ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, May 8, 2014

ಪ್ರೇಮ ಶಿಲ್ಪಿ

***********************************************************************************************
ಬರಿಗಲ್ಲಿನಂತಿದ್ದ ಹೃದಯಕೆ
ಪ್ರೀತಿಯ ಉಳಿಯೇಟನಿತ್ತು
ಶಿಲೆಯಾಗಿಸಿದೆ ನೀನೆನ್ನನು
ಮೌನ ಶಿಲ್ಪಿಯಾಗಿ
ಕಣ್ಮುಂದೆ ನೀ ಸುಳಿದ ದಿನವೇ
ಹೃದಯ ಶಿಲೆಯ ರೂಪರೇಖೆಯನು
ನಿನ್ನಯ ನಗುವು ಬರೆದಿತ್ತು
ಕಣ್ಣ ನೋಟದ ಉಳಿಗೆ
ನಿನ್ನಯ ಮೊಗದ ಸುತ್ತಿಗೆಯೇಟು
ಜೋರಾಗಿ ಆಗಾಗ ಬೀಳುತ್ತಿತ್ತು
ಮನದಲ್ಲಿನ ಜಡವು ಕಳಚಿ ಒಂದೊಂದಾಗಿ
ಆಕಾರ ಪಡೆಯುತ್ತಿತ್ತು
ಬಂದಿತ್ತೊಂದು ದಿನ
ಪ್ರೀತಿಯ ಹೃದಯ ಶಿಲೆಯ
ಲೋಕದ ಪ್ರದರ್ಶನಕ್ಕಿಡಲು
ಬಂಧನಗಳೆಂಬ ಮಾರಾಟದ ವಸ್ತುವಾಗಿಸಲು
ಮತ್ಯಾರೋ ಕೊಂಡು ಹೋದರು
ಮೂಢ ಜನಗಳ ಮಾತಿನ ಶಂಕೆಗೆದರಿ
ಪರರ ಕಣ್ಣಿಗೆ ಸುಂದರ ಹೃದಯ ಶಿಲೆಯು ನಾನು
ಆದರೊದರೊಳಗಿನ ಜೀವ ಮೂರ್ತಿ

ಕೇವಲ ನೀನು! ಕೇವಲ ನೀನು!

~ಜಿ.ಪಿ.ಗಣಿ~

***********************************************************************************************

ಬೆಸುಗೆಯ ಕೊಂಡಿ ಕಳಚಿದಾಗ

***********************************************************************************************
ಬಾಂಧವ್ಯದ ಬೆಸುಗೆಯಲಿ ಕಳಚಿರುವುದೊಂದು ಕೊಂಡಿ
ಎಷ್ಟು ಬಾರಿ ಬೆಸೆಯಲೆತ್ನಿಸಿದರೂ ಸವೆಯುತಲಿಹುದು
ಸವೆದು ಸವೆದು ತನ್ನ ಇರುವನ್ನೇ ಮರೆತುಹೋಗಿಹುದು
ಬೆಸುಗೆಗಾಗಿ ಮಣೆ ಹಾಕಲು ಭಿಕ್ಷೆ ಬೇಡುವ ಪರಿಸ್ಥಿತಿಯಿರಲು
ಮಣಿಯದ ಈ ಬಂಧನದ ಬಾಂಧವ್ಯಕೆ
ಸತ್ತ ಆತ್ಮವೂ ಅಳುತಿಹುದು ತಾ ತ್ಯಜಿಸಿದ ದೇಹವ ಮತ್ತೆ ಸೇರಲು
ಚಿಂತಿಸಿ ಫಲವಿಲ್ಲ, ಮತ್ಯಾವ ಬೆಸುಗೆಯು ಕಾದಿಹುದೋ ಯಾರು ತಿಳಿದಿಹರು
ನಿನ್ನಾತ್ಮದಯಾಸ್ಕಾಂತವನು ಶಮನಗೊಳಿಸೋ ಓ ಅಂತರಾತ್ಮ
ಮತ್ತೊಮ್ಮೆ ಮರುಜನ್ಮವ ನೀನವತರಿಸಬಹುದು
ಅಲ್ಲಿಯವರೆಗೂ ತಾಳ್ಮೆಯಿತ್ತು ಕಾಯುತಿರು... !

~ಜಿ.ಪಿ.ಗಣಿ~
***********************************************************************************************

Saturday, April 5, 2014

ಇನ್ನಾದರೂ ನಿನ್ನುಸಿರಿಗೆ ಉಸಿರನು ನೀ ಬೆರೆಸು

***********************************************************************************************

 ಇನ್ನಾದರೂ ನಿನ್ನುಸಿರಿಗೆ ಉಸಿರನು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು

