ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Showing posts with label ಭಾವನಾಲಹರಿ. Show all posts
Showing posts with label ಭಾವನಾಲಹರಿ. Show all posts

Sunday, January 31, 2016

ಭವತಿ ಭಿಕ್ಷಾಂದೇಹಿ!!

***********************************************************************************************
ಗೋಡೆಗಳ ಪದರಗಳು
ಹೆಚ್ಚುತಲಿವೆ
ದಿನವೂ...
ನಾ ಮುಂದು ತಾ ಮುಂದೆಂದು
ಸರಣಿಯಲಿ ಬರಲು
ಆರ ಬರಹದ ಘಮಲನು ಸವೆಯಲಿ
ಆರ ಪಟಕೆ ಬಿಂಬವಾಗಲಿ
ಹಸಿದ ಮನದ ಹೊಟ್ಟೆಗೆ
ವಿವಿಧ ಬಗೆಯ ರುಚಿ ರುಚಿಯ
ಹಬ್ಬದೂಟ
ಅಲ್ಲಲ್ಲಿ ಚೂರು
ಉಪ್ಪು
ಹುಳಿ
ಖಾರ
ಏನು ಮಾಡಲಿ ಮರುಳೆ
ಉಂಬುವುದಕಿರುವುದು
ಕಿರಿದಾದ ಮಂದಮತಿಯ
ಉದರವು...
ಫೇಸುಬುಕ್ಕಿನ ಗೋಡೆ
ಬಾಣೆಲೆಯಲಿ
ಬಿದ್ದದಷ್ಟೋ ತಿನಿಸುಗಳಿಗೆ
ಎನ್ನ ಮೇಲಿವೆ ಸಹಜ ಮುನಿಸು
ಅಲ್ಪ ಅಣು ಗುಲಗಂಜಿ wink emoticon
ಈ ಹೃದಯ ಸ್ವೀಕರಿಸುವುದೆಲ್ಲವನು
ನಿಮ್ಮಯಾ ಸರದಿ ಬರುವವರೆಗೂ ...
ಸಂತನಿವನು ಆದರಿಸಿ ನಿಮ್ಮೊಲವಿನ
ಆದರಾತಿತ್ಯದೊಳು...
~ಜಿ.ಪಿ.ಗಣಿ~
***********************************************************************************************

Friday, January 15, 2016

ಮಾಯಾ ಶಕ್ತಿ (Law of conservation of energy)

***********************************************************************************************
ಜನನದ ಬಳಿಕ ಜನಕನ
ವೀರ್ಯದ ಹೆಸರು ತಿಳಿದಿಲ್ಲ
ತನ್ನ ರೂಪವನದು ತೊರೆದು
ತನ್ನೊಳಿನ ಶಕ್ತಿಯನು
ವಿಂಗಡಿಸಿ ವಿಂಗಡಿಸಿ
ಪಂಚಭೂತಗಳನೊಂದೊಡಲ
ಸೂರಿನಡಿಯಿರಿಸಿ
ಸಂಬಂಧವನು ಬೆಸೆದಿಹುದು...
ಪಂಚೇಂದ್ರಿಯಗಳೆಂಬ
ಶಸ್ತ್ರಾಸ್ತ್ರಗಳನು
ಭ್ರಮೆಯ
ಮಾಯಾಪಂಜರದೊಳಿಟ್ಟು
ಸುಖ ದುಃಖವೆನುವ
ಕುರುಡು ಚದುರಂಗವನಾಡಿಸಿ
ಜಗದ ಶಕ್ತಿಯನು ಜಗಿಸಿ
ಚೇತನ ಶಕ್ತಿಯನು ಅಗೆಸಿ
ಒಡಲುಡುಪಿನೊಳಹೊರಗನು ಒಗೆಸಿ
ಹಿಂಡಿ ಹಿಂಡಿ ಶಕ್ತಿಯನು
ಕುಂದಿಸಿ-ಮಥಿಸಿ-ಶಪಿಸಿ-ಹರಸಿ-ಶೋಧಿಸಿ
ಪಂಚಭೂತಗಳಲೈಕ್ಯವಾಗುವ
ಮತ್ತೊಂದು ಶಕ್ತಿಗೆ ಹೆಸರಿಹುದೆ?
ಉಸಿರಿಹುದೆ?
ಆದಿ-ಅಂತ್ಯವಿಹುದೇ?

~ಜಿ.ಪಿ.ಗಣಿ~
***********************************************************************************************

Saturday, November 21, 2015

ಬಾಲ್ಯದ ಸವಿ ನೆನಪು ಈ ಮಳೆಯ ಚಳಿಯಲಿ!

***********************************************************************************************
ಜಿಟಿ ಜಿಟಿ ಮಳೆಗೆ ರಕ್ತವೆಲ್ಲವೂ
ಹೆಪ್ಪುಗಟ್ಟಿ ಹಿಡಿದ ಹಾಸಿಗೆಯಿಂದ
ಏಳುವಂತಿರಲಿಲ್ಲ ...
ನೆನೆ ನೆನೆದು ಲೊಳ ಲೊಳಲೆಂದು
ನಾಸಿಕದಿ ಹೊರಹರಿದುಬರುತ್ತಿತ್ತು
ಮೂಗಿನ ಹೊಳೆಯು...
ತಲೆ ಹಿಡಿದುಕೊಂಡಿತ್ತು
ಕಿವಿಯ ಗವಿಯೊಳಗೆ
ತಂಗಾಳಿ ಹೊಕ್ಕಿ ...
ಶಿರಕೆ ಮಂಗನ ಟೋಪಿ ಧರಿಸಿ
ಹಣೆಗೆ ಅಮೃತಾಂಜನ ಮೆತ್ತಿ
ನಸೆಯ ಮೂಸಿ ಸೀನುತ್ತ
ಬೆಚ್ಚನೆಯ ಸ್ವೆಟರನು ತೊಟ್ಟು
ಕುರಿಗಂಬಳಿಯ ಹೊದ್ದಿಕೊಂಡು
ಗುಡುಗಿನ ಶಬ್ದವ ಕೇಳಿ
ಯಮನ ಚಾವಟಿಯೇಟೆಂದು
ಕೋಣನ ಸವಾರಿಯ ಮಾಡುತಿರುವನೆಂದು
ಅಜ್ಜಿಯು ಗುಡುಗುತ್ತಿದ್ದಳು...
ಭಯದಿ ಮುದುರಿಕೊಂಡು
ಸಿಡಿಲು ಗುಡುಗಿನ ಜೋಗುಳದಿ
ಮಲಗಿದೆಡೆ ಸ್ವರ್ಗವನಪ್ಪಿದಾನಂದ!!!!

