ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, August 15, 2014

ನಿತ್ಯವೂ ಸ್ವಾತಂತ್ರ

***********************************************************************************************
ಸುತ್ತಲೂ ಕತ್ತಲು 
ಮೇಘಗಳ ಹುಡುಕಾಟದಲ್ಲಿ 
ಎಲ್ಲವೂ ತಿಳಿಯಾಗುವುದು 
ಬೆಳಗಾಗುವ ಹೊತ್ತಿಗೆ...
ನಸು ಮುಂಜಾವಿನಲಿ 
ಚಿಗುರುವ ಹಸಿ ಕನಸುಗಳು
ಆಗಸದಿ ಮೆತ್ತಿಟ್ಟ ಶ್ವೇತವರ್ಣದ ಶಿಲ್ಪಗಳು
ಎತ್ತೆತ್ತಲೂ ಹಕ್ಕಿಗಳ ಗಾನಮಾಲೆ
ಕಣ್ಣಿಗೆ ಕಾಣುವುದೆಲ್ಲಾ ಹೊಸತು

ತಣ್ಣನೆಯ ಗಾಳಿಯ ಸಂಚಲನ
ಜಡ ದೇಹದೊಳಗೆ...
ನಿತ್ರಾಣ ಬದುಕಿಗೆ ಉಸಿರಾಡಲು ಅದೇನೋ ರೋಮಾಂಚನ
ಪ್ರಕೃತಿಯೊಳಗಿನ ಪ್ರತಿಕೃತಿಯ ಸವಿಯಲು ನಿತ್ಯವೂ ಜನನ
ಯಾರ ಹಂಗಿಲ್ಲದೇ ಕರ್ಮವೆಲ್ಲವೂ ನಡೆಯುತಿಹುದು
ಅಣು ಅಣುವಿನ ಜತನದಿಂದ
ಕಾಣದ ಮಾಯೆಯ ಆತ್ಮದ ಬಲದಿಂದ
ಸ್ವಾತಂತ್ರ್ಯದ ಸಲಾಕೆಯಿಂದ

ನೆನ್ನೆಯೆಂಬಾ ಬಂಧನದ ಬಿಡುಗಡೆಗಾಗಿ ಹೋರಾಟ
ನಾಳೆಯ ಕಾಣದ ಬದುಕಿಗೆ ತಿರುಳಿಲ್ಲದ ಸೆಣಸಾಟ
ಸ್ವಾತಂತ್ರ್ಯವಿಹುದಿಲ್ಲೀ... 
ನಿತ್ಯಕೆ-ಸತ್ಯಕೆ
ದಿನವೂ ಹಾರಿಸಬೇಕು
ಬಾಳಿನ ಹರುಷದ ವಿಜಯ ಪತಾಕೆ

~ಜಿ.ಪಿ.ಗಣಿ~ 
***********************************************************************************************

Sunday, July 6, 2014

ಕರ್ಮಣ್ಯೇ ವಾದಿಕಾರಸ್ತೆ!!

***********************************************************************************************
ಹಸಿರೆಲೆಗಳಿಂದೇರಿದ ಹನಿಯ ಮುತ್ತು ಆವಿಯಾಗಿಹುದೋ
ಕರಗಿ ಭುವಿಯನ್ ಸೇರಲ್ ಬಯಸಿತಿರ್ಪುದು

ಹಸಿವ ಬೇಗೆಯೋಳ್ ಹೃದಯವಂ ಹಿಸುಕಿದಂತಾದೆಡೆ
ಖಾಲಿಯಾಗಿಹ ಉದರವನ್ ಭರ್ತಿಯಾಗಿಪುದೇ

ಸೋಲೆಂಬ ಭಯಂ ಆತ್ಮದೊಳಗಿರಲ್
ಗೆಲುವೆಂಬ ಭಕ್ತಿಯನ್ ಆರಾಧಿಸಲಾಗಿಪುದೇ

ಆತ್ಮದೋಳ್ ಸಾವಿನ ಶಂಕೆಯನ್ ಹೊತ್ತು
ದೇಹವನ್ ದೂಶಿಸಿದೆಡೆ ಸ್ವರ್ಗವನ್ ಪಡೆಯಲಾಗಿಪುದೇ

ಚಿಂತೆಯೆಂಬಾ ಚಿತೆಯೋಳ್ ಹುದುಗಿ
ಜೀವ ಭಿಕ್ಷೆಯನ್ ಕೇಳಿದೆಡೆ
ಚಿತೆಯನ್ ಸುಡುವ ಬೆಂಕಿಯೋಳ್
ಆಲಾಪನೆಯೂ ಬೆಂದು ಬೂದಿಯಾಗದಿರ್ಪುದೇ