ನಿರಂತರ ಗುಡುಗುವ ಹೃದಯವು
ಇತ್ತೀಚಿಗೆ ಕಂಪಿಸುತ್ತಿದೆ
ಭಾರವೆನಿಸುತಿದೆ
ಓಟದ ಆಟ ಸಾಕಾಗಿಹೋಗಿದೆ
ಕಾಣದ ಮಿಡಿತ ಮರುಗಿ ಕಂಬನಿಗರೆದು
ಸಾಂತ್ವನಕಾಗಿ ಹಂಬಲಿಸುತಿದೆ
ಮಿಡಿತಕ್ಕೆ ಹಿಡಿತವ ತರುವ
ವೈದ್ಯನ ಪೋಷಣೆ ಬೇಕಾಗಿದೆ
ಅಳಲು ತೋಡಿಕೊಳ್ಳಲು ತಾಯಿಯಂತಹ
ಮಮತೆಗಾಗಿ ಕಾಯುತ್ತಿದೆ
ಬದುಕ ಮುನ್ನಡೆಸಲು ತಂದೆಯಂತಹ
ಅಧಿಪತಿಗಾಗಿ ಹಪಹಪಿಸುತ್ತಿದೆ.
ಇನ್ನಾದರೂ ನಿನ್ನ ಬದುಕ ಬದುಕೆಂದು
ಸಾರಿ ಸಾರಿ ಚೀರುತ್ತಿದೆ
ಜೀವಕೆ ಜೀವವಾಗುವ ಹೊತ್ತಿಗೆ
ನಿರ್ಜೀವವಾಗುವ ಘಟ್ಟ
ನಾಲ್ಕು ಜನರು ಕಾಯುತ್ತಿರುವರು
ಹೊತ್ತೊಯ್ಯಲು ನಿನ್ನ ಚಟ್ಟ

ಇನ್ನಾದರೂ ನಿನ್ನುಸಿರಿಗೆ ಉಸಿರು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು
ಮನಸಿನೊಳು ಬರುವುದು ಅರಿವಿನ ಸೊಗಸು
ಇದೇ ಸ್ವರ್ಗ!! ಇದೇ  ಸ್ವರ್ಗ!!

~ಜಿ.ಪಿ.ಗಣಿ~
***********************************************************************************************

Tuesday, April 1, 2014

ನಿನ್ನ ಪ್ರೀತಿಯ ಗರ್ಭವೆಂಬ ದೇವಾಲಯದಿ...

***********************************************************************************************

ಬಟ್ಟ ಬಯಲಾದ ಲೋಕದ ಬಣ್ಣವ
ನಾನೆಂದಿಗೂ ನೋಡಲಾರೆ...
ಅರಿವಿರದ ಪಂಚೇಂದ್ರಿಯವ ಹೊತ್ತು
ನಿನ್ನ ಕರುಳ ಬಳ್ಳಿಗೆ ಮೊಗ್ಗಾಗಿ ಅರಳುವಾಗಲಿದ್ದೊಂಬತ್ತು
ತಿಂಗಳೇ ಎನ್ನ ಬದುಕಿನ ಸಾರ್ಥಕ್ಯ ಕ್ಷಣವು
ಮತ್ತೆ ಚಡಪಡಿಸುತಿದೆ ಈ ಎನ್ನ ಒಡಲು
ನಿನ್ನ ಪ್ರೀತಿಯ ಗರ್ಭವೆಂಬ ದೇವಾಲಯದಿ
ಧ್ಯಾನಿಸಲು!!
ನಿನ್ನ ವಾತ್ಸಲ್ಯದ ಮಮತೆಯ ಆರಾಧಿಸಲು//

~ ಜಿ.ಪಿ.ಗಣಿ ~

***********************************************************************************************

ತುಟಿ

***********************************************************************************************

------ತುಟಿಯಂಚಿನ ಆಪತ್ತು---------
ಮುತ್ತಿಡುವ ತುಟಿಯಂಚಲಿವೆ ರಕ್ಕಸನ ಪ್ರತಿರೂಪ,
ಅತಿರೇಕಕ್ಕಿಳಿದೆಡೆ ಅದರದ್ದೇ ಪ್ರತಾಪ
ಸತ್ಯ ಹೊರ ಹೊಮ್ಮುವ ಆ ಸ್ವರೂಪವೇ ಕುರೂಪ

------ತುಟಿಯಂಚಿನ ಗಮ್ಮತ್ತು--------
ಪ್ರೀತಿಯ ಭಾವದಿ ಹತ್ತಿರ ಬಂದೆಡೆ
ಮಧುರ ಚುಂಬನ
ಹೃದಯದೇರುಪೇರಿನ ರಕ್ತ ಸಂಚಲನ
ಮನಸು ಮನಸಿನ ಸಂಕಲನ
ಇಂಪಾದ ಕೋಗಿಲೆಯ ಗಾಯನ
ಏಕಾಂತವ ಬಯಸುವ ನಯನ
ವದನ ವದನಗಳ ಸಮ್ಮಿಲನ
ಪ್ರೀತಿ ಪ್ರಣಯದ ಆಲಿಂಗನ
ಹೃದಯ ಭಾವದ ಏಕೀಕರಣ
ಇದುವೇ ಪ್ರೇಮ ಧ್ಯಾನದ ವಶೀಕರಣ

~ಜಿ.ಪಿ.ಗಣಿ~

***********************************************************************************************
***********************************************************************************************
***********************************************************************************************

/ಜೊಳ್ಳು ಹನಿಗಳು\

***********************************************************************************************

----೧----
ಮನವೆಂಬ ಮನೆಯ
ಮುಂಬಾಗಿಲಿಗೆ
ರಂಗೋಲಿಯ ಚಿತ್ತಾರ
ಮನದೊಳಗಿನ ಅಂಗಳದೊಳಗೆ
ಯಾರಿಗೂ ಕಾಣದ
ಸ್ಮಶಾನದ ಅವತಾರ

---೨---
ಹಚ್ಚ ಹಸುರಿನ ಕಾಡಿನ ಮದ್ಯೆ
ಬಿರುಬಿಸಿಲು ಸುಡುವಷ್ಟು ಮರುಭೂಮಿ
ಮನದ ಶಾಂತ ಸಾಗರಕೆ ಆಗಾಗ
ಬಡಿದೆಬ್ಬಿಸುವುದು ಕಾಣದ ಸುನಾಮಿ

***********************************************************************************************