~ಜಿ.ಪಿ.ಗಣಿ~
***********************************************************************************************

Friday, September 25, 2015

'ಸು'ವಾಸನೆ

***********************************************************************************************
ನಿತ್ಯವೂ ಹರಕೆಯಿಲ್ಲದೆ
ತೀರಿಸುವ ನಿತ್ಯಕರ್ಮಕೆ
ಬಡಿದಿದೆ ಹೊಲಸು ವಾಸನೆ
ಹಲಸಾಗಿ ಮುಳ್ಳಿರುವ ಪೊರೆಕೆಯು
ಗುಡಿಸುವುದು ಕಾಣುವಾ ಕಸವನು
ನಾರಿನಾ ನಡುವಿರುವ ತೊಳೆಯ
ಜೀರ್ಣಕೆ ಕಾದಿರುವುದೀ ಉದರದೊಳಿನ
ಕರುಳ ಎಳೆಯು
ತಿನ್ನುವಾ ಬಲಗೈಗೆ ಕೀರ್ತಿ ಒಲವು
ತೊಳೆಯುವಾ ಎಡಗೈಗೆ ಮೂರ್ತಿ ಫಲವು
ಸೇವಿಸುವ ಗಾಳಿಯಲಿ ಅದೆಷ್ಟು ಸುಗಂಧವೋ
ಬಿಡುವ ಗಾಳಿಯಲಿ ಅಳೆಯಲಾರದಷ್ಟು ದುರ್ಗಂಧವೋ
ಕಸದಲಿನ ರಸವೇ
ಹೊರಸೂಸುವ ಇಂದ್ರಿಯಾನುಭವ ಕಣವು
ಕೊಳೆತು ನಾರದಿರೆ
ಹೇಸಿಗೆಯು ಬಾರದಿರೆ
ಗೊಬ್ಬರಕೆ ಅಸ್ತಿತ್ವವೆಲ್ಲಿಹುದು?
ಮೇಲು ಕೀಳೆಂಬುದು
ಬಾಹ್ಯದೊಳಿರುವುದಷ್ಟೇ ಆಂತರ್ಯದೊಳಿಲ್ಲ
ಮೇಲೆಂಬುದು ಇಂದ್ರಿಯಾಲೋಲ
ಕೀಳೆಂಬುದು ಅಂತರ್ಜಾಲ
ತಿಪ್ಪೆಯಾ ಸಗಣಿಯಲಿ ಬರುವುದು ಬೆರಣಿ
ಸುಟ್ಟು ಬಿಸಿನೀರ ತರಿಸಿರೆ ಮೆದುವಾಗುವಳು
ಚರ್ಮವೆಂಬ ತರುಣಿ
ಹೊಲದಳು ನಾರುತ ಬಿರಿಯುವಳು ತಿನ್ನಲನ್ನವನು ಧರಣಿ
ಕರ್ಮಯೋಗಿಗಳು ನಾವಿಲ್ಲಿ ನೆಪವಾಗಿ
ಕೇವಲ ಕಾಲದ ಹಸಿವಿಗಾಗಿ...
~ಜಿ.ಪಿ.ಗಣಿ~
***********************************************************************************************

Thursday, July 2, 2015

ಮಾವಿನ ವಾಟೆ

***********************************************************************************************
ಮಾವಿನ ವಾಟೆಯಲ್ಲ ಇದು
ಹ್ರದಯದ ಭದ್ರ ಕೋಟೆ
ನನ್ನೆದೆಯ ಮಾವಿನ
ವಾಟೆಯ ಪ್ರೀತಿಯ ಮೇಲಿನ
ತ್ಯಾಗದ ಹಣ್ಣನು
ನೀ ತಿನ್ನುವಾಗ ಉಳಿಸಿದ
ಒಂದೊಂದು ನಿನ್ನ ಖಾರದ
ಹಲ್ಲಿನ ಉಳಿ ಏಟು
ಹಾಗೆಯೇ ಬರೆಯಂತೆ
ಉಳಿದು ಹೋಗಿದೆ...
ಆ ನೋವಿನಲೂ
ಎನ್ನಾ ಬರೆಯ ಕರೆಗಳನು
ಮರೆಮಾಚಿಸಿ
ತನ್ನ ಗರ್ಭದಲಿ ಹೊತ್ತು
ಆ ಭೂತಾಯಿ ಮತ್ತೆ ಹೊಸ
ಜೀವನವನಿತ್ತು ಹೆಮ್ಮರವಾಗಿಸಿ
ನನ್ನಂತೆಯೇ ಅದೆಷ್ಟೋ
ಪ್ರೀತಿಯ ರಸವ ತುಂಬಿದ
ಹಣ್ಣನು ಸ್ರಷ್ಟಿಸಿ
ನೋವನುಣಿಪಲೆಂದೆ
ಆ ವಾಟೆಯೆಂಬ ಹ್ರದಯವನ್
ಕಲ್ಲಾಗಿಸಿಹನು!
ಅದರೊಳಿರುವ ಮತ್ತೊಂದು
ಹೆಮ್ಮರದ ಮೆದು ಮನಸನು
ಹಾಗೆಯೇ ಬಚ್ಚಿಟ್ಟಿರುವನು
~ಜಿ.ಪಿ.ಗಣಿ~
***********************************************************************************************

