ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, October 30, 2013

ಆತುರಗಾರನಿಗೆ ಬುದ್ದಿ ಮಟ್ಟ!

***********************************************************************************************
ಅರ್ಥವಿಲ್ಲದ ಬದುಕಲ್ಲಿ
ಸಮಯದಭಾವವೆಂಬ ಭಯದಲ್ಲಿ
ಜವಾಬ್ದಾರಿಯೆಂಬ ಅಮೂಲ್ಯ ರತ್ನವ
ಲಗಾಮು ಇಲ್ಲದ ಕುದುರೆಯನೇರಿ ಕೊಂಡೊಯ್ಯುತಿರೆ,
ಜೀವನವೇ ವ್ಯರ್ಥವಾಗುವುದು!
***********************************************************************************************

ಆಸೆಯೆಂಬ ಕೂಸಿಗೆ ತಾಯಾಗು!

***********************************************************************************************
ಆಸೆಯೆಂಬ ಮಗುವ
ಹೆತ್ತ ಗಳಿಗೆಯಲಿ ಬಂದಿಹವು
ನಿರಂತರ ಟೀಕಾಕಾರ!
ಅದನೆತ್ತ ಕರುಳಿಗಷ್ಟೇ ಗೊತ್ತು
ಅದು ತನ್ನ ಅಂಶವೆಂದು
ಅದಕೆ ಬೇಕಿಲ್ಲ ಆಕಾರ!

ಯಾರೇನೇ! ಎಂದರೂ...
ಕುರೂಪ ಹೊಂದಿದ ಮಗುವ
ಮುದ್ದಿಸುವವಳು ಆ ಹೆತ್ತ ತಾಯಿ!
ನೀ ಹೆತ್ತ ಆಸೆಯನು
ಕಾಪಾಡಲು ನೀ ಆಗಬೇಕಾಗಿಲ್ಲ
ಯಾರ ಅನುಯಾಯಿ!

ಮಗುವು ಹೇಗಿದ್ದರೂ
ಅದು ಅವಳ ಸರ್ವಸ್ವ
ಯಾರ ಮಾತನೂ ಕೇಳಳು
ತನ್ನ ಮುದ್ದು ಕಂದಮ್ಮನ ಪೋಷಿಸಲು!

ನೀ ಹೊತ್ತ ಆಸೆಯು
ನಿನ್ನ ಸಾಮರ್ಥ್ಯದ ಬೀಜವಲ್ಲವೇ
ಪರರ ಮಾತ ಕೇಳಿ ನೀನೆಂದಿಗೂ
ಚಿವುಟದಿರು ನಿನ್ನ ಕುಡಿಯೊಡೆದ
ಆ ಗುರಿಯೆಂಬ ಪುಟ್ಟ ಕೂಸನು!

ನಿನ್ನ ಪ್ರೀತಿಯಲಿ ನೀನದನು ಬೆಳೆಸು
ಅದಕೆ ನೋವಾದಾಗ ಸಂತೈಸು
ನಿನ್ನ ಆಸೆಯೆಂಬ ಮಗುವಿಗೆ ನೀ
ತಾಯಿಯಂತಲ್ಲದೆ, ಬೇರ್ಯಾರ
ರೂಪದಲ್ಲೂ ಉಳಿಸಲಾಗದು, ಬೆಳೆಸಲಾಗದು!

~ಜಿ.ಪಿ.ಗಣಿ~

***********************************************************************************************

Sunday, October 20, 2013

ಆಯುಧ ಪೂಜೆಯಲ್ಲೂ ಆಧುನೀಕತೆ / ಆಧುನೀಕತೆಯಲ್ಲಿ ಆಡಂಬರದ ಭಕ್ತಿ!