ತಳಮಳದಿಂ ಬಳಲ್ತಿರುವ ಮಸ್ತಕವನ್
ಅಡಗಿಸುವ ದಿಟ್ಟ ಧೀರತನಂ ನಿನ್ನಾತ್ಮದೊಳಲ್ಲದೇ
ಮತ್ತೆಲ್ಲೋ ಹುಡುಕಲಾಗಿಪುದೇ

ಮನಸು ಭಾರದೊಳಿರಲ್ ಕತ್ತಲಾವರಿಪುದು
ನಿಮಿಷ ನಿಮಿಷವನ್ ಪ್ರೀತಿಸಲ್ ಬದುಕು ಹಸನಾಗುವುದು
ಕರ್ಮವನ್ ನಡೆಸುತಲಿ ಫಲವನ್ ಅವನ ಪಾದಕರ್ಪಿಸಿದೆಡೆ
ಆತ್ಮಗರ್ಭದೋಳ್ ಆತನವತರಿಸುವನು

~ಜಿ.ಪಿ.ಗಣಿ~
***********************************************************************************************

Thursday, June 19, 2014

ಪ್ರೇಮ ಖೈದಿ

***********************************************************************************************
ನಿನ್ನಯ ನೆನಪೆಂಬ
ಬಲೆಯ ಬೀಸಿ 
ಅರಿವಳಿಕೆಯನು ಕೊಟ್ಟು 
ಎನ್ನ ಬಂಧಿಸಬೇಡ
ನನ್ನನು ನನ್ನ ಪಾಡಿಗೆ ಬಿಟ್ಟುಬಿಡು
ಓ ಗುಲಾಬಿ
ನಿನ್ನಯ ಪ್ರೇಮ ಮೃಗಾಲಯದಲ್ಲಿ
ನನ್ನನೆಂದಿಗೂ ದಾಸನಾಗಿಸಬೇಡ
ಸ್ವಚ್ಛಂದವಾಗಿ ಬದುಕ ನಡೆಸೋಣ
ಬರುವೆಯಾ ಓ ಗುಲಾಬಿ
ಹಸಿರಿನ ವನದಲ್ಲಿ
ಪ್ರೀತಿಯ ಬನದಲ್ಲಿ
ನವ ಬದುಕಿನಂಗಳಕೆ
ಮುನ್ನುಡಿಯಾಗಿ ಬಿಡಿಸೋಣ
ಬಣ್ಣ ಬಣ್ಣದ ರಂಗವಲ್ಲಿ
.
.
.
~ಜಿ.ಪಿ.ಗಣಿ~

***********************************************************************************************

ಅಮೃತಧಾರೆ

***********************************************************************************************
ಕಣ್ಣೆಂಬ ಆಗಸದೊಳ್'
ತುಂತುರು ಹನಿಯನ್ನಿತ್ತೆಡದು ಪನ್ನೀರು
ಬೋರ್ಗರೆವ ಮಳೆಯಾದರದು ಕಣ್ಣೀರು
ಎರಡೂ ನಿನ್ನದಲ್ಲವೇ ಓ ಗುಲಾಭಿ
ಮುಳ್ಳೆಂಬ ನೋವಲಿ ಚುಚ್ಚಿದೆಡೆ ಕಣ್ಣೀರ ಧಾರೆ
ನಲಿವೆಂಬ ದಳದಿ ನಗುವ ಬೀರಿದರದೇ ಪನ್ನೀರ ಧಾರೆ
ಬೆಂಗಾಡಿನ ನನ್ನೀ ಬದುಕ; ನೀ ಬೆಳಗಲು ಬರುವೆಯಾ ಅಮೃತಧಾರೆ

~ ಜಿ.ಪಿ.ಗಣಿ~

***********************************************************************************************

Thursday, June 12, 2014

ರಕ್ತದೊತ್ತಡ

***********************************************************************************************
ಕಸಿಯುತಿರುವ ಮನದ ಭಾವನೆಯ ಹೊನಲು
ಬಾಡುತಿರುವ ಆಸೆಯೆಂಬ ಹೂವಿನ ಘಮಲು