Sunday, June 28, 2015

ತೇವವಿಲ್ಲದ ತಾವರೆಯ ಎಲೆಯಂತೆ ಈ ಜಡ ಜೀವ ಮತ್ತು ಆತ್ಮ

***********************************************************************************************
ಯಾರೋ ತಟ್ಟುತಿಹರು
ಎನ್ನೆದೆಯೊಳಗಿನ ಕದವನು
ಬಹು ದಿನಗಳಿಂದ...
ಎಷ್ಟೋ ಬಾರಿ
ಅರುಚಿರಲೂಬಹುದು!
ಅರಿವಾಗಲೇ ಇಲ್ಲ.
ಕಾಲಿಂಗ್ ಬೆಲ್
ಕೂಡ ಸುಸ್ತಿಯಲ್ಲಿಲ್ಲ!!
ಅಯ್ಯಯ್ಯೋ! ಎಂತಹ ಪ್ರಮಾದವಾಯ್ತು,
ಹೊರಗಿರುವವರಿಗೆ ಒಳಗೊಬ್ಬರನು
ಬಂಧಿಸಿರುವವರೆಂದು
ಅರಿಯದೇ ಹೋಯ್ತೆ...
ಆರಿರಬಹುದು??
ಪ್ರಶ್ನೆಗೆ ಉತ್ತರವಿಲ್ಲ!!
ಕಾರಣ ಹುಡುಕುತ್ತ ಹೊರಟರೆ...
ಮತ್ತಷ್ಟು ಒಗಟು!!
ಎಲ್ಲಾ ಅಡ್ಡಲಾಗಿರುವ
ಕಂದಕಗಳನು ದಾಟಿ
ಅವರನು ಸೇರಬೇಕಿದೆ!
ತಿಳಿಯದೇ ಮನವು ಹೇಳುತಿದೆ
ಅವರಿಗೆ ಎನ್ನ ಸಹಾಯವು
ಬೇಕಿದೆಯಂದು...
ಅದು ನನ್ನದೇ ಪರಿಧಿಯಂದು
ನನ್ನದೇ ಬಿಂದುವೆಂದು
ಬುದ್ಧಿಯ ಆರಾಮಿನಲಿ
ಹ್ರದಯದಸತ್ಯದಲಿ
ಹುಡುಕಲಾಗದೆ ಹೋಯ್ತೆ...
~ಜಿ.ಪಿ.ಗಣಿ~
***********************************************************************************************

Monday, June 1, 2015

ಹೂವು ನೀನಿದ್ದಲ್ಲಿಯೆ ಎನಗೆ ಕಾಮನಬಿಲ್ಲು!!

***********************************************************************************************
ಓ ಹೂವೆ
ನೀನೇಕೆ ಇಷ್ಟು ಸುಂದರ
ಕಂಡ ಕೂಡಲೇ ಸ್ರಷ್ಟಿಯಾಗಿದೆ 
ಮನದೊಲ್ಲೊಂದು ಮಂದಿರ
ಪೂಜಿಸುವೆನೆ ಹೊರತು
ವ್ಯಾಮೋಹವಲ್ಲ!
ನಿನ್ನ ಹುಟ್ಟಿದ ಅಂಚಿನಿಂದ
ಮೊಗ್ಗಾಗಿ ಸೂರ್ಯನ
ತೇಜಸ್ಸನ್ನು ಪಡೆದು
ನಿಲ್ಲುವಾ ನಿನ್ನ ಪರಿಯ
ಕಣ್ತುಂಬಿಕೊಳ್ಳುವ ಆಸೆ!!
ಕಿರಣಗಳ ನಡುವೆ ಮಸುಕಾದ
ಮಂಜಿನಲಿ ಮುತ್ತನಿಡುವ
ಆ ರಸ ನಿಮಿಷವ
ಸ್ಪರ್ಷಿಸುವಾಸೆ!!
ತಂಗಾಳಿಯೊಡನೆ ಸಂಭಾಷಣೆಗಿಳಿಯುವ
ಆ ನಿನ್ನ ನರ್ತನದ ಸದ್ದನು
ಕಿವಿಗೆ ಕೇಳುವ ಆಸೆ!
ಕಣ್ಣಿಗೆ ಸೆರೆಯಿಡಿಯುವ ಆಸೆ!
ನಿನ್ನಲ್ಲಿನ ಸವಿಯ ಆ ಪಾಕವನು
ಪತಂಗಕೆ ಇತ್ತು
ಅದರ ರೆಕ್ಕೆಯಲಿ ಬಣ್ಣವಾಗಿ ಬರುವಾಗ
ನನ್ನೆದೆಯೊಳಗೊಂದು ಪುಷ್ಪವು
ಚಿಗುರಿ ಆ ಪತಂಗವಾಗಿ ಹಾರತೊಡಗಿತ್ತು!
ಇನಿತು ನೀ ಜೀವಂತವಿರೆ ಈ ಆತ್ಮಕೆ
ಎಲ್ಲಿಲ್ಲದ ಸಂತೋಷ...
ನಿನ್ನ ಮಡಿಲ ಬೇರನು ಕಿತ್ತು
ಆ ಕುಂಡದಲಿ ಇರಿಸೆ
ನಿನ್ನ ಆ ಸೊಬಗನು
ಅದನು ಕಾಣುವ
ಎನ್ನಾತ್ಮವನೆಂದಿಗೂ
ಬೇರ್ಪಡಿಸೆನು....
***********************************************************************************************

Tuesday, March 10, 2015

ಅಸ್ತಿತ್ವ?
____
ಹುಟ್ಟುವಾಗ ಕರುಳ ಬಳ್ಳಿಯ ಕಿತ್ತು
ನೋವ ಮುದ್ರೆಯನು ಹೊಕ್ಕುಳಲಿ ಹೊತ್ತು
ನಿರಂತರ ಸಾಗಿದೆ ಈ ಬದುಕು!
ಬಿತ್ತುವ ಬೆಳೆಯು ಮಳೆಯ ಸೊತ್ತು
ಬೆಳೆದ ಫಸಲಿಗೆ ಮಧ್ಯವರ್ತಿಯ ತಾಕೀತು
ಬೆವರ ಹನಿಗೆ ಬೆಲೆಯಿಲ್ಲದೇ
ಉದರ ನಲುಗಿದೆ
ಮುದ್ರೆ ಅಳುತಿದೆ
ಮತ್ತೆ ಸೋತು ಸೋತು!!

ಬೆಳೆವ ಪೈರಿಗೆ ಗೊಬ್ಬರದ ಕೊರತೆ
ಉತ್ತುವ ಮಣ್ಣಿಗೆ ಕಳೆಯ ಒರತೆ
ಆಂತರ್ಯದ ಶಕ್ತಿಯು ಕುಂದಿಹುದು
ಆರದೋ ಅಸ್ತಿತ್ವದ ಬೇಗೆಯಿಂದ
ದುಡ್ಡಿನ ಮರಕಿಂದು ವಸಂತ ಕಾಲ
ತಿನ್ನುವ ಕೂಳಿಗೆ ಬರುತ್ತಿದೆ ಬರಗಾಲ

ಬಿತ್ತುವ ಭೂಮಿಯ ಸ್ವಾತಂತ್ರ್ಯವನು
ಉತ್ತುವ ರೈತನ ಹೃದಯವನು
ಕನಿಕರವಿಲ್ಲದೇ ಚರ್ಮವ ಸುಲಿದು
ಇಂಚಿಂಚು ಕೊಚ್ಚಿ ರಕ್ತವ ಹೀರುತಿಹರಿಲ್ಲಿ
ನರರಕ್ಕಸರು

ಆರದೋ ತೀಟೆಗೆ ಬಿತ್ತಿದ
ಬೀಜವಾಗಿ
ಬೆಳೆದು ಮರವಾಗಿ
ಅಳಿಯುವ ಬದುಕಿಗೆ
ಯಾಕಿಷ್ಟು ವ್ಯಾಮೋಹ?

~ಜಿ.ಪಿ.ಗಣಿ~

Thursday, March 5, 2015

WHATSappu!!!!!

ನಡೆದೈತೆ ನಡೆದೈತೆ
ಹುಚ್ಚು ಆಟವೊಂದು
ಈ ಲೋಕದಾ...ಗೆ......
ಕೇಳ್ತೈತೆ ಕೇಳ್ತೈತೆ
ಅದು ಸೆಲ್ ಫೋನು ಒಂದು
ಈ ಹೃದಯದಾ.....ಗೆ .....
ಒತ್ತೋಕೆ ಮನ್ಸು ಕಾಯ್ತಿರ್ತದೆ
ಕುಣಿಯೋಕೆ ಬೆರ್ಳು ರೆಡಿ ಇರ್ತದೆ
ಅಳಲೊಂದು ಮುಖವಾಡ,
ನಗಿಸೋಕೆ ಪವಾಡ
ಗುದ್ದಾಟವೋ .....
ಇದು,
ಸುಳ್ಳಿನ ಅಖಾ.....ಡ!!
ನಡೆದೈತೆ ನಡೆದೈತೆ
ಹುಚ್ಚು ಆಟವೊಂದು
ಈ ಲೋಕದಾ...ಗೆ......
ಲವ್ವಂತೆ ನಗಿಸೋಕೆ ಗಂಡಿದ್ದರೆ
ಡವ್ವಂತೆ ಸುತ್ತೋಕೆ ಹೆಣ್ಣಿದ್ದರೆ
ಯಾರ್ಯಾರು ಕಾರ್ಟೂ....ನು
ಆರಾರಿಗೋ!
ಮನ್ಸೊಂದು ಇನ್ನೊಂದು
ಎಲ್ಲೆಲ್ಲಿಗೋ!
ನಡೆದೈತೆ ನಡೆದೈತೆ
ಹುಚ್ಚು ಆಟವೊಂದು
ಈ ಲೋಕದಾ...ಗೆ......
~ಜಿ.ಪಿ.ಗಣಿ~

Saturday, February 21, 2015

ಬಚ್ಚಿಟ್ಟ ಪ್ರೀತಿಯನೆಂದಿಗೂ
ಹುಡುಕಲಾಗದು
ಪಡೆದ ಜ್ಞಾನವನು
ಹಂಚದಿರದು
ಮಸ್ತಕದೋಳ್ 
ಜೀರ್ಣವಾಗದು!
ಕಿಸೆಯಲ್ಲಿ ಕಾಸಿರಲು
ಹೋಟೆಲಿನಲಿ ಶೋಕಿಯ ಅಮಲಿರಲು
ಮಾಡಿಟ್ಟ ಅನ್ನವು ಮನೆಯಲಿ
ಹಳಸುತ್ತಿರುವುದು...
ಜೇಬು ಬರಿದಾಗಿ
ನಾರುವ ಅನ್ನದ ಅಗುಳಿಗೂ
ಕಚ್ಚಾಟ ನಡೆದಿದೆ
ಬೀದಿ ನಾಯಿಗಳೊಡನೆ!
ತಿಂದ ಅನ್ನವಾಗಲೀ
ಕುಡಿದ ನೀರಾಗಲೀ
ಸೇವಿಸುವ ಗಾಳಿಯಾಗಲಿ
ಹೊರ ಬರುವವು
ಮತ್ತೊಂದು
ಜನ್ಮವ ತಳೆದು
ಹೊಸ ರೂಪವ ಪಡೆದು ...
~ಜಿ.ಪಿ.ಗಣಿ~

Sunday, February 1, 2015

ಪ್ರೇಮ ಕೃಷಿ

ಎನ್ನೆದೆಯ ಹೊಲವು
ಪಾಳು ಬಿದ್ದಿತ್ತು!
ಪ್ರೀತಿಯ ನೇಗಿಲಲಿ
ಉಳುವವರಿಲ್ಲದೇ ...
ಬೆಳೆದ್ದಿದ್ದವು ಅದೆಷ್ಟೋ
ರೋಗದ ಗಿಡಗಳು
ಹಾಳ-ಹೆಸರಿಲ್ಲದೇ...
ನಿನ್ನಯ ಪ್ರೇಮದ ನೇಗಿಲ
ಹರಿತದಿಂದ
ಈ ಜಡ ಮನವು
ಸಡಿಲಗೊಂಡು
ನಿನ್ನಯ
ಮಮತೆಯ
ಮಳೆ ಹನಿಗಾಗಿ
ಕಾದು ಕುಳಿತಿಹುದು...
ಆವ ಸಸಿಯ
ಬೀಜವಿಹುದೋ ನಿನ್ನಾತ್ಮದಲಿ
ನಾನರಿಯೆನು...
ನನಗೊಂದು ಆಸೆಯಿಹುದು!!
ನೀ ತುಳಸಿಯಾಗಿ
ಜನ್ಮವನು ತಳೆದು
ಬೆಳೆದು ನಿಲ್ಲು
ಎನ್ನೊಡಲ ಕಣ ಕಣದೊಳಗೆ...
ಎನ್ನ ಚಿತ್ತಕ್ಕೆ ಹಾರವಾಗಿ
ಚಿತೆಗೆ ಧೂಪವಾಗಿ
ಪರಮಾತ್ಮ-ಹುತಾತ್ಮರ
ಕೊರಳೆದೆಯಲ್ಲಿ ಅನಂತವಾಗಿ...
~ಜಿ.ಪಿ.ಗಣಿ~