***********************************************************************************************
ಅಂದು ಆಯುಧ ಪೂಜೆ, ಆಗಷ್ಟೇ ನನ್ನ ದ್ವಿಚಕ್ರ ವಾಹನಕ್ಕೆ ದೃಷ್ಟಿಯಾಗಬಾರದೆಂದು ನಿಂಬೆ ಹಣ್ಣು ಮೆಣಸಿನಕಾಯಿ ಮತ್ತೆ ಎರಡು ಚಿಗುರಿದ ಬಾಳೆಕಂದನ್ನು ಕಟ್ಟಿ ಪೂಜೆ ಮಾಡಿ ಸುತ್ತಾಡಿ ಬರುವ ಎಂದು ಹೊರಟೆ.  ಸ್ನೇಹಿತನನ್ನು ಭೇಟಿ ಮಾಡುವ ಎಂದು ಅವನಿಗೆ ಕರೆ ಮಾಡಿ ಅವನ ಮನೆಗೆ ಹೋದೆ. ಮನೆ ದೇವಸ್ತಾನದ ಬಳಿಯಲ್ಲಿ ಇದ್ದದ್ದರಿಂದ ನನ್ನ ದ್ವಿಚಕ್ರ ವಾಹನವನ್ನು ಅವನ ಮನೆಯ ಮುಂದೆಯೇ ನಿಲ್ಲಿಸಿ ಇಬ್ಬರೂ ಮಾತನಾಡುತ್ತ ದೇವಸ್ತಾನ ಸೇರಿದೆವು. ಕೂರುವ ಬೆಂಚಿನ ಮೇಲೆ ಕುಳಿತು ಸ್ಕೂಲಿನ ಹಳೆ ನೆನಪುಗಳು ಈಗಿನ ಬದುಕಿನ ಪುಟಗಳ ಸ್ವಲ್ಪ ಹಿಂದೆ ತಿರುವಿ  ಹರಟೆ ಶುರು ಮಾಡಿದ್ದೆವು. ಮೂರು ದೇವಸ್ತಾನಗಳು ಇದ್ದವು ಎರಡು ದೇವಸ್ತಾನಗಳು ಬಾಗಿಲು ಮುಚ್ಚಿದ್ದವು, ಒಂದು ದೇವಸ್ತಾನದಲ್ಲಿ ಬಂದವರ ವಾಹನಗಳಿಗೆ ಪೂಜೆ ಭರದಿಂದ ಸಾಗಿತ್ತು. ಒಂದರ ನಂತರ ಮತ್ತೊಂದು. ಹಾಗೆಯೇ ಒಬ್ಬರು ಆಂಟಿ ಮತ್ತು ಅವರ ಮಗ ಒಂದು ಆಕ್ಟಿವ ಸ್ಕೂಟರ್ ಮತ್ತೊಂದು ಸೈಕಲ್ಲು, ಪೂಜೆ ಮುಗಿದಿತ್ತು. ಕಣ್ಣಲ್ಲಿ ಇವೆಲ್ಲದರ ವೀಕ್ಷಣೆಯೊಂದಿಗೆ ನಮ್ಮಿಬ್ಬರ ಮಾತುಕತೆ ಮುಂದುವರೆದಿತ್ತು.
