ ಆಲಿಸತೊಡಗಿತ್ತು. ದೇಹವು ಮಾಯೆಯಿಂದ ರಸ್ತೆಯ ಬದಿಗೆ ಕಟ್ಟಿದ್ದ ತಡೆ -ಕಟ್ಟೆಯ ಮೇಲೆ ಆಸನವ ಹೊಂದಿತ್ತು !! ಮತ್ತದೇ ಕುಹೂ .. ಕುಹೂ .. ಎಂಬ ಗಾನಸುಧೆ ಎಡೆಬಿಡದೆ ಪ್ರತಿ ಅಂದಾಜು -  ಸೆಕೆಂಡುಗಳಿಗೊಮ್ಮೆ ಕಿವಿಯಲ್ಲಿ ಗುನುಗಿ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು
ಹಾಗೆ ಅಲ್ಲಿ -ಇಲ್ಲಿ  ಕೇವಲ   ಚಿತ್ರಪಟಗಳಲ್ಲಿ ಬಿಟ್ಟರೆ ಪಕ್ಷಿಧಾಮಗಳಲ್ಲಿ ಕಂಡ ನೆನಪು. ಆದರೆ ಸ್ವಾತಂತ್ರ್ಯದಿ ತನ ಮನ ಬಿಚ್ಚಿ ಹಾಡುವ ಗಾನ ಕುಸುಮೆಯನ್ನು ಮನಸೂರೆಗೊಂಡು ಕಣ್ತುಂಬ ನೋಡಿದ್ದು!! 
ಇದೆ ಮೊದಲು , ಅದನ್ನು  ನಂದಿಸುತ್ತಲೇ ನನ್ನ ಬಾಯಿಂದ ಕುಹೂ .. ಕುಹೂ .. ! ಎಂಬ ಮೆಲ್ಲ ದನಿಯ ಶಬ್ದ ನನಗರಿಯದೆ ಹೊರಹೊಮ್ಮತೊಡಗಿತ್ತುಆದರೆ ಏನು ವಿಷಾದವೆಂದರೆ ಸತತವಾಗಿ ಕೂಗುತಿದ್ದ ಕೋಗಿಲೆಯು ನನ್ನ ದನಿಯಿಂದ ಕೊಂಚ ಹೊತ್ತು ಸುಮ್ಮನಾಯಿತು !! :( 
   ಮತ್ತೆ ನನ್ನ ಮೆಲ್ಲ ದನಿ ಶುರುವಾಯ್ತು , ಅದಕ್ಕೆ ಪ್ರತ್ಯುತ್ತರವಾಗಿ ಕೋಗಿಲೆಯು ತನ್ನ ಇಂಪಾದ ಶಬ್ದದಿಂದ ಮಾತಿಗೆ ಕುಳಿತವರಂತೆ ನನ್ನೊಡನೆ ತನ್ನ ದನಿಯಿಂದ ಆಕರ್ಷಿಸಿತ್ತು . ಹೇಗೆ ನಮಗೆ ಹೊರ -ರಾಜ್ಯದಲ್ಲಿ ನಮ್ಮ ಮಾತೃ ಭಾಷೆಯವರು ಸಿಕ್ಕರೆ ಪಟ - ಪಟನೆ ಮಾತುಗಳು ಸಂತಸದಿಂದ ಹರಿಯತೊಡಗುತ್ತವೋ, ಹಾಗೆ ಕೋಗಿಲೆಗೆ ತನ್ನ ಭಾಷೆಯವರು ಸಿಕ್ಕರೆಂದು ನನ್ನೊಂದಿಗೆ ಮನ ಬಿಚ್ಚಿ  ಮಾತನಾಡುತಿತ್ತು. ಅಬ್ಬಾ !!  ಸಮಯದಲ್ಲಿ ಕಾಗೆಗೆ ಕೋಗಿಲೆ ದನಿ ಬಂದ ಹಾಗೆ ನನ್ನ ಮನಕೆ ಹರುಷ ತುಂಬಿ ಮನೋಲ್ಲಾಸದಿಂದ ಭೀಗುತಿತ್ತು. ಹೇಗೆ ಕಣ್ಮುಂದೆ ರತಿ ನಿಂತರೆ ಹೊರ ಲೋಕವು ಮರೆಯಾಗುವುದೋ  ರೀತಿ ಮನಕೆ ಭಾಸವಾಗುತಿತ್ತು . ಇದು ಸುಮಾರು ಇಪ್ಪತ್ತು ನಿಮಿಷಗಳು ನಡೆದಿರಬಹುದೇನೋ!! ಮುಂದೆ ಸಾಗಲು ಏಕೋ ಮನವು ಒಪ್ಪುತ್ತಲೇ ಇರಲಿಲ್ಲ . ಹೇಗೋ ಮಗುವಿಗೆ ಸಾಂತ್ವನ ಹೇಳಿ ಒಪ್ಪಿಸುವಂತೆ  ಮನವೊಲಿಸಿ ಮುಂದೆ ಸಾಗಿದೆ ... 