Wednesday, December 17, 2014

ಈರುಳ್ಳಿಯ ಕವಲೊಳಗೆ

ನಿನ್ನಯ ಬದುಕಿನ ರುಚಿಗಾಗಿ
ಒಗ್ಗರಣೆ ಸಾಧನವಾಗಿ
ನನ್ನೆದೆಯ ಒಂದೊಂದು
ಈರುಳ್ಳಿಯ ಕವಲುಗಳನು
ಕತ್ತರಿಸಿತಿರುವೆ!
ಕತ್ತರಿಸುವ ಮುನ್ನ
ನೀ ತುಸು ಯೋಚಿಸು
ನಿನ್ನೊಳಿನ ಹೆಂಗರುಳು
ಕಣ್ಣಂಚಲಿ
ಹಿಂಡಿ ಹಿಂಡಿ
ಕಣ್ಣೀರ ನೋವಾಗಬಹುದು!
ಕತ್ತರಿಸುವ ಸಮಯದಿ ಸಿಕ್ಕ
ಕೊಳೆತ ಕವಲುಗಳನು
ಕಂಡೆನ್ನನೆಂದಿಗೂ ಬಿಸಾಡದಿರು
ಯಾರೋ ಬಿಟ್ಟು ಹೋದ ನೋವಿನ
ಗಾಯವದು;
ಬದಿಗಿಟ್ಟು
ಉಳಿದ ಕವಲುಗಳನು
ಕತ್ತರಿಸಿ ನಿನ್ನೊಳಿನ ಕರುಳ
ಬಂಧವ ರುಚಿಸು!
~ಜಿ.ಪಿ.ಗಣಿ~

Friday, August 15, 2014

ನಿತ್ಯವೂ ಸ್ವಾತಂತ್ರ

***********************************************************************************************
ಸುತ್ತಲೂ ಕತ್ತಲು 
ಮೇಘಗಳ ಹುಡುಕಾಟದಲ್ಲಿ 
ಎಲ್ಲವೂ ತಿಳಿಯಾಗುವುದು 
ಬೆಳಗಾಗುವ ಹೊತ್ತಿಗೆ...
ನಸು ಮುಂಜಾವಿನಲಿ 
ಚಿಗುರುವ ಹಸಿ ಕನಸುಗಳು
ಆಗಸದಿ ಮೆತ್ತಿಟ್ಟ ಶ್ವೇತವರ್ಣದ ಶಿಲ್ಪಗಳು
ಎತ್ತೆತ್ತಲೂ ಹಕ್ಕಿಗಳ ಗಾನಮಾಲೆ
ಕಣ್ಣಿಗೆ ಕಾಣುವುದೆಲ್ಲಾ ಹೊಸತು

ತಣ್ಣನೆಯ ಗಾಳಿಯ ಸಂಚಲನ
ಜಡ ದೇಹದೊಳಗೆ...
ನಿತ್ರಾಣ ಬದುಕಿಗೆ ಉಸಿರಾಡಲು ಅದೇನೋ ರೋಮಾಂಚನ
ಪ್ರಕೃತಿಯೊಳಗಿನ ಪ್ರತಿಕೃತಿಯ ಸವಿಯಲು ನಿತ್ಯವೂ ಜನನ
ಯಾರ ಹಂಗಿಲ್ಲದೇ ಕರ್ಮವೆಲ್ಲವೂ ನಡೆಯುತಿಹುದು
ಅಣು ಅಣುವಿನ ಜತನದಿಂದ
ಕಾಣದ ಮಾಯೆಯ ಆತ್ಮದ ಬಲದಿಂದ
ಸ್ವಾತಂತ್ರ್ಯದ ಸಲಾಕೆಯಿಂದ

ನೆನ್ನೆಯೆಂಬಾ ಬಂಧನದ ಬಿಡುಗಡೆಗಾಗಿ ಹೋರಾಟ
ನಾಳೆಯ ಕಾಣದ ಬದುಕಿಗೆ ತಿರುಳಿಲ್ಲದ ಸೆಣಸಾಟ
ಸ್ವಾತಂತ್ರ್ಯವಿಹುದಿಲ್ಲೀ... 
ನಿತ್ಯಕೆ-ಸತ್ಯಕೆ
ದಿನವೂ ಹಾರಿಸಬೇಕು
ಬಾಳಿನ ಹರುಷದ ವಿಜಯ ಪತಾಕೆ

~ಜಿ.ಪಿ.ಗಣಿ~ 
***********************************************************************************************

Monday, May 12, 2014

ಓ ಪ್ರೀತಿಯೇ ನೀನೆಂದಿಗೂ ಆಗದಿರು ನೀಲಿ ವರ್ಣದ ಸುಂದರಿ !!!

***********************************************************************************************
ಜೇಬಲ್ಲಿ ಕಾಸಿಲ್ಲ
ಮನದಲ್ಲಿ ಅಳುಕಿಲ್ಲ
ಬಿಕ್ನಾಸಿ ಬದುಕಿಗೆ ಚೌಕಾಸಿ ಬೇಕು
ಪ್ರೀತೀನ ಪಡೆಯಲು ತಿರ್ಕೆ ಶೋಕಿ ಸಾಕು

ತೋರಿಕೆಯ ಈ ಪ್ರೀತಿ
ಇದಕೆ ಆಯಸ್ಸು
ಕೇವಲ ಒಂದು ದಿನ
ಅದುವೇ ಪ್ರೇಮಿಗಳ ದಿನ

ನಿತ್ಯವೂ ನಡೆಯುವುದು ಕದನ
ಇದುವೇ ನೆಲೆಯಿಲ್ಲದ ಸದನ
ಮಾತು ಮಾತಿಗೂ ಬದಲಾಗುವ ವದನ
ತಣ್ಣಗಾಗಲು ಹಾಗೊಮ್ಮೆ ಹೀಗೊಮ್ಮೆ ಚುಂಬನ

ಆರು ಇದ್ದರೆ, ಆ ಹುಡುಗಿ
ಮೂರೂ ಬಿಟ್ಟರೆ, ಈ ಹುಡುಗಿ
ಅವಳೇ ವಯ್ಯಾರದ ಬೆಡಗಿ
ಹುಡುಗನಾಗುವನು ಸೂಲಂಗಿ
ಅವಳ ನೆನಪಲ್ಲೇ
ಕೊರಗೀ ಕೊರಗೀ

ನೆಪಕ್ಕಷ್ಟೇ ಆಕೆ ಸ್ನೇಹಿತೆ
ಇವನಲ್ಲಿ ಇರುವುದೆಲ್ಲ ದುರ್ನಡತೆ
ಅವಳೂ ಏನು ಕಮ್ಮಿ ಇಲ್ಲ
ಇವನಿಗಿಂತ ಸಿಕ್ಕರೆ ಒಳ್ಳೆಯ ನಲ್ಲ
ಪರಾರಿಯಾಗಲು
ಹೊಂಚು ಹಾಕುವುದನು ಮರೆಯುವುದೇ ಇಲ್ಲ