ನನ್ನ ಸ್ನೇಹಿತ ಸುಮ್ಮನೆ ಮಾತಿಗೆ, "ಏನೋ ಆ ಆಂಟಿ ಸ್ಕೂಟರ್ ನ ದೇವಸ್ತಾನ ಸುತ್ತ ರೌಂಡ್ ಹಾಕುಸ್ತರೆ ಅನ್ಸುತ್ತೆ, ಸ್ಕೂಟರ್ಗು ಪ್ರದಕ್ಷಿಣೆ ಹಾಕುಸ್ಬೋದೇನೋ ಮಗ ಅಂತ ಹೇಳಿದ ಅಷ್ಟೇ, ಪಾರ್ಕಿಂಗ್ ಮಾಡಬಹುದು ಅಂದುಕೊಂಡರೆ ಆಂಟಿ ದೇವಸ್ತಾನದ ಸುತ್ತ ತನ್ನ ಸ್ಕೂಟರ್ ಸವಾರಿ ಮಾಡಿಯೇ ಬಿಡುವುದ, ಅದರ ಜೊತೆಗೆ ತನ್ನ ಮಗನನ್ನೂ ಕೂಡ ಹಿಂದೆ ಬಾಡಿಗಾರ್ಡ್ ನಂತೆ ಕರೆದೊಯ್ದರು. ಹರಟೆ ಹೊಡೆಯುತಿದ್ದ ನಮಗೆ ಹುಸಿ ನಗು ಶುರುವಾಗಿತ್ತು, ನಂತರ ಆಂಟಿ ಹಾಗೆಯೇ ದ್ವಿಚಕ್ರವಾಹನ ಚಲಿಸಿಕೊಂಡು ನಮ್ಮ ಮುಂದೆಯೇ ಬಂದರು, ಸ್ನೇಹಿತ ಏನೋ ಆಂಟಿ ನಕ್ತವ್ರೆ ಅಂತ ಮೊಕ್ಕೆ ಹುಗ್ಯೋಕ್ ಏನಾದ್ರೂ ಬತ್ತಾವ್ರ ಅಂದ, ನೋಡಿದ್ರೆ ಇನ್ನೆರಡು ಮುಚ್ಚಿದ್ದ ದೇವಸ್ತಾನಗಳ ಪ್ರದಕ್ಷಿಣೆ ಶುರುವಾಗಿತ್ತು, ನಮ್ಮ ಹುಸಿ ನಗು ಹೊಟ್ಟೆ ಬಿರಿಯುವ ನಗುವಾಗಿತ್ತು. ಸೈಕಲ್ಲು ಹೊಡೆಯುತಿದ್ದ ಮಗನಿಗೆ ನಮ್ಮಿಬ್ಬರ ನಗು ಅರ್ಥವಾಗಿತ್ತು, ಅಮ್ಮ ನಾನು ಹೋಗ್ತೀನಿ ಅಂತ ಸೈಕಲ್ಲನ್ನು ತಿರುಗಿಸಿ ದೌಡಾಯಿಸಲು ಶುರು ಮಾಡಿದ್ದ ಅಷ್ಟರಲ್ಲಿ ಅವರ ಅಮ್ಮ ಹೇ ಬಾರೋ ಇನ್ನೊಂದು ದೇವಸ್ತಾನ ಇದೆ ಎಂದರು, ಮಗ ಸುತ್ತ ಬಂದ್ರೆ ಸೈಕಲ್ ಪಂಕ್ಚರ್ ಆಗುತ್ತೆ ನಾನ್ ಹೋಗ್ತೀನಿ ಅಂದ, ಹೇ ಏನು ಆಗಲ್ಲ  ಸುಮ್ನೆ ಬಾರೋ ಲಾಸ್ಟ್ ರೌಂಡು ಅಂತ ಹೇಳಿ ರೌಂಡ್ ಅಂದರೆ ವಾಹನಾಸೀನರಾಗಿ ಪ್ರದಕ್ಷಿಣೆ ಮುಗಿಸಿದ್ದರು. ಇವೆಲ್ಲವೂ ಕಾಮಿಡಿ ಸರ್ಕಸ್ನಂತೆ ಭಾಸವಾಗತೊಡಗಿತ್ತು. ಆದರೂ ಏನಪ್ಪಾ ಮಾಡ್ರನ್ ದುನಿಯಾ ಎಲ್ಲವೂ ಯಂತ್ರೋಮಯ ಆಗುತ್ತಿರುವ ಈ ಕಾಲದಲ್ಲಿ ಮುಂದೊಂದು ದಿನ ಮನೆಯಲ್ಲೇ ಕುಳಿತು ರೋಬೋ ಕಳಿಸಿ ದೇವರ ಬಳಿ ಪ್ರಸಾದ ಅರ್ಚನೆ ಮಾಡಿಸಿಕೊಂಡು ಬರುವಂತೆ ಹೇಳಿ ಕಳಿಸಬಹುದು. ಇರುವ ಜೀವವ ಮರೆತು ಈ ಮನುಷ್ಯ ತಾನೇ ಸೃಷ್ಟಿಕರ್ತನಾಗಲು ಹೊರಟಿದ್ದಾನೆಯೇ  ಎನ್ನುವ ಪ್ರಶ್ನೆಯೂ ಕಾಡತೊಡಗಿತ್ತು! ಅಯ್ಯೋ ಬಾರಪ್ಪ ಇರ್ಲಿ ಪ್ರಪಂಚದ ಬಗ್ಗೆ ಯೋಚನೆ ಮಾಡ್ತಾ ಕುಂತ್ರೆ ನಾವ್ ಜೀವನವೆಲ್ಲ ಹಿಂಗೆ ಕುಂತಿರ್ತಿವಿ ಅಂತ ಅವನ ಮನೆಯ ಬಳಿ ಹೋದರೆ, ಸಣ್ಣ ಎರಡು ಬಾಳೆ ಗಿಡ ಅಂದುಕೊಂಡು ಬೀದಿ ಹಸು ನನ್ನ ದ್ವಿಚಕ್ರವಾಹನದಲ್ಲಿದ್ದ ಬಾಳೆಕಂದಿನ ಎಲೆಗಳನ್ನು ಪೂರ್ತಿ ತಿಂದು ಮುಗಿಸಿ ಹೊರಟು ಹೋಗಿತ್ತು.ಬಾಡಿ ಕೊಳೆತುಹೋಗಬೇಕಿದ್ದ ಆ ಚಿಗುರೆಲೆ ಆ ಹಸುವಿನ ಹೊಟ್ಟೆಯ ಹಸಿವ ಸ್ವಲ್ಪ ಮಟ್ಟಿಗೆ ತಣಿಸಿತಲ್ಲ ಎಂಬ ಸಂತಸವಾಯಿತು. ಹಾಗೆಯೇ ಮತ್ತೊಂದು ಪ್ರಶ್ನೆ, ಹೌದಲ್ಲವೇ!! ಈ ರೀತಿ ಎಷ್ಟೋ ಹಸಿವಿನಿಂದ ಬಳಲುವವರಿಗೆ ನಾವು ಅಲ್ಲಿ ಇಲ್ಲಿ ತೋರಿಕೆಗೆ ಆಡಂಬರಕ್ಕೆ ದುಂದು ವ್ಯಚ್ಚ ಮಾಡುತ್ತೇವೆ. ಕೈಲಾಗದ ಮನಗಳಿಗೆ ಸಹಾಯ ಹಸ್ತ ನೀಡಿದರೆ ಅವರ ಆಶಿರ್ವಾದವೇ ದೈವ ನೀಡುವ ವರವಲ್ಲವೇ!!
***********************************************************************************************