        ಆದರೆ ವಿಸ್ಮಯವೆಂದರೆ ನಿಧಾನಗತಿಯ ಓಟ ಕೇವಲ ನಡುಗೆಯಾಗಿ ಮಾರ್ಪಟ್ಟಿತ್ತು .ಅದರ ಜೊತೆಗೆ ನಾಯಿಯು ತನ್ನ ಕಿವಿಯನ್ನು ನೆಟ್ಟಗೆ ಮಾಡುವಂತೆ ನನ್ನ  ಕಿವಿಯು ಹಿಗ್ಗಿ ನಿಂತಿತ್ತು !!
            ಕೇವಲ ಕೋಗಿಲೆಯ ಇಂಪು -ಸೊಂಪಾದ ಗಾನಸುದೆ ಕೇಳಿ ಸಂತಸ  ಉಲ್ಬಣಗೊಂಡಿದ್ದ ಮನಕೆ ಉಳಿದ ಪಕ್ಷಿಗಳು ತಮ್ಮ ಕಂಠಸಿರಿಯಿಂದ ತಮ್ಮೆಡೆಗೆ ಆಕರ್ಷಿಸತೊಡಗಿದ್ದವು , ಚಿಲಿ -ಪಿಲಿ , ಕರ -ಕರ , ಕುಟ್ರು - ಕುಟ್ರು , ಕಾ -ಕಾ , ಕುಯ್- ಕುಯ್ , ಸಿಳ್ಳೆ ಹೊಡೆಯುವಂತೆ ,ಅಬ್ಬಾ !!  ಎಲ್ಲೋ   ಸಂಗೀತ ವಾದ್ಯಗಳ ಲೋಕಕ್ಕೆ ಕಾಲಿಟ್ಟಂತೆ ಹೃದಯ ಸ್ಪರ್ಶಿಸತೊಡಗಿತ್ತು , ಮನವು ಹಕ್ಕಿಯಂತೆ ಆಗಸದಿ ತಣ್ಣನೆಯ ಗಾಳಿಯಲಿ ತೇಲತೊಡಗಿತ್ತು .
           ಸದಾ ಆಲೋಚನೆ , ವಿಮರ್ಶನೆ , ನೋವು - ನಲಿವಿನ ಅಳಲಾಟ ಹೀಗೆ ಬದುಕಿನ ದ್ವಂದತೆಯಲ್ಲಿ ಬೇಸತ್ತಿರುವ ಮನಕೆ ನವಲೋಕವು ಕಣ್ಮುಂದೆ ಚಲನಚಿತ್ರದಂತೆ ತೋರತೊಡಗಿತ್ತು . ಕಂಡು ಕಾಣದ ಹಾಗೆ ಇದ್ದ ಕಣ್ಣುಗಳಿಗೆ ಇಂದು ಅನೇಕ ಪಕ್ಷಿಗಳು ತಮ್ಮ ಸೌಂದರ್ಯಮಯ ಗಾನದಿಂದ ತಮ್ಮೆಡೆಗೆ ನೋಡುವಂತೆ ಉದ್ರೇಕಿಸುತ್ತಿದ್ದವು !! ರಸ್ತೆಯಲ್ಲಿ ಆಗಾಗ  ಸಾಗುತಿದ್ದ ವಾಹನಗಳ ಶಬ್ದಗಳು ಕೇಳುತ್ತಲೇ ಮನಸ್ಸೇಕೋ ದೂರದರ್ಶನದ ಚಾನಲ್ ಬದಲಿಸುವಂತೆ ಹಕ್ಕಿಗಳ ಗಾನ ಲೋಕಕ್ಕೆ ಕರೆದೊಯ್ಯುತ್ತಿತ್ತು . ಕಣ್ಮುಂದೆ ಮುಂಜಾನೆಯಲ್ಲಿ ಸುಂದರ ತರುಣಿಯರ ಕಂಡು ಕಣ್ಣುಗಳು ಮಿಟಿಕಿಸದೆ ನೇರ ನೋಟದಲ್ಲಿ ದಿಟ್ಟಿಸಿ ನೋಡಲು ಆಕರ್ಷಿಸಿದ್ದವುಆದರೆ ಇಂದೇಕೋ ಪ್ರಕೃತಿ  ಸೌಂದರ್ಯದ ಮುಂದೆ ಅದು ನಿಲ್ಲಲು ಅಶಕ್ತವಾಗಿತು. ರೀತಿ ಎಂದು ನನಗೆ ಆಗಿರಲಿಲ್ಲವಲ್ಲ ಎಂದು ಬೆರಗಾಗಿ ಮೂಖ-ವಿಸ್ಮಯನಾಗಿ ಹಕ್ಕಿಗಳ ದನಿಯ ಗುಂಗಿನಲ್ಲೇ ನನ್ನನ್ನು ಮಾಯೆಯೊಂದು ತಾನು