ದೂರವಾಗುತಿಹುದು ಎದೆಯ ಬಡಿತ ಉಸಿರಿಗೆ ಸಿಗದೇ
ಮರೆಯಾಗುತಿಹುದು ಕನಸುಗಳು ವಾಸ್ತವದ ಅರಿವಿರದೇ

ಭಾರವಾಗಿಹುದೆಲ್ಲವೂ ಮೌನದ ಮಡಿಲಲ್ಲಿ
ಅರೆಹುಚ್ಚು ಮತಿಗೆ ಚಿಂತೆಯೆಂಬ ಒತ್ತಡದ ಸುಳಿಯಲ್ಲಿ

ಗಂಟಲೊಳಗಿಳಿಯುವ ನೀರಿಗೂ ಆಹಾಕಾರ
ಒಣಗುತ್ತಿರುವುದೇಕೋ ಹಸಿರ ಅಂತರಂಗದಲಿ
ಬದುಕೆಂಬ ಕುಡಿಯೊಡೆದ ಬೀಜ

~ಜಿ.ಪಿ.ಗಣಿ~
***********************************************************************************************

Saturday, June 7, 2014

ಚಿನ್ನದ ಗಿರವಿ ಅಂಗಡಿ

***********************************************************************************************
ನೀನೆಂಬ ಚಿನ್ನದ ಗಿರವಿ ಅಂಗಡಿಗೆ
ನನ್ನ ಹೃದಯದೋಲೆಯನು ಗಿರವಿ ಇಟ್ಟ
ಆ ದಿನದಿಂದ ನಾನು ಬಡವನಾಗಿದ್ದೇನೆ
ನಿನ್ನ ಹುಚ್ಚು ಬಡ್ಡಿಯ ಪ್ರೀತಿಯಲಿ
ನಾನು ಮುಳುಗಿಹೊಗಿದ್ದೇನೆ
ಮತ್ತೆ ನನ್ನ ಹೃದಯದೋಲೆಯನು
ಬಿಡಿಸಿಕೊಳ್ಳುವ ಶಕ್ತಿಯು ಎನಗಿಲ್ಲ
ದಯಮಾಡಿ ಉತ್ತರಿಸು
ನನ್ನ ಬದುಕನು ಕೈಹಿಡಿದು ನೀ ಉದ್ದರಿಸು

~ಜಿ.ಪಿ.ಗಣಿ~

***********************************************************************************************

ಹುಚ್ಚು ಭಾವದ ನಿಚ್ಚಳ ಪ್ರೀತಿ

***********************************************************************************************
ಸಕ್ಕರೆಯ ಪಾಕದ ಪ್ರೀತಿಗೆ ಜಾಮೂನಿನಂತಹ ಭಾವಗಳು
ಪ್ರೀತಿಯ ಸಕ್ಕರೆಯ ಪಾಕದ ಸವಿಯು ಕೊನೆಯವರೆಗೂ 
ಭಾವವೆಂಬ ಜಾಮೂನು ಪಾಕದಲ್ಲೇ ಮುಳುಗಿರುವವರೆಗೂ
ಮನಸ್ಸಿಗೆ ಸಂದೇಶ ಜಾ"ಮೂನು"
ಪಾಕವಿಲ್ಲದ ಬರಿಯ ಭಾವಗಳ ಸವಿಯು ಕೇವಲ ಅಪೀಮು

---
ನಿನ್ನ ಕಣ್ಣ ನೋಟದ ಮಿಂಚಿನ ಸಿಡಿಲಿಗೆ
ಹೃದಯದರಮನೆಯ ದೀಪಗಳೆಲ್ಲ
ಹೊತ್ತಿ ಬೆಳಕ ತಂದಿತು.

---
ನಿನ್ನ ಕೂದಲಿನ ಪರೆದೆಯು
ನಮ್ಮಿಬ್ಬರೊಡನೆ ಕಣ್ಣಾಮುಚ್ಚಾಲೆಯಾಡುತ
ಮನದ ಕೂಸಿಗೆ ಕಚಗುಳಿಯಿಡುತಿತ್ತು

---
ನಿನ್ನಯ ಮುದ್ದಾದ ಮೊಗವೆಂಬ ಗೊಂಬೆಯು
ನನ್ನಯ ಮುಗ್ದ ಹೃದಯಕೂಸನು ಆಟವಾಡಲು ಬಾ ಎಂದು ಕರೆಯುತ್ತಿದೆ.

---
ನಿನ್ನೊಂದು ಆ ಮುಗುಳುನಗೆ
ಮನದ ಮನೆಯ ತುಂಬೆಲ್ಲಾ ದೀಪಾವಳಿಯ ಹಬ್ಬದ ಸಡಗರ.

~ಜಿ.ಪಿ.ಗಣಿ~

***********************************************************************************************