Sunday, October 6, 2013

ಸದ್ದಿಲ್ಲದ ಗಾಳಿಯಲಿ ಮೌನದ ಸಂದೇಶ!

***********************************************************************************************
ನಿನ್ನ ಪದಗಳು ಹೊರಬರುವ ಮುನ್ನ 
ನಿನ್ನ ಕಂಡು ನನ್ನುಸಿರು ನಿಮಿರುವುದು!

ಮನದೊಳಗೆ ಕಾಮನಬಿಲ್ಲಿನ ಆಗಮನ 
ಬೆರೆಳುಗಳೊಳಗೆ ತಡೆಯಿಲ್ಲದ ರಕ್ತ ಸಂಚಲನ 
ಸ್ಪೂರ್ತಿಯ ಭಾವದಿ ನಿಲ್ಲಿಸದೆ ಮನದ 
ಕೀಲಿಮಣೆಯ ಮೇಲೆ ನಡೆಸಿವೆ ನಿರಂತರ ನರ್ತನ 
ಜೊತೆಗೆ ನಿನ್ನಯ ವರ್ಣನೆ ಮಾಡುವ ಅಕ್ಷರಗಳ ಗಾಯನ 

ಇವೆಲ್ಲವೂ
ನಿನ್ನ ಮೇಲಿನ ಮೋಹದಿಂದಲ್ಲ
ಅರಿವಿಲ್ಲದ ಬುದ್ದಿಯಿಂದಲೂ ಅಲ್ಲ
ಮನಸ್ಸೆಂಬ ಮಾಯೆಯಿಂದಲೂ ಅಲ್ಲ

ಎದೆಯೊಳಗಿನ ಹೃದಯದ ಬಡಿತದಿಂದ!
ನಿನ್ನ ಹೃದಯದ ಮಿಡಿತದಿಂದ!
ಎನ್ನ ಹೃದಯದ ತುಡಿತದಿಂದ!
ಈ ತುಡಿತ-ಮಿಡಿತದ ಮೌನ ಸಂಭಾಷಣೆಯಿಂದ!

ಕಣ್ಣಿಗೆ ಕಾಣದ ಗಾಳಿಯಂತೆ
ನನ್ನ ನಿನ್ನ ನಡುವಿನ ಪ್ರೀತಿ
ಅದು ಕಾಣುವುದಿಲ್ಲ ಗೆಳತಿ
ಆದರೂ ನಾವಿಬ್ಬರೂ ಅದೇ
ಗಾಳಿಯಲ್ಲಿ ಉಸಿರಾಡುತಿಹೆವು!

ನನ್ನೆದೆಯ ಭಾವ ನಿನ್ನ ನಿಶ್ವಾಸದ
ಗಾಳಿಯಲಿ ಉಚ್ವಾಸವ ಬೀರುತಿಹುದು
ನಾನು ನೀನಾಗಿ ನಿನ್ನ ದೇಹ
ಕೆಲ ನಿಮಿಷದ ಕಾಲ ನನ್ನದಾಗಿ
ಆ ಗುಂಗಿನಲ್ಲೇ ನನ್ನ ನಾ ಮರೆತು
ನೀನಾಗಿಯೇ ಕಳೆದುಹೋಗಿಹೆನು!

ಪ್ರೀತಿಯೆಂದರೆ ಇದೇನೇ!!!!!! ಇದೇನೇ!!!!!

~ಜಿ.ಪಿ.ಗಣಿ~

***********************************************************************************************

ನಿಲ್ಲಿಸದಿರು ಚಲಿಸುವುದನು, ನಿನ್ನ ಪಯಣ ಕೊನೆಯಾಗುವತನಕ!

***********************************************************************************************
ನಡೆಗೆ ಗುರಿಯಿಲ್ಲದ ದಾರಿ; 
ದಿಕ್ಕಿಗಾಗಿ ಗಾಳಿ ಬಂದಲ್ಲಿಗೆ ತೂರಿ 
ಮನದೊಳಗೆ ಗೊಂದಲದ ಮಾರಾಮಾರಿ 
ಸಿಗುವ ಅವಕಾಶವೆಲ್ಲವೂ ಹೋಗುತಿದೆ ಕೈ ಜಾರಿ
ಅರಿತ ಬುದ್ದಿಯು ಹೇಳುತಿದೆ
ಎಚ್ಚರವಾಗು ನೀ ಮೊದಲು ಎಂದು, ಸಾರಿ ಸಾರಿ!!

~ಜಿ.ಪಿ.ಗಣಿ~
***********************************************************************************************

Saturday, September 28, 2013

***********************************************************************************************
ನಾ ಕಂಡ ಲೂಸಿಯ!
________________
ನಾ ನೋಡಲು ಹೋಗಿದ್ದೆ ಲೂಸಿಯ
ಹೇಳಲಿರುವದರೊಳಗಿರುವ ವಿಷಯ!