ಪರಿಣಿತರಿವರೀರ್ವರು
ಅವರವರ ಚಪಲದ ಕಡೆಗೆ
ಅರಿವಿಲ್ಲದ ಈ ಪ್ರೀತಿಯ ಬೇಟೆ
ಮಾಡುತಿದೆ ನಿಷ್ಠೆಯ ಸುಲಿಗೆ

~ಜಿ.ಪಿ. ಗಣಿ~

***********************************************************************************************

Thursday, May 8, 2014

ಪ್ರೇಮ ಶಿಲ್ಪಿ

***********************************************************************************************
ಬರಿಗಲ್ಲಿನಂತಿದ್ದ ಹೃದಯಕೆ
ಪ್ರೀತಿಯ ಉಳಿಯೇಟನಿತ್ತು
ಶಿಲೆಯಾಗಿಸಿದೆ ನೀನೆನ್ನನು
ಮೌನ ಶಿಲ್ಪಿಯಾಗಿ
ಕಣ್ಮುಂದೆ ನೀ ಸುಳಿದ ದಿನವೇ
ಹೃದಯ ಶಿಲೆಯ ರೂಪರೇಖೆಯನು
ನಿನ್ನಯ ನಗುವು ಬರೆದಿತ್ತು
ಕಣ್ಣ ನೋಟದ ಉಳಿಗೆ
ನಿನ್ನಯ ಮೊಗದ ಸುತ್ತಿಗೆಯೇಟು
ಜೋರಾಗಿ ಆಗಾಗ ಬೀಳುತ್ತಿತ್ತು
ಮನದಲ್ಲಿನ ಜಡವು ಕಳಚಿ ಒಂದೊಂದಾಗಿ
ಆಕಾರ ಪಡೆಯುತ್ತಿತ್ತು
ಬಂದಿತ್ತೊಂದು ದಿನ
ಪ್ರೀತಿಯ ಹೃದಯ ಶಿಲೆಯ
ಲೋಕದ ಪ್ರದರ್ಶನಕ್ಕಿಡಲು
ಬಂಧನಗಳೆಂಬ ಮಾರಾಟದ ವಸ್ತುವಾಗಿಸಲು
ಮತ್ಯಾರೋ ಕೊಂಡು ಹೋದರು
ಮೂಢ ಜನಗಳ ಮಾತಿನ ಶಂಕೆಗೆದರಿ
ಪರರ ಕಣ್ಣಿಗೆ ಸುಂದರ ಹೃದಯ ಶಿಲೆಯು ನಾನು
ಆದರೊದರೊಳಗಿನ ಜೀವ ಮೂರ್ತಿ

ಕೇವಲ ನೀನು! ಕೇವಲ ನೀನು!

~ಜಿ.ಪಿ.ಗಣಿ~

***********************************************************************************************

Saturday, April 5, 2014

ಇನ್ನಾದರೂ ನಿನ್ನುಸಿರಿಗೆ ಉಸಿರನು ನೀ ಬೆರೆಸು

***********************************************************************************************

 ಇನ್ನಾದರೂ ನಿನ್ನುಸಿರಿಗೆ ಉಸಿರನು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು

ನಿರಂತರ ಗುಡುಗುವ ಹೃದಯವು
ಇತ್ತೀಚಿಗೆ ಕಂಪಿಸುತ್ತಿದೆ
ಭಾರವೆನಿಸುತಿದೆ
ಓಟದ ಆಟ ಸಾಕಾಗಿಹೋಗಿದೆ
ಕಾಣದ ಮಿಡಿತ ಮರುಗಿ ಕಂಬನಿಗರೆದು
ಸಾಂತ್ವನಕಾಗಿ ಹಂಬಲಿಸುತಿದೆ
ಮಿಡಿತಕ್ಕೆ ಹಿಡಿತವ ತರುವ
ವೈದ್ಯನ ಪೋಷಣೆ ಬೇಕಾಗಿದೆ
ಅಳಲು ತೋಡಿಕೊಳ್ಳಲು ತಾಯಿಯಂತಹ
ಮಮತೆಗಾಗಿ ಕಾಯುತ್ತಿದೆ
ಬದುಕ ಮುನ್ನಡೆಸಲು ತಂದೆಯಂತಹ
ಅಧಿಪತಿಗಾಗಿ ಹಪಹಪಿಸುತ್ತಿದೆ.
ಇನ್ನಾದರೂ ನಿನ್ನ ಬದುಕ ಬದುಕೆಂದು
ಸಾರಿ ಸಾರಿ ಚೀರುತ್ತಿದೆ
ಜೀವಕೆ ಜೀವವಾಗುವ ಹೊತ್ತಿಗೆ
ನಿರ್ಜೀವವಾಗುವ ಘಟ್ಟ
ನಾಲ್ಕು ಜನರು ಕಾಯುತ್ತಿರುವರು
ಹೊತ್ತೊಯ್ಯಲು ನಿನ್ನ ಚಟ್ಟ

ಇನ್ನಾದರೂ ನಿನ್ನುಸಿರಿಗೆ ಉಸಿರು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು
ಮನಸಿನೊಳು ಬರುವುದು ಅರಿವಿನ ಸೊಗಸು
ಇದೇ ಸ್ವರ್ಗ!! ಇದೇ  ಸ್ವರ್ಗ!!

~ಜಿ.ಪಿ.ಗಣಿ~
***********************************************************************************************

Tuesday, March 11, 2014

ಅಲೆಮಾರಿ

***********************************************************************************************

ಅಲೆಮಾರಿ...
ನಾ... ಅಲೆಮಾರೀ
ಕೃಪೆ ತೋರಿ...
ನೀ ಬಾರೇ
ಸುಕುಮಾರಿ...

ನಿನ್ನಯ ಮೊಗದಲ್ಲಿನ ಮೊಡವೆ
ದೃಷ್ಟಿ ಬೊಟ್ಟಿನಾ ಒಡವೆ...
ನಸು ನಕ್ಕಿದೆ. ನೀ ಒಲವೇ!
ಮನಕೆ ಸಹಿಸಲಾಗದ
ಯಾಕೀ ಗೊಡವೆ!!!

ಅಲೆಮಾರಿ...
ನಾ... ಅಲೆಮಾರೀ
ಕೃಪೆ ತೋರಿ
ನೀ ಬಾರೇ ಸುಕುಮಾರಿ...