ಅಂದುಕೊಂಡ  ಹಾಗೆ  ಆಡಿಸಿತ್ತು ಅನ್ನಿಸುತ್ತದೆ !! ಹಾಗೆ ಸ್ವಲ್ಪ ದೂರದಲ್ಲಿ ನಿಬ್ಬೆರಗಾಗಿ ನಿಂತುಹೊದೆ . ದಿನವೂ ಇನ್ನು ಅಷ್ಟು ದೂರ ಹೋಗಿ ಬರಬೇಕಲ್ಲ  ಎನ್ನುತ್ತಿದ್ದ ಮನವು ,ಇಂದೇಕೋ ಹಿಂದೇಟು ಹಾಕುತಿತ್ತು ಅಷ್ಟರಲ್ಲಿ  ಕಣ್ಣಿಗೆ ಮನೆಯ ಹತ್ತಿರದ ರಸ್ತೆ ಆಗಲೇ ಕಾಣಿಸುತ್ತಿತ್ತು . ಮನಸ್ಸಿಗೆ ಮತ್ತೆ ಪೀಕಲಾಟ , ಮಗುವಿನಂತೆ ನನಗೆ ಅದು ಬೇಕು , ಹುಹ್ ಇಲ್ಲ ಅಂದರೆ ನಾನು ಬರೋಲ್ಲ ಹುಹ್- ಹುಹ್ ಎಂದು ಹಠ ಮಾಡತೊಡಗಿತ್ತು. ದಿನವೂ ಒಂದು ತಾಸು ನಡೆಸುತಿದ್ದ   ನಿಧಾನಗತಿಯ  ಓಟ ಇಂದೇಕೋ ಎರಡೂವರೆ ತಾಸು ಕಾಲ್ನಡುಗೆಯಲ್ಲಿ ಮುಗಿದಿತ್ತು .ಸಮಯ ನೋಡಿ ಅಚ್ಚರಿಯಾಗಿತ್ತು !! ಹೇಗೋ ಮನಸ್ಸೆಂಬ ಮಗುವಿಗೆ ಮತ್ತೆ ಪುಸಲಾಯಿಸಿ ಮನೆಗೆ ಹಿಂದುರುಗಿ ಬಂದೆ ............ ಬಂದವನೇ  ಲೇಖನಿ -ಹಾಳೆಯನ್ನು ಹಿಡಿದು ಮುಂಜಾನೆಯ ವಿಸ್ಮಯ ಪಯಣದ ತುಣುಕನ್ನು ನಿಮ್ಮ ಮುಂದಿರಿಸಿದೆಅನುಭವಿಸಿದ್ದನ್ನು ನನಗೆ ತೋಚಿದ ರೀತಿಯಲ್ಲಿ ಹಾಗೆ ಇಳಿಸಿದ್ದೇನೆ . ಇಷ್ಟವಾದಲ್ಲಿ ನಿಮ್ಮ ಮನಸ್ಸಿಗೆ ಒಂದು ನಗೆ ಬೀರಿ ಹಸನ್ಮುಕಿಯಾಗಿರಿ . ಏನೋ ಪರವಾಗಿಲ್ಲ ಅಂದುಕೊಂಡಲ್ಲಿ ಒಂದು ಪುಟ್ಟ ಮಗುವೊಂದು ಕಥೆ ಹೇಳಲು ಪರದಾಡುವ ಸಂದರ್ಭವ ನೆನದು ಮುಗುಳ್ನಕ್ಕು ಬಿಡಿ .
*********ಕೊನೆಯಲ್ಲಿ ಒಂದು ಸಣ್ಣ ಕಿವಿ ಮಾತು . ಮುಂಜಾನೆಯ ಹಕ್ಕಿಗಳ ಸುಮಧುರ ಗಾನಲೋಕವ ಅನುಭವಿಸಲು ನೀವೂ ಪ್ರಯತ್ನಿಸಿ.ಬರಿ ಇಯರ್ ಫೋನ್ ಹಾಕಿಕೊಂಡು ಬೆಳಗ್ಗೆ  ಮತ್ತು ಸಂಜೆಯ ವೇಳೆ  ಸುತ್ತಾಡುವ ಬದಲು   ನಿಮ್ಮ ಕಿವಿಗೂ ಪ್ರಕೃತಿ ಕೊಡುವ ಇಂಪಾದ ದನಿಯ ಕೇಳಿಸಿ ********

-@(-ಜಿ.ಪಿ.ಗಣಿ -)@-
***********************************************************************************************