ಅದಕಾಗಿ ಬರೆಯಲು ನಾ
ಹೊರಟಿರುವೆ ಒಂದು ಕವಿತೆಯ!

ಕನಸಿನ ಲೋಕಕೆ ಕರೆದೊಯ್ಯುತಿರುವೆ
ಇರುವನು ಜೊತೆಗೆ ಲೂಸಿಯ
ಬರುವುದಾದರೆ ಬನ್ನಿ ಅದಕೆ ತೆತ್ತಬೇಕು
ನಿಮ್ಮ ಅಮೂಲ್ಯವಾದ  ಸಮಯ!

ನೀವೆನ್ನುವಿರಿ..........!

ಬರೀ ಕುಯ್ಯಬೇಡವೋ ಗೆಳೆಯ!
ಹೇಳುವೆಯಾ ನೀ ಕತೆಯ!

ನಾ ನುಡಿಯುವೆನು,

ಆಯಿತಪ್ಪ ಮಹರಾಯ ........!
ಬರೆಯಲು ನಾ ತೆಗೆಯುತಿರುವೆ
ಎನ್ನ ಮನದ ಲೇಖನಿಯ!
ತೆರೆಯಿರಿ ನಿಮ್ಮೊಳಗಿನ ಆಂತರ್ಯ!

ಬದುಕಲ್ಲಿ ಎಲ್ಲವೂ ಇರುವವನ ಕತೆಯ!
ಎಲ್ಲವೂ ಇದ್ದು ಇಲ್ಲದಿರೆ ಚೆನ್ನ ಎನ್ನುವವನ ವ್ಯಥೆಯ!
ಬಿಡಿಸಲಾಗದ ಕಗ್ಗಂಟೋ ಪ್ರೇಮವೆಂಬ ಮಾಯೆಯ
ಹೇಗೆ ತೋರಲಿ ಅದರಿಂದ ನೀ ಪಡುತಿರುವ ಯಾತನೆಯ!

ಸುಂದರ ಸಾಲುಗಳಿವು ಒಮ್ಮೆ ಓದಿ ಕಳಚೋ ನಿನ್ನ ವಿಷದ ಪೊರೆಯ!

------------------------------------
ನೀ ಮಾಯೆಯೊಳಗೊ... ಮಾಯೆ ನಿನ್ನೊಳಗೊ...
ನೀ ದೇಹದೊಳಗೊ... ದೇಹ ನಿನ್ನೊಳಗೊ...
ನೀ ಕನಸಿನೊಳಗೊ... ಕನಸು ನಿನ್ನೊಳಗೊ...
ನೀ ಅಮಲಿನೊಳಗೊ... ಅಮಲು ನಿನ್ನೊಳಗೊ...
ಮನಸು ದೇಹಗಳೆರಡು ಸೆಳೆಯುವ
ಸುಳಿಯಂತಿರುವ ಪ್ರೇಮದೊಳಗೊ...
---------------------------------------