ನಿನ್ನ ಕಾಲ್ಗೆಜ್ಜೆಯಾ ಸದ್ದು
ನನ್ನ ಕಿವಿಗೇ ಮುದ್ದು
ಹೃದಯ ಮಿಡಿತದಾ ಡೋಲು
ಪದಗಳ ಕವಿತೆಯಾ ಸಾಲು
ನಿನ್ನ ಕಣ್ಣಾ ಮಿಂಚಿನ ನೋಟ
ಒಳಗಡೆ ಚಿಟ್ಟೆಯ ಹಾರಾಟ!

ನಿನ್ನ ಆಗಮನವೇ ಸೂರ್ಯೋದಯ
ನಿನ್ನ ನಿರ್ಗಮನವೇ ಚಂದ್ರೋದಯ
ಎಂದಿಗೂ ನೀ ತರಬೇಡ ಅಮಾಸ್ಯೆಯ
ಬಳಿ ನೀನಿದ್ದರೆ ಬೇಡುವೆ ನಾ
ಸದಾ ಹುಣ್ಣಿಮೆಯ...

ಅಲೆಮಾರಿ...
ನಾ... ಅಲೆಮಾರೀ
ಕೃಪೆ ತೋರಿ
ನೀ ಬಾರೇ ಸುಕುಮಾರಿ...!

~ ಜಿ.ಪಿ.ಗಣಿ~

***********************************************************************************************

ನಾ ದೊಡ್ದವನಾಗಬಾರದಿತ್ತು...

***********************************************************************************************

ನಾ ದೊಡ್ದವನಾಗಬಾರದಿತ್ತು...

ಗೊತ್ತಿಲ್ಲ, ಗುರಿಯಿಲ್ಲ
ಭೂಮಿಗೆ ದರುಶನವಾಯಿತಲ್ಲ
ತಾಯ ಗರ್ಭದ ಹೊರಗೆ
ಬಂದಾಗ ನಾ...
ಎಲ್ಲರ ಮೊಗದಲ್ಲಿ
ಸಂತಸದ ನಗು /
ಎಲ್ಲರೂ ತಮ್ಮನು ಮರೆತು
ಆಗಿದ್ದರು
ನನ್ನಂತಯೇ ಪುಟ್ಟ ಮಗು /
ಈಗ ಕರುಬುವರು
ನನ್ನ ಏಳಿಗೆಯ ಕಂಡು /
ಒಮ್ಮೊಮ್ಮೆ ದೂರ ಓಡುವರು
ಅವರ ಬಳಿ ಸಾಲವೆಲ್ಲಿ ಕೇಳುವೆನೆಂದು!!!

ನಾ ದೊಡ್ದವನಾಗಬಾರದಿತ್ತು...

ಚಂದ ಮಾಮನೊಂದಿಗೆ
ಕಣ್ಣ ಮುಚ್ಚಾಲೆಯ
ಆ ಬೆಳದಿಂಗಳ ಹೊತ್ತು
ತಾರೆಗಳ ಮಿನುಗುವ ಹಾಡಿನೊಂದಿಗೆ
ಬಾಯಿಗೆ ಬೀಳುತಿತ್ತು
ಅಮ್ಮನ ಕೈತುತ್ತು...
ಈಗ ಎಲ್ಲವೂ ಮರೆಯಾಗಿದೆ
ಕಾರಣ ನಾ ದೊಡ್ಡವನೆಂದು //

ನಾ ದೊಡ್ದವನಾಗಬಾರದಿತ್ತು...

ಕಲಿಕೆಗಾಗಿ ನೂರೆಂಟು ವರಸೆಗಳು
ಬಯಕೆಗಾಗಿ ಪೊಳ್ಳು ನಟನೆಗಳು
ಆದರೂ ಅದರಲ್ಲಿ ಮೋಸವಿಲ್ಲ
ಮುಗ್ದ ನಗುವಿದೆ
ಪ್ರೀತಿಯ ಸಾರವಿದೆ
ಈಗ ನಿತ್ಯವೂ ಮುಖವಾಡ
ಪ್ರೀತಿಯ ಓಲೈಕೆಗಾಗಿ
ಹಣದ ಅಮಲಿಗಾಗಿ
ಅಧಿಕಾರದ ದರ್ಪಕಾಗಿ
ಅಸ್ತಿತ್ವದ ಭಯಕೆ
ಅಡಿಯಾಳಾಗಿ ಬದುಕ ನಡೆಸುತ್ತಿರುವೆನು
ನಿರ್ಜೀವದ ಗೊಂಬೆಗೆ ಕೀಲಿ ಕೈಯಾಗಿ
ನಿತ್ಯವೂ ಆಳಾಗಿ, ಹಾಳಾಗಿ..!

 ನಾ ದೊಡ್ದವನಾಗಬಾರದಿತ್ತು...

~ಜಿ.ಪಿ.ಗಣಿ~

***********************************************************************************************

Monday, February 3, 2014

ಹೂವೆಂಬ ಚೇತನ

*********************************************************************************************** ಹೂವು ನಾನು ನನಗೂ ಒಂದು ಬದುಕಿದೆ...

ಹುಟ್ಟಿ ಸಾಯುವ
ಮೂರು ದಿನದ ಈ ಬದುಕಿನಲಿ
ನನಗೂ ಇದ್ದವು ನೂರಾರು ಕನಸುಗಳು
ಬೆಳೆಯುವ ಆತುರದಲ್ಲಿ
ಉದುರಿಹೋಗುವೆನೆಂಬ
ಅರಿವಿರದೆ ಹುಡುಕುತ್ತಿದ್ದೆ ಸಂಪನ್ಮೂಲಗಳು

ಉಸಿರಾಡಲು ನಿರಂತರ ಗಾಳಿ ಬೀಸುತಿತ್ತು
ಆಸೆಯ ದಾಹಕೆ ನೀರಿನ ಹನಿ ಜಿನುಗುತ್ತಿತ್ತು
ಅರಳುವ ಮೋಹಕೆ ಸೂರ್ಯನ ಸ್ಪರ್ಶ ಸಾಕಿತ್ತು

ಕಾಣದೆ ಅವಿತಿದ್ದ ತನ್ನೊಳಗಿನ
ಯೌವ್ವನ ಮೈದಳೆದು ನಿಂತಿತ್ತು
ಜಗತ್ತಿನೆದುರು ತನ್ನ ಸೌಂದರ್ಯವ
ಪ್ರಜ್ಞೆಯಿಲ್ಲದೆ ಬೆತ್ತಲಾಗಿಸಿತ್ತು.

ಹೂವು ನಾನು ನನಗೂ ಒಂದು ಮನಸಿದೆ ...

ನನ್ನ ಕನಸಿನ ಬಣ್ಣಗಳ ಕದಡಿ ಹೋದವರೆಷ್ಟೋ
ಸಿಹಿ ನೆನಪಿನ ಮಕರಂದವ ಹೀರಿ ನಕ್ಕವರೆಷ್ಟೋ
ಕರುಳಬಳ್ಳಿಯ ಕಿತ್ತು ತಮ್ಮ ಮುಡಿಗೆ ಮೊಡೆದವರೆಷ್ಟೋ...

ಹೂವು ನಾನು ನನಗೂ ಒಂದು ನೋವಿದೆ...

ಉಸಿರಾಡುತಿದ್ದ ಗಾಳಿಯೇ ನನ್ನ ಗಂಧವ ಸವೆಯಲು ಶುರು ಮಾಡಿತ್ತು
ಬೆಚ್ಚನೆಯ ಸ್ಪರ್ಶವಿತ್ತ ಬೆಳಕೇ ನನ್ನ ಕೆಕ್ಕರಿಸಿ ನೋಡುತ್ತಿತ್ತು
ಆಸೆಯ ದಾಹವ ತೀರಿಸಲಿದ್ದ ನೀರೇ ಮೋಹದೆನ್ನ ಮನವ ಹೀರುತ್ತಿತ್ತು

ಅರಳಿ ಬಾಡುವ ಈ ಕಮಾನಿನಲ್ಲಿ
ಕಲಿತದ್ದು, ಕೊಟ್ಟದ್ದು, ಬಿಟ್ಟದ್ದು
ಯಾವುದೂ ಪರರ ಅರಿವಿಗೆ ಬಾರದ್ದು

ಅರಳುವಾಗಲ್ಹರಸಿದವರು
ಬಾಡುವಾಗಲೂ ಉಳಿದರು
ಕೊಳೆತು ಮಣ್ಣಲಿ ಮಣ್ಣಾಗಿಸಿದರು
ಗಳಿಸಿದ್ದೇನೂ ಉಳಿಸಲಾಗಲಿಲ್ಲ
ಉಳಿದದ್ದು ಒಂದೇ ಅದು ಸಾರ್ಥಕತೆಯು...

ಹೂವು ನಾನು ನನಗೂ ಒಂದು ಗರ್ವವಿದೆ...

ಅಣುವಲಿ ಅಣುವಾಗಿದ್ದೆನಗೆ
ಪ್ರಕೃತಿಯು ಆಕಾರವನಿತ್ತಿತ್ತು
ಒಳಗಿನ ಒಳಗನು ಅರಿಯದೆ
ನನ್ನನು,
ಕೊನೆಗೂ ಅಣುವಾಗಿಸಿ...ಬಿಟ್ಟಿತ್ತು.
ನಾನೇ ಪ್ರಕೃತಿಯು
ಎಂದು
ಭೀಗುವ ಸಂತಸ
ಮನದಲಿ ಮೂಡಿತ್ತು.

~ ಜಿ.ಪಿ.ಗಣಿ~

*********************************************************************************************** 

Friday, January 10, 2014

ಆದರೂ ಪ್ರಜ್ಞೆಯಿರಬೇಕಾಗಿತ್ತು

***********************************************************************************************  
  ವರ್ಷವೆಲ್ಲಾ ಪರದಾಡುತ್ತ...

ಮೌಲ್ಯವಿಲ್ಲದ ಅನಿಸಿಕೆಗಳಿಗೆ
ಬಲಿಯಾಗಿ/
ಸುತ್ತಲಿನ ವಾತಾವರಣಕ್ಕೆ
ಅಡಿಯಾಳಾಗಿ/
ತರಕಾರಿ ಮಾರುಕಟ್ಟೆಯೊಳಗಿನ
ವ್ಯಾಪಾರದಂತೆ ನಿತ್ಯವೂ
ನಡೆಯುತ್ತಿರುವುದು ಚೌಕಾಶಿ/

ಆದರೂ ಪ್ರಜ್ಞೆಯಿರಬೇಕಾಗಿತ್ತು...

ದೇವರ ಕಾಣಲು ಜಾತ್ರೆಯ ದಿನವೇ ಬೇಕು/
ಕಾಲ್ತುಳಿತಕ್ಕೆ ಸಿಕ್ಕಿ ನರಳುವ ಆ ಯಾತನೆ
ಯಾರಿಗೆ ತಾನೇ ಬೇಕು?
ಆದರೂ ಅದು ಸಂಪ್ರದಾಯ!
ಹಾಗಾದೆಡೆ
ದೇವರು ಬೇರೆಯ ದಿನವು ಗುಡಿಯ ತ್ಯಜಿಸುವನೇ?
ಅದು ಕೇವಲ ಜಿಜ್ಞಾಸೆ!

ಆದರೂ ಪ್ರಜ್ಞೆಯಿರಬೇಕಾಗಿತ್ತು...

ಮಂಜು ಮುಸುಕಿದೆ
ಕಾಣದ ದಾರಿಗೆ/
ನಿತ್ಯವೂ ನಡೆಯುತ್ತಿದೆ ಸ್ಪರ್ಧೆ/
ಸೂರ್ಯನ ಕಿರಣ ಬರುವತನಕ
ಕಾಯುವ ಸೈರಣೆಯಿರಲಿಲ್ಲವೆಮಗೆ!

ಆದರೂ ಪ್ರಜ್ಞೆಯಿರಬೇಕಾಗಿತ್ತು...

ವಿದ್ಯಾರ್ಥಿಗೆ ಅಂಕ ಗಳಿಕೆಯ ಒದ್ದಾಟ
ಪರೀಕ್ಷೆಯ ಹಿಂದಿನ ದಿನದಂದು!
ಅಪ್ಪನಿಗೆ ತಳಮಳ ಮಗಳ ಮದುವೆಯ
ಹಿಂದಿನ ದಿನದಂದು!
ಅಂತ್ಯವಾಗುವ ಹೊತ್ತಿಗೆ
ಎಲ್ಲವೂ ಬರುವುದು ಒಮ್ಮೆಯೇ
ನಮ್ಮ ಬಳಿ ಇಲ್ಲದಿರುವುದೊಂದೇ
ಅದು ಸಮಯ! ಅದು ಸಮಯ!

ಅದಕೆ ಪ್ರಜ್ಞೆಯಿರಬೇಕಿತ್ತು//

---ಜಿ.ಪಿ.ಗಣಿ---

***********************************************************************************************