ನೀವು ಇದನು ತಿಳಿಯಲಾಗದಿದ್ದರೆ ನಿಮಗೆ ಬೇಕಾಗಬಹುದು ಲೂಸಿಯ! ಅದಕ್ಕಾಗಿ ಮತ್ತೆ ಮತ್ತೆ ವೀಕ್ಷಿಸಿ ಲೂಸಿಯ! ಲೂಸಿಯ!
-----
ನಿತ್ಯವೂ ಬದುಕುತ್ತಿರುವ ನಾವು ನಮ್ಮ ಆಲೋಚನೆಗಳು, ಅಲೆಯಂತೆ ಒಂದರ ಹಿಂದೆ ಮತ್ತೊಂದು ಹೊಡೆಯುತ್ತಲೇ ಇರುತ್ತದೆ. ಎಚ್ಚರವಾಗಿದ್ದೂ ಕನಸು ಕಾಣುವ ಆಸೆ, ಆಸೆಗಾಗಿ ನಿದ್ರಿಸುವಾಸೆ, ಆಸೆಯೆಂಬ ಮಾಯೆಯ ಬಣ್ಣಿಸುವುದು ಬಲು ಕಷ್ಟ ಎಲ್ಲಿಂದ ಶುರು ಮಾಡಿದರೂ ಮತ್ತೆ ಅಂತ್ಯವಾಗುವುದು ಅಲ್ಲಿಯೇ. ಇಂತಹ ಕ್ಲಿಷ್ಟವಾದ ಮನೋವೈಜ್ಞಾನಿಕ ವಿಷಯವನ್ನು ಇಟ್ಟುಕೊಂಡು ಅದನ್ನು ಜನರಿಗೆ ಅರ್ಥೈಸುವುದು ಅಷ್ಟು ಸುಲಭದ ಮಾತಲ್ಲ, ಚಿತ್ರ ಸಂಪೂರ್ಣ ಗೊಂದಲಮಯವೆನಿಸಿದರೂ ಕನಸು-ವಾಸ್ತವದ ನಡುವಿನ ಯುದ್ದ ಮುಗಿದು ವಾಸ್ತವದಿ ಸಾಮಾನ್ಯ ಮನುಷ್ಯನಂತೆ ಬದುಕುತ್ತ ಎಲ್ಲರೊಡಗೂಡಿ ಬಾಳುವ ಆಸೆಯೇ ನಮ್ಮ ಲೂಸಿಯ! ಕಥೆಗಳು ಕಪ್ಪು-ಬಿಳುಪು ಮತ್ತು ಬಣ್ಣದಿಂದ ಕೂಡಿದ್ದರೂ ಕೊನೆಗೆ ಅವೆರಡಕ್ಕೂ ಸುಂದರ ಅಂತ್ಯ ಕೊಟ್ಟು ಚಿತ್ರಕಥೆಯನ್ನು ಅಂತ್ಯವಾಗಿಸುವುದು ನಿಜಕ್ಕೂ ಶ್ಲಾಘನೀಯ. ಅಂತಹ ಪರಿಶ್ರಮಕ್ಕೆ ನನ್ನ ಸಲಾಂ. ಪ್ರತಿಯೊಬ್ಬ ನವ ಯುವ ಪ್ರತಿಭೆಗಳ ಪರಿಶ್ರಮದ ಹೂರಣವೇ ಈ ಲೂಸಿಯ! ಯಾರಿಗೆ ಇಷ್ಟವಾಯಿತೋ ಬಿಡ್ತೋ ಬೇಕಿಲ್ಲ ಸಿನೆಮಾ ನೋಡಿ ನನಗೆ ಬೇಕಾದದ್ದು ನಾನು ತೆಗೆದುಕೊಂಡಿದ್ದೇನೆ.

***********************************************************************************************

***********************************************************************************************
ದೂರ ಹೋದಷ್ಟು 
ನಿನ್ನನು ಕಳೆದುಕೊಳ್ಳುವ 
ಭಯ ಆವರಿಪುದು!
ನಿನ್ನ ಬಳಿ ಬಂದಷ್ಟು 
ನನ್ನನು ನಾ ಮರೆಯುವ 
ಅಳುಕು ಆವರಿಪುದು!

ನಾ ನೀನಾಗುವ ಮುನ್ನ 
ನೀ ನಾನಾಗುವ ಮುನ್ನ 
ಕಣ್ಣಲಿ ಕಣ್ಣನಿಟ್ಟು ಮರೆಯೋಣ ಲೋಕವ 
ಒಮ್ಮೆ ಬರುವೆಯ; ಓ ಒಲವೆ!
ಎನ್ನ ಬದುಕು ಕತ್ತಲಾಗುವ ಮುನ್ನ.

***********************************************************************************************